ವಚನ ದಾಸೋಹ
ವಚನ:
#ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ,
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ,
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ,
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ,
ಕೂಡಲಸಂಗನ ಶರಣರ ಅನುಭಾವದ ಬಲದಿಂದ ಎನ್ನ ಭವದ ಕೇಡು ನೋಡಯ್ಯಾ.
- ಗುರು ಬಸವಣ್ಣನವರು
ಅರ್ಥ:
ಗುರು ಬಸವಣ್ಣನವರು ಶರಣರ ಅನುಭಾವದ ಸತ್ಸಂಗದ ಮಹತ್ವ ಅದರಿಂದ ಭವ ಹೇಗೆ ನಾಶವಾಗುವುದು ಎಂದು ಸುಂದರ ರೂಪಕಗಳ ಮೂಲಕ ವಿವೇಚಿಸಿ ತಿಳಿಸುತ್ತಾರೆ.
*ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯಾ,
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯಾ,
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯಾ,
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯಾ*
ಜ್ಞಾನದ ಬಲದಿಂದ ಅಜ್ಞಾನ ನಾಶವಾಗುತ್ತದೆ. ತಮಂಧವೆಂದರೆ ಅಂಧಕಾರ. ಈ ಅಂಧಕಾರವನ್ನು ನಿವಾರಿಸುವ ಸುಲಭ ಉಪಾಯವೆಂದರೆ ಜ್ಯೋತಿಯನ್ನು ಬೆಳಗಿಸುವದು. ಹೀಗೆ ಜ್ಯೊತಿಯ ಬಲದಿಂದ ಕತ್ತಲೆಯು ಇಲ್ಲವಾಗುತ್ತದೆ. ಇದೇ ರೀತಿ ಸತ್ಯವು ಬೆಳಕಿಗೆ ಬಂದಾಗ ಅಸತ್ಯವು ಅಳಿದುಹೋಗುತ್ತದೆ. ಪರುಷ ಮಣಿಯ ಸ್ಪರ್ಶದಿಂದ ಅವಲೋಹವು ಕೂಡ ತನ್ನ ಅವಲೋಹತ್ವವನ್ನು ಕಳೆದುಕೊಂಡು ಚಿನ್ನವಾಗುತ್ತದೆ.
*ಕೂಡಲಸಂಗನ ಶರಣರ ಅನುಭಾವದ ಬಲದಿಂದ ಎನ್ನ ಭವದ ಕೇಡು ನೋಡಯ್ಯಾ.*
ಹೇಗೆ ಜ್ಞಾನದಿಂದ ಅಜ್ಞಾನ, ಜ್ಯೋತಿಯಿಂದ ಕತ್ತಲೆ, ಸತ್ಯದಿಂದ ಅಸತ್ಯ ಮತ್ತು ಪರುಷಗಳ ಬಲದಿಂದ ಅವಲೋಹಗಳು ನಾಶವಾಗುತ್ತವೆಯೋ ಹಾಗೆಯೇ ಅನುಭಾವಿ ಶರಣರ ಒಡನಾಟ, ಅವರ ಅನುಭಾವದ ನುಡಿಗಳಿಂದ ಅವರ ಸತ್ಸಂಗದಿಂದ ಅಜ್ಞಾನ ಅಡಗಿ ಭವದ ಭಾವಗಳು ಇಲ್ಲವಾಗುತ್ತವೆ. ಹೀಗೆ ಭವ ಅಂದರೆ ಹುಟ್ಟು ಸಾವುಗಳ ಚಕ್ರದಲ್ಲಿ ಸಿಲುಕಿರುವ ಲೌಕಿಕ ಮನುಷ್ಯ ಜೀವನ ನಾಶವಾಗಿ, ಅನುಭಾವದ ಬೆಳಕು ಕಾಣಿಸಿ ಜ್ಞಾನದ ಜ್ಯೋತಿ ಪ್ರಕಾಶಮಾನ ವಾಗುತ್ತದೆ. ಸದಾ ಪ್ರಾಪಂಚಿಕ ವಿಷಯಗಳಲ್ಲಿ ಮುಳುಗುವುದನ್ನು ತಪ್ಪಿಸುತ್ತದೆ ಎಂದು ಹೇಳುತ್ತಾರೆ ಗುರು ಬಸವಣ್ಣನವರು.
ಭಾವ:
ಬೆಳಕು ಜ್ಞಾನದ ಸಂಕೇತವಾದರೆ ಕತ್ತಲೆ ಅಜ್ಞಾನದ ಕುರುಹು. ಈ ಜ್ಞಾನವೆಂಬ ಬೆಳಕಿನ ಬಲದಿಂದ ಅಜ್ಞಾನವೆಂಬ ಕತ್ತಲು ಹರಿಯುತ್ತದೆ. ಜ್ಞಾನದ ಬೆಳಕಿನಲ್ಲಿ, ಶರಣರ ಅನುಭಾವದಿಂದ ಮತ್ತು ಶರಣರ ಸತ್ಸಂಗ ದಿಂದ ಭವ ನಾಶವಾಗಿ ವಿವೇಕ ಅರಳಿ ಅರಿವು ಮೂಡುತ್ತದೆ.
.
Guru Basavanna says :
#The power of knowledge drives the ignorance away!
The power of light drives the darkness away!
The power of Truth drives the untruth away!
The power of the alchemic gem turns any metal into gold!
The power of Sharanas divine experience, drives away my materialism.
After materialism goes away, it is rightous knowledge, rightous kriya and kayaka take us to the peaceful and contented life. Several Sharanas have shown the path of righteousness & truth to the people & society. Let us strive to keep the company of Sharanas who have opened their minds and life to Anubhaava.
- ✍️Dr Prema Pangi
#ಪ್ರೇಮಾ_ಪಾಂಗಿ,#ಗುರು_ಬಸವಣ್ಣನವರು,
#ಜ್ಞಾನದ_ಬಲದಿಂದ_ಅಜ್ಞಾನದ_ಕೇಡು
Comments
Post a Comment