ವಚನ ದಾಸೋಹ
ವಚನ:
ಲಿಂಗವಲ್ಲದೆ ಅನ್ಯವನರಿಯದಿಹುದೆ ಲಿಂಗಾಚಾರ.
ಸಜ್ಜನ ಕಾಯಕದಲ್ಲಿ ತಂದು ಗುರು-ಲಿಂಗ-ಜಂಗಮಕ್ಕೆ ನೀಡಿ ಸತ್ಯಶುದ್ಧನಾಗಿಹುದೆ ಸದಾಚಾರ.
ಶಿವಭಕ್ತರಲ್ಲಿ ಕುಲ ಗೋತ್ರ ಜಾತಿ ವರ್ಣಾಶ್ರಮವನರಸದೆ ಅವರೊಕ್ಕುದ ಕೊಂಬುದೆ ಶಿವಚಾರ.
ಶಿವಚಾರದ ನಿಂದೆಯ ಕೇಳದಿಹುದೆ ಗಣಾಚಾರ.
ಶಿವಶರಣರೆ ಹಿರಿಯರಾಗಿ ತಾನೆ ಕಿರಿಯನಾಗಿ ಭಯಭಕ್ತಿಯಿಂದ ಆಚರಿಸುವುದೆ ಭೃತ್ಯಾಚಾರ.
ಇಂತೀ ಪಂಚಾಚಾರವುಳ್ಳ ಪರಮಸದ್ಭಕ್ತರ ಒಕ್ಕುದನಿಕ್ಕಿ ಸಲಹಯ್ಯಾ ಪ್ರಭುವೆ
ಕೂಡಲಚೆನ್ನಸಂಗಮದೇವಾ.
- ಅವಿರಳಜ್ಞಾನಿ ಚೆನ್ನಬಸವಣ್ಣನವರು
ಅಷ್ಟಾವರಣಗಳು, ಪಂಚಾಚಾರಗಳು, ಶಟ್ಸ್ಥಳ ಗಳು ಲಿಂಗಾಯತ ಧರ್ಮದ ಪ್ರಮುಖ ಅಂಶಗಳು.
'ಪಂಚತತ್ವದಲ್ಲಿದ್ದು ಪರತತ್ವವನರಿಬೇಕು'. ಅಂದರೆ ಪಂಚಾಚಾರಗಳನ್ನು ಪಾಲಿಸುತ್ತಲೆ, ಶಟ್ಸ್ತಲದ ಮಾರ್ಗದಲ್ಲಿ ನಡೆದು ಪರತತ್ವವಾದ ಪರಮೇಶ್ವರ ನನ್ನು ಅನುಭಾವದಿಂದ ಅರಿತು ಒಂದಾಗಬೇಕು. ಈ ಮಾರ್ಗದಲ್ಲಿ ನಾವು, ನಮ್ಮ ಮನ ಅತ್ತಿತ್ತ ಹರಿಯದಂತೆ ಕವಚಗಳಂತೆ ರಕ್ಷಣೆ ಮಾಡುವವರು ಅಷ್ಠಾವರಣಗಳು.
ಪಂಚಾಚಾರಗಳು:
ಲಿಂಗಾಚಾರ ಸದಾಚಾರ ಶಿವಾಚಾರ ಗಣಾಚಾರ ಭೃತ್ಯಾಚಾರವೆಂಬ 5 ಪಂಚಾಚಾರಗಳು.
1. ಲಿಂಗಾಚಾರ : ದಿನವೂ ಇಷ್ಟಲಿಂಗವನ್ನು ತ್ರಿಕಾಲದಲ್ಲಿ ಪೂಜಿಸಬೇಕು.ಬೆಳಿಗ್ಗೆ, ಮದ್ಯಾಹ್ನ, ಸಂಜೆ ಇಷ್ಟಲಿಂಗವನ್ನು ಎಡ ಅಂಗೈಯಲ್ಲಿಟ್ಟು ಪೂಜಿಸುವುದು.
2. ಸದಾಚಾರ : ತನ್ನ ಕಾಯಕ ಮತ್ತು ಕರ್ತವ್ಯಕ್ಕೆ ನಿಷ್ಟೆಯಿಂದಿರಬೇಕು. ಅಲ್ಲದೆ ಏಳು ನಿಯಮಗಳಿಗೆ ಬದ್ಧನಾಗಿರಬೇಕು. ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ, ತನ್ನ ಬಣ್ಣಿಸಬೇಡ , ಇದಿರ ಹಳಿಯಲುಬೇಡ ಮುನಿಯ ಬೇಡ , ಅನ್ಯರಿಗೆ ಅಸಹ್ಯಪಡಬೇಡ ಇವೇ ಆ ಏಳು ನಿಯಮಗಳು.
3. ಶಿವಾಚಾರ : ಶಿವನೇ ಪರಮ ದೇವನೆಂದು ತಿಳಿದು, ಎಲ್ಲ ಶರಣರು ಸಮಾನರೆಂದೂ ಅವರ ಎಲ್ಲರ ಹಿತ ಬಯಸುವುದು.
4. ಭೃತ್ಯಾಚಾರ: ಎಲ್ಲಾ ಜೀವಿಗಳು, ಪ್ರಾಣಿಗಳ ಬಗ್ಗೆ ದಯೆಯನ್ನು ತೋರಿಸುವುದು.
5. ಗಣಾಚಾರ: ಶರಣರ ರಕ್ಷಣೆಗೆ ಬದ್ಧನಾಗಿರುವುದು.
- ✍️ Dr Prema Pangi
#ಪ್ರೇಮಾ_ಪಾಂಗಿ,#ಪಂಚಾಚಾರ,
#ಚೆನ್ನಬಸವಣ್ಣನವರು
Comments
Post a Comment