ವಚನ ದಾಸೋಹ

#ವಚನ :
#ಐದು ಬಣ್ಣದ ಗಿಡುವಿಂಗೆ ಐದೆಲೆ ಐದು ಹೂ, ಐದು ಕಾಯಾಯಿತ್ತು.
ಮತ್ತೈದರಠಾವಿನಲ್ಲಿ, ಐದು ಹೂವಿನ ಕ್ರಮದಲ್ಲಿ
ಹಣ್ಣ ಮೆಲಬಲ್ಲಡೆ, ಗುಹೇಶ್ವರನೆಂಬ ಲಿಂಗವು ತಾನೆ ನೋಡಾ ! / 501
- ವ್ಯೋಮಕಾಯ ಅಲ್ಲಮ ಪ್ರಭುಗಳು
ಅರ್ಥ:
ಇದು ಅಲ್ಲಮ ಪ್ರಭುಗಳ ಬೆಡಗಿನ ವಚನ. ಬೆಡಗಿನ ವಚನಗಳನ್ನು, ಒಗಟುಗಳ ಹಾಗೆ ಸಮಸ್ಯಾತ್ಮಕವಾಗಿ ರಚಿಸಲಾಗಿದೆ.  ಬೆಡಗು ಎಂದರೆ, ಸೌಂದರ್ಯ, ಆಕರ್ಷಕತೆ, ಜಾಣತನ, ಶೈಲಿ ಮುಂತಾದ ಅರ್ಥಗಳಿವೆ.  ಈ ಪದಕ್ಕೆ, ನಿಗೂಢತೆ, ಒಗಟು ಮುಂತಾದ ಅರ್ಥಛಾಯೆಗಳೂ ಇವೆ. ಅಲ್ಲಮಪ್ರಭು ಅನೇಕ ಬೆಡಗಿನ ವಚನಗಳನ್ನು ರಚಿಸಿದ್ದಾರೆ. ಇದು ಪ್ರಾಣಲಿಂಗಿ ಸ್ಥಲದ ವಚನ. ಈ ಸ್ಥಲದಲ್ಲಿ
ಶಿವಯೋಗ ಸಾಧಕನು ಬಾಹ್ಯಪದಾರ್ಥಗಳನ್ನು  ಕರಸ್ಥಲಲಿಂಗಕ್ಕೆ ಅರ್ಪಿಸಿ ಅನುಭವಿಸುತ್ತಾನೆ. ಆ ಪದಾರ್ಥಗಳ ಇಂದ್ರಿಯ ಅನುಭವಗಳನ್ನೆಲ್ಲ  ಪ್ರಾಣಲಿಂಗಕ್ಕೆ ಸಮರ್ಪಿಸಿ ಸ್ವೀಕರಿಸಿ ಸಂತೋಷಿಸುತ್ತಾನೆ .ಆ ಸಂತೋಷದಲ್ಲಿ ಮೈಮರತ ಅನುಭವವುಳ್ಳವನೇ ಪ್ರಾಣಲಿಂಗಿಸ್ಥಲಿ.

*ಐದು ಬಣ್ಣದ ಗಿಡುವಿಂಗೆ ಐದೆಲೆ ಐದು ಹೂ, ಐದು ಕಾಯಾಯಿತ್ತು.*

ಗಿಡವೆಂದರೆ ದೇಹ, 
ಐದು ಬಣ್ಣದ ಗಿಡ ಅಂದರೆ  
ಐದು ಭೂತಗಳಿಂದಾದ ದೇಹ
ಪ್ರಥ್ವಿ, ಅಪ್ಪು, ತೇಜ, ವಾಯು, ಆಕಾಶವೆಂಬ ಐದು ಮಹಾಭೂತಗಳ ಪಂಚಿಕರಣದಿಂದ ನಮ್ಮ ದೇಹವಾಗಿದೆ.

ಐದು ಎಲೆ ಅಂದರೆ ಐದು ಕರ್ಮೇoದ್ರಿಯಗಳು - ವಾಕ್ಕು, ಪಾಣಿ, ಪಾದ, ಉಪಸ್ಥಾ, ಪಾಯು ಅವುಗಳ ಕಾರ್ಯಗಳು.
ವಾಕ್ಕು : ಧ್ವನಿ ನಿರ್ಮಾಣ ಕಾರ್ಯ
ಪಾಣಿ : ಗ್ರಹಣಮಾಡುವ, ಹಿಡಿವ ಕಾರ್ಯ 
ಪಾದ : ನಡೆಯುವ  ಕಾರ್ಯ 
ಉಪಸ್ಥಾ : ಪ್ರಜನನ ಕಾರ್ಯ 
ಪಾಯು : ವಿಸರ್ಜನ ಕಾರ್ಯ 

ಐದು ಹೂ ಅಂದರೆ ಐದು ಜ್ಞಾನೇಂದ್ರಿಯಗಳು - ಶ್ರೋತ, ತ್ವಕ್, ನೇತ್ರ, ಜಿಹ್ವಾ , ಘ್ರಾಣ
ಶೋತ್ರ - ಶಬ್ದಗ್ರಾಹಕ 
ತ್ವಕ್ - ಸ್ಪರ್ಶಗ್ರಾಹಕ 
ನೇತ್ರ - ರೂಪಗ್ರಾಹಕ 
ಜಿಹ್ವಾ - ರಸಗ್ರಾಹಕ 
ಘ್ರಾಣ - ಗಂಧಗ್ರಾಹಕ 

ಐದು ಕಾಯಿ ಅಂದರೆ ಐದು ವಿಷಯಗಳು ಶಬ್ದ, ಸ್ಪರ್ಶ, ರೂಪ, ರಸ, ಗಂಧ
 
ಐದು ಹಣ್ಣು ಅಂದರೆ ವಿಷಯಾನುಭವಗಳು. ಶಬ್ದಾನುಭವ, ಸ್ಪರ್ಶಾನುಭವ 
ರೂಪ ಅನುಭವ. ರಸಾನುಭವ. ಗಂಧಾನುಭವ. 
ಶಬ್ಧ  -  ಶಬ್ದಾನುಭವ, 
ಸ್ಪರ್ಶ - ಸ್ಪರ್ಶಾನುಭವ 
ರೂಪ - ರೂಪ ಅನುಭವ. 
ರಸ - ರಸಾನುಭವ.
ಗಂಧ - ಗಂಧಾನುಭವ. 

ವಿವಿಧ ಅಂಗಗಳಿಂದ ಕೂಡಿದ ದೇಹವು ಒಂದು ವೃಕ್ಷ, ಪಂಚಭೂತಗಳ ವಿಶಿಷ್ಟ ಸಂಮಿಶ್ರಣದಿಂದ ಇದು ನಿರ್ಮಾಣವಾಗಿದೆ. ಈ ದೇಹವೆಂಬ ವೃಕ್ಷದಲ್ಲಿ ಪ್ರಾಮುಖ್ಯವಾಗಿ ಐದು ಕರ್ಮೇoದ್ರಿಯಗಳೆಂಬ ಎಲೆಗಳಿವೆ. ಐದು ಕರ್ಮೇoದ್ರಿಯಗಳು - ವಾಕ್ಕು, ಪಾಣಿ, ಪಾದ, ಉಪಸ್ಥಾ, ಪಾಯು ಇವು ಮಾತನಾಡುವ, ಹಿಡಿಯುವ , ನಡೆಯುವ , ಸೃಷ್ಟಿಸುವ, ವಿಸರ್ಜಿಸುವ ಈ ಮುಂತಾದ ಕಾರ್ಯಗಳನ್ನು  ಮಾಡುವ ಕ್ರಿಯಾ ಅವಯವಗಳು. ಇವು ಗಿಡದ ಎಲೆಗಳಂತೆ .
ಈ ವೃಕ್ಷದಲ್ಲಿರುವ ಹೂವುಗಳೇ ಪಂಚ ಜ್ಞಾನೇಂದ್ರಿಯಗಳು .ಶ್ರೋತ, ತ್ವಕ್ , ನೇತ್ರ, ಜಿಹ್ವಾ , ಘ್ರಾಣ. ಇವು  ಕೇಳುವ, ಮುಟ್ಟುವ, ನೋಡುವ, ರುಚಿಸುವ ಮತ್ತು ಆಘ್ರಾಣಿಸುವ ಈ ಪಂಚ ಜ್ಞಾನಕಾರ್ಯಗಳು ಅವುಗಳಿಂದ ನಡೆಯುತ್ತವೆ. 
ಈ ವೃಕ್ಷದಲ್ಲಿ ಕಾಣ ಬಂದ ಕಾಯಿಗಳೆಂದರೆ ಪಂಚವಿಷಯಗಳು- ಶಬ್ದ, ಸ್ಪರ್ಶ, ರೂಪ, ರಸ, ಗಂಧ . 

ಈ ವೃಕ್ಷದೊಳಗಿರುವ ಜೀವಪಕ್ಷಿ ಅಂದರೆ ನಮ್ಮೆಲ್ಲರಲ್ಲಿ  ಇರುವ ಆತ್ಮ. ಇಲ್ಲಿಯ ಐದು ಹಣ್ಣುಗಳಾದ ಶಬ್ದಾನುಭವ, ಸ್ಪರ್ಶಾನುಭವ, ರೂಪಾನುಭವ, ರಸಾನುಭವ, ಗಂಧಾನುಭವಗಳನ್ನು ; ಹೀಗೆ  ಎಲ್ಲ ಅನುಭವಗಳನ್ನು ಮೆಲ್ಲುತ್ತ ಇರುತ್ತಾನೆ. ಇವು ವಿಷಯಗಳ ಅನುಭವಗಳು. ವೃಕ್ಷವಿರುವವರೆಗೂ ಈ ದೇಹವಿರುವ ವರಿಗೂ ಈ ಎಲ್ಲ ಕಾರ್ಯಗಳು ನಡೆಯುತ್ತಲೆ ಇರುತ್ತವೆ. ಅದೇ ರೀತಿ ಆತ್ಮನು ವಿಷಯಗಳ ಅನುಭವ ಪಡೆಯುತ್ತಲೆ ಇರುತ್ತಾನೆ. ಮತ್ತು  ಆ ವಿಷಯಸುಖದ ವ್ಯಾಮೋಹದಲ್ಲಿ ಬಂಧಿತನಾಗುತ್ತಾನೆ. ತನ್ನ ನಿಜಸ್ವರೂಪವಾದ ಸತ್ ಚಿತ್ ಆನಂದ ಸ್ವರೂಪವನ್ನು ತಾನು ಪರಮಾತ್ಮನ ಸ್ವರೂಪ ವೆಂದು ಮರೆತುಬಿಡುತ್ತಾನೆ. ಅವನಿಗೆ 'ಬದ್ಧ ಜೀವ ಅಥವಾ ಭವಿ ಎಂದು ಹೆಸರು. ಅವನೀಗ ಇದೇ ದೇಹವೆಂಬ ವೃಕ್ಷದೊಳಗಿದ್ದು (ಜೀವಂತ ಇರುವಾಗಲೇ) ವಿಷಯಾದಿಗಳನ್ನು ಅನುಭವಿಸುತ್ತಲೇ ಬಂಧಮುಕ್ತನಾಗಬೇಕು. ದೇಹಭಾವ ನೀಗಿ ಶಿವಭಾವ ಹೊಂದಬೇಕು. ಇದನ್ನೇ ಶಿವಯೋಗದಲ್ಲಿ ಅಲ್ಲಮ ಪ್ರಭುಗಳು ವಿವೇಚಿಸಿ ಹೀಗೆ ಬೋಧಿಸುತ್ತಾರೆ.

*ಮತ್ತೈದರಠಾವಿನಲ್ಲಿ, ಐದು ಹೂವಿನ ಕ್ರಮದಲ್ಲಿ
ಹಣ್ಣ ಮೆಲಬಲ್ಲಡೆ, ಗುಹೇಶ್ವರನೆಂಬ ಲಿಂಗವು ತಾನೆ ನೋಡಾ !"*

 ಮತ್ತೈದರಠಾವಿನಲ್ಲಿ  ಅಂದರೆ  ಐದು ಪ್ರಕಾರದ ಲಿಂಗಗಳು -  ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಿಲಿಂಗ. ಈ ಲಿಂಗಗಳು ನಮ್ಮ ಸೂಕ್ಷ್ಮ ಶರೀರದ ಚಕ್ರ ಗಳಲ್ಲಿ ಸ್ಥಾಪನೆಗೊಂಡಿವೆ.

ಐದು ಕಮಲದ ಹೂವಿನ ಕ್ರಮದಲ್ಲಿ ಶ್ರೋತ್ರ, ತ್ವಕ್, ನೇತ್ರ, ರಸ, ಘ್ರಾಣ - ಈ ಕ್ರಮದಲ್ಲಿ ಹಣ್ಣ ಮಲ್ಲಬಲ್ಲಡೆ ಅನುಭವಿಸಬಲ್ಲಡೆ  ಅಂದರೆ  ಶಬ್ದದಾದಿ ವಿಷಯಗಳನ್ನು ಅನುಕ್ರಮವಾಗಿ ಆ ಕಮಲಗಳ ನಡುವೆ ಇರುವ ಲಿಂಗಗಳಿಗೆ ಆರ್ಪಿಸಿ ಅನುಭವಿಸಬೇಕು.

ಶಿವಯೋಗ ಸಾಧಕನು ಶಬ್ದಾದಿ ವಿಷಯಗಳನ್ನು ಪ್ರಾಕೃತರೂಪದಲ್ಲಿ ಅನುಭವಿಸಬಾರದು. ಲಿಂಗಕ್ಕೆ ಅರ್ಪಿಸಿ ಲಿಂಗಪ್ರಸಾದವೆಂದು ಸ್ವೀಕರಿಸಬೇಕು.

ಶಬ್ಬವನ್ನು ಗ್ರಹಿಸುವುವದರಲ್ಲಿ ಶ್ರೋತೆಂದ್ರಿಯದ ಮೂಲಕ ಮೊದಲು ಅದನ್ನು ಕೇಳಿ, ಹಾಗೆ ಕೇಳಿದ ಆ ಮಧುರ ಶಬ್ದವನ್ನು ಕರ್ಣವೃತ್ತಿಯೊಳಗೆ ಹೊಳೆವ ಶಿವಕಳೆಯಾದ "ಪ್ರಸಾದಲಿಂಗಕ್ಕೆ" ಅವಧಾನ ಭಕ್ತಿಯಿಂದ ಸಮರ್ಪಿಸಬೇಕು. ಆಗ ಆ ಶಬ್ದವು ಲಿಂಗಪ್ರಸಾದವಾಗುತ್ತದೆ. ಅದನ್ನು ಸ್ವೀಕರಿಸಬೇಕು.

ಸ್ಪರ್ಶವನ್ನು ಗ್ರಹಿಸುವುವದರಲ್ಲಿ ತ್ವಕ್ಇಂದ್ರಿಯದ ಮೂಲಕ ಮೊದಲು ಅದನ್ನು ಭಾವಿಸಿ, ಹಾಗೆ  ಆ ಸ್ಪರ್ಶವನ್ನು  ಹೊಳೆವ ಶಿವಕಳೆಯಾದ "ಜಂಗಮಲಿಂಗಕ್ಕೆ" ಅವಧಾನ ಭಕ್ತಿಯಿಂದ ಸಮರ್ಪಿಸಬೇಕು. ಆಗ ಆ ಸ್ಪರ್ಶ ಲಿಂಗಪ್ರಸಾದವಾಗುತ್ತದೆ. ಅದನ್ನು ಸ್ವೀಕರಿಸಿ ಅನುಭವಿಸಬೇಕು.

ರೂಪವನ್ನು ಗ್ರಹಿಸುವುವದರಲ್ಲಿ ನಯನೆಂದ್ರಿಯದ ಮೂಲಕ ಮೊದಲು ನೋಡಿ , ಹಾಗೆ ನೋಡಿದ ನೋಟವನ್ನು ಹೊಳೆವ ಶಿವಕಳೆಯಾದ "ಶಿವಲಿಂಗಕ್ಕೆ" ಅವಧಾನ ಭಕ್ತಿಯಿಂದ ಸಮರ್ಪಿಸಬೇಕು. ಆಗ ಆ ರೂಪ ಲಿಂಗಪ್ರಸಾದವಾಗುತ್ತದೆ. ಅದನ್ನು ಸ್ವೀಕರಿಸಿ ಆನಂದಿಸಬೇಕು.

ರಸವನ್ನು ಆಸ್ವಾದಿಸಿವದರಲ್ಲಿ ರಸಇಂದ್ರಿಯ ದ ಮೂಲಕ ಮೊದಲು ರುಚಿಸಿ , ಹಾಗೆ ಗ್ರಹಿಸಿದ ರುಚಿಯನ್ನು ಹೊಳೆವ ಶಿವಕಳೆಯಾದ "ಗುರುಲಿಂಗಕ್ಕೆ" ಅವಧಾನ ಭಕ್ತಿಯಿಂದ ಸಮರ್ಪಿಸಬೇಕು. ಆಗ ಆ ರುಚಿ ಲಿಂಗಪ್ರಸಾದವಾಗುತ್ತದೆ. ಅದನ್ನು ಸ್ವೀಕರಿಸಿ ರುಚಿಸಿ ಆಸ್ವಾದಿಸ ಬೇಕು.

ಗಂಧವನ್ನು ಗ್ರಹಿಸುವುವದರಲ್ಲಿ  ಗಂಧಗ್ರಾಹಕವಾದ ಮೂಲಕ ಮೊದಲು ಗ್ರಾಣಿಸಿ  , ಹಾಗೆ ಗ್ರಹಿಸಿದ ಗಂಧ (ವಾಸನೆ)ಯನ್ನು ಹೊಳೆವ ಶಿವಕಳೆಯಾದ "ಆಚಾರಲಿಂಗಕ್ಕೆ" ಅವಧಾನ ಭಕ್ತಿಯಿಂದ ಸಮರ್ಪಿಸಬೇಕು. ಆಗ ಆ ಗಂಧ  ಲಿಂಗಪ್ರಸಾದವಾಗುತ್ತದೆ. ಅದನ್ನು ಸ್ವೀಕರಿಸಿ ಆನಂದಿಸಬೇಕು.

ಹೀಗೆ ಎಲ್ಲ ವಿಷಯಗಳನ್ನು ಆಯಾ ಇಂದ್ರಿಯಗಳ ಮೂಲಕ ಪಡೆದು ಆಯಾ ಇಂದ್ರಿಯಗಳಲ್ಲಿ ನೆಲೆಸಿದ ಲಿಂಗಗಳಿಗೆ ಸಮರ್ಪಿಸಿ ಸ್ವೀಕರಿಸಬೇಕು. ಇದು ಹಣ್ಣನ್ನು ಮೆಲುವ ರೀತಿ. ಹೀಗೆ ಮೇಲುವುದರಿಂದ ಆ ಶಬ್ದಾದಿ ವಿಷಯಗಳು ಸಾಧಕನನ್ನು ಬಾಧಿಸುವದಿಲ್ಲ. ಬಂಧಿಸುವದಿಲ್ಲ. ಅವನ ಬದುಕು ವಿಮುಕ್ತವೂ ದಿವ್ಯವೂ ಆಗುತ್ತದೆ. ಆದ್ದರಿಂದ ಅಲ್ಲಮ ಪ್ರಭುಗಳು ಅವನು ಸಾಕ್ಷಾತ್ ಲಿಂಗವೇ ಎಂದು ಹೇಳಿದ್ದಾರೆ. ಹೀಗೆ ಎಲ್ಲ ಜ್ಞಾನೇಂದ್ರಿಯಗಳಲ್ಲಿ ಲಿಂಗ ಸ್ಥಾಪಿಸಿ ಸಾಧಕ ಸರ್ವಾಂಗಲಿಂಗಿ ಯಾಗುತ್ತಾನೆ. ಲೌಕಿಕದಲ್ಲಿ ಇದ್ದೂ ಬಂಧನಮುಕ್ತ ನಾಗುತ್ತಾನೆ.

ದೇಹವಿಡಿದು ಲೌಕಿಕ ಜಗತ್ತಿನಲ್ಲಿಯೇ ಬಾಳಬೇಕು. ಶಬ್ದಾದಿ ವಿಷಯಗಳನ್ನು ಹಿತವಾಗಿ ಅನುಭವಿಸಬೇಕು, ಆದರೆ ಮೋಹ ಮಾಯೆಗಳಿಗೆ ಒಳಗಾಗಬಾರದು. ಅದೇ ಶಿವಯೋಗ ಸಾಧನೆ. 
- ✍️Dr Prema Pangi
#ಪ್ರೇಮಾ_ಪಾಂಗಿ,#ಅಲ್ಲಮ_ಪ್ರಭುಗಳು,
#ಐದು_ಬಣ್ಣದ_ಗಿಡುವಿಂಗೆ_ಐದೆಲೆ 
Picture post created by me. Hope you all will like it. A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma