ವಚನ ದಾಸೋಹ
#ವಚನ:
#ಆಕಾರ ನಿರಾಕಾರವೆಂಬೆರಡೂ ಸ್ವರೂಪಂಗಳು
ಒಂದು ಆಹ್ವಾನ, ಒಂದು ವಿಸರ್ಜನ
ಒಂದು ವ್ಯಾಕುಳ, ಒಂದು ನಿರಾಕುಳ
ಉಭಯಕುಳರಹಿತ ಗುಹೇಶ್ವರಾ
ನಿಮ್ಮ ಶರಣನು ನಿಶ್ಚಿಂತನು.
- ವ್ಯೋಮಮೂರ್ತಿ ಅಲ್ಲಮ ಪ್ರಭುಗಳು
*ಅರ್ಥ:*
ದೇವರ ಸ್ವರೂಪ ಆಕಾರ ನಿರಾಕಾರ ಕುರಿತು ಅನುಭವ ಮಂಟಪದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಅಧ್ಯಕ್ಷೀಯ ಸ್ಥಾನದಲ್ಲಿದ್ದ ಅಲ್ಲಮ ಪ್ರಭುಗಳು ನುಡಿದ ವಚನ.
*ಆಕಾರ ನಿರಾಕಾರವೆಂಬೆರಡೂ ಸ್ವರೂಪಂಗಳು*
ಸಾಕಾರ ನಿರಾಕಾರವೆಂಬೆರಡೂ ದೇವರ ಸ್ವರೂಪಗಳು.
*ಒಂದು ಆಹ್ವಾನ, ಒಂದು ವಿಸರ್ಜನ*
ಸಾಕಾರ ಪೂಜೆ ಶಟ್ಸ್ತಲದ ಮೊದಲಿನ ಸ್ಥಲಗಳು ಅಂದರೆ ಭಕ್ತ, ಮಾಹೇಶ್ವರ, ಪ್ರಸಾದಿ ಸ್ಥಲಗಳ ಸಾಧನೆ. ಇಲ್ಲಿ ಬಹಿರಂಗ ಸಾಕಾರಪೂಜೆ, ಪರಶಿವನ ಸಾಕಾರ ಕುರುಹಾದ ಇಷ್ಟಲಿಂಗದ ಪೂಜೆ. ನಿರಾಕಾರ ಪೂಜೆ ಶಟ್ಸ್ತಲದ ನಂತರ ಬರುವ ಪ್ರಾಣಲಿಂಗಿ, ಶರಣ, ಐಕ್ಯ ಸ್ಥಲಗಳ ಸಾಧನೆ. ಇಲ್ಲಿ ಅಂತರಂಗದ ನಿರಾಕಾರಪೂಜೆ. ನಮ್ಮಲ್ಲಿಯೇ ಇರುವ ಪ್ರಾಣಲಿಂಗ, ಭಾವಲಿಂಗಗಳ ಪೂಜೆ. ಸಾಕಾರಪೂಜೆ ಸಾಧನೆಗೆ ಆಹ್ವಾನ. ನಿರಾಕಾರಪೂಜೆಯು ಸಾಧನೆಯ ವಿಸರ್ಜನ. ಹೀಗೆ ಲಿಂಗವಂತರು ಸಾಕಾರ ಹಿಡಿದೇ ನಿರಾಕಾರಕ್ಕೆ ಹೋಗಬೇಕು.
*ಒಂದು ವ್ಯಾಕುಳ, ಒಂದು ನಿರಾಕುಳ *
ಸಾಕಾರ ಸ್ವರೂಪ ಇಷ್ಟಲಿಂಗದ ಪೂಜೆ ಇದು ಸಾಧನೆಯ ಆರಂಭ. ಇಲ್ಲಿ ವ್ಯಾಕುಳ ಅಂದರೆ ತಳಮಳ, ತಲ್ಲಣ, ತುಡಿತವಿದೆ. ಸಾಧನೆಯ ಆರಂಭದಲ್ಲಿ ದೇವರ ಸಂಪೂರ್ಣ ಸ್ವರೂಪದ ಅರಿವಿರುವದಿಲ್ಲ. ಆದರೆ ಅರಿಯುವ ತುಡಿತ ಇರುತ್ತದೆ. ಸಾಧನೆ ಮಾಡಬೇಕೆಂಬುವ ತುಡಿತ ತಲ್ಲಣವಿದೆ. ವರ ಪಡೆಯುವ ತಳಮಳ ಇದೆ.
ಸಾಧನೆಯಲ್ಲಿ ಮುಂದೆ ಕ್ರಮಿಸಿ ಪರಶಿವನ ನಿಜವಾದ ನಿರಾಕಾರ ನಿರ್ಗುಣ ಸ್ವರೂಪವನ್ನು ಅರಿದ ನಂತರ ನಿರಾಕಾರ ದೇವರ ಪೂಜೆ ಮತ್ತು ಸಾಧನೆ ಅಳವಡಿಸಿ ಕೊಳ್ಳಬೇಕು. 'ನಿರಾಕುಳ ' ವೆಂದರೆ ಪ್ರಶಾಂತ ನೆಮ್ಮದಿ ನಿರಂತಕ. ಇಲ್ಲಿ ಸಾಧಕನಿಗೆ ದೇವರ ನಿರಾಕಾರ ನಿರ್ಗುಣ ನಿರ್ಮಾಯ
ಸತ್ ಚಿತ್ ಆನಂದ ಬಯಲು ಸ್ವರೂಪಿನ ಅರಿವಿದೆ. ಯಾವ ಬೇಡಿಕೆಗಳಿಲ್ಲ. ವರ ಪಡೆಯುವ ಬಯಕೆ ಇಲ್ಲ. ಸಾಧಕ ಇಲ್ಲಿ ನಿಷ್ಕಾಮ ಶಿವಯೋಗಿ. ಬರೀ ಧ್ಯಾನದಲ್ಲಿ ಶಿವನಲ್ಲಿ ಕೂಡಿ ಲಿಂಗಾಂಗ ಸಾಮರಸ್ಯದಲ್ಲಿ ಲೀನನಾಗಿ ಪ್ರಶಾಂತತೆ, ನೆಮ್ಮದಿ, ನಿರಾಂತಕನಾಗಿ ನಿರಾಳನಾಗಿ ಸುಖಿಯಾಗಿದ್ದಾನೆ.
*ಉಭಯಕುಳರಹಿತ ಗುಹೇಶ್ವರಾ
ನಿಮ್ಮ ಶರಣನು ನಿಶ್ಚಿಂತನು*
ಉಭಯಕುಳರಹಿತ ಅಂದರೆ ಎರಡರ ಚಿಂತನೆ ತ್ಯಜಿಸಿ ಸಾಕಾರವೋ ನಿರಾಕಾರವೋ ಎಂಬ ವಾದ ವಿವಾದ ಬಿಟ್ಟು ಗುಹೇಶ್ವರನ ಶರಣ ಯಾವುದೇ ಚಿಂತೆ ಇಲ್ಲದೆ ನಿಶ್ಚಿಂತನಾಗಿದ್ದಾನೆ.
*ಭಾವ :
ದೇವರು ನಿರಾಕಾರ. ಹಾಗಾದರೆ ನಾವು ಪೂಜಿಸುವ ಅಂಗೈಯೊಳಗಣ ಇಷ್ಟಲಿಂಗವು ಒಂದು ರೂಪವಲ್ಲವೇ ಎಂದು ಪ್ರಶ್ನೆ ಹುಟ್ಟುತ್ತದೆ. ಹೌದು, ಅದು ನಿರಾಕಾರ ದೇವನ ಸಾಕಾರ ರೂಪ. ನಿರಾಕಾರವನ್ನು ನಿರಾಕಾರವಾಗಿ ಅರಿಯುವದು ಬಹು ಕಠಿಣ. ಎಲ್ಲರಿಗೂ ಸಾಧ್ಯವಿಲ್ಲ ಎನ್ನುತ್ತಾರೆ ಗುರು ಬಸವಣ್ಣನವರು.
#ಸಾಕಾರ ಸಂಗನಲ್ಲಿ ನಿರಾಕಾರವಿಲ್ಲೆಂದು
ನಿರಾಕಾರ ಸಂಗವನರಸಿ ತೊಳಲಿ ಬಳಲಿದೆನಯ್ಯಾ.
ನಿಶ್ಚಿಂತ ನಿಜಭಜನೆ ನೆಲೆಗೊಳ್ಳದೆನಗೆ,
ಭ್ರಾಂತು ಭ್ರಮೆಯಿಲ್ಲದಂತೆ ಎಂದಪ್ಪುದೋ ಎನಗೆ, ಕೂಡಲಸಂಗಮದೇವಾ, ಕೇಳಯ್ಯಾ. / 1277
ನಿರಾಕಾರವನ್ನು ಗ್ರಹಿಸಲು ಸಾಕಾರದ ನೆಲೆ ಅವಶ್ಯ. ಸಾಕಾರಕ್ಕೆ ನಿರಾಕಾರವೂ, ನಿರಾಕಾರಕ್ಕೆ ಸಾಕಾರವೂ ಪರಸ್ಪರ ಪೂರಕವಾಗಿ ನಿಲ್ಲುವವು. ನಿರಾಕಾರವಿಲ್ಲದೆ ಸಾಕಾರವಿಲ್ಲ; ಸಾಕಾರವಿಲ್ಲದೆ ನಿರಾಕಾರಕ್ಕೆ ನೆಲೆ ಇಲ್ಲ. ಆದ್ದರಿಂದ ನಿರಾಕಾರ ದೇವನಿಗೆ ಪ್ರಾಣಿಗಳ ಅಂದರೆ ಇಲಿ ಎತ್ತು ಸಿಂಹ ಮೀನು ಹಾವು ಗರುಡ ಆಮೆಯಂತ ತರತರದ ಪ್ರಾಣಿ, ಪ್ರಕೃತಿಯ ಅಂದರೆ ನದಿ, ಗಿಡ, ವಾಯು, ಬೆಂಕಿ, ಭೂಮಿ ಮತ್ತು ಮಾನವ ಆಕಾರದ ಮನುಷ್ಯ, ಇತ್ಯಾದಿ ಪುರಾಣಕಲ್ಪಿತ ರೂಪಗಳನ್ನು ನಿರಾಕರಿಸಿ, ಈ ಅಖಂಡ ಸೃಷ್ಟಿಯು ಗೋಳಾಕಾರದಲ್ಲಿ ಕಾಣುವುದರಿಂದ ದೇವನ ಚಿತ್ಸ್ವರೂಪವಾದ ಇಷ್ಟಲಿಂಗವನ್ನು ಗೋಳಾಕಾರದಲ್ಲಿ ರೂಪಿಸಿದರು. ಇಷ್ಟಲಿಂಗವು ಶರಣನ ಅಂತರಂಗದ ಚಿತ್ಕಳೆಯ ಆತ್ಮಸ್ವರೂಪ, ಈ ಆತ್ಮ ಸ್ವರೂಪದ ಅರಿವಿನ ಮೂಲಕ ಬ್ರಹ್ಮಾಂಡವ್ಯಾಪಿ ಪರಶಿವನ ದರ್ಶನಾನುಭಾವ.
#ಗೋಚರ ಅಗೋಚರ ಸಾಕಾರ ನಿರಾಕಾರ,
ಶೂನ್ಯ ನಿಶ್ಶೂನ್ಯವೆಂದುದು ಪುರಾತನರ ವಚನ.
ಕೂಡಲಚೆನ್ನಸಂಗಯ್ಯ ಮುಟ್ಟಿತ್ತೇ ಆಯಿತ್ತು ಮಹಾಪ್ರಸಾದ / 694
ಗೋಚರ ಅಗೋಚರ; ಸಾಕಾರ ನಿರಾಕಾರ;
ಶೂನ್ಯ ನಿಶ್ಶೂನ್ಯ - ಇವೆಲ್ಲ ಪೂಜೆ ಮಾರ್ಗಗಳಿಗಿಂತ ಮುಖ್ಯವಾದುದು ಕೂಡಲಚೆನ್ನಸಂಗಯ್ಯನ ಅನುಗ್ರಹ ಎನ್ನುತ್ತಾರೆ ಚೆನ್ನಬಸವಣ್ಣನವರು.
‘ಸಾಕಾರ ನಿರಾಕಾರ ಏಕೋದೇವ ನಮ್ಮ ಕೂಡಲ ಸಂಗಮದೇವ’ ಎನ್ನುತ್ತಾರೆ ಗುರು ಬಸವಣ್ಣನವರು. ಭಗವಂತನು ಸಾಕಾರನೂ ಹೌದು, ನಿರಾಕಾರನೂ ಹೌದು. ಅವನು ಸಕಲ-ನಿಷ್ಕಲ ರೂಪನಾಗಿರುವನು. ಸಾಧಕನು ಸಕಲರೂಪವನ್ನೇ ಪೂಜಿಸಲಿ ಅಥವಾ ನಿಷ್ಕಲ ರೂಪವನ್ನೇ ಪೂಜಿಸಲಿ, ಯಾವುದನ್ನೇ ಪೂಜಿಸಿದರೂ ಇಷ್ಟಲಿಂಗದಲ್ಲಿಯೇ ಪೂಜಿಸಬೇಕು. ಕಣ್ಣುಗಳಿಂದ ಆ ಲಿಂಗವನ್ನೇ ದೃಷ್ಟಿಸಬೇಕು
ಜಗದಗಲನಾದ ಪರಶಿವ ಸ್ವರೂಪವನ್ನು ಚುಳುಕಾಗಿಸಿ, ಅದನ್ನು ಇಷ್ಟಲಿಂಗವೆಂದು ಕರೆದರು. ಇಷ್ಟಲಿಂಗದಲ್ಲಿ ಎರಡು ಭಾಗಗಳಿವೆ, ೧) ಹೊರಗಣ ಗೋಳಾಕಾರದ ಕಪ್ಪು ಕಂಥೆ. ಇದು ಆಖಂಡ ಸೃಷ್ಟಿಯ ಚೈತನ್ಯವಾದ ಪರಶಿವ ತತ್ವವನ್ನು ಸಂಕೇತಿಸುವುದು.
೨) ಗೋಲದೊಳಗಿರುವ ಜೀವಾತ್ಮನನ್ನು ಸಂಕೇತಿಸುವ ಶಾಂಭವೀಮುದ್ರೆಯ ಲಿಂಗ, ಇವೆರಡೂ ಕೂಡಿದಾಗ ಕಾಣುವುದೇ ಇಷ್ಟಲಿಂಗ. ಪರಮಾತ್ಮನ ರೂಪವನ್ನು ಬಸವಣ್ಣನವರು ಗೋಳಾಕಾರ ರೂಪದಲ್ಲಿ ಪರಿಭಾವಿಸಿದರು.
ಇಂಥ ಲಿಂಗದ ವ್ಯಾಪ್ತಿ ಅನಂತ, ಅನೂಹ್ಯ, ಅನುಪಮ. ಇಷ್ಟಲಿಂಗದ ಸ್ವರೂಪವನ್ನು ಕುರಿತು ಬಸವಣ್ಣನವರು ಹೀಗೆ ಹೇಳಿದ್ದಾರೆ:
#ವೇದ ವೇದಾಂತಗಳಿಗೆ ಅಸಾಧ್ಯವಾದ ಅನುಪಮಲಿಂಗವ ತಂದುಕೊಟ್ಟನಯ್ಯಾ, ಸದ್ಗುರು ಎನ್ನ ಕರಸ್ಥಲಕ್ಕೆ.
ನಾದ ಬಿಂದು ಕಳೆಗೆ ಅಭೇದ್ಯವಾದ ಅಚಲಿತ ಲಿಂಗವ ತಂದುಕೊಟ್ಟನಯ್ಯಾ,
ಸದ್ಗುರು ಎನ್ನ ಕರಸ್ಥಲಕ್ಕೆ. ವಾಙ್ಮನಕ್ಕಗೋಚರವಾದ ಅಖಂಡಿತ
ಲಿಂಗವ ತಂದುಕೊಟ್ಟನಯ್ಯಾ,
ಸದ್ಗುರು ಎನ್ನ ಕರಸ್ಥಲಕ್ಕೆ.
ಇನ್ನು ನಾನು ಬದುಕಿದೆನು, ನಾ ಬಯಸುವ ಬಯಕೆ ಕೈಸಾರಿತ್ತಿಂದು ಕೂಡಲಸಂಗಮದೇವಾ.
ಹೊಸ ದೃಷ್ಟಿಕೋನದ, ಹೊಸಬಗೆಯ, ಹೊಸರೂಪದ ಚಿತ್ಕಳಾ ಸ್ವರೂಪವಾದ ಇಷ್ಟಲಿಂಗವು ಮನದಲ್ಲಿ ದೇದೀಪ್ಯಮಾನವಾಗಿ ಬೆಳಗಿದ ತಕ್ಷಣ ಬಸವಣ್ಣನವರು ಅಖಂಡಿತ ಲಿಂಗವು ಚುಳುಕಾಗಿ ಇಂದೆನಗೆ ಸಾಧ್ಯವಾಯಿತ್ತು, ತಾವು ತೊಡಗಿಸಿಕೊಂಡ ದೇವಸ್ವರೂಪದ ಸಂಶೋಧನೆ ಇಂದು ಫಲ ನೀಡಿತು ಎಂದು ತಮಗಾದ ಅನುಭೂತಿಯನ್ನು ಈ ವಚನದಲ್ಲಿ ಬಹಳ ಸೊಗಸಾಗಿ ‘ನಾ ಬಯಸುವ ಬಯಕೆ ಕೈಸಾರಿತ್ತಿಂದು’ ಎಂದು ಚಿತ್ರಿಸಿದ್ದಾರೆ.
ಅನುಪಮ ಲಿಂಗದ ಕುರುಹಾದ ಇಷ್ಟಲಿಂಗವನ್ನು ಶರಣನು ತನ್ನ ಅಂಗದ ಮೇಲೆ ಸದಾ ಧರಿಸಿ ತನ್ಮೂಲಕ ಅಂಗದ ಅವಗುಣಗಳನ್ನು ಕಳೆದುಕೊಂಡು ಮಂಗಳಮಯವಾದ ಶಿವಗುಣಗಳನ್ನು ಪರಶಿವ ಸ್ವರೂಪವೇ ತಾನಾಗುವ ವಿಶಿಷ್ಟ ತತ್ವವೇ ಇಷ್ಟಲಿಂಗ. ಇಷ್ಟಲಿಂಗವೆಂಬ ಸಾಧನವು ಜಗದ ಅನೇಕ ಕ್ಲೇಷಗಳನ್ನು ತೊಡೆದುಹಾಕುವಲ್ಲಿ ಮಹತ್ತರ ಪಾತ್ರವಹಿಸುವುದು. ಇದರ ಪ್ರಮುಖ ಲಕ್ಷಣಗಳೆಂದರೆ-
ಇಷ್ಟಲಿಂಗವು ನಿರಾಕಾರ ದೇವರ ಸಾಕಾರ ಸ್ವರೂಪ. ಆಯಸ್ಕಾಂತದ ಸಂಪರ್ಕದಲ್ಲಿರುವ ಕಬ್ಬಿಣ ಕಾಂತೀಯ ಗುಣ ಹೊಂದುವಂತೆ ಇಷ್ಟಲಿಂಗ ಧರಿಸಿದವನ ಅಂಗವೂ ಇಷ್ಟಲಿಂಗವೇ ಆಗುವುದು, ಆದ್ದರಿಂದಲೇ ಸದಾ ಇಷ್ಟಲಿಂಗವನ್ನು ಧನ್ಯತಾಭಾವದಿಂದ ಧರಿಸಿರಬೇಕು. ಇಷ್ಟಲಿಂಗವು ಜಾತಿಯ, ಮತೀಯ, ಅಸಮಾನತೆಯನ್ನು ಕಿತ್ತೆಸೆಯುವುದು. ಹೆಣ್ಣು ಕನಿಷ್ಠ, ಗಂಡು ಶ್ರೇಷ್ಠ ಎಂಬ ಅಸಮಾನತೆಯನ್ನು ತೊಡೆದುಹಾಕುವುದು.
- ✍️ Dr Prema Pangi
#ಪ್ರೇಮಾ_ಪಾಂಗಿ, #ಅಲ್ಲಮಪ್ರಭುಗಳು, #ಆಕಾರ_ನಿರಾಕಾರವೆಂಬೆರಡೂ
Comments
Post a Comment