ವಚನ ದಾಸೋಹ

*ವಚನ*:
ಅರ್ಚನೆ ಪೂಜೆ ನೇಮವಲ್ಲ
ಮಂತ್ರ-ತಂತ್ರ ನೇಮವಲ್ಲ
ಧೂಪ-ದೀಪದಾರತಿ ನೇಮವಲ್ಲ
ಪರಸ್ತೀ-ಪರದೈವಗಳಿಗೆರಗದಿಪ್ಪುದೇ ನೇಮ
ಶಂಭುಜಕೇಶ್ವರನಲ್ಲಿ ಇವನ್ನು ಕಾಣಿರಣ್ಣಾ!
ಇವೇ ನಿತ್ಯನೇಮ.
-ಶರಣೆ ಸತ್ಯಕ್ಕ

*ಅರ್ಥ*:
ಇದು ಪೂಜೆಯ ಬಾಹ್ಯಾಡಂಬರವನ್ನು ವಿಮರ್ಶಿಸುವ ವಚನ. ಪರಿಪೂರ್ಣ ಭಕ್ತಿಯು  ಮೂರು ಅಂಗಗಳನ್ನು ಒಳಗೊಂಡಿದೆ, ಆ ಅಂಗಗಳೇ ಅರಿವು (ಜ್ಞಾನ), ಆಚಾರ (ಆಚರಣೆಗಳು, ನೇಮಗಳು ) ಮತ್ತು ಅನುಭಾವ (ಲಿಂಗಾಂಗ ಸಾಮರಸ್ಯ).
ದೇವರಿಗೆ ಭಕ್ತನ ಭಕ್ತಿಯ ನಿವೇದನೆಯಾಗುವುದು ಆಚಾರ ಅಥವಾ ನೇಮಗಳಲ್ಲಿ. ಆಚಾರ ಪ್ರಕಟವಾಗುವುದು ಭಕ್ತನ ಬಹಿರಂಗದ ಆಚರಣೆಗಳಲ್ಲಿ. 
ಶರಣೆ ಸತ್ಯಕ್ಕಳ ಈ ವಚನದಲ್ಲಿ ಇಂಥ ಆಚರಣೆಗಳಲ್ಲಿಯ ಬಾಹ್ಯಾಡಂಬರವ ಒಪ್ಪದೇ ಆಚರಣೆಗಳು ಹೇಗೆ ಇರಬೇಕು ಎಂದು ವಿವೇಚಿಸಲಾಗಿದೆ. ಅರ್ಚನೆ, ಪೂಜೆ, ಮಂತ್ರ-ತಂತ್ರ, ಧೂಪ-ದೀಪದಾರತಿ ಇವು ನೇಮವಲ್ಲ. ಗಂಟೆ ಬಾರಿಸಿಕೊಂಡು ಅರ್ಚನೆ, ಪೂಜೆ ಮಾಡುತ್ತ ಮಣ ಮಣ ಎಂದು ಅರ್ಥ ತಿಳಿಯದೇ ಮಂತ್ರ ಉಚ್ಚಾರ ಮಾಡುತ್ತಾ ಕೂಡುವುದು ನೇಮವಲ್ಲ. ಶರಣೆ ಸತ್ಯಕ್ಕ ಅಂತರಂಗದಲ್ಲಿ ಮೋಸ, ದುರಾಸೆ, ದುರಾಲೋಚನೆಗಳ ಸುಳಿಗೆ ಸಿಕ್ಕು, ಬಹಿರಂಗದಲ್ಲಿ ಕೇವಲ ಪೂಜೆ, ಆರ್ಚನೆ, ಮಂತ್ರಗಳ ಜಪಿಸಿದರೆ ಪ್ರಯೋಜನವಿಲ್ಲ ಎಂದು ಹೇಳುತ್ತಾಳೆ. ಪರರ ಹಣಕ್ಕೆ, ಪರಸ್ತ್ರೀಯರ, ಪರದೈವಗಳ ಆಸೆ ಪಡದಿರುವುದೇ ನೇಮ ಅನ್ನುತ್ತಾಳೆ ಶರಣೆ ಸತ್ಯಕ್ಕ. ಬೇರೇ ಯಾರೊ ಮಾಡಿದ್ದಾರೆ ಅಂತ ನೇಮಗಳ ನಿಜವಾದ ಆರ್ಥ ತಿಳಿಯದೇ ಕೇವಲ ಪ್ರತಿಷ್ಠೆಗಾಗಿ ಮಾಡುವ ನೇಮಗಳು ದೇವರಿಗೆ ಸಲ್ಲವು. ವ್ಯಕ್ತಿಯ ಅಧ್ಯಾತ್ಮ ಸಾಧನೆಗೆ ಪೂರಕವಾಗವ ಹಲವು ವ್ರತ-ನೇಮಗಳಲ್ಲಿ ಅಜ್ಞಾನದಿಂದಾಗಿ ಅಂಧಾನುಕರಣೆಗಳು ಸೇರಿಕೊಂಡು ವ್ರತ-ನೇಮಗಳ ಮೂಲ ಉದ್ದೇಶವನ್ನೇ ಮರೆಸಿಬಿಟ್ಟಿವೆ. ಶರಣೆ ಸತ್ಯಕ್ಕ ಇವನ್ನೆಲ್ಲ ಖಂಡಿಸಿದ್ದಾರೆ; ಅಲ್ಲದೆ ನಿಜವಾದ ನೇಮ ಹೇಗಿರಬೇಕೆಂದೂ ಹೇಳಿದ್ದಾರೆ. ಅವರ ದೃಷ್ಟಿಯಲ್ಲಿ ವ್ರತವೆಂದರೆ ಪೂಜೆ-ಪುನಸ್ಕಾರಗಳಲ್ಲ. ಹಿಂಸೆ, ಹುಸಿ, ಕಳವು ಮಾಡದಿರುವುದು ವ್ರತ. ನೇಮ ವ್ರತಗಳಿಂದ ನಮ್ಮ ಆತ್ಮ ಮತ್ತು ಮನಸ್ಸು ಪರಿಶುದ್ಧವಾಗಬೇಕು. ಆತ್ಮ ಶುದ್ಧಿಯಿಂದ ಆಶೆಯನ್ನು ಗೆಲ್ಲುವುದು, ಇಂದ್ರಿಯಗಳನ್ನು ನಿಗ್ರಹಿಸಬೇಕು. ಆ ಮೂಲಕ ಆಧ್ಯಾತ್ಮಿಕ ಪ್ರಗತಿ ಸಾಧಿಸುವುದೇ ವ್ರತನೇಮಗಳ ಉದ್ದೇಶವಾಗಬೇಕು. ಅಂತರಂಗದ ಭಾವ ಪರಿಶುದ್ಧತೆಯಾಗಬೇಕು. ಅಹಂಕಾರವಳಿದು ಸರಳತೆ ಹಾಗು ನಿರಾಡಂಬರತೆಗಳನ್ನು ಅಳವಡಿಸಿಕೊಳ್ಳಬೇಕು. ಸತ್ಯ ನುಡಿಯುವದೇ ನೇಮ, ವಂಚನೆ ಮಾಡದಿರುವುದೇ ನೇಮ, ತನ್ನನ್ನು ತಾನು ಅರಿಯುವುದೇ ನೇಮ. ಪರಸ್ತ್ರೀ, ಪರದೈವ ಒಪ್ಪದಿರುವದೇ ನೇಮ. ಅರ್ಥವಿಲ್ಲದ ನೇಮಗಳನ್ನು ಲಿಂಗಾಯತ ಧರ್ಮ ಒಪ್ಪುವುದಿಲ್ಲ. ಅವು ಲಿಂಗಾಯತ ಧರ್ಮಕ್ಕೆ, ಷಟಸ್ಥಲಕ್ಕೆ ಹೊರಗು.
 ತಮ್ಮನ್ನು ತಾವು ನೀತಿವಂತರನ್ನಾಗಿ, ಸತ್ಯವಂತರನ್ನಾಗಿ, ಸದಾಚಾರ ನಡತೆಯುಳ್ಳವರನ್ನಾಗಿ ರೂಪಿಸಿಕೊಳ್ಳುವ ಮೂಲಕ ಜೀವನದ ಪರಿಪೂರ್ಣತೆಯೆಡೆಗೆ ಪಯಣಿಸಲು ಸಹಕಾರಿಯಾಗಲು ರೂಪಿಸುವ ನೇಮಗಳೇ  ನಿಜವಾದ ನೇಮಗಳು. ಅಂಥಹ ನಿಯಮಗಳನ್ನು ಅಳವಡಿಸಿಕೊಂಡರೆ ನಾವು ಶರಣರಾಗಿ ಪರಿಪೂರ್ಣತೆಯನ್ನು  ಸಾಧಿಸಲು ಸಾಧ್ಯ.
 ತಮ್ಮ ಬದುಕಿನ ಆದರ್ಶಗಳ ಪಾಲನೆ ಯೊಂದಿಗೆ ಸಮಾಜದ ಅಂಕುಡೊಂಕುಗಳನ್ನು ವಚನಗಳ ಮೂಲಕ ತಿದ್ದಿದ್ದಾರೆ ನಮ್ಮ 
ಶರಣ ಶರಣೆಯರು. ಶರಣ-ಶರಣೆಯರ ವಚನಗಳು ಜನರನ್ನು  ಸಜ್ಜನರ ರೀತಿಯಲ್ಲಿ ಬದುಕುವಂತೆ ಮಾರ್ಗದರ್ಶನ ಮಾಡುತ್ತವೆ. ಬಸವಾದಿ ಶರಣರು ಜನರಿಗೆ, ಜನರಾಡುವ ಭಾಷೆಯಲ್ಲಿಯೇ ವಚನಗಳ ಮುಖಾಂತರ ಶರಣ ಪಥದ ತಿಳುವಳಿಕೆಯನ್ನು ನೀಡಿದರು. 
 
In this vachana Sharane Satyakka says following the rituals blindly is  meaningless. Sharanas advocate not to covet someone else's wife.They also strongly believe in
only one God for a true devotee. Lingayat dharma firmly advocates monotheism. Shiva in Nirakar form is the only God  they should worship. Istaling is the sign (ಕುರುಹು) of Nirakar Nirguna Nirmaya Niravalamba Shiva.

*ಶರಣೆ ಸತ್ಯಕ್ಕ ಪರಿಚಯ*:
ಕಾಲ : ಸು. 1160.
ಒಬ್ಬ ಪ್ರಾಮಾಣಿಕ ಸತ್ಯ ಸಾಧಕಿ. ಅಣ್ಣ ಬಸವಣ್ಣರ ಸಮಕಾಲೀನ ಶರಣೆ. ಅವಿವಾಹಿತೆಯಾಗಿಯೇ ಉಳಿದು ಆಧ್ಯಾತ್ಮ ಸಾಧನೆಗೈದ ಶಿವಶರಣೆ. ಸತ್ಯಕ್ಕ  ಶಿವಶರಣೆ ಹಾಗೂ ವಚನಕಾರ್ತಿ. ಶಿವಭಕ್ತರ ಮನೆಯ ಅಂಗಳ ಕಸಗುಡಿಸುವುದು ಈಕೆಯ ಕಾಯಕ. 'ಶಂಭುಜಕ್ಕೇಶ್ವರ' ಅಂಕಿತದಲ್ಲಿ ೨೭ ವಚನಗಳು ಲಭಿಸಿವೆ. ಶಿವಪಾರಮ್ಯ, ಜೊತೆಗೆ ಸದ್ಭಕ್ತರ ಮಹಿಮೆ, ಸತಿ-ಪತಿ ಭಾವ, ಸದಾಚಾರದಲ್ಲಿ ನಡೆಯುವ ಗುರು-ಶಿಷ್ಯ-ಜಂಗಮರ ಗುಣಲಕ್ಷಣ, ಡಾಂಭಿಕ ಭಕ್ತರ ಟೀಕೆ, ಸ್ತ್ರೀಪುರುಷ ಸಮಾನತೆಯ ಸಂದೇಶ ಇಲ್ಲಿ ವ್ಯಕ್ತವಾಗಿದೆ.ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪದ ಹಿರೇಜಂಬೂರಿನವಳು. ಈ ಊರಿನಲ್ಲಿ ಈಕೆಯದು ಎನ್ನಲಾದ ಒಂದು ದೇವಾಲಯವಿದೆ.
ಈಕೆಯದು ಏಕದೇವತಾನಿಷ್ಠೆ. ಇದರ ವಿವರಗಳನ್ನು ಶಿವತತ್ತ್ವ ಚಿಂತಾಮಣಿ, ಸೋಮನಾಥಪುರಾಣ, ಭೈರವೇಶ್ವರಕಾವ್ಯದ ಕಥಾಮಣಿಸೂತ್ರರತ್ನಾಕರ, ಚೆನ್ನಬಸವಪುರಾಣ ಮುಂತಾದ ಗ್ರಂಥಗಳಲ್ಲಿ ಕಾಣಬಹುದು.
ಈಕೆಯ 29 ವಚನಗಳು ದೊರಕಿವೆ. ಶಂಭುಜಕ್ಕೇಶ್ವರ ಎಂಬುದು ಇವಳ ವಚನಗಳ ಅಂಕಿತ. ಈಕೆಯ ವಚನಗಳು ಸರಳ ಹಾಗೂ ನೇರ ನುಡಿಗಳಲ್ಲಿ ಮೂಡಿಬಂದಿವೆ. ಅಂತರಂಗದಲ್ಲೊಂದು ಬಹಿರಂಗದಲ್ಲೊಂದು ರೀತಿಯಲ್ಲಿ ನಡೆಯುವವರನ್ನು ಈಕೆ ಕಟುವಾಗಿ ಟೀಕಿಸಿದ್ದಾಳೆ. 
- ✍️Dr Prema Pangi #ಪ್ರೇಮಾ_ಪಾಂಗಿ,#ಶರಣೆಸತ್ಯಕ್ಕ,
#ಅರ್ಚನೆ_ಪೂಜೆ_ನೇಮವಲ್ಲ
Picture post created by me.  A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma