ವಚನ ದಾಸೋಹ

*ವಚನ* :
ಭಕ್ತಿ ಸುಭಾಷೆಯ ನುಡಿಯ ನುಡಿವೆ, 
ನುಡಿದಂತೆ ನಡೆವೆ
ನಡೆಯೊಳಗೆ ನುಡಿಯ ಪೂರೈಸುವೆ 
ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ
ಒಂದು ಜವೆ ಕೊರತೆಯಾದರೆ
ಎನ್ನನದ್ದಿ ನಿನೆದ್ದು ಹೋಗು, ಕೂಡಲ ಸಂಗಮದೇವಾ. 
- *ವಿಶ್ವಗುರು ಬಸವಣ್ಣನವರು*

*ಭಾವಾರ್ಥ*:
ನಿಷ್ಠೆ, ಶರಣಾಗತಿ, ಪ್ರಾಮಾಣಿಕತೆ, ಭಕ್ತಿ ಎಂಬ ಒಳ್ಳೆಯ ನುಡಿಯ ಮಾತುಗಳನ್ನು ಆಡುತ್ತೇನೆ ಮತ್ತು ಆಡಿದಂತೆ ನಡೆಯುತ್ತೇನೆ. ನನ್ನ ನಿಷ್ಠೆಯನ್ನು ಪರೀಕ್ಷಿಸಲು ತೂಗುವ ತಕ್ಕಡಿಯ ಹಿಡಿ, ಇಷ್ಟದೇವ ಕೂಡಲಸಂಗಮದೇವ, ನಿನ್ನ ಕೈಲಿದೆ. ನಡೆ-ನುಡಿ ಎಂಬ ಎರಡು ಪರಡಿಗಳು ಸಮನಾಗಿರದೆ, ಒಂದು ಜವೆಯಷ್ಟು (ಗೋದಿ ಕಾಳು ಅಂದರೆ ಅತಿ ಸಣ್ಣ ಮಾಪನದಷ್ಟು) ಕೊರತೆಯಾದರೂ ಪರಮಾತ್ಮಾ, ನೀನು ನನ್ನನ್ನು ನೀರಿನಲ್ಲಿ ಮುಳುಗಿಸಿ (ನನ್ನನ್ನು ಶಿಕ್ಷಿಸಿ) ಹೊರಟುಹೋಗು ಎಂದು ಬಸವಣ್ಣರು ತಮ್ಮ ಆರಾಧ್ಯ ದೈವ ಕೂಡಲಸಂಗಮದೇವನಲ್ಲಿ ಬಿನ್ನವಿಸುತ್ತಾರೆ.
ವಚನಗಳಲ್ಲಿ ಶುದ್ಧನಡೆ - ಸತ್ಯವಾದ ಸದುವಿನಯದ ನುಡಿಯ ಬಗ್ಗೆ ಪ್ರಾಧಾನ್ಯ ಕೊಡಲಾಗಿದೆ.
ಗುರು ಬಸವಣ್ಣನವರು ತಮ್ಮ ಪರಿಶುದ್ಧ ಅರಿವು ಆಚರಣೆಗಳ ಮೂಲಕ ನಡೆ ನುಡಿ, ಕಾಯಕ ಸಿದ್ಧಾಂತವನ್ನು ಯಶಸ್ವಿಯಾಗಿ ಅನುಸರಿಸಿ ಬಾಳಿ ಬೆಳಗಿದ್ದಲ್ಲದೇ ಎಲ್ಲ ಶರಣರಿಗೆ ಮಾದರಿಯಾದರು. ಬಸವಾದಿ ಶರಣರು ನಡೆ ನುಡಿ ಒಂದಾಗಿ ನಡೆದ ಕಾಯಕಜೀವಿಗಳು. ಅರಿವು ಮತ್ತು ಆಚರಣೆಯ ಸಮ್ಮಿಲನವಾದ ಶರಣರ ನಡೆ ನುಡಿಯ ಸಾಂಗತ್ಯದ ಸತ್ಫಲವಾದದು ವಚನ ಸಾಹಿತ್ಯ. ' ನುಡಿದಂತೆ ನಡೆ ' ಎಂಬ ನಿಶ್ಚಿತ ನಿಖರತೆಯ ಬದ್ಧತೆಯ ಶರಣ ಧರ್ಮ, ತೋರಿಕೆಯ ವೇಷಡಂಭಕರನ್ನು, ಬೊಗಳೆ ಬಿಡುವವರನ್ನು ಪುರಾಣ ಹೇಳುವವರನ್ನು ತಿರಸ್ಕರಿಸುತ್ತದೆ. ಜಾನಪದರು ಇವರಿಗೆ ಆಚಾರ ಹೇಳಿ ಬದನೆಕಾಯಿ ತಿನ್ನುವವರು ಎಂದು ಗೇಲಿ ಮಾಡಿದರು. ನಡೆ ಮತ್ತು ನುಡಿಗಳ ನಡುವೆಯೇ ಸತ್ಯದ ಸಾಕ್ಷಾತ್ಕಾರವಾಗಬೇಕು.
ನುಡಿದಂತೆ ನಡೆ, ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು, ಶರಣ ನಡೆದರೆ ನಿರ್ಗಮನಿ, ನುಡಿದರೆ ನಿಶ್ಯಬ್ದ ಎಂಬ ವಚನಗಳಲ್ಲಿ ಬರುವ ಮಾತುಗಳಲ್ಲಿ  ಶರಣರು ಹೇಗೆ ಇರಬೇಕು ಎಂದು ತಿಳಿಸುವ ಮತ್ತು ಸಮಾಜ ಸುಧಾರಿಸುವ ಪರಿವರ್ತಿಸುವ, ಒಂದು ಆದರ್ಶ ಸುಶಿಕ್ಷಿತ ಸಮಾಜ ಕಟ್ಟುವ ಸಂಕಲ್ಪ ಕಾಣುತ್ತೇವೆ.  ಶರಣರು “ನುಡಿದಂತೆ ನಡೆ” ಎನ್ನುವ ಒಂದು ಸಾಮುದಾಯಿಕ ಭಾವನೆಯನ್ನು ಬೆಳಸಿ ಸಮಾಜ ಸುಧಾರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
-✍️ Dr Prema Pangi
#ಪ್ರೇಮಾ_ಪಾಂಗಿ, #ಗುರು_ಬಸವಣ್ಣ,
#ಭಕ್ತಿ_ಸುಭಾಷೆಯ_ನುಡಿಯ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma