ವಚನ ದಾಸೋಹ

*ವಚನ* :
 ಎಮ್ಮವರು ಬೆಸಗೊಂಡರೆ  ಶುಭಲಗ್ನವೆಂದೆನ್ನಿರಯ್ಯ,
 ರಾಶಿ ಕೂಟ ಋಣ ಸಂಬಂಧ 
 ಉಂಟೆಂದು ಹೇಳಿರಯ್ಯ,
 ನಾಳಿನ ದಿನಕಿಂದಿನ ದಿನ 
 ಲೇಸೆಂದು ಹೇಳಿರಯ್ಯ,
 ಚಂದ್ರಬಲ ತಾರಾಬಲ 
 ಉಂಟೆಂದು ಹೇಳಿರಯ್ಯ,
 ಕೂಡಲಸಂಗಮದೇವನ 
 ಪೂಜಿಸಿದ ಫಲ ನಿಮ್ಮದಯ್ಯ.
-*ವಿಶ್ವಗುರು* *ಬಸವಣ್ಣನವರು* 

12 ನೆಯ ಶತಮಾನದ ಕಲ್ಯಾಣ ಕ್ರಾಂತಿ ಕರ್ನಾಟಕದಲ್ಲಿ ನಡೆದ ಅದ್ಭುತ ವೈಚಾರಿಕ ಕ್ರಾಂತಿ ಎನ್ನಬಹುದು. ಕ್ರಾಂತಿಯ ನೇತಾರ ಬಸವಣ್ಣನವರು ಸಾಂಪ್ರದಾಯಕ ಅಂಧಶ್ರದ್ಧೆಗಳನ್ನು ತಿರಸ್ಕರಿಸಿ ವೈಜ್ಞಾನಿಕವಾಗಿ ಚಿಂತನೆ ಮಾಡಲು ಕಲಿಸಿದರು.
ಶುಭಕಾರ್ಯಗಳನ್ನು ಶುಭ ಮುಹೂರ್ತದಲ್ಲಿ ಮಾಡುವದು ಒಂದು ತಲೆತೆಲಾಂತರವಾಗಿ ಬಂದ ಸಾಂಪ್ರದಾಯಕ ಆಚರಣೆ. ಆದರೆ, ಶರಣರು ಈ ಕಾಲ ನಿರ್ಮಿತ ‘ಶುಭಮುಹೂರ್ತ’ವನ್ನು  ತಿರಸ್ಕರಿಸಿ ಶುಭ ಕಾರ್ಯಗಳಿಗೆ ಎಲ್ಲ ಕಾಲಗಳೂ ಶುಭವೇ ಎಂದು ವಿವೇಚಿಸಿದರು. ಮಹೂರ್ತ, ಘಳಿಗೆ ಚಿಂತಿಸಿ, ದಿಕ್ಕೆಟ್ಟು ಪುರೋಹಿತರ ಬಳಿಗೆ 
ಓಡುವುದು ಬೇಡ. ಒಳ್ಳೆ ಕೆಲಸ ಮಾಡಬೇಕೆಂಬ ಬಯಕೆ ಮನಸ್ಸಿನಲ್ಲಿ ಮೊಳೆತ ಘಳಿಗೆಯೇ ಒಳ್ಳೆಯ ಘಳಿಗೆ ! ಒಳ್ಳೆಯ ಕೆಲಸ ಮಾಡಲು ನಾಳೆಯೆನ್ನಬೇಡ, ತಡಮಾಡದೆ, ನಾಳೆಗಿಂತ ಇಂದಿನ ದಿನವೇ ಲೇಸು ಎಂದು ಮಾಡು. ಒಳ್ಳೆಯದು ಮಾಡುವವನೇ ಅದರ ಫಲ ಕೂಡಾ ಅನುಭವಿಸುತ್ತಾನೆ. ಇದರಲ್ಲಿ ಇನ್ನೊಬ್ಬರನ್ನು ಕಾಲ ಕೇಳಿ ಮಾಡುವುದೇನಿದೆ?

*ಎಮ್ಮವರು ಬೆಸಗೊಂಡರೆ ಶುಭಲಗ್ನವೆಂದೆನ್ನಿರಯ್ಯ*

ಮತೀಯ ಶ್ರೇಣೀಕರಣವನ್ನು ಹಾಗೂ ಜಾತಿ ಬೇಧ, ಮತೀಯ ಭಿನ್ನತೆಯನ್ನು ತಿರಸ್ಕರಿಸಿ ಲಿಂಗ ದೀಕ್ಷೆ ಪಡೆದ ಎಲ್ಲರೂ ನಮ್ಮವರೇ. ಇವರು ಬೆಸೆದುಕೊಂಡರೆ ಅಂದರೆ 
ಅನ್ಯೋನವಾಗಿ ಕೂಡಿದರೆ ಅಥವಾ ಸಹಭೋಜನ ಮತ್ತು ಲಗ್ನವಾದರೆ ಅದೇ ಶುಭಗಳಿಗೆ ಎಂದು ಪೂರ್ವಾಶ್ರಮದ ಜಾತಿ ಮರೆತು ಒಂದಾಗಬೇಕು ಎನ್ನುವುದು ಗುರು ಬಸವಣ್ಣನವರ ಅದಮ್ಯ ಆಶಯವಾಗಿತ್ತು.
 
 *ರಾಶಿ ಕೂಟ ಋಣ ಸಂಬಂಧ 
 ಉಂಟೆಂದು ಹೇಳಿರಯ್ಯ
 ನಾಳಿನ ದಿನಕಿಂದಿನ ದಿನ 
 ಲೇಸೆಂದು ಹೇಳಿರಯ್ಯ
 ಚಂದ್ರಬಲ ತಾರಾಬಲ 
 ಉಂಟೆಂದು ಹೇಳಿರಯ್ಯ*

ಈ ವಚನದಲ್ಲಿ ಬರುವ ಬೆಸಗೊಳ್ಳುವುದು, ಶುಭಲಗ್ನ, ರಾಶಿಕೂಟ, ಋಣ, ಚಂದ್ರಬಲ, ತಾರಾಬಲ ಇತ್ಯಾದಿ ಮಾತುಗಳು ಮದುವೆಯ ಮುಹೂರ್ತಕ್ಕೆ ಅನ್ವಯಿಸಿದಂತೆ ಕಂಡುಬರುತ್ತದೆ. ನಮ್ಮ ಶರಣರು ಬಂದು ಬೆಸಗೊಳ್ಳಲು ಶುಭಮುಹೂರ್ತ ಯಾವುದು ಎಂದು ಕೇಳಿದರೆ, ಜ್ಯೋತಿಷ್ಯ ನೋಡುವುದಕ್ಕೆ ಹೋಗಬಾರದು. ರಾಶಿಕೂಟ, ಋಣಸಂಬಂಧಗಳನ್ನೂ ಚಂದ್ರಬಲ, ತಾರಾಬಲಗಳನ್ನು ನೋಡಬೇಕಾಗಿಲ್ಲ. ಇವು ಎಲ್ಲವೂ ನಮ್ಮ ಮನಸ್ಸಿನ ಸಂಕಲ್ಪದಲ್ಲಿಯೇ ಇರಬೇಕು. ಗುರು ಬಸವಣ್ಣನವರು ನಾಳೆಗಿಂತ ಇಂದು ಈಗಲೇ ಈ ಮುಹೂರ್ತವೇ ಅತ್ಯಂತ ಶ್ರೇಷ್ಠ ಎಂದು ನಮ್ಮ ಮನಸ್ಸಿನ ನಿಷ್ಠೆಗೆ ಮಹತ್ವವನ್ನು ಕೊಡುತ್ತಾರೆ.

*ಕೂಡಲಸಂಗಮದೇವನ 
 ಪೂಜಿಸಿದ ಫಲ ನಿಮ್ಮದಯ್ಯ*

ವಚನದ ಕೊನೆಯ ಮಾತು  ಪೂಜೆಗೆ ಅನ್ವಯಿಸುತ್ತದೆ. ಈ ಮನಸ್ಸಿನ ನಿಷ್ಠೆಯೇ ಕೂಡಲಸಂಗಮದೇವನನ್ನು ಪೂಜಿಸಿದ ಫಲವನ್ನು ತಂದುಕೊಡುತ್ತದೆ ಎಂದು ಕೊನೆಯ ಮಾತಿನಲ್ಲಿ ಹೇಳುತ್ತಾರೆ. ಶುಭಕಾಲಕ್ಕಾಗಿ, ಮುಹೂರ್ತಕ್ಕಾಗಿ ನಾವು ಕಾಯಬೇಕಾಗಿಲ್ಲ. ಸತ್ಪುರುಷನ ಮನಸ್ಸಿನ ನಿಷ್ಟೆಯಲ್ಲಿ ಶುಭಮುಹೂರ್ತಗಳೆಲ್ಲಾ ಕಾದಿರುತ್ತವೆ.

ಅವಿರಲ ಜ್ಞಾನಿ ಚೆನ್ನಬಸವಣ್ಣನವರ ನಿರ್ಣಾಯಕ ಹೇಳಿಕೆ ಪ್ರಕಾರ
*ಲಿಂಗಭಕ್ತನ ವಿವಾಹದಲ್ಲಿ 
ವಾರ ತಿಥಿ ಸುಮುಹೂರ್ತವೆಂಬ ಲೌಕಿಕದ ಕರ್ಮವ ಮಾಡಿದಡೆ
ನಿಮ್ಮ ಸದ್ಭಕ್ತರಿಗೆ ದೂರವಯ್ಯಾ* 
ಎಂದು ಕೂಡಲ ಚೆನ್ನಸಂಗಮನಾಥನಲ್ಲಿ ಹೇಳುತ್ತಾರೆ.

ಶರಣ ನಿರಾಲಂಬ ಪ್ರಭುಗಳು, 
*ಮತ್ತೆ ಮತ್ತೆ ಶುಭಲಗ್ನವ ಕೇಳಿ ಮದುವೆಯಾದ ಅನಂತ ಜನರ ಹೆಂಡಿರು ಮುಂಡೆಯರಾಗಿ ಹೋದ ದೃಷ್ಟ್ರವ ಹೇಳಿ* ..........
*ಶುಭದಿನ ಶುಭಲಗ್ನ ಶುಭವೇಳೆ ಶುಭಮುಹೂತ೯ ವ್ಯತಿಪಾತ ದಗ್ದವಾರವೆಂದು ಸಂಕಲ್ಪಿಸಿ ಬೊಗಳುವರ ಮಾತು ಕೇಳಲಾಗದು* ಎಂದು  ಹೇಳಿದ್ದಾರೆ..

ಗುರುಕರುಣೆಯನ್ನು ಪಡೆದು ಪೂಜೆಯಲ್ಲಿ ತೊಡಗುವುದಕ್ಕೆ, ನಮ್ಮ ಶರಣರ ಲಗ್ನ ಕಾರ್ಯಗಳಿಗೆ ಮುಹೂರ್ತವನ್ನು ನೋಡಬೇಕಾಗಿಲ್ಲ. ಜ್ಯೋತಿಷ್ಯವನ್ನು ಕೇಳಬೇಕಾಗಿಲ್ಲ. ಶುಭ ಕಾರ್ಯ ಮನಸ್ಸಿನಲ್ಲಿ ಬಂದ ಕೂಡಲೇ ಪ್ರಾರಂಭಿಸಬೇಕೆಂದು  ಹೇಳುತ್ತಿದ್ದಾರೆ. ಇಲ್ಲಿ ಶರಣರ ಸ್ವತಂತ್ರ ವಿಚಾರಶೀಲತೆಯನ್ನು ಕಾಣುತ್ತೇವೆ.
ಗುರು ಬಸವಣ್ಣನವರ ಇನ್ನೊಂದು ವಚನದಲ್ಲಿಯೂ ದೇವರನ್ನು ನೆನೆಯಲು ಅಂದು ಇಂದು ಏನ ಬೇಡ ಎಂದು ತಿಳಿಸಿದ್ದಾರೆ.

 *ಅಂದು ಇಂದು ಮತ್ತೊಂದೆನಬೇಡ
ದಿನವಿಂದೇ ಶಿವ ಶರಣೆಂಬವಂಗೆ
ದಿನವಿಂದೇ ಹರ ಶರಣೆಂಬವಂಗೆ
ದಿನವಿಂದೇ ನಮ್ಮ ಕೂಡಲಸಂಗನ ಮಾಣದೆ ನೆನೆವಂಗೆ* /174

ಲಿಂಗಾಯತ ಧರ್ಮದ ದೃಷ್ಟಿಯಲ್ಲಿ ಕಾಲದ ಬಗ್ಗೆ ಶುಭ-ಅಶುಭ ಎಂಬುದಿಲ್ಲ. ಸೃಷ್ಟಿಕರ್ತನನ್ನು ಸ್ಮರಿಸಿಕೊಂಡು ಶುಭ ಕಾರ್ಯ ಮಾಡಿದುದೆಲ್ಲ ಶುಭಗಳಿಗೆಯೇ. ಆದ್ದರಿಂದ ನಿಜವಾದ ಲಿಂಗಾಯತನು ರಾಹು ಕಾಲ - ಗುಳಿಕ ಕಾಲ - ಯಮ ಕಂಟಕ ಕಾಲ ಎಂದು ಭೇದವೆಣಿಸದೆ ಗುರು ಬಸವಣ್ಣನವರ, ಲಿಂಗ , ಜಂಗಮರ ದಿವ್ಯ ಸ್ಮರಣೆ ಮಾಡಿ ಕೆಲಸಗಳನ್ನು ಮಾಡಬೇಕು.
- ✍️Dr Prema Pangi
#ಪ್ರೇಮಾ_ಪಾಂಗಿ, #ಗುರು_ಬಸವಣ್ಣನವರು
#ಎಮ್ಮವರು_ಬೆಸಗೊಂಡರೆ
Picture post designed and created by me. A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma