ವಚನ ದಾಸೋಹ
#ವಚನ :
#ಪ್ರಣತೆಯೂ ಇದೆ ಬತ್ತಿಯೂ ಇದೆ;
ಜ್ಯೋತಿಯ ಬೆಳಗುವಡೆ,
ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೊ?
ಗುರುವಿದೆ ಲಿಂಗವಿದೆ;
ಶಿಷ್ಯನ ಸುಜ್ಞಾನ ಅಂಕುರಿಸದನ್ನಕ್ಕರ
ಭಕ್ತಿ ಎಲ್ಲಿಯದೊ?
`ಸ್ಯೋಹಂ' ಎಂಬುದಕ್ಕೆ ದಾಸೋಹವ ಮಾಡದಿರ್ದಡೆ
ಅತಿಗಳೆವೆ ನೋಡಾ ಗುಹೇಶ್ವರಾ. / 1133
- ಅಲ್ಲಮ ಪ್ರಭುಗಳು
ಅರ್ಥ :
ವ್ಯೋಮಕಾಯ ಅಲ್ಲಮಪ್ರಭುಗಳು ಈ ವಚನದಲ್ಲಿ ಅರಿವೆಂಬ ಸುಜ್ಞಾನ ಮತ್ತು ದಾಸೋಹದ ಮಹತ್ವ ತಿಳಿಸಿದ್ದಾರೆ.
*ಪ್ರಣತೆಯೂ ಇದೆ ಬತ್ತಿಯೂ ಇದೆ;
ಜ್ಯೋತಿಯ ಬೆಳಗುವಡೆ,
ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೊ?
ಗುರುವಿದೆ ಲಿಂಗವಿದೆ; ಶಿಷ್ಯನ ಸುಜ್ಞಾನ ಅಂಕುರಿಸದನ್ನಕ್ಕರ
ಭಕ್ತಿ ಎಲ್ಲಿಯದೊ?*
ಜ್ಯೋತಿ ಬೆಳಗಬೇಕಾದರೆ, ಪ್ರಭೆ ಹೊರಹೊಮ್ಮಬೇಕಾದರೆ , ಪ್ರಣತೆ (ಪಣತಿ) ಹಾಗೂ ಬತ್ತಿ ಇದ್ದರಷ್ಟೇ ಸಾಲದು, ಪ್ರಣತಿ ಮತ್ತು ಹತ್ತಿಯೊಂದಿಗೆ ತೈಲವೂ ಬೇಕು.
ಅದೇ ರೀತಿ
ಭಕ್ತಿ ಎಂಬ ಜ್ಯೋತಿ ಹೊತ್ತಿ ಬೆಳಗಬೇಕಾದರೆ ಗುರು ಎಂಬ ಪಣತಿ, ಲಿಂಗ ಎಂಬ ಬತ್ತಿಗಳಷ್ಟೇ ಇದ್ದರೆ ಸಾಲದು, "ಸುಜ್ಞಾನ" ಎಂಬ ತೈಲ ಬೇಕು. ಶಿಷ್ಯನಲ್ಲಿ ಸುಜ್ಞಾನ ಎಂಬ ತೈಲ ಅಂಕುರಿಸಬೇಕು. ಆವಾಗಲೇ ಭಕ್ತಿಯ ಜ್ಯೋತಿ ಬೆಳಗುವುದು. ಗುರು ಲಿಂಗ ಎರಡೂ ಇದ್ದರೆ ಸಾಲದು. ಸುಜ್ಞಾನವೆಂಬ ಅರಿವು ಶಿಷ್ಯನಲ್ಲಿ ಅಂಕುರಿಸದಿದ್ದರೆ ಭಕ್ತಿಯ ಪ್ರಭೆ ಬೆಳಗುವದಿಲ್ಲ.
'ಸುಜ್ಞಾನವೆಂದರೆ ಸತ್ಯವಸ್ತುವಿನ ಜ್ಞಾನ'. ಆ ಪರಮಸತ್ಯ ವಸ್ತುವೇ ಗುರು ಮತ್ತು ಲಿಂಗವಾಗಿ ತನ್ನೆದುರಿಗೆ ಪ್ರಕಟವಾಗಿದೆ ಎಂಬ ಸುಜ್ಞಾನ ಮತ್ತು ಶ್ರದ್ಧೆ ಶಿಷ್ಯನಲ್ಲಿ ಉದಯಿಸಬೇಕು. ಶಿಷ್ಯನು ಗುರು ನೀಡಿದ ಲಿಂಗದಲ್ಲಿ ದೈವಕಳೆಯನ್ನೇ ಕಾಣಬೇಕು. ಈ ಭಾವಪೂರ್ಣ ಜ್ಞಾನವಿದ್ದರೆ ಭಕ್ತಿಯ ಜ್ಯೋತಿ ತನ್ನಷ್ಟಕ್ಕೆ ತಾನೇ ಹೊತ್ತಿಕೊಳ್ಳುತ್ತದೆ. ದೀಪ ಬೆಳಗಿಸುವ ವಿಧಾನವನ್ನು ಸುಂದರ ರೂಪಕವನ್ನಾಗಿ ಬಳಸಿಕೊಂಡಿದ್ದಾರೆ.
ಇಲ್ಲಿ ಸುಜ್ಞಾನವೆಂಬುದು ಭಕ್ತನ ಒಳಗೆಯೇ ಅಂಕುರಿಸಬೇಕು ಎನ್ನುತ್ತಾರೆ ಅಲ್ಲಮ ಪ್ರಭುಗಳು. ನಮ್ಮೊಳಗೆಯೇ ಹುಟ್ಟುವ ಜ್ಞಾನಕ್ಕೆ ಶರಣರು ಅರಿವು ಪ್ರಜ್ಞೆ ಎಂದು ಕರೆದು ಅಂತರಂಗದ ಅಷ್ಟಾವರಣದಲ್ಲಿ ಅರಿವೇ ಗುರು ಎಂದರು. ಅಂದರೆ ನಮ್ಮ ಸಾಧನಾ ಪಥದಲ್ಲಿ ಅರಿವು ಗುರುವಾಗಿ ಮುನ್ನಡೆಸುತ್ತದೆ. ನಾವು ಮಾಡುವ ವಿಚಾರಗಳು, ಕ್ರಿಯೆಗಳು ದೇವರಿಗೆ ಪ್ರಿಯವೇ? ನ್ಯಾಯಸಮ್ಮತವಾಗಿ ಇವೆಯೇ? ನಮಗೆ ಮತ್ತು ಸಮಾಜಕ್ಕೇ ಒಳಿತವೇ? ಅಥವಾ ಬರೀ ಮೂಢನಂಬಿಕೆಗಳೇ?ಡಾಂಭಿಕವೆ? ಇದೆಲ್ಲ ಸುಜ್ಞಾನವೆಂಬ ಅರಿವಿನ ಪ್ರಜ್ಞೆಯಲ್ಲಿಯೇ ಸಾಧಕ ಒರೆ ಹಚ್ಚುತ್ತಾನೆ. ಅರಿವಿನ ಪ್ರಜ್ಞೆಯಂತೆಯೆ ಕ್ರಿಯೆ, ಕಾಯಕ ಮಾಡುತ್ತಾನೆ.
*"ಸ್ಯೋಹಂ" ಎಂಬುದಕ್ಕೆ ದಾಸೋಹವ ಮಾಡದಿರ್ದಡೆ
ಅತಿಗಳೆವೆ ನೋಡಾ ಗುಹೇಶ್ವರಾ.*
'ಸೋಹಂ' ಎಂದರೆ 'ಆ ಪರಮಾತ್ಮನೇ ನಾನು' ಎಂಬುದು ಅನುಭಾವಿಗಳ ಉದ್ಗಾರ. ಅಂತಹ ಸೋಹಂ ಎನ್ನುವ ಅನುಭಾವಿಗಳು ಎದುರು ಬಂದರೆ ಶಿಷ್ಯನು, ದಾಸೋಹ ಅಂದರೆ ನಾನು ದಾಸ ಎಂಬ ಕೈಂಕರ್ಯ ಭಾವದಿಂದ ತ್ರಿವಿಧದಲ್ಲಿ ಸೇವೆಗೈಯುವದು. ಇದು ಭಕ್ತಿಯ ಭಕ್ತನ ಲಕ್ಷಣ. ನಾನು ಭಕ್ತನೆಂದು ಹೇಳಿಕೊಂಡು ಭಕ್ತಿಯ ಕುರುಹಾದ ದಾಸೋಹ ಮಾಡದಿದ್ದರೆ ಅಂಥವನನ್ನು ಅಲ್ಲಮಪ್ರಭುದೇವರು ಅಲ್ಲಗಳೆಯುತ್ತಾರೆ. ಗುರು ಮತ್ತು ಲಿಂಗದಲ್ಲಿ ಭಕ್ತಿ, ಜಂಗಮ ದಾಸೋಹ ಇವುಗಳಿಂದ ಶರಣನ ವ್ಯಕ್ತಿತ್ವ ರೂಪುಗೊಳ್ಳುಬೇಕು ಎಂದು ತಿಳಿಸಲಾಗಿದೆ.
ಭಾವ:
ಭಕ್ತಿ, ದಾಸೋಹದ ಮಹತ್ವ ಕುರಿತು ಗುರು ಬಸವಣ್ಣನವರು ಸಹ ಇದೇ ಅರ್ಥದ ವಚನ ಅರುಹಿದ್ದಾರೆ.
#ಆಡಿದಡೇನು, ಹಾಡಿದಡೇನು, ಓದಿದಡೇನು
ತ್ರಿವಿಧ ದಾಸೋಹವಿಲ್ಲದನ್ನಕ್ಕ?
ಆಡದೆ ನವಿಲು? ಹಾಡದೆ ತಂತಿ? ಓದದೆ ಗಿಳಿ?
ಭಕ್ತಿಯಿಲ್ಲದವರನೊಲ್ಲ ಕೂಡಲಸಂಗಮದೇವ.
ಭಕ್ತಿಯಿಲ್ಲದವನ ಸಾಧನೆ ವ್ಯರ್ಥ. ವೇದಪ್ರಿಯನಲ್ಲ, ನಾದಪ್ರಿಯನಲ್ಲ, ಭಕ್ತಿ ಪ್ರಿಯ ನಮ್ಮ ಕೂಡಲ ಸಂಗಮದೇವ ಎನ್ನುತ್ತಾರೆ ಗುರು ಬಸವಣ್ಣನವರು. ಸೇವೆ, ಮನದಲ್ಲಿ ನೆನಹು, ಧನದಲ್ಲಿ ತ್ಯಾಗ- ಅವು ಭಕ್ತಿಯ ಅಂಗಗಳು. ಇವುಗಳನ್ನು ಅಳವಡಿಸಿಕೊಳ್ಳುವುದೇ ತ್ರಿವಿಧ ದಾಸೋಹದ ರಹಸ್ಯ. ಗುರು ಬಸವಣ್ಣನವರು ಭಕ್ತಿ ಮತ್ತು ತ್ರಿವಿಧ ದಾಸೋಹದ ಅವಶ್ಯಕತೆ ತಿಳಿಹೇಳಿದರು.
*#ತ್ರಿವಿಧ ದಾಸೋಹ :
ಗುರು, ಲಿಂಗ, ಜಂಗಮ ಇವು ಮೂರು ಪರಮಾತ್ಮನ ಅಭಿವ್ಯಕ್ತಿಗಳು. ಕಾಲ ಮೀರಿದ ತತ್ವಗಳು. ಆದ್ದರಿಂದ ಅವು ನಿತ್ಯ.
ತನು, ಮನ, ಧನಗಳು ಶಾಶ್ವತವಲ್ಲ. ಆದ್ದರಿಂದ ಅವು ಅನಿತ್ಯ. ಈ ನಿತ್ಯ ಮತ್ತು ಅನಿತ್ಯಗಳನ್ನು ಅರಿತುಕೊಳ್ಳಬೇಕು. ನಿತ್ಯವಾದ ಗುರು, ಲಿಂಗ, ಜಂಗಮಕ್ಕೆ ಅನಿತ್ಯವಾದ ತನು, ಮನ, ಧನ ಸಮರ್ಪಿಸಿಬೇಕು. ಅಂದರೆ ತನುವನ್ನು ಗುರುಸೇವೆಯಲ್ಲಿ ಸವಸಬೇಕು. ಮನಸ್ಸನ್ನು ಲಿಂಗದ ಸ್ಮರಣೆಯಲ್ಲಿ ತೊಡಗಿಸಬೇಕು. ಧನವನ್ನು ಜಂಗಮದ ದಾಸೋಹದಲ್ಲಿ ವಿನಿಯೋಗಿಸಬೇಕು. ಹಾಗೆ ಮಾಡುವುದರಿಂದ ಆ ತನು, ಮನ, ಧನಗಳು ಪ್ರಸಾದವಾಗುತ್ತವೆ. ಕ್ರಮವಾಗಿ ಆ ಮೂರಕ್ಕೆ ಶುದ್ಧಪ್ರಸಾದ, ಸಿದ್ದಪ್ರಸಾದ, ಪ್ರಸಿದ್ದ ಪ್ರಸಾದವೆನ್ನುತ್ತಾರೆ. ಈ ಮೂರು ಬಗೆಯ ಪ್ರಸಾದ ಪಡೆದ ಭಕ್ತನೇ ತ್ರಿವಿಧಪ್ರಸಾದಿ.
ಮೇಲಿನ ಎರಡೂ ಭಕ್ತಿಸ್ಥಲ (ಭಕ್ತಿಯ ಜ್ಞಾನ ಸ್ಥಲ) ದ ವಚನಗಳು. ಶರಣನು ಸೇವಾವೃತ್ತಿಯ ಮನೋಭಾವ, ಒಳ್ಳೆಯ ಅರಿವನ್ನು ಪಡೆಯುವುದರ ಮೂಲಕ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬೇಕು.
ಶರಣರ ಶಟ್ಸ್ಥಲದ ಭಕ್ತಿ ಸಾಧನೆಯಲ್ಲಿ ಗಮನಿಸಬೇಕಾದ ಮುಖ್ಯವಾದ ಅಂಶವೆಂದರೆ ಸಾಮಾಜಿಕ ಹಿತನನ್ನು ವೈಯಕ್ತಿಕ ವಿಕಾಸದೊಡನೆ ಸಮನ್ವಯ ಗೊಳಿಸುವುದು. ಹೀಗೆ ಒಂದೇ ಹಂತದಲ್ಲಿ ಸಮಾಜ ಮತ್ತು ವ್ಯಕ್ತಿಗಳೆರೆಡರ ಅಂದರೆ ವ್ಯಷ್ಟಿ ಮತ್ತು ಸಮೇಷ್ಟಿಗಳೆರಡರ ಉದ್ಧಾರದ ಕಲ್ಪನೆಯನ್ನು ಶರಣರು ಕಂಡರು.
- ✍️Dr Prema Pangi
#ಪ್ರೇಮಾ_ಪಾಂಗಿ,#ಅಲ್ಲಮ_ಪ್ರಭುಗಳು
#ಪ್ರಣತೆಯೂ_ಇದೆ_ಬತ್ತಿಯೂ_ಇದೆ,
#ಆಡಿದಡೇನು_ಹಾಡಿದಡೇನು_ಓದಿದಡೇನು
Comments
Post a Comment