ವಚನ ದಾಸೋಹ
#ವಚನ:
ಅಂಗ ಲಿಂಗದಲ್ಲಿ ತರಹರವಾಗಿ,
ಸಮತೆ ಶಾಂತಿಯಲ್ಲಿ ತರಹರವಾಗಿ,
ಮನ ಜ್ಞಾನದಲ್ಲಿ ತರಹರವಾಗಿ,
ಭಾವ ನಿರ್ಭಾವದಲ್ಲಿ ತರಹರವಾಗಿ ಇರಬಲ್ಲಡೆ,
ಆತನೆ ಅಚ್ಚಶರಣನು ಕಾಣಾ ಗುಹೇಶ್ವರಾ./5
- ಅಲ್ಲಮ ಪ್ರಭುಗಳು
#ಅರ್ಥ:
ಈ ವಚನದಲ್ಲಿ ವ್ಯೋಮಕಾಯ ಅಲ್ಲಮ ಪ್ರಭುದೇವರು "ಶರಣ" ಅಂದರೆ ಯಾರು, ಶರಣರ ಲಕ್ಷಣಗಳೇನು ಎಂದು ತಿಳಿಸಿದ್ದಾರೆ.
*ಅಂಗ ಲಿಂಗದಲ್ಲಿ ತರಹರವಾಗಿ,*
"ಅಂಗ" ಅಂದರೆ ಸ್ಥೂಲ ದೇಹ ಮತ್ತು ಆ ದೇಹದೊಳಗಿನ ಅಂತರ್ಗತವಾದ ಜೀವ ಚೇತನ. ಲಿಂಗವೆಂದರೆ ಪರಮಾತ್ಮ. ಶರಣ ಸ್ಥಲದಲ್ಲಿ ಅಂಗಸ್ಥಲಗಳು ಲಿಂಗಸ್ಥಲಗಳಾಗಿ, ಅಂಗ ಲಿಂಗದಲ್ಲಿ ಸಮ್ಮಿಳನವಾಗಿ ಲಿಂಗಾಂಗ ಸಮರಸವಾಗಿದೆ.
*ಸಮತೆ ಶಾಂತಿಯಲ್ಲಿ ತರಹರವಾಗಿ,*
ಸಮತೆ ಶಾಂತಿಯಲ್ಲಿ ಸಮ್ಮಿಳನವಾಗಿದೆ,
ಸ್ಥಿತಿ ಪ್ರಜ್ಞೆ ಯಲ್ಲಿ ಸುಖ ದುಃಖ ಸಮನಾಗಿ ಸ್ವೀಕರಿಸುವ ಮನಸ್ಥಿತಿ ಯಲ್ಲಿ ಇದ್ದು ಅದು ಸದಾಕಾಲ ಶಾಂತಿಯಾಗಿ ಪರಿಣಮಿಸಿದೆ.
*ಮನ ಜ್ಞಾನದಲ್ಲಿ ತರಹರವಾಗಿ,*
ಮನ ಜ್ಞಾನದಲ್ಲಿ ಸಮ್ಮಿಳನವಾಗಿದೆ. ಮನ ಜ್ಞಾನ ಮುಖಿ ಯಾದ್ದರಿಂದ ಅರಿವು ಅಥವಾ ಪ್ರಜ್ಞೆ ಜಾಗೃತವಾಗಿದೆ.
*ಭಾವ ನಿರ್ಭಾವದಲ್ಲಿ ತರಹರವಾಗಿ ಇರಬಲ್ಲಡೆ,*
ಭಾವ ನಿರ್ಭಾವದಲ್ಲಿ ಸಮ್ಮಿಳನವಾಗಿದೆ.
ಕ್ರೋಧ ಆವೇಶ ಮದ ಮತ್ಸರ ಮೋಹ ಲೋಭ ಕಾಮ ಅವನ ನಿಯಂತ್ರಣ ಕ್ಕೇ ಬಂದು ಅವನು ನಿರ್ಭಾವಿ ಯಾಗಿದ್ದಾನೆ.
"ಆತನೆ ಅಚ್ಚಶರಣನು ಕಾಣಾ ಗುಹೇಶ್ವರಾ*
ಸಹಜ ಭಾವದಿಂದ ಮತ್ತು ಸಮತೆ ಶಾಂತಿಯಿಂದ ಲಿಂಗಾಂಗ ಸಾಮರಸ್ಯದ ಸುಖ ಅನುಭವಿಸುವ ಜ್ಞಾನಿಯೇ ಅಚ್ಚ ಶರಣನು ಎಂದು ಹೇಳುತ್ತಾರೆ ಅಲ್ಲಮ ಪ್ರಭುಗಳು.
ಭಾವ:
ಇದು ಶಟ್ಸ್ಥಳದ 5 ನೆಯ ಸ್ಥಲವಾದ ಶರಣ ಸ್ಥಲದ ವಚನ. ಅಂಗಸ್ಥಲಗಳು ಲಿಂಗಸ್ಥಲಗಳಾಗಿ ಸಮರಸವಾಗಿ ಅಂಗಲಿಂಗಸಂಗಿಯಾದ ಶರಣನ ಅಂಗವೆಲ್ಲ ಲಿಂಗವೇ. ಅಂಗಲಿಂಗದ ಸಮರಸದ ಕೂಟವನ್ನು ಪಡೆದ ಶರಣ ಆನಂದದ ನಿಬ್ಬೆರಗಿನಲ್ಲಿ ನಿಲ್ಲುತ್ತಾನೆ. ಆತನ ಮನವೆಲ್ಲ ಅವಿರಳ ಜ್ಞಾನವೇ. ಆತನ ಭಾವ ಅಡಗಿ ನಿರ್ಭಾವವಾಗಿ ಸಮತೆಯಲ್ಲಿ ನಿಂದು, ಅದು ನಿಜಶಾಂತಿಯಲ್ಲಿ ಪರಿಣಮಿಸುತ್ತದೆ.
ಬಸವಣ್ಣನವರ ಅಭಿಪ್ರಾಯದಂತೆ ಶರಣ ಅಂದರೆ ಅವನು
' ಉಪಮಿಸಲಾರದ ಉಪಮಾತೀತ', ಕಾಲಕರ್ಮರಹಿತ ಭವ ವಿರಹಿತ. ಶರಣರು ಉಪಮಾತಿತರು ಅಂದರೆ ಯಾರೊಡನೆ ಹೊಲಿಸಲಾಗುವದು ಸಾಧ್ಯವಿಲ್ಲ. ಅವರಿಗೆ ಅವರೇ ಸಮ. ಅವರು ಕಾಲಕರ್ಮಭವರಹಿತರು ಅಂದರೆ ಕಾಲವನ್ನು ಮೀರಿದವರು, ಕರ್ಮಕ್ಕೆ ಅಂಟದವರು, ಕಾಲಕ್ಕೆ ಸಿಲುಕಿಸುವ ಕರ್ಮಫಲವನ್ನು ಮೀರಿದವರು, ಇವುಗಳಿಂದ ಭವಬಂಧನವನ್ನು ಕಳೆದುಕೊಂಡವರು.
ಆತ ಸಂದೇಹ ಸೂತಕಿಯಲ್ಲ, ಆಕಾರ ನಿರಾಕಾರನಲ್ಲ, ಕಾಯವಂಚಕನಲ್ಲ, ಜೀವವಂಚಕನಲ್ಲ, ಶಂಕೆಯಿಲ್ಲದ ಮಹಾ ಮಹಿಮ. ಶರಣ ತಾನೇ ಪರಂಜ್ಯೋತಿ ಸ್ವರೂಪನಾದುದರಿಂದ ಅವನ ಕ್ರಿಯೆ ಶಿವ ಬೆಳಕನ್ನು ಬೀರುತ್ತವೆ. ಆತ ನಡೆದುದು ಪಾವನ. ನುಡಿದುದು ಶಿವತತ್ವ.
ಆತನ ದೇಹವೇ ಕೈಲಾಸ. ಲಿಂಗಭಾವದಲ್ಲಿ ಆತ ತನ್ಮಯನಾದಾಗ ಆತ ಪರಂಜ್ಯೋತಿ ಸ್ವರೂಪ. ಅವನು “ನಡೆದುದೆಲ್ಲ ಪೂಜೆ ನುಡಿದುದೆಲ್ಲ ಮಂತ್ರ. ಅವನ ಕಾಯವೇ ಕೈಲಾಸ" ವಾಗಿ ಪರಿಣಮಿಸುತ್ತದೆ.
ಶರಣ ಸಾಮಾಜಿಕ ಜೀವನವನ್ನು ಸ್ವಚ್ಚಗೊಳಿಸುವ ಭವರೋಗ ವೈದ್ಯನಾಗುತ್ತಾನೆ. ಆತನ ಕ್ರಿಯೆಯಲ್ಲಾ ಸಮಾಜದ ಒಳಿತಿಗಾಗಿ, ತ್ರಿವಿಧ ನಾಸ್ತಿಯಾದ ತನ್ನದೇ ನಿಲುವಿನಲ್ಲಿ ನಿಂತವನು. ಜಗತ್ತಿನ ವಿಧಿ-ನಿಷೇಧಗಳು ಅತೀತನಾಗಿ, ವಿಶ್ವಮಾನವನಾಗಿ ಜೀವಿಸಬಲ್ಲ. ಲಿಂಗದ ನಡೆಯಂತೆ ಪರಮಾತ್ಮನ ಇಚ್ಛೆಯಂತೆ ನಡೆಯುವವ. ಲೋಕದ ಮೆಚ್ಚುಗೆಗಾಗಿ ಲೋಕದಿಚ್ಚೆಯಂತೆ ನಡೆಯುವವನಲ್ಲ.
ಶರಣ -ಜೀವನ ಮುಕ್ತಿ ಸ್ಥಿತಿಯಲ್ಲಿ ನಿಂತು ಲೋಕಕಲ್ಯಾಣಕ್ಕಾಗಿ ಕೈಯನ್ನು ಕೆಳಗೆ ಚಾಚಿ ಜನತೆಯನ್ನು ಮೇಲಕ್ಕೆತ್ತಿಕೊಳ್ಳುವ ಮಹಾನುಭಾವಿ.
ನಿರಾಕಾರನಾದ ಶಿವನನ್ನು ಇಷ್ಟಲಿಂಗ ರೂಪದಲ್ಲಿ, ಇಷ್ಟಲಿಂಗ ರೂಪವಾದ ಶಿವನನ್ನು ಪ್ರಾಣಲಿಂಗ ಸ್ವರೂಪವಾಗಿ, ಪ್ರಾಣಲಿಂಗ ಶಿವನನ್ನು ಭಾವಲಿಂಗವಾಗಿ ಬಯಲಾಗಿ ಕಾಣಬಲ್ಲವನು ಶರಣ. ಶರಣ ಅಂಗ ಲಿಂಗ ಸಮರಸಗೊಂಡ ಲಿಂಗಾನುಭವಿ. ಭಾವವನ್ನು ಬಯಲು ಮಾಡುವವನು. ಭಾವದಲ್ಲಿ ಗ್ರಹಿಸಿ ಭಾವ ಮೀರಿ ಬಯಲು ಮಾಡಿ ಎರಡನ್ನೂ ಸಮರಸ ಮಾಡುವವನು. ಒಳ ಹೊರ ಒಂದು ಮಾಡಿ ಅವಿರಳ ಸಂಭಂದ ಹೊಂದುವವನು.
'ಅರಿದರೆ ಶರಣ, ಮರೆದರೆ ಮಾನವ' ಎಂಬ ಸರ್ವಕಾಲಿಕವಾದ ಸರ್ವಸಮ್ಮತವಾದ ಸೂತ್ರವನ್ನು ಬಸವಾದಿ ಶರಣರು ನಮಗೆ ಅನುಗ್ರಹಿಸಿದರು. ಅದನ್ನು ತಿಳಿದು ಅವರ ತೋರಿಸಿದ ಮಾರ್ಗದಲ್ಲಿ ನಡೆಯೋಣ.
✍️ Dr Prema Pangi
#ಪ್ರೇಮಾ_ಪಾಂಗಿ,#ಅಲ್ಲಮಪ್ರಭು,
#ಅಂಗ_ಲಿಂಗದಲ್ಲಿ_ತರಹರವಾಗಿ,
Comments
Post a Comment