ವಚನ ದಾಸೋಹ
#ವಚನ:
ಕೊಳಲ ದನಿಗೆ ಸರ್ಪ ತಲೆದೂಗಿದಡೇನು,
ಒಳಗಣ ವಿಷದ ಬಯಕೆ ಬಿಡದನ್ನಕ್ಕ ?
ಹಾಡಿದಡೇನು, ಕೇಳಿದಡೇನು,
ತನ್ನಲುಳ್ಳ ಅವಗುಣ ಬಿಡದನ್ನಕ್ಕ ?
ಒಳಗನರಿದು ಹೊರಗೆ ಮರೆದವರ ನೀ ಎನಗೆ ತೋರಯ್ಯಾ ಚೆನ್ನಮಲ್ಲಿಕಾರ್ಜುನಾ. / 187
- ವೀರ ವಿರಾಗಿಣಿ ಅಕ್ಕ ಮಹಾದೇವಿ
ಅರ್ಥ:
*ಕೊಳಲ ದನಿಗೆ ಸರ್ಪ ತಲೆದೂಗಿದಡೇನು, ಒಳಗಣ ವಿಷದ ಬಯಕೆ ಬಿಡದನ್ನಕ್ಕ?*
ಕೊಳಲಿನ ಧ್ವನಿಗೆ ಹಾವು ತನ್ನ ತಲೆಯ ತೂಗಿದರೇನು ಉಪಯೋಗ, ಅದು ತನ್ನೊಳಗಿನ ವಿಷದ ಆಶೆ ಬಿಡದಿದ್ದರೆ? ಸರ್ಪವು ಕೊಳಲು ಅಥವಾ ಪುಂಗಿಯ ನಾದವನ್ನು ಕೇಳಿ ಸಂತಸದಿಂದ ತನ್ನ ಹೆಡೆಯನ್ನ ಎತ್ತಿ ಆಡಿದರೂ, ಅದರೊಳಗಿನ ವಿಷ ಕಡಿಮೆ ಯಾಗುವುದಿಲ್ಲ. ಬಹಿರಂಗದ ಕ್ರಿಯೆ, ಆಚರಣೆಗಳಿಂದ ಅಂತರಂಗ ಶುದ್ಧವಾಗಬೇಕು. ಇಲ್ಲದಿದ್ದರೆ ಆ ಆಚರಣೆಗಳಿಂದ ಯಾವ ಪ್ರಯೋಜನೆ ಇಲ್ಲ. ಅವು ಬರೀ ಅಂಧಶ್ರದ್ಧೆ, ಮೂಢನಂಬಿಕೆಗಳಾಗುತ್ತವೆ.
*ಹಾಡಿದಡೇನು ಕೇಳಿದಡೇನು ತನ್ನಲುಳ್ಳು ಅವಗುಣ ಬಿಡದನ್ನಕ್ಕ?*
ಬರೀ ಭಕ್ತಿಗೀತೆಗಳನ್ನ ತತ್ವಪದಗಳನ್ನು ಹಾಡುವಾತ ಹಾಡಿದರೇನು ಬಂತು? ಕೇಳುವಾತ ಕೇಳಿದರೇನು ಬಂತು? ಬರೀ ಹಾಡಿದರೆ ಅಥವಾ ಕೇಳಿದರೆ ಏನೂ ಪ್ರಯೋಜನ; ಅವರಿಬ್ಬರೂ ತಮ್ಮ ಒಳಗಿರುವ ದುರ್ಗುಣಗಳನ್ನು ಅವಗುಣಗಳನ್ನು ಬಿಡದಿದ್ದರೆ? ಭಕ್ತಿಗೀತೆಗಳನ್ನು, ತತ್ವಪದಗಳನ್ನು ಹಾಡಿದರೆ ಅಥವಾ ಕೇಳಿದರೆ ಅದರಿಂದ ಆಧ್ಯಾತ್ಮಿಕ ಚಿಂತನೆ ಮಂಥನೆಯಾಗಿ ಭಕ್ತಿ ನಿಷ್ಠೆ ನೆಲಿಸಿ ಅಂತರಂಗ ಶುದ್ಧಿಯಾದರೆ ಅದು ಆಧ್ಯಾತ್ಮ ಸಾಧನೆಯಾಗುತ್ತದೆ. ಇಲ್ಲದಿದ್ದರೆ ಅದು ಬರೀ ಬಹಿರಂಗದ ಕ್ರಿಯೆಯಾಗುತ್ತದೆ.
*ಒಳಗನರಿದು ಹೊರಗೆ ಮರೆದವರ ನೀ ಎನಗೆ ತೋರಯ್ಯ ಚೆನ್ನಮಲ್ಲಿಕಾರ್ಜುನಾ.*
ತಮ್ಮೊಳಗೆ ತಾವರಿದು ಹೊರಗೆ ಮರೆದಿರುವ ಶಿವಶರಣರನ್ನು ನೀನು ನನಗೆ ತೋರಿಸು ಚೆನ್ನಮಲ್ಲಿಕಾರ್ಜುನಾ. ಅಂದರೆ ತನ್ನನ್ನು ತಾನೆ ಅರಿತು ಹೊರಗಿನ ಮಾಯಪ್ರಪಂಚವನ್ನು ಮರೆತು ಮುಕ್ತರಾದ ಶರಣರನ್ನು ತೋರಿಸು. ಅಕ್ಕಮಹಾದೇವಿಯವರು ತಮ್ಮ ಇಷ್ಟದೇವ ಚೆನ್ನಮಲ್ಲಿಕಾರ್ಜುನನಲ್ಲಿ ಇಂಥ ಶರಣರ ಸತ್ಸಂಗದ ಪ್ರಾಥನೆ ಮಾಡಿದ್ದಾರೆ.
ಅನುಭಾವಿ ಶರಣರ ಒಡನಾಟ, ಅವರ ಅನುಭಾವದ ನುಡಿಗಳಿಂದ, ಅವರ ಸತ್ಸಂಗದಿಂದ, ನಮ್ಮ ಅಜ್ಞಾನ ಅಡಗಿ ಭವದ ಭಾವಗಳು ಇಲ್ಲವಾಗಿ ಅಂತರಂಗ ಶುದ್ಧವಾಗ ಬೇಕು. ಹೀಗೆ ಭವದ ನಾಶವಾಗಿ, ಅನುಭಾವದ ಬೆಳಕು ಕಾಣಿಸಿ ನಮ್ಮ ಜ್ಞಾನದ ಜ್ಯೋತಿ ಪ್ರಕಾಶಮಾನ ವಾಗಬೇಕು.
ಈ ವಚನದಲ್ಲಿ ಅಕ್ಕ ಮಹಾದೇವಿ ನೈತಿಕ ಜೀವನದಲ್ಲಿ ನಮ್ಮ ಬಾಹ್ಯ ದೇಹ ಶುದ್ಧತೆಗಿಂತಲೂ ಅಂತರಂಗದ ಶುದ್ಧಿ ಅತಿ ಮಹತ್ವದ್ದು ಎಂದು ತಿಳಿಸುತ್ತಾರೆ.
ನಮ್ಮ ನಡೆನುಡಿ ಒಂದಾದ ಶುದ್ಧ ಬದುಕು ಅಂತರಂಗ ಶುದ್ಧತೆಗೆ ನಾಂದಿಯಾಗುತ್ತದೆ
ಅಂತರಂಗ ಶುದ್ಧವಾಗಿದ್ದಲ್ಲಿ ನಮ್ಮ ಆರಾಧನೆ, ಸ್ತುತಿ ವಂದನೆ ದೇವರಿಗೆ ಸಲ್ಲುತ್ತದೆ ಹಾಗೂ ಅದರ ಪ್ರತಿಫಲವು ನಮಗೆ ಲಭಿಸುತ್ತದೆ. ಇಲ್ಲವಾದಲ್ಲಿ ಅದು ಸಂಪೂರ್ಣವಾಗಿ ವ್ಯರ್ಥವೇ ಸರಿ. ನಮ್ಮ ಅಂತರಂಗ ಶುದ್ಧವಾದರೆ ಅದು ದೇವರ ತಾಣವಾಗಿ ಶುದ್ಧ ಬದುಕು ನಮ್ಮದಾಗುತ್ತದೆ. ನಮ್ಮಲ್ಲಿ ದ್ವಂದ್ವವಿರುವುದಿಲ್ಲ. ಮನಸ್ಸಿನಲ್ಲಿ ಕಲ್ಮಶವಿರುವುದಿಲ್ಲ. ಬದುಕು ಪಾರದರ್ಶಕವಾಗಿ ಅಂತರಂಗ ಬಹಿರಂಗಗಳು ಒಂದೇ ಆಗುತ್ತವೆ.
ಅಂತರಂಗ ಶುದ್ಧಿ ಇಲ್ಲದೆ ಯಾವದೇ ಬಹಿರಂಗದ ಕಾರ್ಯಗಳನ್ನು ಮಾಡಿದರೂ ಅವುಗಳಿಗೆ ನೈತಿಕದೃಷ್ಟಿಯಲ್ಲಿ ಬೆಲೆಯಿಲ್ಲ. ಬರೀ ಆಡಂಬರಕ್ಕೆ ಮಾಡಿದಂತೆ ಆಗುತ್ತದೆ. ಜನರನ್ನು ಮೆಚ್ಚಿಸಬಹುದು, ಆದರೆ ನಮ್ಮ ಒಳ ಹೊರಗೆ ಎಲ್ಲ ಬಲ್ಲ ದೇವರನ್ನಲ್ಲ. ತಾನು ಮಾಡಿದ ಕಾರ್ಯ ಸಾರ್ಥಕವಾಯಿತು ಎಂಬ ತೃಪ್ತಿ ಬರಬೇಕಾದರೆ ಈ ಕಾರ್ಯವನ್ನು ಅಂತರಂಗದ ಶುದ್ಧಿಯಿಂದ ಮಾಡಬೇಕು.
ತನುವನ್ನು ತೊಳೆಯುವುದಕ್ಕಿಂತ ಮನವನ್ನು ತೊಳೆಯುವುದು ಮುಖ್ಯವಾದುದು. ಕಾಮ ಕ್ರೋಧ ಮದ ಮತ್ಸರ ಲೋಭ ಮೋಹ ಎಂಬ ವಿಷಗಳನ್ನು ಒಳಗೆ ತುಂಬಿಕೊಂಡು ಪೂಜೆ ಮಾಡಿದರೆ ಏನು ಪ್ರಯೋಜನ ? ತ್ರಿಕರಣಶುದ್ಧಿಯಿಂದ ಅಂದರೆ ದೇಹ ಮಾತು ಮನಸ್ಸು ಇವುಗಳ ಶುದ್ಧತೆಯಿಂದ ಮಾಡಿದ ಪೂಜೆಗೆ, ಧರ್ಮಕ್ರಿಯೆಗೆ, ದೇವರು ಒಲಿಯುತ್ತಾನೆಂದು ಅಕ್ಕ ಮಹಾದೇವಿ ತಿಳಿ ಹೇಳುತ್ತಾರೆ.
-✍️ Dr Prema Pangi
#ಪ್ರೇಮಾ_ಪಾಂಗಿ,
#ಕೊಳಲ_ದನಿಗೆ_ಸರ್ಪ-ತಲೆದೂಗಿದಡೇನು
Comments
Post a Comment