ವಚನ ದಾಸೋಹ
ವಚನ:
#ನುಡಿಗಡಣ ಮಾಡದ ಕಲಿತನ,
ಚಿತ್ರದಸತಿಯ ಶೃಂಗಾರವದೇತಕ್ಕೆ ಪ್ರಯೋಜನ ?
ಎಲೆಯಿಲ್ಲದ ಮರನು, ಜಲವಿಲ್ಲದ ನದಿಯು,
ಗುಣಿಯಲ್ಲದ ಅವಗುಣಿಯ ಸಂಗವದೇತಕ್ಕೆ ಪ್ರಯೋಜನ ?
ದಯವಿಲ್ಲದ ಧರ್ಮ, ಉಭಯವಿಲ್ಲದ ಭಕ್ತಿಯು,
ನಯವಿಲ್ಲದ ಶಬ್ದವದೇತಕ್ಕೆ ಪ್ರಯೋಜನ ಎನ್ನ ದೇವ ಚೆನ್ನಮಲ್ಲಿಕಾರ್ಜುನಾ ?
—ವೀರ ವಿರಾಗಿಣಿ ಅಕ್ಕಮಹಾದೇವಿ
ಭಾವಾರ್ಥ:
ಇದು ಸುಂದರ ರೂಪಕಗಳಿಂದ ಶರಣರ ಧರ್ಮದ, ನೀತಿಗಳ ವಿಚಾರ ವಿಮರ್ಶೆ ಮಾಡಿದ ಅಕ್ಕ ಮಹಾದೇವಿಯವರ ವಚನವಾಗಿದೆ.
*ನುಡಿಗಡಣ ಮಾಡದ ಕಲಿತನ,
ಚಿತ್ರದಸತಿಯ ಶೃಂಗಾರವದೇತಕ್ಕೆ ಪ್ರಯೋಜನ ?*
ನುಡಿಯಂತೆ ನಡೆಯಲು ಕಲಿಸದ ಗುರುವಿನ ಕಲಿಯುವಿಕೆಯಿಂದ ನಾವು ಸನ್ಮಾರ್ಗದಲ್ಲಿ ನಡೆಯಲು ಸಾಧ್ಯವೇ? ಬರೀ ಉಚ್ಛ ವಿಚಾರದ ಮಾತು ಮಾತನಾಡಿ ಅದರಂತೆ ನಡೆಯದಿದ್ದರೆ ಏನು ಪ್ರಯೋಜನ?
ಚಿತ್ರಪಟ(portrait drawing) ದಲ್ಲಿ ಸತಿ (ಪತ್ನಿ) ಮಾಡಿಕೊಂಡ ಶೃಂಗಾರ ಬರೀ ನೋಡಿದರೆ ಏನು ಪ್ರಯೋಜನ? ಜೊತೆಯಲ್ಲಿ ಇರುವಾಗ ಲಭಿಸುವ ಸಾಂಗತ್ಯಸುಖ ಸಿಗುವುದೇ?
*ಎಲೆಯಿಲ್ಲದ ಮರನು,*
ಎಲೆಗಳಿಂದ ತುಂಬಿದ ಮರ ಬೇಸಿಗೆಯ ಬಿಸಿಲಿನಲ್ಲಿ ಹಿತವೆನಿಸುವ ನೆರಳು ತಂಪು ಕೊಡುತ್ತದೆ. ಆದರೆ ಎಲೆಗಳೇ ಇಲ್ಲದ ಮರದಿಂದ ಬಿಸಿಲಿನಲ್ಲಿ ಹಿತವೆನಿಸುವ ನೆರಳು ತಂಪು ಪಡೆಯಲು ಸಾಧ್ಯವೇ?
*ಜಲವಿಲ್ಲದ ನದಿಯು,*
ನದಿಯ ನೀರು ಕುಡಿದು ಜನರು ಪ್ರಾಣಿಗಳು ತೃಷೆ ಅಡಗಿಸಿಕೊಳ್ಳುತ್ತವೆ. ಬೆಳೆ ಬೆಳೆಯುತ್ತಾರೆ. ಆದರೆ ಜಲವಿಲ್ಲದ ನದಿಯಿಂದ ಅಂದರೆ ನೀರು ಇಲ್ಲದ ನದಿಯಿಂದ ನೀರು ಕುಡಿದು ಜನರ ಪ್ರಾಣಿಗಳ ತೃಷೆ ಅಡಗಿಸಲು ಸಾಧ್ಯವೇ? ಬೆಳೆ ಬೆಳೆಯಲು ಸಾಧ್ಯವೇ?
*ಗುಣಿಯಲ್ಲದ ಅವಗುಣಿಯ ಸಂಗವದೇತಕ್ಕೆ ಪ್ರಯೋಜನ ?*
ಸದ್ಗುಣಿಯ ಸಂಗದಿಂದ ಅವರ ಒಳ್ಳೆಯ ಗುಣಗಳನ್ನು ನೋಡಿ ಕೇಳಿ ಮನಸ್ಸಿಗೆ ಸಂತೋಷ, ಸಂತೃಪ್ತಿ, ಹಿತಕರವಾದ ಭಾವನೆ ಗಳು ಉಂಟಾಗುತ್ತವೆ.
ಆದರೆ ಒಳ್ಳೆಯ ಗುಣಗಳಿಲ್ಲದ ಅವಗುಣಿಯ ಸಂಗವು ಯಾವುದೇ ಸುಖ ಸಂತೋಷ ಹಿತವನ್ನು ಕೊಡಲಾರದು.
*ದಯವಿಲ್ಲದ ಧರ್ಮ, ಉಭಯವಿಲ್ಲದ ಭಕ್ತಿಯು,
ನಯವಿಲ್ಲದ ಶಬ್ದವದೇತಕ್ಕೆ ಪ್ರಯೋಜನ ಎನ್ನ ದೇವ ಚೆನ್ನಮಲ್ಲಿಕಾರ್ಜುನಾ ?*
ದಯವಿಲ್ಲದ ಧರ್ಮ ಅಂದರೆ ಸಹ ಮಾನವರು, ಪ್ರಾಣಿ ಪಕ್ಷಿ, ಗಿಡಮರ ಮೇಲೆ ಅಂತಃಕರಣ ಮಮತೆ ಕಲಿಸದ ಧರ್ಮದಿಂದ ಎನು ಪ್ರಯೋಜನ ಎಂದು ಅಕ್ಕಮಹಾದೇವಿ ಶರಣೆ ಪ್ರಶ್ನಿಸುತ್ತಾರೆ.
ಉಭಯವಿಲ್ಲದ ಭಕ್ತಿ, ಅಂದರೆ ಅಂತರಂಗದ ಮನದಲ್ಲಿ ದೇವರ ಬಗ್ಗೆ ಒಲವು ಮತ್ತು ಬಹಿರಂಗದ ಸಾಮಾಜಿಕ ಜೀವನದಲ್ಲಿ ಸಹಮಾನವರಿಗೆ ಒಳಿತನ್ನು ಉಂಟು ಮಾಡುವದು ಹೀಗೆ ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡದ ಬರೀ ದೇವರ ಪೂಜೆಯಿಂದ ಎನು ಪ್ರಯೋಜನ ಎಂದು ಅಕ್ಕಮಹಾದೇವಿ ಶರಣೆ ಪ್ರಶ್ನಿಸುತ್ತಾರೆ.
ನಯವಿಲ್ಲದ ಶಬ್ದವೆಂದರೆ, ಮನಗಳನ್ನು ಗಾಸಿಗೊಳಿಸುವಂತಹ ನಿಂದನೆಯ ತೆಗಳಿಕೆಯ ಒರಟು ಮಾತುಗಳಿಂದ ಯಾರಿಗೆ ಏನು ಪ್ರಯೋಜನ ಎಂದು ಅಕ್ಕ ಮಹಾದೇವಿ ಶರಣೆ ಪ್ರಶ್ನಿಸುತ್ತಾರೆ.
ಭಾವ: ಅಕ್ಕ ಮಹಾದೇವಿ ಶರಣೆ ಒಂದೇ ವಚನದಲ್ಲಿ ಹಲವು ಸುಂದರ ರೂಪಕಗಳಿಂದ ಗುರು ಬಸವಣ್ಣನವರ ಧರ್ಮದ ಹಲವು ನೀತಿಗಳ ವಿಚಾರಗಳ ವಿಮರ್ಶೆ ಮಾಡಿದ್ದಾರೆ.
“ನುಡಿದಂತೆ ನಡೆ”,
"ಬಸವ ಧರ್ಮದಲ್ಲಿ ಶರಣರ ಸತ್ಸಂಗ",
"ದಯವೇ ಧರ್ಮದ ಮೂಲವಯ್ಯಾ"
"ನಯವಾದ ಸತ್ಯನುಡಿ - ನುಡಿದಡೆ ಲಿಂಗ ಮೆಚ್ಚಿ ಅಹುದಹುದನಬೇಕು".
ನುಡಿಯಂತೆ ನಡೆಯದ ಕಲಿಯುವಿಕೆಯಿಂದ ಎನು ಪ್ರಯೋಜನ ಎನ್ನುತ್ತಾರೆ ಅಕ್ಕ ಮಹಾದೇವಿ ಶರಣೆ. ನಮ್ಮ ಶರಣರು “ನುಡಿದಂತೆ ನಡೆ” ಎನ್ನುವ ಒಂದು ಸಾಮುದಾಯಿಕ ಭಾವನೆಯನ್ನು ಬೆಳಸಿ ಸಮಾಜ ಸುಧಾರಣೆಯಲ್ಲಿ ಬಹು ಮುಖ್ಯ ಪಾತ್ರ ವಹಿಸಿದ್ದರು. ಗುರು ಬಸವಣ್ಣನವರು ನಮ್ಮ ನಡೆ-ನುಡಿ ಒಂದೇಯಾಗಿ ಇರಬೇಕು ಎನ್ನುತ್ತಾರೆ.
#ಭಕ್ತಿ ಸುಭಾಷೆಯ ನುಡಿಯ ನುಡಿವೆ,
ನುಡಿದಂತೆ ನಡೆವೆ
ನಡೆಯೊಳಗೆ ನುಡಿಯ ಪೂರೈಸುವೆ
ಮೇಲೆ ತೂಗುವ ತ್ರಾಸು ಕಟ್ಟಳೆ ನಿಮ್ಮ ಕೈಯಲ್ಲಿ
ಒಂದು ಜವೆ ಕೊರತೆಯಾದರೆ
ಎನ್ನನದ್ದಿ ನಿನೆದ್ದು ಹೋಗು, ಕೂಡಲ ಸಂಗಮದೇವಾ.
ಎಂದು "ನುಡಿದಂತೆ ನಡೆ" ಎಂಬ ಆದೇಶ ಕೊಟ್ಟಿದ್ದಾರೆ.
ಗುಣಿಯಲ್ಲದ ಅವಗುಣಿಯ ಸಂಗದಿಂದ ಯಾರಿಗೆ ಯಾವುದೇ ಪ್ರಯೋಜನ ವಾಗುವದಿಲ್ಲ ಎನ್ನುತ್ತಾರೆ ಅಕ್ಕ ಮಹಾದೇವಿ ಶರಣೆ. ಗುರು ಬಸವಣ್ಣನವರು ಶರಣರ ಸತ್ಸಂಗದಿಂದ ತಮ್ಮ ಭವ ನಾಶವಾಗಿ ತಾವು ಶರಣರಾದೆವು ಎಂದು ಸತ್ಸಂಗದ ಮಹತ್ವ ತಿಳಿಸಿದ್ದಾರೆ.
#ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ,
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ,
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ,
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ,
ಕೂಡಲಸಂಗನ ಶರಣರ ಅನುಭಾವದ ಬಲದಿಂದ ಎನ್ನ ಭವದ ಕೇಡು ನೋಡಯ್ಯಾ.
ಅದೇ ರೀತಿ ದಯವೇ ಇಲ್ಲದ ಧರ್ಮದಿಂದ ಮಾನವ ಕುಲಕ್ಕೆ ಯಾವುದೇ ಪ್ರಯೋಜನ ವಿಲ್ಲ ಎನ್ನುತ್ತಾರೆ ಅಕ್ಕ ಮಹಾದೇವಿ ಶರಣೆ. ದಯವೇ ಧರ್ಮದ ಮೂಲ ಎನ್ನುತ್ತಾರೆ ಗುರು ಬಸವಣ್ಣನವರು.
#ದಯವಿಲ್ಲದ ಧರ್ಮವದೇವುದಯ್ಯಾ
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ.
ದಯವೇ ಧರ್ಮದ ಮೂಲವಯ್ಯಾ,
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ. / 726
ನಯವಿಲ್ಲದ ನಿಂದನೆಯ ತೆಗಳಿಕೆಯ ಒರಟು ಮಾತುಗಳಿಂದ ಯಾರಿಗೆ ಏನು ಪ್ರಯೋಜನ ಎನ್ನುತ್ತಾರೆ ಅಕ್ಕಮಹಾದೇವಿ. ಶರಣರ ನುಡಿ ಹೇಗೆ ಇರಬೇಕು ಎಂದು ಗುರು ಬಸವಣ್ಣನವರು ಅತೀ ಸುಂದರ ರೂಪಕ ಗಳಿಂದ ತಿಳಿ ಹೇಳಿದ್ದಾರೆ.
#ನುಡಿದಡೆ ಮುತ್ತಿನ ಹಾರದಂತಿರಬೇಕು.
ನುಡಿದಡೆ ಮಾಣಿಕ್ಯದ ದೀಪ್ತಿಯಂತಿರಬೇಕು.
ನುಡಿದಡೆ ಸ್ಫಟಿಕದ ಸಲಾಕೆಯಂತಿರಬೇಕು.
ನುಡಿದಡೆ ಲಿಂಗ ಮೆಚ್ಚಿ ಅಹುದಹುದನಬೇಕು.
ನುಡಿಯೊಳಗಾಗಿ ನಡೆಯದಿದ್ದಡೆ,
ಕೂಡಲಸಂಗಮದೇವನೆಂತೊಲಿವನಯ್ಯಾ / 845
'ನುಡಿದಡೆ ಲಿಂಗ ಮೆಚ್ಚಿ ಅಹುದಹುದನಬೇಕು'
ಅಂದರೆ ನಾವು ನುಡಿಯುವ ಮಾತುಗಳಿಂದ ಪರಮಾತ್ಮನೇ ತೃಪ್ತಿಹೊಂದಿ ಅಹುದು ಅಹುದು ಅನ್ನಬೇಕು.
ನಾವು ಆಚರಿಸುವ ಧರ್ಮದಲ್ಲಿ ದಯೆ, ಸಹ ಮಾನವರು, ಪ್ರಾಣಿ ಪಕ್ಷಿ, ಗಿಡಮರ ಮೇಲೆ ಅಂತಃಕರಣ ಮಮತೆ ಕರುಣೆಯಿಂದ ಕಾಣುವ ಮನಸ್ಸು, ಹಿತವಾದ ನಡೆ ನುಡಿಗಳಿರಬೇಕು.
ಶರಣರ ವಚನಗಳು ಸರಳ ಭಾಷೆಯಲ್ಲಿ ರಚಿತವಾಗಿದ್ದು, ಜೀವನಕ್ಕೆ ಬಹು ಮುಖ್ಯವಾದ ತತ್ವಗಳನ್ನು ಬೋಧಿಸಿ, ನಮ್ಮ ಬದುಕಿಗೆ ದಾರಿದೀಪಗಳಾಗಿವೆ.
- ✍️Dr Prema Pangi,
#ಪ್ರೇಮಾ_ಪಾಂಗಿ, #ಅಕ್ಕಮಹಾದೇವಿ, #ನುಡಿಗಡಣ_ಮಾಡದ_ಕಲಿತನ
Comments
Post a Comment