ವಚನ ದಾಸೋಹ

ವಚನ:
*ಗಾಂಧರ್ವಕ್ಕೆ ರಾಗವ ಹೆಸರಿಟ್ಟಂತೆ,
ಸ್ವರವೊಂದು, ಸಂಚಾರದ ಪರಿ ಬಣ್ಣ ಬೇರಾದಂತೆ,
ಗೋವರ್ಣ ಹಲವು, ಕ್ಷೀರ ಏಕವರ್ಣವಾದಂತೆ,
ಕಾಯಕ ಹಲವಾದಲ್ಲಿ ಮಾಡುವ ಮಾಟ, ಶರಣರೊಳಗಾಟ,
ಲಿಂಗವ ಕೂಟ ಕೂಡುವ ಏಕವಾಗಿರಬೇಕು,
ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿವುದಕ್ಕೆ./398*
- ಶರಣ ಬೊಕ್ಕಸದ ಚಿಕ್ಕಣ್ಣ
ಅರ್ಥ:

*ಗಾಂಧರ್ವಕ್ಕೆ ರಾಗವ ಹೆಸರಿಟ್ಟಂತೆ,
ಸ್ವರವೊಂದು, ಸಂಚಾರದ ಪರಿ ಬಣ್ಣ ಬೇರಾದಂತೆ,*

ಗಾಂಧರ್ವ ವಿದ್ಯೆಯಾದ ಸಂಗೀತದಲ್ಲಿ ಅಸಂಖ್ಯ ರಾಗಗಳಿದ್ದರೂ ಅವೆಲ್ಲಕ್ಕೂ ಆಧಾರವಾಗಿರುವ ಸ್ವರಗಳು ಒಂದೇ ಬಗೆಯವು ಸಾ ರಿ ಗ ಮ ಪ ಧ ನಿ ಸಾ. ಈ ಸ್ವರ ಗಳ ಸಂಚಾರದ ಮೂಲಕ ಅವು ಭಿನ್ನ ರಾಗಗಳ ಅನುಭವ ಕೊಡುತ್ತವೆ.

*ಗೋವರ್ಣ ಹಲವು, ಕ್ಷೀರ ಏಕವರ್ಣವಾದಂತೆ,"

ಆಕಳ ಬಣ್ಣಗಳು ಹಲವು ಬಿಳಿ ಕಪ್ಪು ಕೆಂದು ಇತ್ಯಾದಿ.ಆದರೆ ಅವು ಕೊಡುವ ಹಾಲು ಬಿಳಿ ಏಕವರ್ಣ. ಹಸುಗಳ ಬಣ್ಣ ಹಲವು ತೆರೆನಾದುದಾಗಿದ್ದರೂ, ಅವೆಲ್ಲ ಕೊಡುವ ಹಾಲಿನ ಬಣ್ಣ ಮಾತ್ರ ಬಿಳಿಯದು.

*ಕಾಯಕ ಹಲವಾದಲ್ಲಿ ಮಾಡುವ ಮಾಟ, ಶರಣರೊಳಗಾಟ,
ಲಿಂಗವ ಕೂಟ ಕೂಡುವ ಏಕವಾಗಿರಬೇಕು
ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿವುದಕ್ಕೆ.*

ಶರಣರಲ್ಲಿ ಕಾಯಕಗಳು ಹಲವು ಕಮ್ಮಾರ ಕುಂಬಾರ ವ್ಯಾಪಾರಿ ಒಕ್ಕಲಿಗ ಮಡಿವಾಳ ಕಂಚಗಾರ ನೇಕಾರ ಇತ್ಯಾದಿ. ಆದರೂ ಅವರ ಒಡನಾಟದಲ್ಲಿ ಮಾಡುವ ಲಿಂಗವ ಕೂಟ,  ಲಿಂಗಾಂಗ ಸಾಮರಸ್ಯ ಏಕವಾಗಿರಬೇಕು.
ಕಾಯಕದ ಉದ್ದೇಶವೂ ಅದೇ ರೀತಿಯದು ಎನ್ನುತ್ತಾನೆ ಶರಣ ಚಿಕ್ಕಣ್ಣ. ಕಾಯಕಗಳು ಅಸಂಖ್ಯ,  ಆದರೂ ಅವೆಲ್ಲ ದೇಹಶ್ರಮದ ಭಿನ್ನ ಭಿನ್ನ ರೀತಿಗಳು. ಶರಣರ ಕಾಯಕಗಳು ಕ್ರಿಯೆ-ಕೂಟದ  ತಾಣಗಳು ಮತ್ತು ಲಿಂಗದರಿವು, ಅನುಭಾವ ಸಾಧಿಸುವ ಮಾರ್ಗಗಳು. ಅವುಗಳೆಲ್ಲವ ಗುರಿ ಏಕಮುಖಿ. ಕಾಯಕದಿಂದಲೇ ಅರಿವು, ಅನುಭಾವ ಕಾಣಬೇಕು. ಕಾಯಕದಿಂದಲೇ ಲಿಂಗವನ್ನು (ದೇವರನ್ನು) ಅರಿಯಬೇಕು ಎನ್ನುತ್ತಾನೆ ಶರಣ ಚಿಕ್ಕಣ್ಣ.

ಬೊಕ್ಕಸದ ಚಿಕ್ಕಣ್ಣ ಈ ವಚನದಲ್ಲಿ ಎರಡು   ದೃಷ್ಟಾಂತಗಳಲ್ಲಿ ಒಂದು ಸಂಗೀತ ಕ್ಷೇತ್ರದ್ದು ಮತ್ತೊಂದು ಆಕಳ ಹಾಲಿನದು ಬಳಿಸಿದ್ದಾರೆ. ಹಲವು ರಾಗ ಹುಟ್ಟಿಸುವ ಸಂಗೀತದ ಸ್ವರಗಳಂತೆ ಈ ಕಾಯಕಗಳು; 
ವಿಭಿನ್ನ ಬಣ್ಣದ ಹಸುಗಳು ಕೊಡುವ ಹಾಲಿನಂತೆ ಈ ಕಾಯಕಗಳು, ಕಾಯಕಗಳು ಹಲವಿದ್ದರೂ ಅವುಗಳ ಗುರಿ-ಉದ್ದೇಶ ಒಂದೇ. ಅದು ಸಮಾಜ ಕಲ್ಯಾಣ ಮತ್ತು ವ್ಯಕ್ತಿಯ ಕಲ್ಯಾಣ.  ಈ ಸತ್ಯವನ್ನು ಬೊಕ್ಕಸದ ಚಿಕ್ಕಣ್ಣ  ಉದಾಹರಣೆಗಳ ಮೂಲಕ ಈ ವಚನದಲ್ಲಿ ಎತ್ತಿತೋರಿಸಿದ್ದಾನೆ. ಬೊಕ್ಕಸದ ಚಿಕ್ಕಣ್ಣ ಈ ವಚನದಲ್ಲಿ ಎರಡು ದೃಷ್ಟಾಂತಗಳ ಮೂಲಕ ಬಸವಾದಿ ಶರಣರು ಮಾಡಿರುವ ಕಾಯಕಗಳು ಕಾಯಕಗಳೇ ಹೊರತು, ಜಾತಿಗಳಲ್ಲ ಎಂದು ಸಾರಿದರು. 
-✍️ Dr Prema Pangi
#ಪ್ರೇಮಾ_ಪಾಂಗಿ, #ಬೊಕ್ಕಸದ_ಚಿಕ್ಕಣ್ಣ
#ಗಾಂಧರ್ವಕ್ಕೆ_ರಾಗವ_ಹೆಸರಿಟ್ಟಂತೆ
Picture post created by me.Hope you all will like it.A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma