ವಚನ ದಾಸೋಹ

ವಚನ:
#ಕಣ್ಣು ಕಾಲು ಎರಡುಳ್ಳವ ದೂರ ಎಯ್ದುವನಲ್ಲದೆ,
ಕಣ್ಣು ಕಾಲೆರಡರೊಳಗೊಂದಿಲ್ಲದವನು
ದೂರವನೆಯ್ದಲರಿಯನೆಂಬಂತೆ,
ಜ್ಞಾನರಹಿತನಾಗಿ ಕ್ರೀಯನೆಷ್ಟು ಮಾಡಿದಡೇನು?
ಅದು ಕಣ್ಣಿಲ್ಲದವನ ನಡೆಯಂತೆ.
ಕ್ರೀರಹಿತನಾಗಿ ಜ್ಞಾನಿಯಾದಡೇನು?
ಅದು ಕಾಲಿಲ್ಲದವನ ಇರವಿನಂತೆ.
ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ
ನಿಜವ ಬೆರಸುವಡೆ
ಜ್ಞಾನವೂ ಕ್ರೀಯೂ ಎರಡು ಬೇಕು.
-  ಸ್ವತಂತ್ರ ಸಿದ್ಧಲಿಂಗೇಶ್ವರರು
ಅರ್ಥ:
ಸ್ವತಂತ್ರ ಸಿದ್ಧಲಿಂಗೇಶ್ವರರು ಜ್ಞಾನ ಮತ್ತು ಕ್ರಿಯೆ ಎರಡೂ ಸಾಧನೆಗೆ ಅವಶ್ಯವಾಗಿಬೇಕು ಎನ್ನುತ್ತಾರೆ.

*ಕಣ್ಣು ಕಾಲು ಎರಡುಳ್ಳವ ದೂರ ಎಯ್ದುವನಲ್ಲದೆ,
ಕಣ್ಣು ಕಾಲೆರಡರೊಳಗೊಂದಿಲ್ಲದವನು
ದೂರವನೆಯ್ದಲರಿಯನೆಂಬಂತೆ*

ಕಣ್ಣು ಮತ್ತು ಕಾಲು ಎರಡೂ ಇರುವವನು ಸುಲಭವಾಗಿ ಕಾಲ್ನಡಿಗೆಯಲ್ಲಿ ದೂರ ಚಲಿಸಿ  ದೂರದ ಪ್ರಯಾಣ ಮಾಡಬಲ್ಲನು. ಆದರೆ ಕಣ್ಣು ಇಲ್ಲದ ಕುರುಡ ಅಥವಾ ಕಾಲಿಲ್ಲದ ಕುಂಟರಿಗೆ ತುಂಬಾ ದೂರದ ಕಾಲ್ನಡಿಗೆಯ ಪ್ರಯಾಣ ಪ್ರಯಾಸಮಯ, ಕಷ್ಟಕರವಾದುದು.

*ಜ್ಞಾನರಹಿತನಾಗಿ ಕ್ರೀಯನೆಷ್ಟು ಮಾಡಿದಡೇನು?
ಅದು ಕಣ್ಣಿಲ್ಲದವನ ನಡೆಯಂತೆ.*

ಜ್ಞಾನವಿಲ್ಲದೆ  ಕ್ರಿಯೆ ಮಾಡಿದರೆ,
ಅದು ಕಣ್ಣಿಲ್ಲದವನ ನಡೆಯಂತೆ. ನಡೆಯಲು ಕಣ್ಣುಗಳು ಮಾರ್ಗದರ್ಶನ ಮಾಡುವಂತೆ ಸಾಧನೆಗೆ ಮತ್ತು ಯಾವುದೇ ಕ್ರಿಯೆ, ಕಾರ್ಯಕ್ಕೆ ಮಾರ್ಗದರ್ಶನ ಮಾಡಲು ಜ್ಞಾನ  ಅರಿವು ಪ್ರಜ್ಞೆ ಬೇಕಾಗುತ್ತದೆ. ಯಾವ ಕಾರ್ಯ ನ್ಯಾಯವಾದದ್ದು ಸರಿಯಾದದ್ದು; ಯಾವುದು ಅನ್ಯಾಯ ತಪ್ಪು ಎಂದು ನಮ್ಮ ಜ್ಞಾನ ಅರಿವು ತಿಳುವಳಿಕೆ ತಿಳಿಸುತ್ತದೆ. ಯಾವ ಕ್ರಿಯೆಯಿಂದ  ನಮಗೂ ಸಮಾಜಕ್ಕೂ ಒಳ್ಳೆಯದಾಗುತ್ತದೆ? ಯಾವ ಕ್ರಿಯೆಯಿಂದ ನಮಗೆ ಮತ್ತು ಸಮಾಜಕ್ಕೆ ಕೇಡು ಆಗುತ್ತದೆ ಎಂದು ಸಹ ನಮ್ಮ ಪ್ರಜ್ಞೆ ತಿಳಿಸುವುದು.

*ಕ್ರೀರಹಿತನಾಗಿ ಜ್ಞಾನಿಯಾದಡೇನು
ಅದು ಕಾಲಿಲ್ಲದವನ ಇರವಿನಂತೆ*

ಕ್ರಿಯೆ ಇಲ್ಲದ  ಜ್ಞಾನಿಯ ನಡೆ
ಕಾಲಿಲ್ಲದವನ ನಡೆಯಂತೆ. ಎಲ್ಲ ತರಹದ ಜ್ಞಾನ ಪಡೆದುಕೊಂಡು ಅದರ ಬೆಳಕಿನಲ್ಲಿ ಕಾರ್ಯ ನಿರ್ವಹಿಸಲದಿದ್ದರೆ ನಮ್ಮ ಜ್ಞಾನದಿಂದ ನಮಗೂ ಸಮಾಜಕ್ಕೂ ಯಾವುದೆ ಪ್ರಯೋಜನವಾಗದಿದ್ದರೆ ಅಂಥ ಜ್ಞಾನ ನಿಷ್ಪ್ರಯೋಜಕ.

*ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನ
ನಿಜವ ಬೆರಸುವಡೆ
ಜ್ಞಾನವೂ ಕ್ರೀಯೂ ಎರಡು ಬೇಕು.*

ಸತ್ ಚಿತ್ ಆನಂದ ಸ್ವರೂಪನಾದ ನಿಜಗುರು ಆದಿಗುರು ನಿರಾಕಾರ ಶಿವನಲ್ಲಿ ಬೆರೆಯಲು ಶಿವಾಯೋಗದ  ಜ್ಞಾನ ಮತ್ತು ಶಿವಯೋಗ ಸಾಧನೆಯ ಕ್ರಿಯೆ ಎರಡೂ ಬೇಕು.

ಭಾವ:
ವ್ಯಕ್ತಿಯು ತನ್ನ ಜೀವನದಲ್ಲಿ ಜ್ಞಾನವನ್ನು ಹೊಂದದೆ ಕೇವಲ ಆಚರಣೆಗಳನ್ನು ಮಾತ್ರ ಮಾಡುತ್ತಿದ್ದರೆ ಇಲ್ಲವೇ ಸಾಧನೆ, ಆಚರಣೆ ಗಳನ್ನು ಮಾಡದೆ ಕೇವಲ ಜ್ಞಾನವನ್ನು ಮಾತ್ರ ಹೊಂದಿದ್ದರೆ, ಯಾವ ಪ್ರಯೋಜನವೂ ಇಲ್ಲ.
ಕ್ರಿಯೆ ಸಾಧನೆಯು, ಜ್ಞಾನದ ಜತೆಗೂಡಿದಾಗ ಮಾತ್ರ ವ್ಯಕ್ತಿಗೆ ಜೀವನದಲ್ಲಿ ನೆಮ್ಮದಿ ಮತ್ತು ಏಳಿಗೆಯು ಉಂಟಾಗುತ್ತದೆ.
ಶರಣ ಧರ್ಮದಲ್ಲಿ  ಜ್ಞಾನ (ಅರಿವು ಪ್ರಜ್ಞೆ ತಿಳುವಳಿಕೆ), ಕ್ರಿಯೆ (ಸಾಧನೆ,ಆಚರಣೆ) ಎರಡಕ್ಕೂ ಸಮಾನ ಮಹತ್ವ. ಜ್ಞಾನ ಥಿಯರಿ (theory) ಆದರೆ, ಕ್ರಿಯೆ ಪ್ರಾಕ್ಟಿಕಲ್ (practicals) ದಂತೆ.
 ಜ್ಞಾನವನ್ನು ಸಂಪೂರ್ಣವಾಗಿ ಅರಿಯಲು ಕ್ರಿಯೆ ಬೇಕು. ಕ್ರಿಯೆಗಳ ಆಚರಣೆಗೆ ಜ್ಞಾನ ಬೇಕು. ಜ್ಞಾನದ ಮತ್ತು ಪ್ರಜ್ಞೆಯ ಕಣ್ಣಿನಿಂದ ನೋಡಿದರೆ ನಮ್ಮ ಹಲವು ಆಚರಣೆಗಳು ಮೂಢ ನಂಬಿಕೆ, ಅಂಧಾನುಕರಣೆ, ಕಂದಾಚಾರಗಳಾಗಿಯೇ ಕಾಣಿಸುತ್ತವೆ. ಅಂತಹ ಮೂಢ ನಂಬಿಕೆಗಳನ್ನು ಬಿಟ್ಟು ನಿಜವಾದ ಪ್ರಜ್ಞಾಪೂರಕವಾದ ನಮಗೂ(ದೇಹಕ್ಕೆ ಮನಸ್ಸಿಗೆ ಆತ್ಮಕ್ಕೆ) ಮತ್ತು ಸಮಾಜಕ್ಕೂ ಒಳ್ಳೆಯದಾಗುವ ಆಚರಣೆ ಕ್ರಿಯೆಗಳನ್ನು ಮಾಡೋಣ. ಸತ್ಕ್ರಿಯೆ ಎಂದರೆ ನಿತ್ಯ ಜೀವನದ ವ್ಯವಹಾರಗಳಲ್ಲಿ ವ್ಯಕ್ತಿಯು ತನಗೆ, ತನ್ನ ಕುಟುಂಬಕ್ಕೆ, ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಉಂಟುಮಾಡುವಂತಹ ಕಾರ್ಯ.

*ಶರಣ ಪರಿಚಯ:*
*ಸ್ವತಂತ್ರ ಸಿದ್ದಲಿಂಗೇಶ್ವರರು :
(ಕಾಲ:1501-1600) 
ಶರಣ ಸ್ವತಂತ್ರ ಸಿದ್ಧಲಿಂಗರು ಎಡೆಯೂರ ತೋಂಟದ ಸಿದ್ಧಲಿಂಗರ ಪರಮಶಿಷ್ಯರು. ವಿರಕ್ತ ಸಂಪ್ರದಾಯದ ಗುರುಗಳು. ಚರ ಜಂಗಮರು. ಅತ್ಯಂತ  ಶ್ರೇಷ್ಱ ವಚನಕಾರರು. ಮಂಡ್ಯ ತಾಲ್ಲೂಕಿನ ಕಾಪನಹಳ್ಳಿ ಸಮೀಪದ ಗವಿಮಠ ಎಂಬಲ್ಲಿ  ಬದುಕಿದ್ದ ಪವಾಡ ಪುರುಷರು. ವಿರೂಪಾಕ್ಷ ಪಂಡಿತನ (1584)`ಚೆನ್ನಬಸವ ಪುರಾಣ'ದಲ್ಲಿ (p.63-47) ತೋಂಟದ ಸಿದ್ಧಲಿಂಗರ ಶಿಷ್ಯರೆಂದು ಉಲ್ಲೇಖಿತರಾಗಿದ್ದಾರೆ. ಶರಣ ಧರ್ಮ ಪ್ರಸಾರಕ್ಕಾಗಿ ಇವರು ತಮ್ಮ ಗುರುಗಳಾದ ತೋಂಟದ ಸಿದ್ಧಲಿಂಗೇಶ್ವರರೊಡನೆ ದೇಶಪರ್ಯಟನವನ್ನೂ ಕೈಗೊಂಡಿದ್ದರು.
ಹುಟ್ಟಿದ ಊರು: ಹರದನ ಹಳ್ಳಿ(ವಾಣಿಜ್ಯಪುರ), ಚಾಮರಾಜನಗರ ತಾಲ್ಲೂಕು,ಚಾಮರಾಜನಗರ ಜಿಲ್ಲೆ.
ಶಿವಯೋಗ ಧಾಮ ಮತ್ತು ನಿರ್ವಾಣಸ್ಥಾನ : ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕಾಪನಹಳ್ಳಿ ಎಂಬ ಊರಿನ ಹತ್ತಿರದಲ್ಲಿರುವ ಗಜರಾಜಗಿರಿ. ಗಜರಾಜಗಿರಿಯಲ್ಲಿ  ದೊರಕಿರುವ ಒಂದು ಗದ್ದುಗೆಯನ್ನು ಇವರದೆಂದು ಗುರುತಿಸಲಾಗಿದೆ. ಅಲ್ಲಿ ಪ್ರತಿವರ್ಷ ಮಾಘ ಶುದ್ಧ ಪೂರ್ಣಿಮಾ ದಿನ ಜಾತ್ರೆ ನಡೆಯುತ್ತ ಬಂದಿದೆ. ಇತ್ತೀಚೆಗೆ ದೊರಕಿರುವ ಮಂಗಳಾರತಿ ಸ್ವರೂಪದ `ಸ್ವರವಚನ'ವೊಂದರಿಂದ ಈ ಸಂಗತಿ ಬೆಳಕಿಗೆ ಬಂದಿದೆ.
`ಬೆಳಗೀರೆ ಮಂಗಳಾರತಿಯ ಮುಂದೆ
ಹೊಳೆವ ಸ್ವತಂತ್ರ ಸಿದ್ಧಲಿಂಗನಿಗೆ
ಬೆಳಗೀರೆ ಮಂಗಳಾರತಿಯ || ಪಲ್ಲ ||
.................. ಶಟ್ಸ್ಥಲ ಸಾರ್ವಭೌಮ
ಕಾಪನಹಳ್ಳಿಯ ಗವಿಯ ಸರ್ವ
ಪಾಪನಾಶನ ನದಿತೀರವಾಸನಿಗೆ
ಬೆಳಗೀರೆ ಮಂಗಳಾರತಿಯ' || 3 ||
(ಕೆ. 1620 (24-5) ಕ.ಅ. ಕೇಂದ್ರ ಬೆಂ.ವಿ.ವಿ.)
ಮುಮ್ಮಡಿ ಕೃಷ್ಣರಾಜ ಒಡೆಯರು (1794-1868) ಇವರ ಸಮಾಧಿಗೆ `ಉಂಬಳಿ' ಕೊಟ್ಟಿದ್ದಾರೆ.
ವಚನಗಳ ಅಂಕಿತನಾಮ :
 'ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರ '
ಕಸುಬು : ಧರ್ಮ ಪ್ರಚಾರ, ವಚನಕಾರ
ಬಸವಾದಿ ಶರಣರ ತರುವಾಯದ ವಚನಕಾರರಲ್ಲಿ ಪ್ರಸಿದ್ಧರಾದವರು. ಇವರು ವಿಶೇಷ ಮಹಿಮಾನ್ವಿತರೂ ಪವಾಡಪುರುಷರೂ ಆಗಿದ್ದರು. 
ದೊರೆತಿರುವ ವಚನಗಳು : 435
ಇತ್ತೀಚೆಗೆ ಲಭ್ಯವಾದ ಶಕವರ್ಷ 1765ರಲ್ಲಿ ಪ್ರತಿ ಮಾಡಿದ ಕಾಗದದ ಪ್ರತಿಯೊಂದರಿಂದ ಇವರು 700 ವಚನಗಳನ್ನು ರಚಿಸಿದ ಸಂಗತಿ ಬೆಳಕಿಗೆ ಬಂದಿದೆ. ಈ ವಚನಗಳಲ್ಲಿ ವೀರಶೈವ ಸಿದ್ಧಾಂತ, ಯೋಗ, ಷಟ್ಸ್ಥಲಶಾಸ್ತ್ರ, ಅನುಭಾವ  ಮೊದಲಾದ ವಿಷಯಗಳು ಪ್ರತಿಪಾದಿತವಾಗಿವೆ. ಕೆಲವು ಬೆಡಗಿನ ವಚನಗಳನ್ನೂ ಇವರು ಬರೆದಿದ್ದಾರೆ. ಸ್ವತಂತ್ರ ಸಿದ್ಧಲಿಂಗರು 700 ವಚನಗಳನ್ನಲ್ಲದೆ 'ಜಂಗಮರಗಳೆ' ಹಾಗೂ `ಮುಕ್ತ್ಯಾಂಗನಾ ಕಂಠಮಾಲೆ' ಗಳನ್ನು ರಚಿಸಿದ್ದಾರೆ. ಜಂಗಮ ರಗಳೆಯಲ್ಲಿ 108 ನುಡಿಗಳಿವೆ. ಮುಕ್ತ್ಯಾಂಗನಾ ಕಂಠಮಾಲೆ 21 ವಚನಗಳಿಂದ ಕೂಡಿದ ಒಂದು ಅನುಭಾವ ಗ್ರಂಥ. ಆರು ಸ್ಥಲಗಳಲ್ಲಿ ಹಂಚಿಕೊಂಡಿರುವ ಈತನ ವಚನಗಳಲ್ಲಿ ಷಟ್-ಸ್ಥಲ ತತ್ವ ನಿರೂಪಣೆ ಸಕ್ರಮವಾಗಿ ತತ್ವ ಪ್ರತಿಪಾದನೆ ಮಾಡಿದ್ದಾರೆ.
-✍️ Dr Prema Pangi 
#ಪ್ರೇಮಾ_ಪಾಂಗಿ,ಸ್ವತಂತ್ರ_ಸಿದ್ಧಲಿಂಗೇಶ್ವರರು
#ಕಣ್ಣು_ಕಾಲು_ಎರಡುಳ್ಳವ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma