ವಚನ ದಾಸೋಹ

*ವಚನ:*
#ಗರ್ವದಿಂದ ಮಾಡಿದ ಭಕ್ತಿ, ದ್ರವ್ಯದ ಕೇಡು.
ನಡೆಯಿಲ್ಲದ ನುಡಿ, ಅರಿವಿಂಗೆ ಹಾನಿ.
ಕೊಡದೆ ತ್ಯಾಗಿ ಎನಿಸಿಕೊಂಬುದು, ಮುಡಿಯಿಲ್ಲದ ಶೃಂಗಾರ.
ದೃಢವಿಲ್ಲದ ಭಕ್ತಿ, ಅಡಿ ಒಡೆದ ಕುಂಭದಲ್ಲಿ ಸುಜಲವ ತುಂಬಿದಂತೆ.
ಮಾರಯ್ಯಪ್ರಿಯ ಅಮರೇಶ್ವರ ಲಿಂಗ ಮುಟ್ಟದ ಭಕ್ತಿ.
- ಶರಣೆ ಆಯ್ದಕ್ಕಿ ಲಕ್ಕಮ್ಮ
ಅರ್ಥ:  
ಸಾವಿರಾರು ವರ್ಷಗಳಿಂದ ಹಾಕಲ್ಪಟ್ಟ ಬಂಧನಗಳ ಸಂಕೋಲೆಯನ್ನು ಕಿತ್ತೆಸೆದು ಮಹಿಳೆಯರಿಗೆ ಮತ್ತು ದಲಿತರಿಗೆ, ಸಮಾಜದಲ್ಲಿ ಸಾಮಾಜಿಕ ಅಧ್ಯಾತ್ಮಿಕ ನೈತಿಕ ಆರ್ಥಿಕ ಸಮಾನತೆಯನ್ನು ಬಸವಾದಿ ಶರಣರು ನೀಡಿದರು. ಇದರ ಪರಿಣಾಮ ಪೂರ್ವಾಶ್ರಮದಲ್ಲಿ ದಲಿತ ಮಹಿಳೆ ಆದ ಆಯ್ದಕ್ಕಿ ಲಕ್ಕಮ್ಮ ನಂತ ಶರಣೆಯರು ಅಬಲೆ ಪಟ್ಟ ಬಿಟ್ಟು ಸಬಲೆಯರಾಗಿ ಪತಿಗೆ ಮತ್ತು ಸಮಾಜಕ್ಕೇ ಮಾರ್ಗದರ್ಶನ ಮಾಡಿ ಆದರ್ಶ ಅನುಭಾವಿ ಶರಣೆಯರಾದರು...
 
*ಗರ್ವದಿಂದ ಮಾಡಿದ ಭಕ್ತಿ, ದ್ರವ್ಯದ ಕೇಡು*

ಬಾಹ್ಯ ಪೂಜೆಯನ್ನು ಗರ್ವದಿಂದ ಆಡಂಬರದಿಂದ ಬರೀ ಬೇರೆಯರಿಗೆ ತೋರಿಸಲಿಕ್ಕಾಗಿ ಮಾಡಿದರೆ ಅದರಿಂದ ದ್ರವ್ಯದ ಕೇಡಾಗುತ್ತದೆ, ಹಣ ವ್ಯರ್ಥ ವಾಗುತ್ತದೆ. ಅಂತರಂಗದಲ್ಲಿ ಭಕ್ತಿಯಿಲ್ಲದವರು ಆಡಂಬರದ ಅಶ್ರಯ ಪಡೆಯುತ್ತಾರೆ. ಚಿನ್ನ ಬೆಳ್ಳಿಯ ಮೂರ್ತಿಗಳನ್ನು ಪೂಜಿಸುವುದು, ವಿವಿಧ ಹೂಗಳಿಂದ ಅಲಂಕರಿಸುವುದು, ನಾನಾ ಪ್ರಕಾರದ ಭಕ್ಷ್ಯಗಳನ್ನು ನೈವೇದ್ಯದಲ್ಲಿ ಅರ್ಪಿಸುವುದು, ತೋರಿಕೆಯ ದಾನ ದಕ್ಷಿಣೆಗಳನ್ನು ಕೊಡುವುದು, ಹೀಗೆ ಅದರಿಂದ ಕೇವಲ ಹಣ ವ್ಯಯವಾಗುತ್ತದೆಯೇ ಹೊರತು ಇನ್ನಾವ ಪ್ರಯೋಜನವು ಆಗದು. ಪರಮಾತ್ಮನನ್ನು ಹೀಗೆ ಗರ್ವದಿಂದ ಆಡಂಬರದಿಂದ ಮಾಡಿದ ಬಾಹ್ಯಪೂಜೆಯಿಂದ ಓಲೈಸಲು ಸಾದ್ಯವಿಲ್ಲ.

*ನಡೆಯಿಲ್ಲದ ನುಡಿ, ಅರಿವಿಂಗೆ ಹಾನಿ*

ನಾವು ನುಡಿದಂತೆ  ನಡೆಯದಿದ್ದರೆ ಅನುಸರಿಸದಿದ್ದರೆ ಅದರಿಂದ ನಮ್ಮ ಅರಿವಿಗೇ ಹಾನಿಯಾಗುತ್ತದೆ. ನಾವು ಆದರ್ಶ ದ  ಸತ್ಯದ ಮಾತುಗಳನ್ನು ಮಾತನಾಡಿ ಅದರಂತೆ ನಡೆಯದಿದ್ದರೆ ಆ ಆದರ್ಶಗಳನ್ನು ಪಾಲಿಸದಿದ್ದರೆ ನಮ್ಮ ಅರಿವು ಪ್ರಜ್ಞೆ ಉದಯಿಸುವದೂ ಇಲ್ಲ ಬೆಳೆಯುವದೂ ಇಲ್ಲ.

*ಕೊಡದೆ ತ್ಯಾಗಿ ಎನಿಸಿಕೊಂಬುದು, ಮುಡಿಯಿಲ್ಲದ ಶೃಂಗಾರ*

ಕೊಡದೆ ತ್ಯಾಗಿ ಎನಿಸಿಕೊಳ್ಳುವುದು, ಮುಡಿಯಿಲ್ಲದ ಶೃಂಗಾರವೆನ್ನುತ್ತಾಳೆ ಲಕ್ಕಮ್ಮ.
ದಾನ ಮಾಡುವುದರಿಂದ ತನಗೆ ಒಳ್ಳೆಯ ಹೆಸರು ಬರುತ್ತದೆ, ಪುಣ್ಯಪ್ರಾಪ್ತವಾಗುತ್ತದೆ ಎಂಬಂತಹ ಕಾರಣಗಳಿಗಾಗಿ ದಾನ ಮಾಡುತ್ತಾರೆ. ಮನದಲ್ಲಿಯಾವುದೋ ಉದ್ದೇಶ ಹೊಂದಿ ಮಾಡುವ ದಾನವು ನಿಜವಿಲ್ಲದ ದಾನವು. ಮುಡಿಯಿಲ್ಲದ ವ್ಯಕ್ತಿ ಅನೇಕ ಶೃಂಗಾರಗಳನ್ನು ಮಾಡಿಕೊಂಡಂರೂ ಸುಂದರತೆ ಪೂರ್ಣವೆನಿಸುವುದಿಲ್ಲ. ಹಾಗೆಯೇ ದಾನಮಾಡದೆ ತ್ಯಾಗಿ ಎನಿಸಿಕೊಳ್ಳುವುದು, ನಿಜವಿಲ್ಲದ ದಾನ ಮಾಡುವದರಲ್ಲಿ ದಾನದ ಪೂರ್ಣತೆ ಬರುವದಿಲ್ಲ.

*ದೃಢವಿಲ್ಲದ ಭಕ್ತಿ, ಅಡಿ ಒಡೆದ ಕುಂಭದಲ್ಲಿ ಸುಜಲವ ತುಂಬಿದಂತೆ;
ಮಾರಯ್ಯಪ್ರಿಯ ಅಮರೇಶ್ವರ ಲಿಂಗ ಮುಟ್ಟದ ಭಕ್ತಿ.*

 ತಳ ಒಡೆದ ಕೊಡದಲ್ಲಿ ಎಷ್ಟೇ ಪವಿತ್ರವಾದ ನೀರನ್ನು ತುಂಬಿದರೂ ನೀರು ಸೋರಿಹೋಗಿ ಅದು ವ್ಯರ್ಥವಾಗುತ್ತದೆ. ಅದೇರೀತಿ ದೃಢವಿಲ್ಲದ ಭಕ್ತಿಯು ಸಾಧಕನ ಮನದಲ್ಲಿ ನಿಲ್ಲುವುದಿಲ್ಲ. ಇವೆಲ್ಲ ಲಿಂಗವನ್ನು ಮುಟ್ಟದ ಭಕ್ತಿ ಮತ್ತು ನಿರರ್ಥಕ ಎಂದು ಎನ್ನುತ್ತಾಳೆ ಲಕ್ಕಮ್ಮ. ನಾವು ಮಾಡುವ ಭಕ್ತಿ ಪರಮಾತ್ಮನಿಗೆ ಮುಟ್ಟದಿದ್ದರೆ ಅದು ವ್ಯರ್ಥ ಅಲ್ಲವೇ?
ಲಕ್ಕಮ್ಮ ಸತ್ಯ ಶುದ್ಧ ಕಾಯಕ ನಿಷ್ಠಳು. ಅವಳದು ನುಡಿದಂತೆ ನಡೆ. ಅವಳದು ನಿತ್ಯ ದಾಸೋಹ ಮತ್ತು ಅವಳಲ್ಲಿ  ದೃಢವಾದ ಭಕ್ತಿ ಮನೆ ಮಾಡಿತ್ತು.
ಭಾವ:
ಇದು ಷಟ್ಸ್ಥಲದ ಮಾಹೇಶ್ವರ ಸ್ಥಲದ ವಚನ.
ಷಟ್ಸ್ಥಲ ಎಂಬುದು ಸಾಧಕ ಶಿವನೇ ಆಗಿ ವಿಕಾಸಗೊಳ್ಳುವ ಪ್ರಕ್ರಿಯೆ. ಸಾಧಕ, ಅಜ್ಞಾನ ಸ್ಥಿತಿಯಿಂದ ಪರಮ ಸುಜ್ಞಾನ ಸ್ಥಿತಿಯೆಡೆಗೆ ತಲುಪಲು ಅನುಸರಿಸಬೇಕಾದ ದಿವ್ಯ ಪಥ. ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯಗಳೇ ಆ ಆರು ಹಂತಗಳು.

ಸಾಧಕ ಕೈಕೊಂಡ ಮಾರ್ಗದಲ್ಲಿ ಅಪಾರವಾದ ಶ್ರದ್ಧೆಯಿಂದ ಮುನ್ನಡೆಯುತ್ತಾ, ಸ್ವಸ್ವರೂಪ ದರ್ಶನದ ಪ್ರಯತ್ನದಲ್ಲಿರುವ ಭಕ್ತರಿಗೆ ಅಗತ್ಯವಾಗಿದ್ದು ಅದನ್ನು ಹಾಗೆಯೇ ಬೆಳೆಸಿಕೊಂಡು ಹೋಗುವ ಏಕೈಕ ನಿಷ್ಠೆ.
 ಶ್ರದ್ದೆ ಮತ್ತು ನಿಷ್ಠೆ ಎರಡು ಸಾಧಕ ಜೀವನದ ಎರಡು ಆಧಾರಸ್ತಂಭಗಳು,ಸಾಧನೆಯ ಎಲ್ಲ ಹಂತಗಳಲ್ಲಿ ಈ ನಿಷ್ಟಾಭಕ್ತಿ ಅಚಲವಾಗಿ ಅಳವಡಬೇಕು. ಭಕ್ತಿಯ ಮಾಡುವಲ್ಲಿ ಹಿಡಿದು, ಬಿಡೆನೆಂಬ ಛಲಬೇಕು. ಗುರು ಬಸವಣ್ಣನವರ ಪ್ರಕಾರ ನಿಷ್ಟೆ ಹೇಗೆ ಇರಬೇಕೆಂದರೆ

#ಜೋಳವಾಳಿಯಾನಲ್ಲ, ವೇಳೆವಾಳಿಯವ ನಾನಯ್ಯಾ.
ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ.
ಕೇಳು, ಕೂಡಲಸಂಗಮದೇವಾ,
ಮರಣವೆ ಮಹಾನವಮಿ. / 669

ಎಂಬಂತಹ ನಿಷ್ಠೆ ಬೇಕು ಸಾಧಕನಿಗೆ. ಆತ 'ಕಾಯದ ಕಳವಳಕಂಜಿ ಕಾಯಯ್ಯ”
ಎನ್ನುವುದಿಲ್ಲ. ಜೀವನೋಪಾಯಕ್ಕಂಜಿ ಕಾ ಯಯ್ಯ ಎನ್ನುವುದಿಲ್ಲ. ಆತನ ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವಿಲ್ಲ. ಮರಣವನ್ನು ಮಹಾನವಮಿ ಎಂದು ಎದುರು
ಗೊಳ್ಳುವ ಶ್ರೀಮಂತಿಕೆ ಆತನದು. . 
ಈಗಿನ ವರ್ತಮಾನ ಕಾಲದಲ್ಲಿಯೂ ಈ ದೇವರು, ಆ ದೇವರು, ಈ ಗುರುಗಳು, ಆ ಗುರುಗಳು ಎಂದು ಅರಿಸಿಕೊಂಡು ತಿರುಗುವವರ ಮಾನಸಿಕ ಹಿನ್ನೆಲೆಯನ್ನು ನೋಡಿದರೆ ಅಲ್ಲಿ ಕಂಡುಬರುವುದು ಆಧ್ಯಾತ್ಮಿಕ ಅಭೀಪ್ಸೆಯಲ್ಲ . ಯಾವುದೊ ಲೌಕಿಕ ಸುಖದ ಬಯಕೆ. ಆಧುನಿಕ ವೈಜ್ಞಾನಿಕ ಯುಗದಲ್ಲಿಯೂ ಅನೇಕ ವಿಚಾರವಂತರು ಸಹ ಇದಕ್ಕೆ ಬಲಿಯಾಗುತಿರುವುದನ್ನು ಈಗಲೂ ಕಾಣಬಹುದೆಂದರೆ 12ನೇ ಶತಮಾನದ ಶರಣರು ಇದನ್ನ ಪ್ರತಿಭಟಿಸಲು ಎಷ್ಟು  ಹೆಣಗಿರಬೇಕೆಂಬುದನ್ನು ಊಹಿಸಬಹುದು. ಅಣಿಮಾದಿ ಅಷ್ಟ ಸಿದ್ದಿಗಳಿಗೋ, ನಾರು ಬೇರು ಅಂಜನ ಘಟಕೆ ಮೂಲಿಕೆ ರಸ ಸಿದ್ಧಿಗಳಿಗೆ, ಲೌಕಿಕ ಆಶೆಗಳಿಗೆ ಮಾರು ಹೋಗುವ ಸಕಾಮ ಭಕ್ತಿ ಯನ್ನು ಖಂಡಿಸಿ ಪರಮ ಪ್ರೇಮರೂಪವಾದ ನಿಷ್ಕಾಮ ಭಕ್ತಿಯನ್ನು ಎತ್ತಿ ಹಿಡಿದರು ಶಿವಶರಣರು.
- ✍️Dr Prema Pangi
#ಪ್ರೇಮಾ_ಪಾಂಗಿ,#ಆಯ್ದಕ್ಕಿ_ಲಕ್ಕಮ್ಮ #ಗರ್ವದಿಂದ_ಮಾಡಿದ_ಭಕ್ತಿ, 
Picture post designed and created by me. Hope you all will like it. A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma