ವಚನ ದಾಸೋಹ

#ವಚನ:
ಆಲಿಕಲ್ಲ, ನೀರೊಳಗೆ ಬೆರಸಿದಂತೆ ;
ಉಪ್ಪಿನ ಹರಳ, ಉದಕದೊಳಗೆ ಹಾಕಿದಂತೆ ;
ಕರ್ಪುರವ ಹಣತೆಯಲ್ಲಿ, ಜ್ಯೋತಿಯ ಬೆಳಗ ಬೆರಸಿದಂತೆ ;
ಮಹಾಲಿಂಗ ಚೆನ್ನ ರಾಮೇಶ್ವರಲಿಂಗದಲ್ಲಿ ಬೆರಸಿ,
ಎರಡಳಿದಡಗಿದ ನಿಜಲಿಂಗೈಕ್ಯನು./1413
 - *ಶರಣ ಮೈದುನ ರಾಮಯ್ಯ*
ಅರ್ಥ:
ನಿಜಲಿಂಗೈಕ್ಯನ ಸ್ಥಲ (ನಿಜೈಕ್ಯ ಸ್ಥಲ) ದ ವಚನ. ನಿಜೈಕ್ಯ ಸ್ಥಲ ಶಟ್ಸ್ಥಲದ ಆರನೆಯ ಸ್ಥಲ. ಲಿಂಗಾಂಗ ಸಾಮರಸ್ಯ ದಿಂದ ಬದುಕಿರುವಾಗಲೇ ಲಿಂಗದೊಳಗೆ ಐಕ್ಯನಾಗುವ ಸ್ಥಲ.
ಯಾವ ರೀತಿ ಶರಣ (ಸಾಧಕ) ಐಕ್ಯಸ್ಥಲ ದಲ್ಲಿ ಲಿಂಗ (ದೇವ) ನಲ್ಲಿ ಬೆರೆಯುತ್ತಾನೆ ಎಂದು ಅತ್ಯಂತ ಸುಂದರವಾದ ಉಪಮೆಗಳ ಮುಖಾಂತರ ಶರಣ ಮೈದುನ ರಾಮಯ್ಯನವರು ತಿಳಿಸಿದ್ದಾರೆ.

*ಆಲಿಕಲ್ಲ ನೀರೊಳಗೆ ಬೆರಸಿದಂತೆ*

ಆಲಿಕಲ್ಲು ನೀರೊಳಗೆ ಬೆರೆತಾಗ ಅದು ಸಂಪೂರ್ಣ ಕರಗಿ ತನ್ನ ಸ್ವರೂಪ ಕಳೆದುಕೊಂಡು ತಾನೂ ನೀರೇ ಆಗುತ್ತದೆ. 

*ಉಪ್ಪಿನ ಹರಳ ಉದಕದೊಳಗೆ ಹಾಕಿದಂತೆ*

ಉಪ್ಪಿನ ಹರಳು ನೀರಿನಲ್ಲಿ ಬೆರೆತರೆ  ಸಂಪೂರ್ಣವಾಗಿ ನೀರಲ್ಲಿ ಕರಗಿ ತನ್ನ ಸ್ವರೂಪ ಕಳೆದುಕೊಂಡು ಇಲ್ಲವಾಗುತ್ತದೆ.

*ಕರ್ಪುರವ ಹಣತೆಯಲ್ಲಿ, ಜ್ಯೋತಿಯ ಬೆಳಗ ಬೆರಸಿದಂತೆ*

ಕರ್ಪುರ ಹಣತೆಯ ಜ್ಯೋತಿಯ ಬೆಳಗಿನಲ್ಲಿ ಬೆರೆತರೆ ಅದು ಸಂಪೂರ್ಣವಾಗಿ ತನ್ನ ಸ್ವರೂಪ ಕಳೆದುಕೊಂಡು ಜ್ಯೋತಿ ಸ್ವರೂಪವಾಗಿ ಉರಿದು ಇಲ್ಲವಾಗುತ್ತದೆ. 

ಅಂದರೆ ಆಲಿಕಲ್ಲ ನೀರೊಳಗೆ, ಉಪ್ಪಿನ ಹರಳ ಉದಕದೊಳಗೆ, ಕರ್ಪುರ ಹಣತೆಯು ಜ್ಯೋತಿಯಲ್ಲಿ ತಮ್ಮನ್ನು ತಾವೇ ಸಂಪೂರ್ಣವಾಗಿ ಅಳಿದುಕೊಂಡು ಬೆರೆತು ಬೇರೆಯದೇ ಸ್ವರೂಪ ಪಡೆಯುತ್ತವೆ.

*ಮಹಾಲಿಂಗ ಚೆನ್ನ ರಾಮೇಶ್ವರಲಿಂಗದಲ್ಲಿ ಬೆರಸಿ,
ಎರಡಳಿದಡಗಿದ ನಿಜಲಿಂಗೈಕ್ಯನು.*

 ಅದೇ ರೀತಿ ನಿಜಲಿಂಗೈಕ್ಯ ಶರಣನು ಐಕ್ಯ ಸ್ಥಲದಲ್ಲಿ ಲಿಂಗ (ದೇವ) ನಲ್ಲಿ ತನ್ನ ಅಹಂ ನಾಶ ಮಾಡಿಕೊಂಡು, ತನ್ನನ್ನು ತಾನೇ ಅಳಿದುಕೊಂಡು, ಬೆರೆತು, ಲಿಂಗಸ್ವರೂಪಿ ಯಾಗುತ್ತಾನೆ. ಶರಣನ ಅಂಗತ್ರಯಗಳು ಲಿಂಗತ್ರಯಗಳಾಗುತ್ತವೆ. ಶರಣ ಸರ್ವಾಂಗಲಿಂಗಿ ಯಾಗುತ್ತಾನೆ. ಎರಡು ಹೋಗಿ ಒಂದೇ ಆಗುತ್ತಾನೆ. ದ್ವೈತ ದಿಂದ ಅದ್ವೈತೀ ಯಾಗುತ್ತಾನೆ. (ಶಕ್ತಿ ವಿಶಿಷ್ಟಾದ್ವೈತ)
ನಾನು ಎಂಬುದು (ಅಹಂ) ಸಂಪೂರ್ಣವಾಗಿ ಅಳಿದ ನಂತರವೇ ಸಾಧಕ, ಶೃಷ್ಟಿಕರ್ತ ದೇವನಲ್ಲಿ ಬೆರೆಯಲು ಸಾಧ್ಯ ಎನ್ನುವದೇ ವಚನದ ತಾತ್ಪರ್ಯ. ಮಾನವ ಮಹಾದೇವನಾಗುವ ಸಾಧನೆಯೇ ಶಿವಯೋಗ. 
ಹೆಚ್ಚು ಪ್ರಚಾರಕ್ಕೆ ಬರದ ಮೈದುನ ರಾಮಯ್ಯನಂಥ ಎಷ್ಟೋ ಶರಣರು ಇಂಥ ಶ್ರೇಷ್ಟವಾದ ಐಕ್ಯಸ್ಥಲ ಮುಟ್ಟಿ ದೇವರಲ್ಲಿ ಬೆರೆತರು ಮತ್ತು ಅಷ್ಟೇ ಸುಂದರ ಶ್ರೇಷ್ಟ ವಚನಗಳನ್ನು ರಚಿಸಿದ್ದಾರೆ.

#ಶರಣ_ಮೈದುನ_ರಾಮಯ್ಯ_ಪರಿಚಯ:
ಅಂಕಿತ: ಮಹಾಲಿಂಗ ಚೆನ್ನರಾಮ
ಮೈದುನ ರಾಮಯ್ಯನವರು ಅನುಭವ ಮಂಟಪದ ೭೭೦ ಅಮರ ಗಣಂಗಳ ಪೈಕಿ ಒಬ್ಬ ವಚನಕಾರ ಶರಣರು.
ಕಾಲ-೧೧೬0
ಈತ ಈಗಿನ ಆಂಧ್ರ ಪ್ರದೇಶದ (ಆಗಿನ ಕನ್ನಡ ನಾಡಿನ) ಭೀಮಾವತಿ ಎಂಬ ಊರಿನ ಸೋಮನಾಥ ಮತ್ತು ಮಹಾದೇವಿ ಅವರ ಮಗ. ಸ್ವಭಾವತ: ಮುಗ್ಧ. ಕಲ್ಯಾಣಕ್ಕೆ ಬಂದು ಶರಣರೊಂದಿಗೆ ಬೆರೆತು. ತನ್ನ ಮುಗ್ಧಭಕ್ತಿಯಿಂದ ಎಲ್ಲರ ಗಮನ ಸೆಳೆಯುತ್ತಾನೆ. ಇವನು ಬಸವಣ್ಣ ಅವರನ್ನು ಅಣ್ಣ ಎಂದು ಕರೆದು ತಾನು 'ಮೈದುನ ರಾಮಯ್ಯ'ನೆನಿಸಿದ ಶರಣನು.
 (ಶಿವ ಪಾರ್ವತಿಯರನ್ನೇ ಅಕ್ಕ ಭಾವಂದಿರನ್ನಾಗಿ ಮಾಡಿಕೊಂಡನು ಎಂದು ಕಾವ್ಯ-ಪುರಾಣಗಳಿಂದ ತಿಳಿದುಬರುತ್ತದೆ.) .
'ಮಹಾಲಿಂಗ ಚೆನ್ನರಾಮ' ಅಂಕಿತದಲ್ಲಿ ಆರು ವಚನಗಳು ದೊರೆತಿವೆ. ಸದ್ಗುರುವಿನ ಕರುಣೆ, ನಿಜಲಿಂಗೈಕ್ಯನ ಮನದ ಸ್ವಭಾವ, ಶರಣರ ಸ್ತುತಿ ಇವು ಆತ್ಮೀಯ ಶೈಲಿಯಲ್ಲಿ ನಿರೂಪಿತವಾಗಿವೆ. ಈತನ ಶಿವಭಕ್ತಿ ಅಪೂರ್ವವಾದುದು. ಒಂದು ವಚನದಲ್ಲಿ "ನಾನಿಲ್ಲದಿರ್ದಡೆ ನೀನಿಲ್ಲ, ನೀನಿಲ್ಲದಿರ್ದಡೆ ನಾನಿಲ್ಲ. ನಾನು ನೀನೆಂಬುದಂತಿರಲಿ.
ಹಿಡಿಯೊ,ಮುಡಿಯೊ ಮಾಡಿದಂತೆಯಪ್ಪೆನು.
ನಗುವುದು ಕೆಲಕಡೆ ನೋಡಾ.
ಸಾತ್ವಿಕ ಸಜ್ಜನ ಸದ್ಗುರುವಿನಿಂದ ಬದುಕಿದೆ ನಾನು, ನಿನಗಂಜೆ ಮಹಾಲಿಂಗ ಚೆನ್ನರಾಮಾ"  ಎಂದು ದೇವರಿಗೆ ಸವಾಲು ಹಾಕುವನು. ಭಂಡಾರಿ ಬಸವಣ್ಣನೆ, ನಂಬಿಯಣ್ಣ, ಜಗದೇವ, ಚೆನ್ನಬಸವಣ್ಣ ಇವರು ತನ್ನ ಸದ್ಗುರುಗಳು ಎನ್ನುವನು. ಮತ್ತೊಂದು ವಚನದಲ್ಲಿ
"ಶಿವಶರಣರ ಬರವ ಕಂಡು
ಶಿರಬಾಗಿ, ಕರ ಮುಗಿದಂಜಲೇಬೇಕು."ಎಂದು ಶರಣರ ವಿಚಾರದಲ್ಲಿ ತನಗೆ ಇರುವ ಭಕ್ತಿ ಭಾವ ತೋರಿದ್ದಾನೆ.
ತನ್ನ ಮನದ ಚಾಂಚಲ್ಯವನ್ನು ನೋಡಿ "ಆಳ್ದರೆಂದು ನಂಬಿಯೂ ನಂಬಲೊಲ್ಲದಾಗಿ ಮಹಾಲಿಂಗ ಚೆನ್ನರಾಮೇಶ್ವರನೆನ್ನ ಕಡೆಗೆ ನೋಡಿ ನಗುತ್ತಲಿದ್ದಾನೆ" ಎನ್ನುವನು.
- ✍️Dr Prema Pangi
#ಪ್ರೇಮಾ_ಪಾಂಗಿ,#ಮೈದುನ_ರಾಮಯ್ಯ #ಆಲಿಕಲ್ಲ_ನೀರೊಳಗೆ_ಬೆರಸಿದಂತೆ ,
Picture post designed and created by me. Hope you all will like it. A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma