ವಚನ ದಾಸೋಹ
ವಚನ:
#ಅಮೃತಸಾಗರದೊಳಗಿರ್ದು ಆಕಳ ಚಿಂತೆ ಏಕೆ ?
ಮೇರುಮಧ್ಯದೊಳಗಿರ್ದು ಜರಗ ತೊಳೆವ ಚಿಂತೆ ಏಕೆ ?
ಗುರುವಿನೊಳಗಿರ್ದು ತತ್ವವಿದ್ಯೆಯ ಚಿಂತೆ ಏಕೆ ?
ಪ್ರಸಾದದೊಳಗಿರ್ದು ಮುಕ್ತಿಯ ಚಿಂತೆ ಏಕೆ ?
ಕರಸ್ಥಲದೊಳಗೆ ಲಿಂಗವಿರ್ದ ಬಳಿಕ,
ಮತ್ತಾವ ಚಿಂತೆ ಏಕೆ ಹೇಳಾ ಗುಹೇಶ್ವರಾ ? / 132
- ಪ್ರಥಮ ಶೂನ್ಯ ಸಿಂಹಾಸನಾಧೀಶ್ವರ ಅಲ್ಲಮ ಪ್ರಭುಗಳು
ಭಾವಾರ್ಥ:
*ಅಮೃತಸಾಗರದೊಳಗಿರ್ದು ಆಕಳ ಚಿಂತೆ ಏಕೆ ?*
ಅಮೃತದ ಸಾಗರದೊಳಗಿರುವ ಸುದೈವಿಗೆ ಹಾಲು ಕೊಡುವ ಆಕಳ ಚಿಂತೆಯಿರದು. ಅಮೃತದ ಸಮುದ್ರದಲ್ಲಿರುವವನು ಹಾಲಿಗಾಗಿ ಆಕಳನ್ನು ಬಯಸುವದಿಲ್ಲ.
*ಮೇರುಮಧ್ಯದೊಳಗಿರ್ದು ಜರಗ ತೊಳೆವ ಚಿಂತೆ ಏಕೆ ?*
ಮೇರು ಮಧ್ಯದ ಹೇಮಾದ್ರಿಯಲ್ಲಿ ವಾಸಮಾಡುವನಿಗೆ ಚಿನ್ನದ ಕಣದಿಂದ ಮಿಶ್ರಿತವಾದ ಮಣ್ಣನ್ನು ತೊಳೆದು ಅಲ್ಪ ಪ್ರಮಾಣದಲ್ಲಿ ದೊರೆಯುವ ಚಿನ್ನದ ಚಿಂತೆ ಇರದು. ಸುವರ್ಣದ ಅತಿ ಶ್ರೇಷ್ಟ ಬೆಟ್ಟದ ಮೇಲೆ ವಾಸಮಾಡುವವನಿಗೆ ಚಿನ್ನದ ಕಣಮಿಶ್ರಿತ ಮಣ್ಣನ್ನು ಶೋಧಿಸಿ ಚಿನ್ನವನ್ನು ಪಡೆಯುವ ಬಯಕೆ ಬರದು.
*ಗುರುವಿನೊಳಗಿರ್ದು ತತ್ವವಿದ್ಯೆಯ ಚಿಂತೆ ಏಕೆ ?*
ಜ್ಞಾನಮೂರ್ತಿಯಾದ ಗುರು ಜೊತೆಯಲ್ಲಿ ಇದ್ದು ,ಶಾಸಾರ್ಥಗಳ ಓದು ಅನುಭಾವಗಳನ್ನು ತಿಳಿಸಿ ಮಾರ್ಗದರ್ಶನ ಮಾಡುತ್ತಿರುವಾಗ, ಅಂಥ ಧಿವ್ಯ ಶ್ರೀಗುರುವಿನ ಸಾನ್ನಿಧ್ಯದೊಳಗಿದ್ದ ಶಿಷ್ಯನಿಗೆ ಶಾಸ್ತ್ರಗಳ ತತ್ವವಿದ್ಯೆ ಓದುವ ಚಿಂತೆ ಇರದು.
*ಪ್ರಸಾದದೊಳಗಿರ್ದು ಮುಕ್ತಿಯ ಚಿಂತೆ ಏಕೆ *
ಪ್ರಸಾದಾಚರಣೆಯಲ್ಲಿರುವ ಪ್ರಸಾದ ನಿಷ್ಠನಿಗೆ ಮುಕ್ತಿಯ ಚಿಂತೆ ಇರದು. ಎಲ್ಲವನ್ನೂ ಪ್ರಸಾದವನ್ನಾಗಿಸಿ ಸ್ವೀಕರಿಸುವ, ತನು ಮನ ಧನ ಪ್ರಸಾದವಾಗಿ ಅರ್ಪಿಸುವ ನಿತ್ಯಾಚರಣೆಯಲ್ಲಿರುವ ಭಕ್ತನಿಗೆ ಬೇರೆ ಮುಕ್ತಿಯ ಆವಶ್ಯಕತೆ ಉಳಿಯದು.
*ಕರಸ್ಥಲದೊಳಗೆ ಲಿಂಗವಿರ್ದ ಬಳಿಕ,
ಮತ್ತಾವ ಚಿಂತೆ ಏಕೆ ಹೇಳಾ ಗುಹೇಶ್ವರಾ ?*
ಹಾಗೆಯೇ ಕರಸ್ಥಲದಲ್ಲಿ ಲಿಂಗವಿರಿಸಿ ನಿತ್ಯವೂ ಅನುಸಂಧಾನಿಸುತ್ತಿರುವ ಸಾಧಕ ಭಕ್ತನಿಗೆ ಈ ಜಗತ್ತಿನಲ್ಲಿ ಯಾವ ಚಿಂತೆಗಳೂ ಬಾಧಿಸುವದಿಲ್ಲ.
ಭಾವ:
ಇಷ್ಟಲಿಂಗ ಯೋಗಸಾಧನೆಯಿಂದ (ಶಿವಯೋಗದಿಂದ) ಲಿಂಗಾಂಗ ಸಾಮರಸ್ಯದ ಅನುಭಾವವಾಗಿ ತನ್ನ ನಿಜ ಸ್ವರೂಪದ ದರ್ಶನವಾಗುತ್ತದೆ. ಅಜ್ಞಾನವು ನಷ್ಟವಾಗುತ್ತದೆ. ಲಿಂಗಾಂಗ ಯೋಗ, ಲೌಕಿಕ ಮೋಹಜಾಲದಿಂದ ಬಿಡಿಸಿ, ಜೀವನನ್ನು ಪರಶಿವನಲ್ಲಿ ಸಮ್ಮಿಲೀನಗೊಳಿಸುತ್ತದೆ. ಇಂಥ ಭಕ್ತನ ದೇಹ ಪವಿತ್ರ, ಮನಸ್ಸು ಪವಿತ್ರ ಮತ್ತು ಭಾವವೂ ಪವಿತ್ರ. ಲಿಂಗಭಕ್ತ ಪರವಸ್ತುವಿನಲ್ಲಿ ಏಕೀಭೂತವಾಗಿ ಯಾವ ಚಿಂತೆ ಇಲ್ಲದೆ ನಿಶ್ಚಿಂತ ನಾಗುತ್ತಾನೆ.
- ✍️ Dr Prema Pangi
#ಪ್ರೇಮಾ_ಪಾಂಗಿ,#ಅಲ್ಲಮ_ಪ್ರಭುಗಳು
#ಅಮೃತಸಾಗರದೊಳಗಿರ್ದು_ಆಕಳ_ಚಿಂತೆ
Comments
Post a Comment