ವಚನ ದಾಸೋಹ
ವಚನ:
#ಅಂತರಂಗದಲ್ಲಿ ಅರಿವಿಲ್ಲದವಂಗೆ
ಬಹಿರಂಗದಲ್ಲಿ ಕ್ರೀಯಿದ್ದು ಫಲವೇನು ?
ಅದು ಕಣ್ಣಿಲ್ಲದವನ ಬಾಳುವೆಯಂತೆ.
ಬಹಿರಂಗದಲ್ಲಿ ಕ್ರೀಯಿಲ್ಲದವಂಗೆ
ಅಂತರಂಗದಲ್ಲಿ ಅರಿವಿದ್ದು ಫಲವೇನು ?
ಅದು ಶೂನ್ಯಾಲಯದ ದೀಪದಂತೆ.
ಅಂತರಂಗದ ಅರಿವು, ಬಹಿರಂಗದ ಕ್ರಿಯೆ-
ಈ ಉಭಯಾಂಗವೊಂದಾಗಬೇಕು.
ಅದೆಂತೆಂದಡೆ : ''ಅಂತರ್ಜ್ಞಾನ ಬಹಿಃಕ್ರಿಯಾ ಏಕೀಭಾವೋ ವಿಶೇಷತಃ'' ಎಂದುದಾಗಿ,
ಅಂತರಂಗದಲ್ಲಿ ಅರಿವು,
ಬಹಿರಂಗದಲ್ಲಿ ಕ್ರೀಯುಳ್ಳ ಮಹಾತ್ಮನೆ
ಭಕ್ತನಪ್ಪ, ಮಹೇಶ್ವರನಪ್ಪ, ಪ್ರಸಾದಿಯಪ್ಪ
ಪ್ರಾಣಲಿಂಗಿಯಪ್ಪ, ಶರಣನೈಕ್ಯನಪ್ಪ.
ನಮ್ಮ ಪರಮಗುರು ಶಾಂತಮಲ್ಲಿಕಾರ್ಜುನ ತಾನೆಯಪ್ಪ.
- ಶರಣ ಕರಸ್ಥಲದ ಮಲ್ಲಿಕಾರ್ಜುನ ದೇವ
ಕರಸ್ಥಲದ ಮಲ್ಲಿಕಾರ್ಜುನ ದೇವ (ಕಾಲ-೧೪೦೯-೧೪೪೭) ಇವರು ಕರಸ್ಥಲ ಪರಂಪರೆಯ ಗುರುಜಂಗಮರು. ಪರಮ ಗುರು ಶಾಂತಮಲ್ಲಿಕಾರ್ಜುನಾ ಅವರ ಅಂಕಿತನಾಮದಲ್ಲಿ ನಾಲ್ಕು ವಚನಗಳು ದೊರೆತಿವೆ.'ಬ್ರಹ್ಮಾದ್ವೈತ ಸಿದ್ಧಾಂತ ಷಟ್ ಸ್ಥಲಾಭರಣ" ಎಂಬ ಕೃತಿಯನ್ನು ಸಂಕಲಿಸಿದ ಈತನ ಜೀವನ ಸಂಗತಿಗಳು ಹೆಚ್ಚಿಗೆ ದೊರೆತಿಲ್ಲ. ಅವುಗಳಲ್ಲಿ ಇಷ್ಟಲಿಂಗದಲ್ಲಿ ನಿಷ್ಟೆಯಿಲ್ಲದವರ ಟೀಕೆ, ಸಂಸಾರದಲ್ಲಿ ಮೈಮರೆತವರ ರೀತಿ, ಅಂತರಂಗದಲ್ಲಿ ಅರಿವಿಲ್ಲದ ಬಹಿರಂಗದ ಕ್ರೀವಂತರ ವಿಮರ್ಶೆ, ಪರಶಿವಯೋಗಿಯ ಸ್ವರೂಪ ವಣ೯ನೆ ಮಾಡಲಾಗಿದೆ.
ಅರ್ಥ:
ಅಂತರಂಗದಲ್ಲಿ ಅರಿವಾಗುವುದು ಎಂದರೆ ಜೀವನದಲ್ಲಿ ಯಾವುದು ಒಳ್ಳೆಯದು ಯಾವುದು ಕೆಟ್ಟದ್ದು; ಯಾವುದು ಸತ್ಯ ಯಾವುದು ಸುಳ್ಳು; ಯಾವುದು ನೀತಿ ಯಾವುದು ಅನೀತಿ; ಯಾವುದು ನ್ಯಾಯ ಯಾವುದು ಅನ್ಯಾಯ “ ಎಂಬುದನ್ನು ತಿಳಿದುಕೊಳ್ಳುವುದು. ಯಾವ ಕಾರ್ಯದಿಂದ ನಮ್ಮ ಅಂತರಂಗದ ಮನಸಾಕ್ಷಿ ಸಂಪ್ರೀತ ಹೊಂದುವುದು; ಯಾವ ಕಾರ್ಯದಿಂದ ನಮ್ಮ ಅಂತರಂಗದ ಮನಸಾಕ್ಷಿ ಚುಚ್ಚುವುದು ಎಂದು ಕಾರ್ಯ ಮಾಡುವ ಮೊದಲು ತಿಳಿಯುವದು.
“ ಬಹಿರಂಗದಲ್ಲಿ ಕ್ರೀ ಇರುವುದು “ ಎಂದರೆ ನಿತ್ಯ ಜೀವನದ ವ್ಯವಹಾರಗಳಲ್ಲಿ ವ್ಯಕ್ತಿಯು ತನಗೆ, ತನ್ನ ಕುಟುಂಬಕ್ಕೆ , ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಉಂಟುಮಾಡುವಂತಹ ಸತ್ಕ್ರಿಯೇಯನ್ನು ಮಾಡುವುದು.
ವ್ಯಕ್ತಿಯು ಕೇವಲ ಅರಿವನ್ನು ಪಡೆದುಕೊಳ್ಳುವುದೇ ದೊಡ್ಡದಲ್ಲ. ಪಡೆದ ಅರಿವಿನಿಂದ ಒಳ್ಳೆಯ ಕಾಯಕವನ್ನು ಮಾಡಬೇಕು. ಅರಿವು ಮತ್ತು ದುಡಿಮೆ ಎರಡೂ ಜತೆಗೂಡಿದಾಗ ಮಾತ್ರ ವ್ಯಕ್ತಿಯ ಬದುಕು ಹಸನಾಗುವುದರ ಜತೆಗೆ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತಾಗುತ್ತದೆ.
ಅಂತರಂಗದಲ್ಲಿ ಅರಿವು, ಬಹಿರಂಗದಲ್ಲಿ ಕ್ರೀಯೆಯುಳ್ಳ ಶರಣನೇ ಮಹಾತ್ಮ. ಅವನೇ ತನ್ನ ಅಂತರಂಗದ ಅರಿವು ಬಹಿರಂಗದ ಕ್ರಿಯೆ ಆಚರಣೆಯಿಂದ ಶಟ್ಸ್ಥಲದ ಸಾಧನಾ ಪಥದಲ್ಲಿ ನಡೆದು ಭಕ್ತ, ಮಹೇಶ್ವರ, ಪ್ರಸಾದಿ
ಪ್ರಾಣಲಿಂಗಿ, ಶರಣ ಮತ್ತು ನಿಜೈಕ್ಯ ನಾಗುತ್ತಾನೆ ಎನ್ನುತ್ತಾರೆ ಶರಣರು.
- ✍️Dr Prema Pangi
#ಪ್ರೇಮಾ_ಪಾಂಗಿ,
#ಕರಸ್ಥಲದ_ಮಲ್ಲಿಕಾರ್ಜುನದೇವ
#ಅಂತರಂಗದಲ್ಲಿ_ಅರಿವಿಲ್ಲದವಂಗೆ,
Comments
Post a Comment