ವಚನ ದಾಸೋಹ
*ವಚನ:*
#ಪಶ್ಚಿಮಪದ್ಮಾಸನದಲ್ಲಿ ಕುಳ್ಳಿತ್ತು ನಿಟ್ಟೆಲುವ ಮುರಿದು
ತುಟಿ ಮಿಡುಕದೆ ಅಟ್ಟೆಯಾಡಿತ್ತಲ್ಲಾ !
ಬಿಟ್ಟ ಕಣ್ಣು ಬಿಗಿದ ಹುಬ್ಬು, ಬ್ರಹ್ಮರಂಧ್ರದಲ್ಲಿ ಕಟ್ಟು ಗುಡಿಯ,
ಕೂಡಲಸಂಗಮದೇವ ಹಿಡಿವಡೆದ. / 874
- ಗುರು ಬಸವಣ್ಣನವರು
ಅರ್ಥ:
ಪ್ರಾಣಲಿಂಗದರ್ಶನವನ್ನು ಪಡೆದ ಪ್ರಾಣಲಿಂಗಿಯ ಅನುಭಾವ ಮತ್ತು ಸಹಜ ಶಿವಯೋಗದ ವಿಧಾನ ಈ ವಚನದಲ್ಲಿ ಮೂಡಿ ಬಂದಿದೆ.
*ಪಶ್ಚಿಮಪದ್ಮಾಸನದಲ್ಲಿ ಕುಳ್ಳಿತ್ತು ನಿಟ್ಟೆಲುವ ಮುರಿದು
ತುಟಿ ಮಿಡುಕದೆ ಅಟ್ಟೆಯಾಡಿತ್ತಲ್ಲಾ !*
"ಪಶ್ಚಿಮ ಪದ್ಮಾಸನ" ಎಂದರೆ ಸ್ಥಿರಗೊಂಡ ಪದ್ಮಾಸನ. ಬೆನ್ನುಮೂಳೆ ಸ್ಥಿರ ಮತ್ತು ನೇರವಾಗುವುದರಿಂದ ಜ್ಞಾನತಂತುಗಳು ಸರಿಯಾಗಿ ಕಾರ್ಯ ನಿರ್ವಹಿಸುವುವು. ಇದರಿಂದ ವಿಚಾರಶಕ್ತಿ ಮತ್ತು ಸ್ಮರಣ ಶಕ್ತಿ ಹೆಚ್ಚುವುವು. ದೀರ್ಘ ಉಸಿರಾಟಕ್ಕೆ ಮನಸ್ಸನ್ನು ಕೇಂದ್ರಿಕರಿಸಲು ಪದ್ಮಾಸನ ಸೂಕ್ತ ಮಾಧ್ಯಮ. ಮಂಡಿ, ಕಾಲುಗಳ ಕೀಲುಗಳಲ್ಲಿನ ಗಡಸುತನ ಮಾಯವಾಗಿ ಸೊಂಟ, ಬೆನ್ನುಗಳಲ್ಲಿ ರಕ್ತಸಂಚಾರ ಸುಗಮವಾಗುವುದರಿಂದ ಇಡೀ ಶರೀರದಲ್ಲೇ ಹೊಸ ಹುರುಪು ಬರುವುದು. ಪ್ರಾಣಯಾಮ ಮತ್ತು ಧ್ಯಾನಕ್ಕೆ ಪದ್ಮಾಸನ ಅತ್ಯುತ್ತಮವಾದುದು. ಈ ಆಸನದಲ್ಲಿ ಕುಳಿತು ನಿಟ್ಟೆಲುವ ಮುರಿದು ಅಂದರೆ
ಬೆನ್ನುಹುರಿಯನ್ನು ನೇರವಾಗಿರಿಸಿ, ತುಟಿ ಮಿಡುಕದೆ ಅಂದರೆ ತುಟಿ ಅಲುಗಾಡಿಸದೆ ಅಂದರೆ ಮೌನವಾಗಿ, ಎಲ್ಲ ಇಂದ್ರಿಯಗಳನ್ನು ನಿರೋಧಿಸಿ, ಅಟ್ಟಿಯಾಡು ಅಂದರೆ ಸಹಜ ಪ್ರಾಣಾಯಾಮದಲ್ಲಿ ತೊಡಗಿರುವುದು ಎಂದು ಅರ್ಥ. ಪೂರಕ, ಕುಂಭಕ, ರೇಚಕಗಳು ಸಹಜವಾಗಿ ನಡೆಯಬೇಕು. ವಾಯುಚಲನೆ ಸಹಜವಾಗಿದೆ.
*ಬಿಟ್ಟ ಕಣ್ಣು ಬಿಗಿದ ಹುಬ್ಬು, ಬ್ರಹ್ಮರಂಧ್ರದಲ್ಲಿ ಕಟ್ಟು ಗುಡಿಯ,
ಕೂಡಲಸಂಗಮದೇವ ಹಿಡಿವಡೆದ.*
ಕಣ್ಣುಗಳು ಇಷ್ಟಲಿಂಗದ ಮೇಲೆ ದೃಷ್ಠಿಯೋಗದಲ್ಲಿವೆ. ಹೊರಗೆ ಕಣ್ಣು ಆಲಿಗಳು ಸ್ಥಿರವಾದರೆ ಒಳಗೆ ಮನಸ್ಸು ಸ್ಥಿರವಾಗುತ್ತದೆ. ಮನಸ್ಸು,ಚಿತ್ತು ಇವು ಸಹಸ್ರಾರಚಕ್ರದಲ್ಲಿ ಸ್ಥಿರವಾದಾಗ (ಶಾಂಭವಿ ಮುದ್ರೆ) ಕುಂಡಲಿನಿ ಶಕ್ತಿ ಊರ್ಧ್ವಮುಖವಾಗಿ ಚಲಿಸುತ್ತಾ ಮೊದಲು ಆಜ್ಞಾಚಕ್ರ ನಂತರ ಇನ್ನೂ ಮೇಲ್ಮುಖವಾಗಿ ಚಲಿಸಿ ಸಹಸ್ರಾರಚಕ್ರದ ಮೇಲೆ ನಿಶ್ಚಲಗೊಳ್ಳುವುದು. ಆಗ ಕೂಡಲಸಂಗಮ ನೆಂಬ ಪರಶಿವ ಹಿಡಿವಡೆಯುತ್ತಾನೆ. ಅಂದರೆ ನಾದ ಬಿಂದು ಕಳೆ ಅನುಭವವಾಗಿ ಪ್ರಾಣಲಿಂಗದರ್ಶನ ವಾಗುತ್ತದೆ. ಅದನ್ನೇ 'ಕಟ್ಟುಗುಡಿಯ'' ಎಂದು ಗುರು ಬಸವಣ್ಣನವರು ನಿರ್ದೇಶಿಸಿದ್ದಾರೆ. ಶಿವಾನುಭಾವ ಇಲ್ಲಿ ಸೂಚಿತವಾಗಿವೆ. ಹಿರಿದಾದ ಯೋಗ ಅನುಭವವನ್ನು ಕಿರಿದಾದ ಈ ವಚನದಲ್ಲಿ ಹಿಡಿದಿಟ್ಟಿದ್ದಾರೆ.
ಭಾವ: ಲಿಂಗಾಯತ ಸಿದ್ಧಾಂತದಲ್ಲಿ ವಾಸ್ತವಿಕವಾಗಿ ಜೀವ-ಶಿವರು, ಆತ್ಮ-ಪರಮಾತ್ಮರು ಒಂದೇ ಆಗಿದ್ದರೂ ಕೆಲವು ಅವಧಿಯವರೆಗೆ ಮಾತ್ರ ಪ್ರತ್ಯೇಕವಾಗಿ ತೋರುತ್ತಾರೆ. ಈ ವಿಭಿನ್ನತೆಯನ್ನು ಪರಿಹರಿಸಿಕೊಂಡು ಯೋಗ ಸಾಧನೆಯಿಂದ ಯೋಗಿಯು ಶಿವ-ಜೀವರ ಐಕ್ಯತೆಯನ್ನು ಸಾಧಿಸುತ್ತಾನೆ.
ಮಾಯೆಯ ಮೂಲಕವಾಗಿ ಆತ್ಮನು ತನ್ನ ಮೂಲ ಸ್ವರೂಪವನ್ನು ಮರೆತು, ಆಣವ, ಮಾಯಾ, ಮತ್ತು ಕರ್ಮ ಎಂಬ ಮೂರು ತೆರನಾದ ಮಲಗಳಿಂದಲೂ ; ಕಾಲ, ನಿಯತಿ, ರಾಗ, ವಿದ್ಯಾ, ಕಲಾ ಎಂಬ ಪಂಚಕಂಚುಕ ಗಳಿಂದ ಆವರಿಸಲ್ಪಟ್ಟಿದ್ದಾನೆ.
ಯೋಗ ಸಾಧನೆಯಿಂದ ಆತ್ಮನು ಇವನ್ನೆಲ್ಲ ಪರಿಹರಿಸಿಕೊಂಡು ಸ್ವರೂಪ ಜ್ಞಾನವನ್ನು (intellectual awareness) ಪಡೆದು ಪರಮಾತ್ಮನೊಡನೆ ಸಾಮರಸ್ಯವನ್ನು ಹೊಂದುತ್ತಾನೆ. ಶಿವಯೋಗಿ ತನ್ನ ದೇಹವನ್ನೇ ಗುಡಿಯಾಗಿ ಮಾಡಿ ತನ್ನ ಚಿದಾಕಾಶದಲ್ಲಿ ಪ್ರಾಣಲಿಂಗದ ಪ್ರತಿಷ್ಟನೆ ಮಾಡಿ ನಿತ್ಯ ಪೂಜಿಸುತ್ತಾನೆ.
“ಯೋಗಃ ಚಿತ್ತವೃತ್ತಿ ನಿರೋಧಃ' ಎಂದರೆ ಚಿತ್ತದಲ್ಲಿ ಮೂಡಿಕೊಂಡಿರುವ ವೃತ್ತಿಗಳನ್ನು ನಿರೋಧಗೊಳಿಸಿ ಯೋಗಧ್ಯಾನದಲ್ಲಿ ಪಂಚೇಂದ್ರಿಯಗಳ ಸಂಪರ್ಕ ಇಲ್ಲದಿರುವ ಅವಸ್ಥೆಯೊಂದು ಒದಗುತ್ತದೆ.
ಇದು ಮನದ ಶುದ್ಧ ಸಂವಿತ್-ಜ್ಞಾನದ ಅವಸ್ಥೆಯನ್ನು ಸೂಚಿಸುತ್ತದೆ. ಅಲ್ಲಿ ಮನ ಬುದ್ದಿ ಚಿತ್ತ ಮೊದಲಾದ ಅಂತರ-ಇಂದ್ರಿಯ ಗಳ ಎಲ್ಲ ವ್ಯವಹಾರಗಳು ನಿಂತುಹೋಗುತ್ತದೆ. ಮನಸ್ಸಿನ ಸ್ಥಿರತೆ ಮತ್ತು ಶಾಂತಿಗಳಿಂದ ಅಜ್ಞಾನದ ಕತ್ತಲೆಯು ಕಳಚುವುದು. ಜಡವಾದ ಮನದ ಆಚೆಗೆ ಚೈತನ್ಯ ಸ್ವರೂಪವಾದ ಆತ್ಮವಿರುತ್ತದೆ. ಚೈತನ್ಯದ ಸಹಾಯದಿಂದ ಚಿತ್ತಕ್ಕೆ ಅದರ ಸ್ವರೂಪ ಗೊತ್ತಾಗುತ್ತದೆ. ಹೀಗೆ ಯೋಗದಿಂದ ಮನಸ್ಸಿನ ಸ್ಥಿರತೆ, ಶಾಂತಿ ಮತ್ತು ಆತ್ಮ ತತ್ವಜ್ಞಾನ ಲಭಿಸುತ್ತದೆ. ಸಾಧಕನನ್ನು ಆತ್ಮಸಾಕ್ಷಾತ್ಕಾರದ ಔನ್ನತ್ಯಕ್ಕೆ ಸುಲಭವಾಗಿ ಕ್ರಮಕ್ರಮವಾಗಿ ಕರೆದೊಯ್ದು ಕೊನೆಗೆ ಇಚ್ಚಿತವಾದ ಗುರಿಯನ್ನು ಮುಟ್ಟಿಸುತ್ತದೆ.
ಯೋಗಾನುಸಂಧಾನದ ಕಾಲಕ್ಕೆ ಪರವಸ್ತುವಿನಲ್ಲಿರಿಸಿದ ತನ್ಮಯವಾದ ನೋಟದಿಂದ (ತ್ರಾಟಕ ಯೋಗ) ಸುಪ್ತಸ್ಥಿತಿಯಲ್ಲಿದ್ದ ಪೀನಿಯಲ್‌ಗ್ರಂಥಿಯು ಜಾಗ್ರತಗೊಳ್ಳುವದು, ವಿದ್ಯುತ್ ಶಕ್ತಿಯಾಗಿ ಕಾರ್ಯ ಮಾಡತೊಡಗುವದು. ಇದರಿಂದ ಸೂಕ್ಷ್ಮ ಶರೀರದ ವಿವಿಧ ಶಕ್ತಿಯ ಕೇಂದ್ರ (ಚಕ್ರಗಳು) ಗಳಲ್ಲಿಯ ದೋಷಗಳು ನಿವಾರಣೆಯಾಗಿ ಆತ್ಮತೇಜವು ಬೆಳಗುವದು. ಚಕ್ರಗಳ ಶುದ್ಧಿಯಿಂದ ದೇಹ ಸುಸ್ಥಿತಿಗೆ ಬಂದು ಆರೋಗ್ಯ ಲಭಿಸುವುದು. ಇಂದ್ರಿಯಗಳ ಭ್ರಮೆ ದೋಷಗಳು ನಾಶವಾಗಿ ಅರಿವು ಮತ್ತು ತೇಜಸ್ಸು ಪ್ರಕಾಶವಾಗುವುದು.
- ✍️ Dr Prema Pangi
#ಪ್ರೇಮಾ_ಪಾಂಗಿ,#ಗುರು_ಬಸವಣ್ಣನವರು
#ಪಶ್ಚಿಮಪದ್ಮಾಸನದಲ್ಲಿ_ಕುಳ್ಳಿತ್ತು_ನಿಟ್ಟೆಲುವ_ಮುರಿದು
Comments
Post a Comment