ವಚನ ದಾಸೋಹ - ನುಡಿದಡೆ ಮುತ್ತಿನ ಹಾರ ದಂತಿರಬೇಕು
#ನುಡಿದಡೆ ಮುತ್ತಿನ ಹಾರದಂತಿರಬೇಕು.
ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು.
ನುಡಿದಡೆ ಸ್ಫಟಿಕದ ಸಲಾಕೆಯಂತಿರಬೇಕು.
ನುಡಿದಡೆ ಲಿಂಗ ಮೆಚ್ಚಿ ಅಹುದಹುದನಬೇಕು
ನುಡಿಯೊಳಗಾಗಿ ನಡೆಯದಿದ್ದಡೆ,
ಕೂಡಲಸಂಗಮದೇವನೆಂತೊಲಿವನಯ್ಯಾ / 845
—ಗುರು ಬಸವಣ್ಣನವರು
ಅರ್ಥ-
ಮಾತಿನ ಮಹತ್ವವನ್ನು ಕುರಿತು ಹೇಳಿದ ಅತ್ಯಂತ ಸುಂದರವಾದ ವಚನ ಇದು.
ಆಡುವ ಮಾತು ಅಂತರಂಗದ ಆಳದಿಂದ ಮೂಡಿಬರಬೇಕು. ಕೇಳುಗರ ಮನವನ್ನು.
ಮುಟ್ಟಿ ಅರಳಿಸುವಂತಿರಬೇಕೆಂಬುದನ್ನು ಕೆಲವು ಸಾದೃಶ್ಯಗಳಿಂದ ತಿಳಿಸಿದ್ದಾರೆ ಗುರು ಬಸವಣ್ಣನವರು.
*ನುಡಿದಡೆ ಮುತ್ತಿನ ಹಾರದಂತಿರಬೇಕು. ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು*.
ಮುತ್ತಿನ ಹಾರ, ಹೇಗೆ ಸುಂದರವಾಗಿ ಸರಳವಾಗಿದ್ದು ಎಲ್ಲರನ್ನೂ ಆಕರ್ಷಿಸುತ್ತದಯೋ ಹಾಗೆ, ನಮ್ಮ ಮಾತು ಸರಳ, ಸುಂದರವಾಗಿ ಮುತ್ತಿನ ಮಿಂಚಿನಂತೆ ಆಕರ್ಷಕ ವಾಗಿರಬೇಕು. ಮಾತು ಮುತ್ತಿನ ಹೊಳಪಿನ ಜೊತೆಗೆ ಮಾಣಿಕ್ಯದ ದೀಪ್ತಿಯಂತೆ ಪ್ರಜ್ವಲಿಸಬೇಕು. ಅಂದರೆ ಮೃದು ಮಧುರತೆಯ ಜೊತೆಗೆ ಆಳವಾದ ಅನುಭವದ ಜ್ಞಾನದ ರತ್ನಕಾಂತಿಯೂ ಸೇರಬೇಕು.
*ನುಡಿದಡೆ ಸ್ಫಟಿಕದ ಸಲಾಕೆಯಂತಿರಬೇಕು*
ಸ್ಪಟಿಕ ಹೇಗೆ ಪಾರದರ್ಶಕವಾಗಿ ಬೆಳಕನ್ನು ಸುತ್ತೆಲ್ಲ ಚೆಲ್ಲುತ್ತದೆಯೋ ಹಾಗೆ ನಮ್ಮ ಮಾತು ಸ್ಪಷ್ಟವಾಗಿ ನಮ್ಮ ಅಂತರಂಗದ ಬೆಳಕನ್ನು ವ್ಯಕ್ತಿತ್ವವನ್ನು ಬೀರುವಂತಿರಬೇಕು. ಕೇಳುಗರಿಗೆ ದಾರಿದೀಪ ವಾಗಬೇಕು. ಒಳಗೊಂದು ಹೊರಗೊಂದು ಇದ್ದರೆ ಅದು ಪಾರದರ್ಶಕ ವಾಗದು. ಮಾತು ತೋರಿಕೆಯ ಕೃತಕ ಭಾವ ಪ್ರದರ್ಶನವಾಗಬಾರದು.
*ನುಡಿದಡೆ ಲಿಂಗ ಮೆಚ್ಚಿ ಅಹುದಹುದನಬೇಕು
ನಾವು ನುಡಿದರೆ ಲಿಂಗವು ಮೆಚ್ಚಿ ಅಹುದು ಅಹುದು ಎನ್ನಬೇಕು. ಆಡುವ ಮಾತು ಕೇವಲ ಜನರ ಮೆಚ್ಚುಗೆಗಾಗಿ ಯಲ್ಲ. ಮಾತು ಸತ್ಯವಾಗಿರಬೇಕು. ನಮ್ಮ ಅಂತರಂಗದೊಳಗಿರುವ ದೇವಸ್ವರೂಪಿ ಲಿಂಗವೂ ಮೆಚ್ಚುವಂತಿರಬೇಕು. ಕೃತ್ರಿಮ ಸುಳ್ಳು ಮಾತುಗಳಿಂದ ಜನರನ್ನು ಮೆಚ್ಚಿಸಬಹುದೇ ಹೊರತು ನಮ್ಮ ಅಂತರಂಗವನ್ನು ಅರಿಯುವ ಲಿಂಗವನ್ನಲ್ಲ.
*ನುಡಿಯೊಳಗಾಗಿ ನಡೆಯದಿದ್ದಡೆ,
ಕೂಡಲಸಂಗಮದೇವನೆಂತೊಲಿವನಯ್ಯಾ*
ಹೀಗೆ ಸತ್ಯ ಸದುವಿನಯ ಸ್ಪಷ್ಟವಾಗಿ ನುಡಿಯುವ ಮತ್ತು ಈ ನುಡಿಗೆ ಒಳಗಾಗಿ ನಡೆಯುವ ನಡೆ ಇವು ದೇವರಿಗೆ ಸ್ವೀಕೃತ. ಇವುಗಳಿಂದ ಕೂಡಲಸಂಗಮ ದೇವರು ಒಲಿದು ದೇವರ ಒಲವು, ಅನುಗ್ರಹ ಪ್ರಾಪ್ತ ವಾಗುವುದು.
ಕೂಡಲಸಂಗಮದೇವ ಒಲಿಯಬೇಕಾದರೆ ನುಡಿ ನಡೆ ಒಂದಾಗಬೇಕು.
ವಚನ ಚಿಂತನೆ:
ಇದು ಪ್ರಾಣಲಿಂಗಿ ಸ್ಥಲ (ಪ್ರಾಣಲಿಂಗಿ ಜ್ಞಾನ ಸ್ಥಲ) ದ ವಚನ. ಲಿಂಗ ಪೂಜೆಯ ಬೆಳಕು ಪ್ರಾಣ ಮತ್ತು ಭಾವದಲ್ಲಿ ನೆಲೆಗೊಂಡಿದೆ. ಈ ವಚನದಲ್ಲಿ ಬಸವಣ್ಣನವರು ನಮ್ಮ ನುಡಿ ಮತ್ತು ನಡೆ ಹೇಗಿರಬೇಕೆಂದು, ನಡೆ-ನುಡಿಗಳ ಸಂಬಂಧವನ್ನು ಅತ್ಯಂತ ಪರಿಣಾಮಕಾರಿಯಾಗಿ ತಿಳಿಸಿದ್ದಾರೆ. ಶರಣರು, ಜನರ ನಡೆ-ನುಡಿಯಲ್ಲಿ ಸದುವಿನಯ ಮೂಡಿಸಿ ಜನರಲ್ಲಿ ಭಾಷೆ ಭಾವನೆ ನಡತೆಯ ಸುಧಾರಣೆ ತಂದರು.
ವಚನಗಳಲ್ಲಿ ಬರುವ ನುಡಿಯ ಹಿತೋಪದೇಶಗಳು:
*ಸತ್ಯವ ನುಡಿಯುವದೆ ದೇವಲೋಕ, ಮಿಥ್ಯವ ನುಡಿಯುವದೆ ಮೃತ್ಯಲೋಕ*
*ಸತ್ಯದ ಮನೆಯಲ್ಲಿ ಶಿವನಿರ್ಪನಲ್ಲದೆ, ಅಸತ್ಯದ ಮನೆಯಲ್ಲಿ ಶಿವನಿರ್ಪನೆ?*
*ನಡೆಯೂಳಗೆ ನುಡಿ ತುಂಬಿ, ನುಡಿಯೂಳಗೆ ನಡೆ ತುಂಬಿ ಲಿಂಗವ ಕೂಡಬಲ್ಲಾತನೆ ಶರಣ*
*ಅಯ್ಯಾ ಎಂದರೆ ಸ್ವಗ೯, ಎಲವೂ ಎಂದರೆ ನರಕ*
*ಮೃದುವಚನಗಳೇ ಸಕಲ ಜಪಂಗಳಯ್ಯ, ಮೃದು ವಚನಗಳೇ ಸಕಲ ತಪಂಗಳಯ್ಯಾ, ಸದುವಿನಯವೇ ಸದಾಶಿವನ ಒಲುಮೆಯಯ್ಯಾ*
*ನುಡಿಯಲ್ಲಿ ಎಚ್ಚತ್ತು ನಡೆಯಲ್ಲಿ ತಪ್ಪಿದರೆ, ಹಿಡಿದಿದ೯ ಲಿಂಗ ಘಟಸಪ೯*.
*ತನ್ನ ಬಣ್ಣಿಸಬೇಡ, ಇದಿರು ಹಳಿಯಲು ಬೇಡ*
ಎಂದು ಗುರು ಬಸವಣ್ಣನವರು ಎದುರಿಗಿದ್ದವರ ಮನ ಭಾವನೆಗಳಿಗೆ ಸ್ಪಂದಿಸಬೇಕು. ಅವರಿಗೆ ಬೇಜಾರು, ನೋವು ಉಂಟು ಮಾಡಬಾರದು ಎಂದು ತಿಳಿಸುತ್ತಾರೆ. ತಮ್ಮ ಅನುಕರಣೀಯ ವ್ಯಕ್ತಿತ್ವದಿಂದ ವಚನಕಾರರು ಜನ ಸಾಮಾನ್ಯರನ್ನು ಸುಸಂಸ್ಕೃತಗೊಳಿಸಲು ಪ್ರಯತ್ನಿಸಿದರು.
“ನುಡಿದಂತೆ ನಡೆ” ಎನ್ನುವ ಒಂದು ಸಮುದಾಯಿಕ ಭಾವನೆಯನ್ನು ಬೆಳಸಿ ಸಮಾಜ ಸುಧಾರಣೆಯಲ್ಲಿ ಮುಖ್ಯ ಪಾತ್ರ ವಹಿಸಿದರು.
- ✍️Dr Prema Pangi
#ನುಡಿದರೆ_ಮುತ್ತಿನಹಾರ_ದಂತಿರಬೇಕು,
Comments
Post a Comment