ವಚನ ದಾಸೋಹ

*ವಚನ*:
ಕಣ್ಣು ತನ್ನ ತಾ ಕಾಣಲರಿಯದಂತೆ,
ಹಣ್ಣು ತನ್ನ ರುಚಿಯ ತಾನರಿಯದಂತೆ,
ಉರಿ ತನ್ನ ಉಷ್ಣವ ತಾನರಿಯದಂತೆ,
ಬಯಲು ತನ್ನ ತೆರಪ ತಾನರಿಯದಂತೆ,
ಲಿಂಗೈಕ್ಯ ತನ್ನೊಳಗಳ ಲಿಂಗವ ತಾನರಿಯದಂತೆ,
ನಾ ಸತ್ತನೆಂಬ ಹೆಣನಿಲ್ಲವಾಗಿ.
ತನ್ನ ಮರೆದು ಲಿಂಗವ ಮೆರೆದ ಲಿಂಗೈಕ್ಯರು
ಸೌರಾಷ್ಟ್ರ ಸೋಮೇಶ್ವರನಲ್ಲಿ, ಅನುಭಾವವ ಮಾಡಲಿಲ್ಲ;
ನುಡಿದು ಹೇಳಲಿಲ್ಲ; ನಡೆದು ತೋರಲಿಲ್ಲ. / 103
- ಶರಣ ಆದಯ್ಯ
ಭಾವಾರ್ಥ: 
ಶರಣ ಆದಯ್ಯನವರು ಈ ವಚನದಲ್ಲಿ "ಅನುಭಾವ" ಪದದ ಅರ್ಥ ತಿಳಿಸಿದ್ದಾರೆ. ' ಅನುಭಾವ  ಇದು ಒಂದು ಲಿಂಗಾಯತ ಧರ್ಮದಲ್ಲಿ ಶರಣರು ಬಳಿಸಿದ ವಿಶಿಷ್ಟವಾದ ವಿಶೇಷ ಪದ.

*ಕಣ್ಣು ತನ್ನ ತಾ ಕಾಣಲರಿಯದಂತೆ ,*

ಕಣ್ಣು ಸುತ್ತಲಿನ ಜಗತ್ತನ್ನು ನೋಡುವದು. ಎಲ್ಲವನ್ನು ನೋಡಿದರೂ ತನ್ನನ್ನು ತಾನೇ ನೋಡಲು ಕಣ್ಣಿಗೆ ಸಾಧ್ಯವಿಲ್ಲ.

  *ಹಣ್ಣು ತನ್ನ ರುಚಿಯ ತಾನರಿಯದಂತೆ ,*

ಹಣ್ಣು ತಿಂದು ಸವಿದವರಿಗೆ ಹಣ್ಣಿನ ರುಚಿ ಗೊತ್ತಾಗುವುದು ಆದರೆ ಹಣ್ಣಿಗೆ ತನ್ನ ರುಚಿ ಗೊತ್ತಾಗುವುದಿಲ್ಲ.

  *ಉರಿ ತನ್ನ ಉಷ್ಣವ ತಾನರಿಯದಂತೆ ,*

ಉರಿ ಅಥವಾ ಬೆಂಕಿಯ ಬಿಸಿ ಅದರ ಉಷ್ಣತೆ ಸಮೀಪ ಇದ್ದವರಿಗೆ ಗೊತ್ತಾಗುವುದು. ಆದರೆ ಅದಕ್ಕೆತನ್ನ ಉಷ್ಣತೆಯ ಅರಿವಿರುವುದಿಲ್ಲ..

*ಬಯಲು ತನ್ನ ತೆರಪ ತಾನರಿಯದಂತೆ ,

ಬಯಲಿಗೆ ತನ್ನೊಳಗಿನ ಖಾಲಿತನ ಅರಿಯುವುದಿಲ್ಲ. 

*ಲಿಂಗೈಕ್ಯ ತನ್ನೊಳಗಳ ಲಿಂಗವ ತಾನರಿಯದಂತೆ ,ನಾ ಸತ್ತೆನೆಂಬ ಹೆಣನಿಲ್ಲವಾಗಿ.*

ಸತ್ತವರನ್ನು ಲಿಂಗೈಕ್ಯನಾಗುವುದು ಲಿಂಗಾಯತ ಧರ್ಮದ ಪರಿಭಾವನೆಯ ಪರಿಭಾಷೆ. ಲಿಂಗೈಕ್ಯರಾದವರಿಗೆ ಅಂದರೆ ಸತ್ತವರಿಗೆ ತನ್ನ ಒಳಗಿನ ಲಿಂಗದ ಅರಿವು ಆಗುವದಿಲ್ಲ.ತಾನು ಸತ್ತಿದ್ದೇನೆ ಎಂದು ಹೆಣಕ್ಕೆ ಅರಿವಾಗುವುದಿಲ್ಲ. ಮತ್ತು ಅದು ಹಾಗೆ ಹೇಳಲು ಸಾಧ್ಯವಿಲ್ಲ.

 *ತನ್ನ  ಮರೆದು ಲಿಂಗವ ಮೆರೆದ ಲಿಂಗೈಕ್ಯರು 
ಸೌರಾಷ್ಟ್ರಸೋಮೇಶ್ವರನಲ್ಲಿ , 
ಅನುಭಾವವ ಮಾಡಲಿಲ್ಲ ;
ನಡೆದು ಹೇಳಲಿಲ್ಲ ,ನಡೆದು ತೊರಲಿಲ್ಲ .*

ತನ್ನನ್ನು ಮರೆತು ಲಿಂಗವೇ ಆದವರು.ಎಂದರೆ ನಿಜೈಕ್ಯರಾದ   ಶರಣರು ಲಿಂಗವನ್ನೇ ಮೆರೆದವರು. ಈ ರೀತಿ ಲಿಂಗೈಕ್ಯ ಆದವರು ತಾವು ಸಾಧಿಸಿದ ಅನುಭಾವವನ್ನು ನಡೆದು, ನುಡಿದು ತೋರಿಸಲಿಲ್ಲ.
ಭಾವ:
ಸಾವಿನ ಅನುಭವದ ಬಗೆಗೆ ಬದುಕಿರುವವರು ಆಡುವ ಯಾವ ಮಾತೂ ಪ್ರಮಾಣ ಅಥವಾ ಖಚಿತವಲ್ಲ. ಏಕೆಂದರೆ ಸತ್ತವರು ಸತ್ತ ನಂತರ ಏನಾದರೆಂಬುದು ಯಾರಿಗೂ ತಿಳಿದಿಲ್ಲ. ನಿಖರವಾಗಿ ಸತ್ಯಾ ಸತ್ಯತೆ ತಿಳಿಯದೇ  ಆಡುವ ಮಾತುಗಳೆಲ್ಲ ಊಹೆಯ ಕಲ್ಪನೆಗಳು. ಶರಣ ಆದಯ್ಯ ಈ ಪರಿಭಾವನೆಯನ್ನೇ ನಿಷ್ಠುರವಾಗಿ ನುಡಿದಿದ್ದಾರೆ. ತನ್ನ ಮರೆದು ಲಿಂಗವ ಮೆರೆದ ಲಿಂಗೈಕ್ಯರು ಸೌರಾಷ್ಟ್ರ ಸೋಮೇಶ್ವರನಲ್ಲಿ ಅನುಭಾವವ ಮಾಡಲಿಲ್ಲ, ನುಡಿದು ಹೇಳಲಿಲ್ಲ, ನಡೆದು ತೋರಲಿಲ್ಲ. 
 ಅನುಭಾವದ ನಿಷ್ಠುರ ಪ್ರಖರತೆಯಲ್ಲಿ ಬಾಳಿದವರು ಶರಣರು. ಅಧ್ಯಾತ್ಮದ ಪರಿಭಾವನೆ, ಅನುಭಾವವೆನ್ನುವುದು ಸಾವಿನ ಅನುಭವದಂತೆ. ಅನುಭಾವವೆಂಬುದು ಬರೀ ಬಾಯಿಮಾತಿನಲ್ಲಿ  ಹೇಳಿ ನುಡಿದು ಮೆರೆವ ಅಗ್ಗದ ವಸ್ತು ಅಲ್ಲ.  ನಡೆದು ತೋರುವುದಕ್ಕೆ ಪಾತ್ರಾಭಿನಯವಲ್ಲ. ಅದು ನಡೆ ನುಡಿಗೆ ಒಳಗಾಗದ ಬಯಲು.  ಏಕೆಂದರೆ ನಾ ಸತ್ತೆನೆಂಬ ಹೆಣ ಹೇಳುವುದು ಸಾಧ್ಯವಿಲ್ಲ.  

"*ಅನುಭಾವ* " ಎಂಬ ಪದವು ಆಧ್ಯಾತ್ಮಿಕ ಸಾಹಿತ್ಯದಲ್ಲಿ ಕಾಣಿಸಿಗುವ ಪದ. ಡಾಂಭಿಕರಿಗೆ ನಿಲುಕುವ ಮಾತಲ್ಲ, ಮಾತಾಡಲು ಸಂತೆಯ ಸುದ್ದಿಯಲ್ಲ, ಅನುಭಾವವೆಂಬುದು ಅತೀಂದ್ರಿಯ ಅನುಭವ, ನೆಲದ ಮರೆಯ ನಿದಾನದಂತೆ; ಇದ್ದರೂ ಕಾಣುವದಿಲ್ಲ. ಶರಣರು ಅನುಭಾವವನ್ನು  ತಾನಾರೆಂದು ಅರಿಯುವುದು, ನಿಜನಿವಾಸದಲ್ಲಿ ಅರಿವಿನಿಂದ ಅರಸುವುದು, ಲಿಂಗಾಂಗಸಾಮರಸ್ಯ, ಶಿವಜೀವೈಕ್ಯ, ನಿಶ್ಯಬ್ದ ನಿರ್ಭಾವ,  ಅನೀರ್ವಚನೀಯ ಅವರ್ಣನೀಯ.
ಅತೀಂದ್ರಿಯ ಅನುಭವ, ಅಂತಃಸ್ಪುರಣ, ಅಂತಃಪ್ರಜ್ಞೆ , ಜೀವಾತ್ಮ ಪರಮಾತ್ಮರ ಏಕತ್ವ , ಶಿವ -ಜೀವರ ಐಕ್ಯದ ಲಿಂಗಾಂಗ ಸಾಮರಸ್ಯ,  ಬುದ್ದಿ ಮನಸ್ಸುಗಳ ಮೀರಿದ ಒಳ ಅರಿವು ಆತ್ಮಾನುಭವ, ಆತ್ಮಾನುಭೂತಿ ಎಂದು ಅರ್ಥೈಸಿದ್ದಾರೆ . 
ಶಿವಾನುಭವ ಬರೀ ಜ್ಞಾನವಲ್ಲ. ಶಿವಾನುಭವ ವೆಂದರೆ  ಅತೀಂದ್ರಿಯ ಜ್ಞಾನದ ಅರಿವಿನಿಂದ ಸತ್ಯದ ಸ್ವರೂಪವನ್ನ ಅರಿತು ಆಚರಣೆಮಾಡಿ ಒಂದಾಗುವುದು. ಕೊನೆಗೆ ಸತ್ಯ ಸ್ವರೂಪವೇ ಅಥವಾ ಲಿಂಗವೇ ಅಥವಾ ನಿರಾಕಾರ ನಿರ್ಗುಣ ನಿರ್ಮಾಯ ಶಿವನೇ ತಾನಾಗುವ ಸ್ಥಿತಿಗೆ  ತಲುಪಿ ಅನುಭೂತಿ ಪಡೆಯುವದು.
ಇಲ್ಲಿ ಮೂರು ಮುಖ್ಯ ಅಂಶಗಳು : ಲಿಂಗ ( ಪರಮಾತ್ಮ) , ಅಂಗ(ಜೀವಾತ್ಮ) ಮತ್ತು ಲಿಂಗಾಂಗ ಸಾಮರಸ್ಯ ( ಪರಮಾತ್ಮನಿಗೂ ಜೀವಾತ್ಮನಿಗೂ ಆಗುವ ಸಂಭಂದ). ಇವು ಅನುಭಾವದ ಮೂಲ ತಳಹದಿ. ಅದು ಲೌಕೀಕ ಅನುಭವವಲ್ಲ. ಅದನ್ನ ಮೀರಿನಿಂತ ಅಲೌಕೀಕ ಅಥವಾ ಆಧ್ಯಾತ್ಮಿಕ ಅನುಭವ .
ವಿಶ್ಲೇಷಣೆಗೆ ನಿಲುಕಲಾರದ  ಶಬ್ದಗಳಿಗೆ ಅತೀತವೂ ಆದ ಪ್ರಜ್ನೆ. ಅನುಭಾವವು ಈ ಜಗತ್ತಿನಾದ್ಯಾಂತ ಪ್ರವಹಿಸುವ ಅಣುಗಳಲ್ಲಿ ಅಣುವಾಗಿಯೂ, ಮಹತ್ತಿನಲ್ಲಿ ಮಹತ್ತಾಗಿಯೂ ಇರುವ ಸರ್ವಗತ ಸರ್ವಾಂತರ್ಯಾಮಿಯಾದ, ವಿಶ್ವವ್ಯಾಪಿ ಸತ್ಯದ ಸ್ವರೂಪವನ್ನು ಅರಿದು, ಅರಿದ ಅರಿವನ್ನ ಮೀರಿ, ಅನುಭವಿಸಿ ಅದರಲ್ಲೇ ಲೀನವಾಗುವಂತಹದು .ಲಿಂಗವ ನೆನೆದು ಲಿಂಗವೇ ತಾನಾಗಿ ಪರಿಣಮಿಸುತ್ತಾನೆ ಸಾಧಕ. ಅಂಗ ಲಿಂಗಗಳಲ್ಲಿ ಎರಡು ಎಂಬ ಭಾವವಳಿದು ಏಕೋಭಾವ ಮೂಡುತ್ತದೆ.
ಭಿನ್ನ ಭಿನ್ನವೆಂಬ ಪ್ರಾಪ್ತಿ ಅಳಿದು ಅವಿರಳ ಸಮರಸ ಸೌಖ್ಯದ ಶಿವಾದ್ವೈತ ಸಿದ್ಧಿಸುತ್ತದೆ. ನದಿಯೊಳಗೆ ನದಿ ಬೆರೆದಂತಾಗುತ್ತದೆ. ತನು ಮನ ಪ್ರಾಣ ಭಾವಗಳು ನಿವೃತ್ತಿಯಾಗಿ ಲಿಂಗ ಸ್ವರೂಪವಾಗುತ್ತವೆ. ಲಿಂಗಲೀಯ ವಾಗುತ್ತವೆ. ಇದು ಭಾವವಿಲ್ಲದ ಬಯಲು, ಬಯಲಿಲ್ಲದ ಭಾವ.
Translation :
Just as eyes cannot see themselves ,
Just as fruit doesn't know its own taste, 
Just as flame doesn't know its own heat, 
Just as space doesn't know its own expanse, 
Just as lingaiyakya doesn't know the Linga within, 
Just as a corpse cannot say it is dead 
those who have forgotten themselves and displayed the glory of Linga did not discourse the spiritual experience of Sourashtra Someswara, did not speak and did
not show. 
- Sharana Adayya
- ✍️ Dr Prema Pangi
#ಪ್ರೇಮಾ_ಪಾಂಗಿ,#ಶರಣ_ಆದಯ್ಯ
#ಕಣ್ಣು_ತನ್ನ_ತಾ_ಕಾಣಲರಿಯದಂತೆ
.Picture post created by me.A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma