ವಚನ ದಾಸೋಹ
ವಚನ:
ಹಲವು ಕಾಲ ಹಂಸೆಯ ಸಂಗದಲ್ಲಿದ್ದರೆ ಬಕನು ಶುಚಿಯಾಗಬಲ್ಲುದೆ?
ನಿಧಿನಿಧಾನದೊಳಗಿದ್ದರೇನು ಪಾಷಾಣ ಹೊನ್ನಾಗಬಲ್ಲುದೆ?
ಕಲ್ಪತರುಗಳ ಸಂಗದಲ್ಲಿದ್ದರೇನು ಕೊರಡು ಫಲವಾಗಬಲ್ಲುದೆ?
ಕಾಶೀಕ್ಷೇತ್ರದಲ್ಲಿ ಶುನಕನಿದ್ದರೇನು ಅದರ ಕ್ಷೀರ ಪಂಚಾಮೃತವಾಗಬಲ್ಲುದೆ?
ಖಂಡುಗ ಹಾಲೊಳಗೆ ಇದ್ದಿಲ ಹಾಕಿದರೇನು ಬಿಳಿದಾಗಬಲ್ಲುದೆ?
ಇದು ಕಾರಣ, ಕೂಡಲ ಚೆನ್ನಸಂಗನ ಶರಣರ ಸನ್ನಿಧಿಯಲ್ಲಿದ್ದರೇನು
ಅಸಜ್ಜನ ಸದ್ಭಕ್ತನಾಗಬಲ್ಲನೆ?
- ಚಿನ್ಮಯ ಜ್ಞಾನಿ ಚೆನ್ನಬಸವಣ್ಣ
ಭಾವಾರ್ಥ:
*ಹಲವು ಕಾಲ ಹಂಸೆಯ ಸಂಗದಲ್ಲಿದ್ದರೆ ಬಕನು ಶುಚಿಯಾಗಬಲ್ಲುದೆ?*
ಅರ್ಥ:
ಹಂಸೆ (ಹೆಣ್ಣು ಹಂಸಪಕ್ಷಿ)ಯ ಸಂಗದಲ್ಲಿದ್ದ ಮಾತ್ರಕ್ಕೆ ಬಕಪಕ್ಷಿ ಶುಚಿಯಾಗಬಲ್ಲುದೆ ?
ಹಂಸಪಕ್ಷಿಯಷ್ಟು ಬಕಪಕ್ಷಿ ಸಾಧು, ಸಾಚಾ ಮತ್ತು ಶುಚಿ ಅಲ್ಲ. ‘ಬಕಧ್ಯಾನ’ಕ್ಕೆ ಒಳ್ಳೆಯ ಹೆಸರಿಲ್ಲ. ಹಂಸಪಕ್ಷಿ ಹಾಗಲ್ಲ. ಅದಕ್ಕೆ ಆಧ್ಯಾತ್ಮಿಕ ಜಗತ್ತಿನಲ್ಲಿ ಶುದ್ಧ ಪಕ್ಷಿ ಎಂದು ಒಳ್ಳೆಯ ಹೆಸರಿದೆ. ಬಕಪಕ್ಷಿಯು ಹಂಸಪಕ್ಷಿಯ ಸಂಗ, ಸಹವಾಸ, ಸಾಂಗತ್ಯದಲ್ಲಿದ್ದ ಮಾತ್ರಕ್ಕೆ ಶುಚಿಯಾಗುತ್ತದೆ ಸುಧಾರಿಸುತ್ತದೆ ಎಂಬ ಮಾತನ್ನು ಅದು ಹೇಗೆ ಒಪ್ಪುವುದು?”
*ನಿಧಿನಿಧಾನದೊಳಗಿದ್ದರೇನು ಪಾಷಾಣ ಹೊನ್ನಾಗಬಲ್ಲುದೆ?*
ಅರ್ಥ:
“ಚಿನ್ನ-ಬೆಳ್ಳಿ, ವಜ್ರ-ವೈಢೂರ್ಯ, ಮುತ್ತು-ರತ್ನ, ಒಡವೆ-ವಸ್ತ್ರಗಳ ಮಧ್ಯದಲ್ಲಿ ಕಲ್ಲುಗಳನ್ನು ಒಯ್ದಿಟ್ಟರೆ ಆ ಕಲ್ಲುಗಳು ಬಂಗಾರವಾಗುವುದು ಸಾಧ್ಯವೇ? ಅದೆಷ್ಟೇ ದಿನ, ಅದೆಷ್ಟೇ ವರುಷ, ಅದೆಷ್ಟು ಕಾಲ ಕಲ್ಲನ್ನು ಬಂಗಾರದ ಜೊತೆಯಲ್ಲಿಟ್ಟರೂ ಕಲ್ಲು ಬಂಗಾರವಾಗುವುದು ಸಾಧ್ಯವೇ ಇಲ್ಲ.
*ಕಲ್ಪತರುಗಳ ಸಂಗದಲ್ಲಿದ್ದರೇನು ಕೊರಡು ಫಲವಾಗಬಲ್ಲುದೆ? *
ಅರ್ಥ:
ಕಲ್ಪತರುವಿನ ಸಂಗ, ಸಹವಾಸದಲ್ಲಿದ್ದ ಮಾತ್ರಕ್ಕೆ ಕೊರಡದು ಕೊನರಿ, ಫಲಗಳನ್ನು ಕೊಡುವುದುಂಟೇ? ಕೇವಲ ಕಲ್ಪತರುವಿನ ಸಂಗದಲ್ಲಿದ್ದ ಮಾತ್ರಕ್ಕೆ ಕೊರಡು ಕೊನರುತ್ತದೆ ಫಲ ಕೊಡುತ್ತದೆ ಎಂದು ಭಾವಿಸುವುದು ಶುದ್ಧತಪ್ಪು
*ಕಾಶೀಕ್ಷೇತ್ರದಲ್ಲಿ ಶುನಕನಿದ್ದರೇನು ಅದರ ಕ್ಷೀರ ಪಂಚಾಮೃತವಾಗಬಲ್ಲುದೆ? *
ಅರ್ಥ:
ಕಾಶೀಕ್ಷೇತ್ರದಲ್ಲಿ ಇದೆ ಎಂದ ಮಾತ್ರಕ್ಕೆ ಅಲ್ಲಿನ ನಾಯಿಯ ಹಾಲು ತಂದು ‘ಪಂಚಾಮೃತ’ ಮಾಡುವುದಕ್ಕೆ ಬಳಸುವುದುಂಟೇ? ಕಾಶಿಯಲ್ಲಿದ್ದರೇನು, ಕೈಲಾಸದಲ್ಲಿದ್ದರೇನು ನಾಯಿ ನಾಯಿನೇ? ಕೇವಲ ಸ್ಥಳಮಹಿಮೆಯಿಂದ ಅದಕ್ಕೆ ಘನತೆ, ಗೌರವ ದೊರಕುತ್ತದೆ ಎಂದರೆ ಅದು ಸಾಧ್ಯವಿಲ್ಲ.
*ಖಂಡುಗ ಹಾಲೊಳಗೆ ಇದ್ದಿಲ ಹಾಕಿದರೇನು ಬಿಳಿದಾಗಬಲ್ಲುದೆ?*
ಅರ್ಥ:
ಇನ್ನು ಖಂಡುಗ,(ದೊಡ್ಡದಾದ ಒಂದು ಅಳತೆ) ಹಾಲಿನೊಳಗೆ ಇದ್ದಲ್ಲೊಂದನ್ನು ಹಾಕಿಬಿಟ್ಟು ಇದ್ದಲು ಹಾಲಿನ ಸಂಗದಲ್ಲಿದ್ದು ಬೆಳ್ಳಗಾಗಲಿ ಎಂದರೆ ಅದು ಸಾಧ್ಯವೇ?
*ಇದು ಕಾರಣ, ಕೂಡಲ ಚೆನ್ನಸಂಗನ ಶರಣರ ಸನ್ನಿಧಿಯಲ್ಲಿದ್ದರೇನು
ಅಸಜ್ಜನ ಸದ್ಭಕ್ತನಾಗಬಲ್ಲನೆ? *
ಅರ್ಥ:
ಹಾಗೇನೇ ಕೇವಲ ಶರಣರ ಸಂಗ, ಸಹಚರ್ಯ, ಸಹವಾಸದಲ್ಲಿದ್ದ ಮಾತ್ರಕ್ಕೆ ದುಷ್ಟಜನಗಳು, ಅಸಜ್ಜನರು ಶಿಷ್ಟರಾಗುತ್ತಾರೆ, ಸದ್ಭಕ್ತರಾಗುತ್ತಾರೆ ಎಂದು ಭಾವಿಸುವುದು ಶುದ್ಧ ತಪ್ಪು.
ಭಾವ:
ಬಸವಣ್ಣನವರ ಹಾಗೆ ಚೆನ್ನಬಸವಣ್ಣನವರು ಭಾವುಕರಲ್ಲ. ಅವರು ಸುಲಭವಾಗಿ ಯಾರನ್ನೂ ಒಪ್ಪುವವರಲ್ಲ. “ಯಾರನ್ನೇ ಆಗಲಿ ದಿಢೀರನೇ ಒಪ್ಪಿ ಅವರನ್ನಪ್ಪಿಕೊಳ್ಳುವುದು ಸರಿಯಲ್ಲ” ಎಂದು ಚೆನ್ನಬಸವಣ್ಣನವರು ಬಸವಣ್ಣನವರಿಗೆ ಆಗಾಗ್ಗೆ ಒತ್ತಿ ಒತ್ತಿ ಹೇಳುತ್ತಿದ್ದರು. ಚೆನ್ನಬಸವಣ್ಣನವರು ಶರಣ ಸಮುದಾಯದಲ್ಲಿದ್ದ ಕೆಲ ವೇಷಡಂಬಕರನ್ನು ಒಪ್ಪುವುದಿಲ್ಲ. ಸದ್ಭಕ್ತ ಶರಣರ ಸನ್ನಿಧಿಯಲ್ಲಿದ್ದರೂ ಕೆಲ ಅಸಜ್ಜನರು ಸದ್ಭಕ್ತ ರಾಗುವದಿಲ್ಲ ಎನ್ನುವದು ವಚನದ ತಾತ್ಪರ್ಯ. ಪ್ರಸಿದ್ಧ ಗುಡಿ,ಮಠ, ತೀರ್ಥ ಕ್ಷೇತ್ರಗಳಲ್ಲಿ ಗುರುಗಳ ಸಾನಿಧ್ಯದಲ್ಲಿ ಇದ್ದರೂ ಕೆಲವರು ಬದಲಾಗದೆ, ದುಶ್ಚಟಗಳಿಗೆ ದಾಸರಾದವರು, ಧನದಾಹಿಗಳು ಕಾಣಸಿಗುತ್ತಾರೆ. ಒಳ್ಳೆಯ ಗುರುಗಳು ಸಿಗುವುದು ಹೇಗೆ ಕಷ್ಟವೋ ಹಾಗೆಯೇ ಸದ್ಭಕ್ತ ಶಿಷ್ಯರು ಸಿಗುವುದೂ ಅಷ್ಟೇ ಕಷ್ಟ.
ಚೆನ್ನಬಸವಣ್ಣನವರು ತುಂಬಾ ವಾಸ್ತವಿಕ ನೆಲೆಯಿಂದ ಮಾತನಾಡಿದ್ದಾರೆ. ಸಜ್ಜನರ ಸಂಗವೊಂದೇ ದುರ್ಜನರನ್ನು ಸಜ್ಜನರನ್ನಾಗಿ ಪರಿವರ್ತಿಸುತ್ತದೆ ಎಂಬ ಮಾತನ್ನು ಒಪ್ಪಿಕೊಳ್ಳವುದಿಲ್ಲ. ಯಾವುದೇ ‘ಪರಿವರ್ತನೆ’ ಬರೀ ಬಾಹ್ಯಜಗತ್ತು ಮತ್ತು ಬಾಹ್ಯಪರಿಕರಗಳಿಂದ ಸಾಧ್ಯವಿಲ್ಲ. ವಿಭೂತಿ ರುದ್ರಾಕ್ಷಿ ಧರಿಸಿದ ಮಾತ್ರಕ್ಕೆ ಶರಣರಾಗುವದಿಲ್ಲ. ಸ್ವಪ್ರತಿಷ್ಠೆಗಾಗಿ ಗುರುಗಳನ್ನು ಕರಿಸಿ ಪಾದಪೂಜೆ ಮಾಡಿದರೆ ಅದು ಪಾದೋದಕವಾಗುವುದಿಲ್ಲ. ಬಾಯಿ ರುಚಿಗೆ ಪಂಚಭಕ್ಷ ತಯಾರಿಸಿ ನೈವಿದ್ಯೆ ಮಾಡಿ ತಾವೇ ಸೇವಿಸಿದರೆ ಅದು ಪ್ರಸಾದವಾಗುವುದಿಲ್ಲ. 'ನಾನು ಬದಲಾಗಬೇಕು' ಎಂಬ ತೀವ್ರತರವಾದ ಇಚ್ಛಾಶಕ್ತಿ ನಮ್ಮೊಳಗೇನೇ ಹುಟ್ಟಿಕೊಳ್ಳಬೇಕು. ಶರಣ ಮಾರ್ಗದ ಶಟ್ಸ್ಥಲದ ಸಾಧನೆ ಮಾಡಿ
ಕಳಬೇಡ ಕೊಲಬೇಡ ಹುಸಿ ನುಡಿಯಲುಬೇಡ ಮುನಿಯಬೇಡ, ಅನ್ಯರಿಗೆ ಅಸಹ್ಯಬಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ.... ಎಂಬ ಸೂತ್ರಗಳನ್ನು ಅಳವಡಿಸಿಕೊಂಡು ಅಂತರಂಗ ಬಹಿರಂಗ ಶುದ್ಧಿಕರಿಸಿಕೊಂಡರೆ ಮಾತ್ರ ಶರಣರಾಗಬಹುದು.
ಆಗ ಮಾತ್ರ ನಾವುಗಳು ಬದಲಾಗಿ ಸುಂದರ ಆದರ್ಶ್ ಸಮ ಸಮಾಜ ಕಟ್ಟಲು ಸಾಧ್ಯ.
- ✍️Dr Prema Pangi
#ಪ್ರೇಮಾ_ಪಾಂಗಿ
#ಹಲವು_ಕಾಲ_ಹಂಸೆಯ_ಸಂಗದಲ್ಲಿದ್ದರೆ_ಬಕನು,#ಚೆನ್ನಬಸವಣ್ಣ
Comments
Post a Comment