ವಚನ ದಾಸೋಹ

ವಚನ:
#ವಾರಿಧಿಯೊಳಗಣ ವಾರಿಕಲ್ಲ ಕಡಿದು
ತೊಲೆ ಕಂಬವ ಮಾಡಿ ಮನೆಯ ಕಟ್ಟಿಕೊಂಡು
ಒಕ್ಕಲಿರಬಹುದೆ ಅಯ್ಯಾ ?
ಅಗ್ನಿಯೊಳಗಿಪ್ಪ ಕರ್ಪುರವ ಕರಡಿಗೆಯ ಮಾಡಿ
ಪರಿಮಳವ ತುಂಬಿ, ಅನುಲೇಪನಮಾಡಿ
ಸುಖಿಸಬಹುದೆ ಅಯ್ಯಾ ?
ವಾಯುವಿನೊಳಗಣ ಪರಿಮಳವ ಹಿಡಿದು
ದಂಡೆಯ ಕಟ್ಟಿ ಮಂಡೆಯೊಳಗೆ
ಮುಡಿಯಬಹುದೆ ಅಯ್ಯಾ ?
ಬಯಲ ಮರೀಚಿಕಾಜಲವ ಕೊಡನಲ್ಲಿ ತುಂಬಿ
ಹೊತ್ತು ತಂದು ಅಡಿಗೆಯ ಮಾಡಿಕೊಂಡು
ಉಣಬಹುದೆ ಅಯ್ಯಾ ?
ನಿಮ್ಮ ನೆರೆಯರಿದು ನೆರೆದು ಪರವಶನಾಗಿ
ತನ್ನ ಮರೆದ ಪರಶಿವಯೋಗಿಗೆ
ಮರಳಿ ಪರಿಭವಂಗಳುಂಟೆ
ಪರಮಗುರು ಶಾಂತಮಲ್ಲಿಕಾರ್ಜುನಾ ?
- ಕರಸ್ಥಲದ ಮಲ್ಲಿಕಾರ್ಜುನ ದೇವ
ಭಾವಾರ್ಥ:
*ವಾರಿಧಿಯೊಳಗಣ ವಾರಿಕಲ್ಲ ಕಡಿದು
ತೊಲೆ ಕಂಬವ ಮಾಡಿ ಮನೆಯ ಕಟ್ಟಿಕೊಂಡು
ಒಕ್ಕಲಿರಬಹುದೆ ಅಯ್ಯಾ ?*

ವಾರಿಧಿ ಅಂದರೆ ಸಮುದ್ರ. ವಾರಿಕಲ್ಲ ಅಂದರೆ ಹಿಮದ ಗಡ್ಡೆ. ಸಮುದ್ರದೊಳಗಿನ ಹಿಮದ ಗಡ್ಡೆ ತಂದು ಕಟೆದು ತೊಲೆ ಕಂಬಗಳನ್ನು ಮಾಡಿ ಮನೆಯ ಕಟ್ಟಿಕೊಂಡು ಆ ಮನೆಯಲ್ಲಿ ವಾಸಿಸಬಹುದೇ? ಇದು ಸಾಧ್ಯವಿಲ್ಲ. ಯಾಕೆಂದರೆ ಹಿಮದ ಗಡ್ಡೆ ಸಂಪೂರ್ಣವಾಗಿ ಕರಗಿ ಇಲ್ಲವಾಗುತ್ತದೆ.

*ಅಗ್ನಿಯೊಳಗಿಪ್ಪ ಕರ್ಪುರವ ಕರಡಿಗೆಯ ಮಾಡಿ
ಪರಿಮಳವ ತುಂಬಿ, ಅನುಲೇಪನಮಾಡಿ
ಸುಖಿಸಬಹುದೆ ಅಯ್ಯಾ ?*

ಬೆಂಕಿಯಲ್ಲಿ ಇಟ್ಟ ಕರ್ಪೂರದ ಕರಡಿಗೆ (ಪುಟ್ಟಪೆಟ್ಟಿಗೆ,ಲಿಂಗದಸಜ್ಜೆ)ಮಾಡಿ ಅದರಲ್ಲಿ ಸುವಾಸನೆಯ ಪರಿಮಳ ತುಂಬಿ   ಅನುಲೇಪನ (ಸುವಾಸನೆಗಾಗಿ ಹಚ್ಚಿಕೊಳ್ಳುವ  ಪರಿಮಳ ಸಾಮಗ್ರಿಯ ಲೇಪನ)ಮಾಡಿ ಆನಂದ ಪಡಬಹುದೇ? ಇದು ಸಾದ್ಯವಿಲ್ಲ. ಯಾಕೆಂದರೆ ಕರ್ಪೂರ ಬೆಂಕಿಯಲ್ಲಿ ಸಂಪೂರ್ಣ ಕರಗಿ ಸುವಾಸನೆ ಬೀರಿ ಇಲ್ಲವಾಗುತ್ತದೆ.

*ವಾಯುವಿನೊಳಗಣ ಪರಿಮಳವ ಹಿಡಿದು
ದಂಡೆಯ ಕಟ್ಟಿ ಮಂಡೆಯೊಳಗೆ
ಮುಡಿಯಬಹುದೆ ಅಯ್ಯಾ ?*

ಗಾಳಿಯಲ್ಲಿ ಹರಡಿರುವ ಹೂವಿನ ಪರಿಮಳವನ್ನು ಹಿಡಿದು ತಂದು ಅದರ ದಂಡೆಯ ಕಟ್ಟಿ ತಲೆಯೊಳಗೆ ಮುಡಿಯ ಬಹುದೆ? ಇದು ಸಾಧ್ಯವಿಲ್ಲ. ಯಾಕೆಂದರೆ ದಂಡೆಯನ್ನು ಹೂವಿನಿಂದ ಕಟ್ಟಬಹುದೆ ಹೊರತು, ಗಾಳಿಯ ಪಾಲಾದ ಪರಿಮಳ ದಿಂಡ್ ಅಲ್ಲ. ಗಾಳಿಯ ಪಾಲಾದ ಪರಿಮಳ ಎಲ್ಲ ದಿಕ್ಕಿನಲ್ಲಿ ಸುವಾಸನೆ ಬೀರಿ,ಹರಡಿ  ಇಲ್ಲವಾಗುತ್ತದೆ.
 
*ಬಯಲ ಮರೀಚಿಕಾಜಲವ ಕೊಡನಲ್ಲಿ ತುಂಬಿ
ಹೊತ್ತು ತಂದು ಅಡಿಗೆಯ ಮಾಡಿಕೊಂಡು
ಉಣಬಹುದೆ ಅಯ್ಯಾ ?*

ಬಿಸಿಲಿನಲ್ಲಿ  ಮೂಡುವ ಬಿಸಿಲುಗುದುರೆ ಅಥವಾ ಮರೀಚಿಕೆ ನೀರಿನಂತೆ ಕಂಡರೂ ಅದು ನೀರಲ್ಲ. ಬರೀ ಭ್ರಮೆ. ಈ ಭ್ರಮೆಯ ನೀರನ್ನು ಕೊಡದಲ್ಲಿ ತುಂಬಿಸಿ ತಂದು ಅಡಿಗೆ ಮಾಡಿ ಊಟ ಮಾಡಬಹುದೇ? ಇದು ಸಾಧ್ಯ ವಿಲ್ಲ. ಅದು ಏನೂ ಇಲ್ಲದ ಸ್ಥಿತಿ.

*ನಿಮ್ಮ ನೆರೆಯರಿದು ನೆರೆದು ಪರವಶನಾಗಿ
ತನ್ನ ಮರೆದ ಪರಶಿವಯೋಗಿಗೆ
ಮರಳಿ ಪರಿಭವಂಗಳುಂಟೆ
ಪರಮಗುರು ಶಾಂತಮಲ್ಲಿಕಾರ್ಜುನಾ ?*

ನಿಮ್ಮನ್ನು(ದೇವರನ್ನು ) ಸಾಮಿಪ್ಯದಲ್ಲಿ  ಅರಿತು ಅನನ್ಯವಾಗಿ ಕೂಡಿ ಪರವಶನಾದ ಪರಶಿವಯೋಗಿಗೆ ಮರಳಿ ಪರಿಭವಂಗಳುಂಟೆ? ಪುನರ್ಜನ್ಮ ಉಂಟೆ? ಇದು ಸಾಧ್ಯವಿಲ್ಲ. ಯಾಕೆಂದರೆ ದೇವರನ್ನು    ಅರಿತು ಅನನ್ಯವಾಗಿ ಕೂಡಿದ ಪರಶಿವಯೋಗಿ ವಾರಿಕಲ್ಲನ ಹಾಗೆ ,ಅಗ್ನಿಯಲ್ಲಿ ಇಟ್ಟ ಕರ್ಪೂರದ ಹಾಗೆ, ನಾನು ಎಂಬುದು ಸಂಪೂರ್ಣ ಇಲ್ಲವಾಗಿಸಿಯೇ ಲಿಂಗದಲ್ಲಿ ಕೂಡುತ್ತಾನೆ. ಪರಶಿವಯೋಗಿ ಬಯಲ ಮರೀಚಿಕಾಜಲದ ಹಾಗೆ ಎಲ್ಲರಿಗೂ ಕಾಣಿಸುತ್ತಾನೆ. ಆದರೆ ಲೌಕಿಕವಾಗಿ ಕಾಣಿಸಿದರೂ ಲಿಂಗದಲ್ಲಿ ಲೀನನಾದವನು. ಲಿಂಗದಲ್ಲಿ ನಿಜೈಕ್ಯ ಹೊಂದಿದ ಶರಣನಿಗೆ ಮರು ಜನ್ಮವಿಲ್ಲ. ಭವ ಬಂಧನದಿಂದ ಅವನು ಮುಕ್ತ ಮುಕ್ತ.
ಭಾವ:
ಇದು ಐಕ್ಯ ಸ್ಥಲದ ವಚನ. ಐಕ್ಯಸ್ಥಲ ಜೀವನದ ಪರಮೋಚ್ಛ ಸ್ಥಲ. ಜೀವಾತ್ಮನು ಭೌತಿಕ ದೇಹ ತೊರೆದು ಪರಮಾತ್ಮನಲ್ಲಿ ವಿಲೀನವಾಗುವ ಉಚ್ಛ ಸಾಧನಾ ಮಜಲು . ತನ್ನ ಕರ್ತವ್ಯವನ್ನು ನಿರ್ವಹಿಸಿದ ಅನುಭಾವಿ, ಲಿಂಗದಲ್ಲಿ (ದೇವರಲ್ಲಿ) ಸಂಪೂರ್ಣ ಸಾಮರಸ್ಯದಲ್ಲಿ ಲೀನವಾಗುತ್ತಾನೆ.
ಘೃತ ಘ್ರತವ ಬೆರಸಿದಂತೆ, ಕ್ಷೀರ ಕ್ಷೀರವ ಬೆರಸಿದಂತೆ, ತೈಲ ತೈಲವ ಬೆರಸಿದಂತೆ ಜ್ಯೋತಿ ಜ್ಯೋತಿಯ ಬೆರೆಸಿದಂತೆ, ಬಯಲು ಬಯಲು ಬೆರೆಸಿದಂತೆ ಪ್ರಾಣ ಪ್ರಾಣ ಸಂಯೋಗವಾಗಿ ಲಿಂಗಸಮರಸವಾಗುತ್ತದೆ. ಕರ್ಪೂರಕ್ಕೆ ಅಗ್ನಿಯ ಸಂಯೋಗವಾಗಿ ಕರ್ಪೂರದ ಗುಣವಳಿದು ಅಗ್ನಿಯಾದಂತೆ, ಲಿಂಗವ ನೆನೆದು ಲಿಂಗವೇ ತಾನಾಗಿ ಪರಿಣಮಿಸುತ್ತಾನೆ ಶಿವಯೋಗಿ. ಅಂಗ ಲಿಂಗಗಳಲ್ಲಿ ಎರಡು ಎಂಬ ಭಾವವಳಿದು ಏಕೋಭಾವ ಮೂಡುತ್ತದೆ.
ಭಿನ್ನ ಭಿನ್ನವೆಂಬ ಪ್ರಾಪ್ತಿ ಅಳಿದು ಅವಿರಳ ಸಮರಸ ಸೌಖ್ಯದ ಶಿವಾದ್ವೈತ ಸಿದ್ಧಿಸುತ್ತದೆ

 ಬಸವಾದಿ ಶರಣರು ಸತ್ತ ಬಳಿಕ ಮೋಕ್ಷ ಎನ್ನುವುದರಲ್ಲಿ ನಂಬಿಕೆ ಇಡಲಿಲ್ಲ. ಬದಲಾಗಿ *ಕಾಯ ಇರುವಾಗಲೇ ಮೋಕ್ಷ* ಎನ್ನುವುದರಲ್ಲಿ ನಂಬಿಕೆಯಿರಿಸಿ ಅದರಂತೆಯೇ ನಡೆದು ತೋರಿದವರು. ಆ ಪರಮಾತ್ಮನ ದಿವ್ಯ ಸನ್ನಿದಿಯನ್ನು ಸೇರುವ ಮುಕ್ತ ಮಾರ್ಗವ ತೋರಿದವರು.

*Translation:*
Can one cut an ice block
from the ocean, build a house and live in it Ayya?

Can one store the camphor on the fire in a box , apply its fragrance and enjoy Ayya?

Can one capture the fragrance in the breeze
and string it and wear it on the hair Ayya?

Can one fill the mirage in a pot
bringing it, cook with it and eat Ayya?

Knowing you in your nearness, merging in you,
and in exaltation, forgetting himself, for such a great Shivayogi ;
are there any  re-births
Paramaguru Shaantamallikaarjuna?
- Karasthalada Mallikaarjunadeva 

 *Sharana Parichaya* *Karasthalada_Mallikaarjunadeva:*
Vachana Signature or Ankitanam: Paramaguru Shaantamallikaarjuna.

Karasthalada Mallikaarjunadeva (c.1409-1447 ) has compiled a work called Brahmaadvaita Siddhaanta Shatsthalaabharana. His teacher was Karasthala Shaanthesha belonging to Karasthala tradition. Four of his vachanas have been found with the signature Paramaguru Shaanthesha.
 They contain the criticism of those     who lack inner wisdom but  are interested in showing off that they are great devotees. He criticised those who are immersed in the family life with no spiritual interest and those who do not have faith in lshtalinga..
-✍️Dr Prema Pangi
#ಪ್ರೇಮಾ_ಪಾಂಗಿ,
#ವಾರಿಧಿಯೊಳಗಣ_ವಾರಿಕಲ್ಲ_ಕಡಿದು
#ಕರಸ್ಥಲದ_ಮಲ್ಲಿಕಾರ್ಜುನದೇವ
Picture post created by me.Hope you all will like it.A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma