ವಚನ ದಾಸೋಹ : ಮತ್ರ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ,
ಮತ್ರ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ,
ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ.
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರು
ಕೂಡಲಸಂಗಮದೇವಾ. / 1000*
- ಗುರು ಬಸವಣ್ಣನವರು
*ಅರ್ಥ* :
ಇದು ಬಹಳ ಪ್ರಚಲಿತವಿರುವ ಗುರು ಬಸವಣ್ಣನವರ ಸದಾಚಾರದ, ಭಕ್ತಿಯ ಮಹತ್ವ ವಿವರಿಸುವ ಸರಳ ಸುಂದರ ವಚನ. ಪಂಚಾಚಾರಗಳಲ್ಲೆಲ್ಲಾ ಸದಾಚಾರ ಬಹಳ ವ್ಯಾಪಕವಾದದ್ದು; ಮೂಲಭೂತವಾದದ್ದು; ಪರಿಶುದ್ಧವಾದ ಸಾತ್ವಿಕ ಜೀವನಕ್ಕೆ ಆಧಾರಭೂತವಾದದ್ದು. ಶರಣರು ನೈತಿಕ ಜೀವನಕ್ಕೆ ಅತೀ ಹೆಚ್ಚಿನ ಮಹತ್ವವನ್ನು ಕೊಟ್ಟಿದ್ದಾರೆ.
*ಮತ್ರ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯಾ,*
ಈ ಮರ್ತ್ಯಲೋಕ ಅಂದರೆ ಮನುಷ್ಯ ಲೋಕ, ನಾವು ವಾಸಿಸುವ ಈ ಭೂಲೋಕ. 'ಕರ್ತಾರ' ಎಂದರೆ ಸೃಷ್ಟಿಕರ್ತ.
'ಕಮ್ಮಟ' ಎಂದರೆ ಸಾಮಾನ್ಯವಾಗಿ ಟಂಕಸಾಲೆ, ನಾಣ್ಯಗಳನ್ನು ಅಚ್ಚು ಹಾಕುವ ಕಾರ್ಯಾಗಾರ ಅಥವಾ ಗರಡಿ ಮನೆ ಎಂದು ಅರ್ಥ. ಈ ವಚನದಲ್ಲಿ ಅದನ್ನು ಇನ್ನೂ ವ್ಯಾಪಕವಾಗಿ ಕಮ್ಮಟ ವೆಂದರೆ ಎಲ್ಲ ರೀತಿಯ ಕಾರ್ಯಾಗಾರ, ಕ್ರಿಯಾಕ್ಷೇತ್ರ ಎಂದು ಅರ್ಥ. ಈ ನಮ್ಮ ಭೂಲೋಕ ಇದು ಸೃಷ್ಟಿಕರ್ತನ, ದೇವರ ಕ್ರಿಯಾಕ್ಷೇತ್ರ.
*ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯಾ.
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರು
ಕೂಡಲಸಂಗಮದೇವಾ.*
ಈ ನಮ್ಮ ಕರ್ಮ ಭೂಮಿಯಲ್ಲಿ ಕಷ್ಟಪಟ್ಟು ನಿಷ್ಠೆಯಿಂದ ಸತ್ಯ ಶುದ್ಧ ಕಾಯಕ ಮಾಡಿ ಪರಿಶುದ್ಧವಾದ ಸಾತ್ವಿಕ ಜೀವನ ನಡೆಸಬೇಕು. ನಾವು ಕ್ರಿಯಾಶೀಲರಾಗಿ ಬದುಕಬೇಕು. ಭೂಲೋಕದಲ್ಲಿ ಸತ್ಯ ಶುದ್ಧ ಕಾಯಕನಿಷ್ಟರಾಗಿ ಪರಿಶುದ್ಧತೆಯಿಂದ ಬದುಕುವವರನ್ನು ಇಲ್ಲಿ ಸಲ್ಲುವವರು ಎಂದು ಕರೆದಿದ್ದಾರೆ ಗುರು ಬಸವಣ್ಣನವರು. ಅಲ್ಲಿ ಎಂದರೆ ಪರಲೋಕ ದೇವಲೋಕ ಎಂದು ಅರ್ಥ. ಹೀಗೆ ಸದಾಚಾರಿಗಳಾಗಿ ಸತ್ಯ ಶುದ್ಧ ಕಾಯಕ ಮಾಡಿ ಬದುಕುವವರು ಇಲ್ಲಿಯ ಭೂಲೋಕಲ್ಲಿ ಮತ್ತು ಅಲ್ಲಿಯ ದೇವಲೋಕದಲ್ಲಿಯೂ ದೇವರಿಗೆ ಪ್ರಿಯರಾಗಿ ಸಲ್ಲುವರು ಎಂದು ಅಂದುಕೊಳ್ಳುವುದು ಒಂದು ಸುಲಭವಾಗಿ ಅರ್ಥಮಾಡಿಕೊಳ್ಳುವ ಅರ್ಥ. ಆದರೆ ಬಸವಣ್ಣನವರ ತಮ್ಮ ಇನ್ನೊಂದು ವಚನದಲ್ಲಿ ದೇವಲೋಕ ಮರ್ತ್ಯಲೋಕವೆಂಬುದು ಬೇರಿಲ್ಲ ಕಾಣಿರಣ್ಣ.
ಸತ್ಯವ ನುಡಿವುದೇ ದೇವಲೋಕ!
ಮಿಥ್ಯವ ನುಡಿವುದೇ ಮರ್ತ್ಯಲೋಕ!
ಎಂದು ದೇವಲೋಕ ಮರ್ತ್ಯಲೋಕ; ಸ್ವರ್ಗ ನರಕಗಳ ಅಸ್ತಿತ್ವ ಒಪ್ಪದೇ ನಾವಿರುವುದು ಒಂದೇ ಲೋಕ ಎಂದಿದ್ದಾರೆ.
ವಚನವನ್ನು ಆಧ್ಯಾತ್ಮಿಕ ದೃಷ್ಟಿಯಿಂದ ಯೋಚಿಸಿದರೆ ಇಲ್ಲಿ ಮರ್ತ್ಯಲೋಕ ಒಂದು ಸಾಧನಾಕ್ಷೇತ್ರ ಎಂಬುದು ಮುಖ್ಯವಾದ ಮಾತು. ಲೌಕಿಕ ಜೀವನದಲ್ಲಿ ಸ್ಥಿತಿಪ್ರಜ್ಞ ನಾಗಿ ಬಂದದ್ದೆಲ್ಲವನ್ನೂ ಸಮವಾಗಿ ಸ್ವೀಕರಿಸುವವರು ಇಲ್ಲಿ ಸಲ್ಲುವವರು, ಅವರು ಆಧ್ಯಾತ್ಮಿಕ ಅಥವಾ ಪಾರಮಾರ್ಥಿಕ ಜೀವನದಲ್ಲಿಯೂ ಸಲ್ಲುತ್ತಾರೆ. ಹೀಗೆ ಇಲ್ಲಿಯೂ ಅಲ್ಲಿಯೂ ಅಂದರೆ ಲೌಕಿಕ ಪಾರಮಾರ್ಥಿಕ ಎರಡರಲ್ಲಿಯೂ ಸಲ್ಲುತ್ತಾರೆ; ಜೀವನದ ಸಾರ್ಥಕತೆಯನ್ನು ಪಡೆಯುತ್ತಾರೆ. ಈ ವಚನ ಬಸವಣ್ಣನವರ ಪೂರ್ಣದೃಷ್ಟಿಯ ದ್ಯೋತಕವಾಗಿದೆ. ಲೌಕಿಕ ಲೋಕದಲ್ಲಿ ಬದುಕುತ್ತಲೇ, ಇವುಗಳಿಗೆ ಅತೀತವಾದ ಪರಮಾತ್ಮನನ್ನು ಆಧ್ಯಾತ್ಮಿಕದಲ್ಲಿಯೂ ಕಾಣಬೇಕು.
ವಚನ ಚಿಂತನೆ:
ಇದು #ಭಕ್ತ_ಸ್ಥಲ (ಭಕ್ತನ ಜ್ಞಾನ ಸ್ಥಲ) ದ ವಚನ. ಇಲ್ಲಿ ಎಂದರೆ ಭಕ್ತಸ್ಥಲದಲ್ಲಿ ಸಲ್ಲದಿದ್ದರೆ ಅಲ್ಲಿ ಎಂದರೆ ಮುಂದಿನ ಐಕ್ಯ ಸ್ಥಲದಲ್ಲಿಯೂ ಸಲ್ಲುವುದಿಲ್ಲ. ನಿರ್ಮಲ ಅನನ್ಯ ಭಕ್ತಿ ಹೊಂದುವದೇ ಸಾಧಕನ ಮೊದಲ ಮೆಟ್ಟಿಲು ಭಕ್ತಸ್ಥಲ. ಈ ಭಕ್ತಿ ಮುಂದಿನ ಎಲ್ಲ ಸ್ಥಲಗಳಲ್ಲಿಯೂ ಬೇಕು, ಭಕ್ತಿ ಇಲ್ಲದೇ ಐಕ್ಯ ಸಾಧ್ಯವಿಲ್ಲ ಎಂದು ಭಕ್ತಿಯ ಮಹತ್ವವನ್ನೂ ತಿಳಿಸಿದ್ದಾರೆ.
ಮತ್ತು ಈ ಕರ್ಮಭೂಮಿಯಲ್ಲಿ ಸದಾಚಾರಿ ಗಳಾಗಿ ಕ್ರಿಯಾಶೀಲರಾಗಿ ಸತ್ಯ ಶುದ್ಧ ಕಾಯಕದಿಂದ ಬದುಕಬೇಕು ಎಂದು ಈ ವಚನದಲ್ಲಿ ಉಪದೇಶಿಸಿದ್ದಾರೆ.
-✍️ Dr Prema Pangi
#ಮತ್ರ್ಯಲೋಕವೆಂಬುದು_ಕರ್ತಾರನ_ಕಮ್ಮಟವಯ್ಯಾ,#ಭಕ್ತ_ಸ್ಥಲ
Comments
Post a Comment