ವಚನ ದಾಸೋಹ

#ವಚನ :
#ಲಂಚವಂಚನಕ್ಕೆ ಕೈಯಾನದಭಾಷೆ; ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ
ನಾನು ಕೈ ಮುಟ್ಟಿ ಎತ್ತಿದೆನಾದರೆ 
ನಿಮ್ಮಾಣೆ ನಿಮ್ಮ ಪ್ರಮಥರಾಣೆ.
ಅದೇನು ಕಾರಣವೆಂದರೆ, ನೀವಿಕ್ಕಿದ ಬಿಕ್ಷದಲ್ಲಿಪ್ಪೆನಾಗಿ 
ಇಂತಲ್ಲದೆ ನಾನು ಅಳಿಮನವ ಮಾಡಿ ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ,
ನೀನಾಗಲೆ ಎನ್ನ ನರಕದಲ್ಲಿ ಅದ್ದಿ ನೀನೆದ್ದು ಹೋಗಾ ಶಂಭುಜಕ್ಕೇಶ್ವರಾ.
- ಶರಣೆ ಸತ್ಯಕ್ಕ
ಅರ್ಥ:
 ಭ್ರಷ್ಟಾಚಾರ ಮಾಡುವುದು, ಪರರಿಗೆ ವಂಚನೆ ಮಾಡುವುದು, ಪರಧನ, ಪರರ ವಸ್ತುಗಳ ಆಶೆ ಪಡುವುದು ಶರಣರ ಲಕ್ಷ್ಮಣಗಳಲ್ಲ. ಇದರ ಕುರಿತಾಗಿ  ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಶರಣೆ ಸತ್ಯಕ್ಕ ತನ್ನ ವಚನದಲ್ಲಿ ವಿವೇಚಿಸಿದ್ದಾಳೆ. 

*ಲಂಚವಂಚನಕ್ಕೆ ಕೈಯಾನದಭಾಷೆ*

 ಲಂಚವಂಚನಕ್ಕೆ ಕೈಯಾನದ ಭಾಷೆ ಅಂದರೆ   ಅಧಿಕಾರದ ದುರುಪಯೋಗ ಮಾಡಿಕೊಂಡು ವೇತನಕ್ಕಿಂತ ಹೆಚ್ಚು ಗಳಿಸುವುದು, ದುಡಿಯದೆ ಪರರ ಹಣಕ್ಕೆ ಆಸೆ ಮಾಡುವುದು,  ವಂಚನೆ ಮಾಡಿ ಹಣ ಗಳಿಸುವುದು ಹೀಗೆ ಒಟ್ಟಾರೆ ಅನ್ಯಾಯದಿಂದ ಹಣಗಳಿಸುವುದು  ಇದಕ್ಕೆಲ್ಲ ಕೈ ಒಡ್ಡುವದಿಲ್ಲವೆಂಬ  ಭಾಷೆ (ಆಣೆ) ತನ್ನದು ಎನ್ನುತ್ತಾಳೆ  ಕಸ ಗುಡಿಸುವ ಕಾಯಕದ ಶ್ರೇಷ್ಟ ಶರಣೆ ಸತ್ಯಕ್ಕ. ಲಂಚದ ಹಾಗೂ ವಂಚನೆಯ ವಿರುದ್ದ ಪ್ರತಿಭಟಿಸುತ್ತಾಳೆ. ಸಮಾಜದಲ್ಲಿ ಪ್ರಾಮಾಣಿಕ ವ್ಯಕ್ತಿತ್ವ ನಿರ್ಮಾಣ ಮಾಡಿತ್ತು ಅಂದಿನ ಕಾಯಕ ಚಳುವಳಿ.  ತನ್ನ ನಿತ್ಯ ಕಾಯಕದಲ್ಲಿ ಶಿವನನ್ನು ಕಂಡಂಥಹ ಈಕೆ ಶುದ್ಧ ಕಾಯಕದ ಪ್ರತಿನಿಧಿಯಾಗಿದ್ದಾಳೆ.

*ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದರೆ
ನಾನು ಕೈ ಮುಟ್ಟಿ ಎತ್ತಿದೆನಾದರೆ ನಿಮ್ಮಾಣೆ ನಿಮ್ಮ ಪ್ರಮಥರಾಣೆ.*

ಬಟ್ಟೆಯಲ್ಲಿ ಬೆಲೆಯುಳ್ಳ ಬಂಗಾರ ಆಭರಣ ವಸ್ತ್ರ ದಾರಿಯಲ್ಲಿ ಬಿದ್ದಿದ್ದರೂ ನಾನು ಕೈಯಿಂದ ಮುಟ್ಟುವುದಿಲ್ಲವೆಂದು ಆಣೆಮಾಡುತ್ತಾಳೆ. ಅವಳ ಇಷ್ಟದೇವ ಸಾಕ್ಷಾತ್ ಶಂಭುಜಕ್ಕೇಶ್ವರ ಮತ್ತು ಶರಣಾದಿ ಪ್ರಮಥರ ಹೆಸರಿನಲ್ಲಿ ಆಣೆ (ಪ್ರತಿಜ್ಞೆ) ಮಾಡುತ್ತಾಳೆ.

*ಅದೇನು ಕಾರಣವೆಂದರೆ,ನೀವಿಕ್ಕಿದ ಬಿಕ್ಷದಲ್ಲಿಪ್ಪೆನಾಗಿ 
ಇಂತಲ್ಲದೆ ನಾನು ಅಳಿಮನವ ಮಾಡಿ ಪರದ್ರವ್ಯಕ್ಕೆ ಆಸೆ ಮಾಡಿದೆನಾದರೆ,
ನೀನಾಗಲೆ ಎನ್ನ ನರಕದಲ್ಲಿ ಅದ್ದಿ ನೀನೆದ್ದು ಹೋಗಾ ಶಂಭುಜಕ್ಕೇಶ್ವರಾ.*

ತನಗೆ ಈ ಪ್ರಾಮಾಣಿಕತೆ ಹೇಗೆ ಬಂದಿತೆಂಬುದನ್ನು ಸತ್ಯಕ್ಕ ಕಾರಣ ಕೊಡುತ್ತಾಳೆ. ಪರಮಾತ್ಮನಲ್ಲಿ ಮತ್ತು ಕಾಯಕದಲ್ಲಿ ಅಚಲ ನಂಬಿಕೆ ಇರುವದರಿಂದ  ನಾಳಿನ ಭಯ ಇಲ್ಲ. ಅವನು ಇಟ್ಟ ಹಾಗೆಯೇ ಇರುವುದರಲ್ಲಿ ಅದೇ ದೇವರ ಪ್ರಸಾದವೆಂದು(ಬಿಕ್ಷದಲ್ಲಿ)  ಸ್ವೀಕರಿಸಿ ಸಂತೃಪ್ತಿ ಹೊಂದಿದ್ದೇನೆ. ಸಣ್ಣ ಹೀನ ಮನದಿಂದ ಪರ ಧನಕ್ಕೆ ಆಸೆ ಪಟ್ಟರೆ, ನ್ಯಾಯ ನೀತಿ ಬಿಟ್ಟು ತಪ್ಪಿ ನಡೆದರೆ, ಇಷ್ಟ ದೇವ ಶಂಭುಜಕ್ಕೇಶ್ವರ ನರಕದ ಶಿಕ್ಷೆ ವಿಧಿಸಲಿ ಎನ್ನುವ ನಿಷ್ಟುರ ನಿಲುವು ಅವಳದು. ಅನ್ಯಾಯದ ಧನ ಸಂಪಾದನೆಯಿಂದ ದೂರವಿರಬೇಕು.  ಅದುವೇ ಬಸವಾದಿ ಪ್ರಮಥರ ಪರಂಪರೆ. ಅಂಥ ಶರಣರ ಆಣೆ ಮಾಡುತ್ತ ದೃಢ ನಿಶ್ಚಯದಿಂದ ನುಡಿಯುತ್ತಾಳೆ. ತಾನು ಸತ್ಯ ಶುದ್ಧಕಾಯಕದ ಮೂಲಕವೇ ಬದುಕುವುದಾಗಿ ವಚನ ನೀಡುತ್ತಾಳೆ. ಸತ್ಯ, ನ್ಯಾಯದ ಪರ ಅವಳ ಒಲವು.  ಉನ್ನತ ವಿಚಾರಗಳ ಭ್ರಷ್ಟಾಚಾರ ವಿರೋಧಿ ನಿಲುವು ಅವಳನ್ನು ಶ್ರೇಷ್ಟ ಶರಣೆಯನ್ನಾಗಿ ಮಾಡಿತು.

ತಾನು ನಂಬಿದ ಶರಣರ ಆದರ್ಶ ಮೌಲ್ಯಗಳನ್ನು ಜೀವನದಲ್ಲಿ ಪಾಲನೆ ಮಾಡುತ್ತಾ ಶರಣೆ ಸತ್ಯಕ್ಕ ಒಬ್ಬ ಶ್ರೇಷ್ಠ ಅದ್ಭುತ ಕಾಯಕಯೋಗಿಯಾಗಿದ್ದಳು.
ನಾವು ಶರಣರ ಬದುಕಿನಿಂದ ಕಲಿಯುವುದು ಬೇಕಾದಷ್ಟಿದೆ. ಶರಣರ ಆದರ್ಶಗಳು ನಮ್ಮ ಜೀವನದ ಉಸಿರಾಗಬೇಕು.
- ✍️Dr Prema Pangi
#ಪ್ರೇಮಾ_ಪಾಂಗಿ,#ಶರಣೆ_ಸತ್ತ್ಯಕ್ಕ
#ಲಂಚವಂಚನಕ್ಕೆ_ಕೈಯಾನದಭಾಷೆ
Picture post created by me. Hope you all will like it. A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma