ವಚನ ದಾಸೋಹ

#ವಚನ:
#ಕನ್ನಗತ್ತಿ ಮಣ್ಣ ಕೆಡಹಿದ ಬಳಿಕ
ಮಣ್ಣ ತೆಗೆಯಬಲ್ಲುದೆ ?
ಇಂತೀ ಉಭಯಾನುಭಾವ ಬೇಕು.
ಕನ್ನವ ಸವೆದ ಕತ್ತಿ ಕಳಬಲ್ಲುದೆ ?
ಇಂತೀ ಬಿನ್ನಾಣದ ದೃಷ್ಟವ ತಿಳಿದು
ಅರಿವುದ ಅರುಹಿಸಿಕೊಂಬುದೆ ?
ಅರಿದ ಅರಿವ ಅರಿವನ್ನಕ್ಕ ವೀರಶೂರ ರಾಮೇಶ್ವರ ಲಿಂಗವ ಅರ್ಚಿಸುತ್ತ, ಪೂಜಿಸುತ್ತ ಚಿತ್ತ ಶುದ್ಧನಾಗಿರಬೇಕು.
-*ಶರಣ ಬಾಲ ಬೊಮ್ಮಣ್ಣ* 

ಅರ್ಥ: 
ಗುಡಿ ಕಟ್ಟಲು ನಿಧಿಯ ಕೊರತೆಯಾದಾಗ, ಶಿವಯೋಗಿ ಸಿದ್ಧರಾಮೇಶ್ವರರು  ಹಾರೆ, ಗುದ್ದಲಿ ಕೊಟ್ಟು ಅಂಗಳದಲ್ಲಿ ಅಗೆಯಲು ಶರಣ ಬಾಲಬೊಮ್ಮಣ್ಣನವರಿಗೆ ಹೇಳಿದರಂತೆ. ಹೀಗೆ ಶರಣ ಬಾಲಬೊಮ್ಮಣ್ಣನವರು ಅಂಗಳ ಅಗೆಯುವಾಗ ಅವರಿಗೆ ಕೊಪ್ಪರಿಗೆಯಷ್ಟು ಬಂಗಾರ ಸಿಕ್ಕಿತು. ಈ ಸಂಪತ್ತಿನಿಂದ ಬಾಲಬೊಮ್ಮಣ್ಣನವರು ಗುಡಿಯನ್ನು ಕಟ್ಟಿ ಲಿಂಗಪೂಜೆ ಮಾಡುತ್ತಾ ಸುಖವಾಗಿದ್ದರು. ಈ ನಿಧಿಗಾಗಿ ತಾವು ನೆಲ ಅಗೆದಿದ್ದನ್ನೇ ರೂಪಕವಾಗಿ, ಅಂತರಂಗದಲ್ಲಿ ಅಡಗಿರುವ ಪರಶಿವನ ಅಂಶವಾದ ಆತ್ಮ ದರ್ಶನಕ್ಕೆ ಹೋಲಿಕೆ ಮಾಡಿದ್ದಾರೆ ಶರಣ ಬಾಲಬೊಮ್ಮಣರು.

*ಕನ್ನಗತ್ತಿ ಮಣ್ಣ ಕೆಡಹಿದ ಬಳಿಕ
ಮಣ್ಣ ತೆಗೆಯಬಲ್ಲುದೆ ?
ಇಂತೀ ಉಭಯಾನುಭಾವ ಬೇಕು.*

ಕನ್ನಗತ್ತಿ ಅಂದರೆ ಚೂಪಾದ ಹರಿತವಾದ ಕತ್ತಿ. ನೆಲ ಅಗೆಯುವ ಸಮಯ ಉಪಯೋಗಿಸುವ ಕತ್ತಿ. ಆಗ ಹೊರಡುವ ಮಣ್ಣು ತೆಗೆದು ಹೊರ ಹಾಕಲು ಈ ಚೂಪಾದ ಹರಿತವಾದ ಕತ್ತಿಯಿಂದ ಸಾಧ್ಯವಾಗುವುದಿಲ್ಲ. ಆ ಕೆಲಸಕ್ಕೆ ಬೇರೊಂದು ಉಪಕರಣ ಬೇಕಾಗುತ್ತದೆ. ನಿಧಿಗಾಗಿ ಆಗೆಯುವವರಿಗೆ  ಈ ಎರಡೂ ಸಂಗತಿ ಬಗ್ಗೆ  ಅನುಭವ ಇರಬೇಕಾಗುತ್ತದೆ .

*ಕನ್ನವ ಸವೆದ ಕತ್ತಿ ಕಳಬಲ್ಲುದೆ ? ಇಂತೀ ಬಿನ್ನಾಣದ ದೃಷ್ಟವ ತಿಳಿದು
ಅರಿವುದ ಅರುಹಿಸಿಕೊಂಬುದೆ ?*

ನೆಲದ ಒಳಗಿನ ನಿಧಿ ಅಗೆಯುವವರಿಗೆ ಬೇಕಾದ್ದು ಅತ್ಯಂತ ಹರಿತವಾದ ಕತ್ತಿ.  ಸವೆದು ಮೊಂಡಾದ ಕತ್ತಿಯಿಂದ ನೆಲ ಆಗಿಯುವವದು  ಸಾಧ್ಯವೇ?
ಮೊಂಡಾದ ಕತ್ತಿಯಿಂದ ನೆಲ ಅಗಿಯುವವ ದು ಸಾಧ್ಯವಿಲ್ಲ. ಅದಕ್ಕೆ ಚೂಪಾದ ಹರಿತವಾದ ಕತ್ತಿ ಬೇಕು. ಅದೇ ರೀತಿ ಚೂಪಾದ ಕತ್ತಿಯಿಂದ  ಮಣ್ಣು ತೆಗೆದು ಹೊರಹಾಕಲು ಸಾಧ್ಯವಿಲ್ಲ. ಅದಕ್ಕೆ ಮೊಂಡಾದ ಕತ್ತಿ ಬೇಕು.
ಈ ಅರ್ಥಪೂರ್ಣ ಅಲಂಕಾರಿಕ ಬಿನ್ನಾಣದ ದೃಷ್ಟವ ತಿಳಿದು ಸ್ವಂತ ಅರಿವುದನ್ನು ಅರುಹಿಸಿಕೊಳ್ಳಬಾರದು.ಇದನ್ನು ನಾವೇ ತಿಳಿಯಬೇಕು. ಬೇರೆಯವರಿಂದ ಹೇಳಿಸಿ ಕೊಳ್ಳಬಾರದು.

*ಅರಿದ ಅರಿವ ಅರಿವನ್ನಕ್ಕ ವೀರಶೂರ ರಾಮೇಶ್ವರ ಲಿಂಗವ ಅರ್ಚಿಸುತ್ತ, ಪೂಜಿಸುತ್ತ ಚಿತ್ತ ಶುದ್ಧನಾಗಿರಬೇಕು.*

ಹೀಗೆ ಆಗಲೇ ನಾವು ಅರಿದಂಥ  ಮತ್ತು ಮುಂದೆ  ಅನುಭವದಿಂದ ಅರಿಯುವ ಅರಿವನ್ನು ಹೊಂದಲು, ವೀರ ಶೂರ ರಾಮೇಶ್ವರ ಲಿಂಗ ಪೂಜಿಸುತ್ತ, ಅರ್ಚಿಸುತ್ತ ಅರಿವಿನ ಬೆಳಗಿನಲ್ಲಿ ನಮ್ಮ ಮನಸ್ಸನ್ನು ಶುದ್ಧವಾಗಿಟ್ಟು ಕೊಳ್ಳಬೇಕು. ಈ ಅರಿವಿನ ಮೂಲಕವೇ ನಿತ್ಯವೂ ಚಿತ್ತಶುದ್ದಿಯನ್ನು ಮಾಡಿಕೊಂಡು ಆಧ್ಯಾತ್ಮಿಕ ವಿಕಸನದ ಕಡೆಗೆ ಸಾಗಬೇಕು. ಹೀಗೆ ಎರಡು ರೂಪಕಗಳ  ನಿಧಿ ಗಾಗಿ ಅಗೆಯುವ ಲೌಕಿಕ ಅನುಭವದಿಂದ ವಚನವು ಆಧ್ಯಾತ್ಮಿಕ ಅನುಭಾವದ ನೆಲೆಯತ್ತ ಸಾಗುವುದು. 
*ಭಾವ*:
ಕೆಲವು ವಿಷಯಗಳನ್ನು ಗುರುವಿನಿಂದ ಅರಿತರೂ ಕೆಲವು ವಿಷಯಗಳನ್ನು ಸ್ವಂತ ಅನುಭವ, ಅನುಭಾವದಿಂದ ಅರಿಯಬೇಕು. ಸ್ವಂತ ಅರಿವುದನ್ನು ಅರುಹಿಸಿಕೊಳ್ಳಬಾರದು. ಇದನ್ನು ನಾವೇ ತಿಳಿಯಬೇಕು. ಬೇರೆಯವರಿಂದ ಹೇಳಿಸಿ ಕೊಳ್ಳಬಾರದು. ಪುಸ್ತಕ ಗ್ರಂಥಗಳಿಂದ ಬಂದ  ಜ್ಞಾನದ ಜೊತೆಗೆ ನಮ್ಮ ಸ್ವಂತ ಅನುಭವಗಳಿಂದ ಬಂದ ಅನುಭವ ಜ್ಞಾನ ಜೊತೆಯಾದರೆ ಮಾತ್ರ ಅರಿವು ಪ್ರಜ್ಞೆ ತಿಳುವಳಿಕೆ ಮೂಡುತ್ತದೆ.  ಶರಣ ಬಾಲ ಬೊಮ್ಮಣ್ಣ  ಈ ವಚನದಲ್ಲಿ ಅರ್ಥಪೂರ್ಣ ಉದಾಹರಣೆ ಮೂಲಕ  ಗಹನವಾದ ವಿಚಾರವನ್ನು ಸುಲಭವಾಗಿ ತಿಳಿಸಿದ್ದಾರೆ.

ಈ ವಚನ ಶಿವಯೋಗದ ಅಂಗ ಲಿಂಗ ಸಮರಸದ ಸಾಧನೆಗೆ "ಚಿತ್ತಶುದ್ಧಿಯ" ಅವಶ್ಯಕತೆಯನ್ನು ತಿಳಿಸುತ್ತದೆ. ಶುದ್ಧ ಮನವಿಲ್ಲದೆ ಆಧ್ಯಾತ್ಮಿಕ ಸಾಧನೆ ಸಾಧ್ಯವಿಲ್ಲ. ನಮ್ಮ ಅಂತರಾತ್ಮ ಸದಾ ಪರಮಾತ್ಮನನ್ನು ಕೂಡುವ ಹಂಬಲಿನಲ್ಲೇ ಇರುತ್ತದೆ. ಶಿವಯೋಗಿಯು ಮನಸ್ಸನ್ನು ಶುದ್ಧವಾಗಿ (ಚಿತ್ತಶುದ್ಧಿ) ಇಟ್ಟುಕೊಂಡರೆ ಅದು ತಿಳಿ ನೀರಿನಂತೆ ಪಾರದರ್ಶಕವಾಗಿ ಒಳಗಿರುವ ಪರಮಾತ್ಮನ ಅಂಶವಾಗಿರುವ ಆತ್ಮದ ದರ್ಶನ ವಾಗುತ್ತದೆ. ಅದಕ್ಕೇ ಸಾಧನೆಯ ಜೊತೆಯಲ್ಲಿಯೇ ಮನದಲ್ಲಿ ತುಂಬಿಕೊಂಡಿರುವ ಕಸ ಕಡ್ಡಿಯಾದ ಅಶುದ್ಧ ವಿಚಾರಗಳನ್ನು ಮೂಢ ನಂಬಿಕೆಗಳನ್ನು ಅಜ್ಞಾನವೆಂಬ ಅಣವ ಮಲಗಳನ್ನು ತೆಗೆದು ಹೊರಗೆ ಹಾಕಬೇಕು ಎಂದು ಬಾಲಬೊಮ್ಮಣ ಶರಣರು ತಿಳಿ ಹೇಳಿದ್ದಾರೆ. ಶಿವಯೋಗ ಸಾಧನೆಗೆ, ಆತ್ಮಲಿಂಗ ದರ್ಶನಕ್ಕೆ  ಇಷ್ಟಲಿಂಗ ಪೂಜೆ ಮತ್ತು ಲಿಂಗಯೋಗ ಆಚರಣೆಗಳು  ಚೂಪಾದ ಹರಿತ ಕತ್ತಿ ಯಂತೆ ನಮ್ಮ ಅಂತರಂಗದ  ಆಳಕ್ಕೆ ಇಳಿಯುತ್ತವೆ.   ಜ್ಞಾನ ಅರಿವು ಅನುಭವಗಳು ನಮ್ಮಲ್ಲಿಯೆ ಅಡಗಿರುವ  ಮಾಯೆಯಿಂದ ಉಂಟಾದ ಅಜ್ಞಾನವನ್ನು ತೆಗೆಯುವ ಮೊಂಡಗತ್ತಿಯಂತೆ  ಹೊರಗೆ ತೆಗೆದು ಹಾಕುತ್ತವೆ. ಈ ಎರಡೂ ಕ್ರಿಯೆಗಳು ಚಿತ್ತಶುದ್ಧಿ ಮಾಡಿ ಆತ್ಮದರ್ಶನಕ್ಕೆ ದಾರಿಯಾಗುತ್ತವೆ.

*ಶರಣ ಪರಿಚಯ:*
*ಬಾಲಬೊಮ್ಮಣ್ಣ*
ಈ ಮಹಾ ಶಿವಶರಣರ ಕಾಲ ಹನ್ನೆರಡನೆಯ ಶತಮಾನ.  ‘ವೀರಶೂರ ರಾಮೇಶ್ವರಲಿಂಗ’ಎಂಬ ಅಂಕಿತದಲ್ಲಿ ವಚನಗಳನ್ನು ಬರೆದಿರುತ್ತಾರೆ. ಸಿದ್ಧರಾಮ ಶರಣರು ಬಾಲಬೊಮ್ಮಣ್ಣವರನ್ನು ತಮ್ಮ ಅಣ್ಣನಂತೆ ಕಾಣುತ್ತಿದ್ದರು ಸಿದ್ಧರಾಮಯ್ಯನವರು ಸೊನ್ನಲಾಪುರದಲ್ಲಿ ಗುಡಿಯನ್ನು ಕಟ್ಟಿಸಿ, ಲಿಂಗಪೂಜೆ ಮಾಡುತ್ತಿದ್ದರು. ಆಗ ಬಾಲ ಬೊಮ್ಮಣ್ಣ ಪ್ರತಿಷ್ಡೆ ಮಾಡಿದ ಲಿಂಗಕ್ಕೆ ಪೂಜೆ ಮಾಡಲು ಹಣವಿಲ್ಲದೆ ಮರುಗುತ್ತಿದ್ದರು. ಇದನ್ನು ಗಮನಿಸಿದ ಸಿದ್ಧರಾಮಯ್ಯನವರು ಹಾರೆ, ಗುದ್ದಲಿ ಕೊಟ್ಟು ಅಂಗಳದಲ್ಲಿ ಅಗೆಯಲು ಹೇಳಿದರು. ಬೊಮ್ಮಣ್ಣನವರು ಅಂಗಳ ಅಗೆಯುವಾಗ ಅವರಿಗೆ ಕೊಪ್ಪರಿಗೆಯಷ್ಟು ಬಂಗಾರ ಸಿಕ್ಕಿತು. ಈ ಸಂಪತ್ತಿನಿಂದ ಬಾಲಬೊಮ್ಮಣ್ಣನವರು ಗುಡಿಯನ್ನು ಕಟ್ಟಿ ಲಿಂಗಪೂಜೆ ಮಾಡುತ್ತಾ ಸುಖವಾಗಿದ್ದರು.
 17 ದೇವಾಲಯಗಳನ್ನು, 17 ಯೋಗಲಿಂಗಗಳನ್ನು ಪ್ರತಿಷ್ಠೆ ಮಾಡಿ ಪೂಜಿಸಿದರೆಂಬ ವಿವರಗಳಿವೆ.

ಗಣಸಹಸ್ರ ನಾಮದಲ್ಲಿ ಶರಣ ಬಾಲಬೊಮ್ಮಣ್ಣ ರ  ಹೆಸರು ಬರುತ್ತದೆ. ರಾಘವಾಂಕನ ಸಿದ್ಧರಾಮ ಚರಿತ್ರೆಯಲ್ಲೂ ಇವರ ಬಗ್ಗೆ ವಿವರಗಳಿವೆ.ಭೈರವೇಶ್ವರ ಕಾವ್ಯದ ಕಥಾಸೂತ್ರ ರತ್ನಾಕರದಲ್ಲಿ ಇವರ ಕಥೆಯ ಉಲ್ಲೇಖವಿದೆ. 
ವಿಡಂಬನೆಯು ಬಾಲಬೊಮ್ಮಣ್ಣನವರ ವಚನದ ಜೀವಾಳವಾಗಿದೆ. ಸರ್ವಸಂಗ ಪರಿತ್ಯಾಗ ಮಾಡಿ ಏಕಾಂಗಿಯಾಗಿ ಸಾಧನೆ ಮಾಡಬೇಕು. ಅರಿವಿನ ಕುರುಹಾದ ಇಷ್ಟಲಿಂಗವನ್ನು ಉಭಯ ಭೇದವಿಲ್ಲದೆ ನಂಬಬೇಕು. ಗುರುಲಿಂಗ, ಶಿವಲಿಂಗ, ಜಂಗಮಲಿಂಗದ ಒಳಗನರಿದು ಸಮರಸವಾದ ಗುಣವನ್ನು ಸಂಪಾದಿಸಿಕೊಳ್ಳಬೇಕು ಎಂದಿದ್ದಾರೆ ಬಾಲಬೊಮ್ಮಣ್ಣ. ಇವರು ಅಷ್ಟಾವರಣದ ತತ್ತ್ವಾನುಬಾವವನ್ನು ನೋಡು ನೋಡುತ್ತಲೆ ಅನುಭವಿಸಿದ್ದಾರೆ. ಸಾಮಾಜಿಕ ಬದುಕಿಗಿಂತ  ಧಾರ್ಮಿಕಾಚರಣೆಯ ಬದುಕೆ ಇವರಿಗೆ ಹೆಚ್ಚು ಪ್ರಿಯವಾಗಿತ್ತು. ಇಂಥವರ ಆದರ್ಶಗುಣಗಳನ್ನು ಎಲ್ಲರೂ ಅಳವಡಿಸಿಕೊಳ್ಳುವುದರಿಂದ ಶಿವಾರ್ಚನೆ ಮಾಡಿದಷ್ಟೇ ಪುಣ್ಯ ಬರುತ್ತದೆ.
-✍️ Dr Prema Pangi
#ಪ್ರೇಮಾ_ಪಾಂಗಿ
#ಬಾಲ_ಬೊಮ್ಮಣ್ಣ,
#ಕನ್ನಗತ್ತಿ_ಮಣ್ಣ_ಕೆಡಹಿದ_ಬಳಿಕ 
Picture post designed and created by me. Hope you all will like it. A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma