ವಚನ ದಾಸೋಹ
*ವಚನ:*
#ತನ್ನಾಶ್ರಯದ ರತಿಸುಖವನು,
ತಾನುಂಬ ಊಟವನು ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?
ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ ತಾ ಮಾಡಬೇಕಲ್ಲದೆ ಬೇರೆ ಮತ್ತೊಬ್ಬರ
ಕೈಯಲ್ಲಿ ಮಾಡಿಸಬಹುದೆ?
ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ
ನಿಮ್ಮನೆತ್ತಬಲ್ಲರು, ಕೂಡಲಸಂಗಮದೇವಾ./ 697
- ಗುರು ಬಸವಣ್ಣನವರು
ಅರ್ಥ:
ಮನೆಯಲ್ಲಿ ನಡೆಯುವ ಮತ್ತು ದೇವಾಲಯಗಳಲ್ಲಿ ನಡೆಯುವ ಪೂಜೆ ಪುನಸ್ಕಾರ, ಧಾರ್ಮಿಕ ಕ್ರಿಯೆಗಳಲ್ಲಿ ಭಕ್ತರ ಪರವಾಗಿ ಪುರೋಹಿತರು ಪೂಜೆಯನ್ನು ಮಾಡುವ ಪದ್ಧತಿಯೇ ಸಮಾಜದಲ್ಲಿ ಹೆಚ್ಚು ಪ್ರಚಲಿತವಾಗಿತ್ತು. ಅದೇ ಧಾರ್ಮಿಕ ಶೋಷಣೆಗೂ ಕಾರಣವಾಗಿತ್ತು. ಇದನ್ನು ಪ್ರಬಲವಾಗಿ ಪ್ರತಿಭಟಿಸಿದರು ಗುರು ಬಸವಣ್ಣನವರು.
*ತನ್ನಾಶ್ರಯದ ರತಿಸುಖವನು,
ತಾನುಂಬ ಊಟವನು ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಬಹುದೆ?*
ತನ್ನ ರತಿಸುಖವನ್ನು, ತಾನೂ ಉಣ್ಣುವ ಊಟವನ್ನು ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಲು ಸಾಧ್ಯವಿಲ್ಲ.ಅದರಿಂದ ಹೊಟ್ಟೆಯೂ ತುಂಬುವುದಿಲ್ಲ ಆನಂದಿಸಲು ಸಾದ್ಯವಿಲ್ಲ.
*ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವ ತಾ ಮಾಡಬೇಕಲ್ಲದೆ ಬೇರೆ ಮತ್ತೊಬ್ಬರ
ಕೈಯಲ್ಲಿ ಮಾಡಿಸಬಹುದೆ?*
ಅದೇ ರೀತಿ ಇಷ್ಟಲಿಂಗದ ಪೂಜೆಯು ಬೇರೊಬ್ಬರ ಕೈಯಲ್ಲಿ ಮಾಡಿಸಲಾಗದ ಪೂಜೆ. ತನ್ನ ಲಿಂಗಕ್ಕೆ ಮಾಡುವ ನಿತ್ಯನೇಮವನ್ನು ತಾನೇ ಮಾಡಬೇಕು. ಭಕ್ತ ಮತ್ತು ಇಷ್ಟಲಿಂಗದ ಸಂಬಂಧ, ಪೂಜೆ ವೈಯಕ್ತಿಕವಾದುದು.
*ಕೆಮ್ಮನೆ ಉಪಚಾರಕ್ಕೆ ಮಾಡುವರಲ್ಲದೆ
ನಿಮ್ಮನೆತ್ತಬಲ್ಲರು, ಕೂಡಲಸಂಗಮದೇವಾ.*
ಹೇಗೆ ಪತ್ನಿಯ ಸುಖವನ್ನೂ, ತನ್ನ ಊಟವನ್ನೂ ಬೇರೆಯವರ ಕೈಲಿ ಮಾಡಿಸಿ ಆನಂದ ಪಡೆಯಲು ಬಾರದೋ ಹಾಗೆಯೇ, ತನ್ನ ಲಿಂಗಕ್ಕೆ ತಾ ಮಾಡಬೇಕಾದ ನಿತ್ಯ ನೇಮವನ್ನು ಬೇರೆ ಮತ್ತೊಬ್ಬರ ಕೈಯಲ್ಲಿ ಮಾಡಿಸಲು ಬರದು. ಹೀಗೆ ದೇವರ ಪೂಜೆಯನ್ನು ಪೂಜಾರಿಗಳ ಮೂಲಕ ಮಾಡಿಸಿಕೊಳ್ಳುವವರು ಕೆಮ್ಮನೆ ಉಪಚಾರಕ್ಕೆ ಮತ್ತು ಬಾಹ್ಯಾಡಂಬರಕ್ಕೆ ಮಾಡುವರಲ್ಲದೆ ದೇವನನ್ನು ಅರಿದವರಲ್ಲ. ದೇವರನ್ನು ಅರಿಯಲಾರರು. ವೈಯಕ್ತಿಕವಾಗಿ ಆತ್ಮಿಯವಾಗಿ ಮಾಡುವ ಇಷ್ಟಲಿಂಗ ಪೂಜೆ ಇಂದಮಾತ್ರ ಅರಿಯಲು ಸಾಧ್ಯವಾಗುವುದು.
*ಭಾವ:*
ಪುರೋಹಿತರಿಂದ ಅರ್ಚಕರಿಂದಲೇ ದೇವರ ಪೂಜೆಯನ್ನು ಮಾಡಿಸಬೇಕು, ಭಕ್ತರು ದೂರ ನಿಂತು ನೋಡಬೇಕು ಎನ್ನುವ ಪುರಾತನ ಸಂಪ್ರದಾಯವನ್ನು ಬಸವಣ್ಣನವರು ಅಲ್ಲಗಳೆದರು. ವೈಯಕ್ತಿಕ, ಆತ್ಮೀಯ ಹಾಗೂ ವ್ಯಕ್ತಿನಿಷ್ಠ ಅನುಸಂಧಾನದಿಂದ ಮಾತ್ರ ಇಷ್ಟಲಿಂಗ ಪೂಜೆ ಮಾಡಬೇಕು. ಬಸವಾದಿ ಶರಣರು ದೇಹವನ್ನೇ ದೇವಾಲಯ ಮಾಡಿಕೊಂಡು ಪ್ರಾಣಲಿಂಗ, ಭಾವಲಿಂಗ ಸಾಕ್ಷತ್ಕರಿಸಿಕೊಂಡು ಶಿವಯೋಗ ಸಾಧನೆಯಿಂದ ಉದಾತ್ತವಾದ ಅಂತರಂಗದ ಪೂಜೆ, ಶಿವಯೋಗ ಸಾಧನೆಯಿಂದ ಅಂತರ್ಮುಖ ವಿಕಾಸವನ್ನೂ ರೂಪಿಸಿದರು.
ಗುರು ಬಸವಣ್ಣನವರು ಇಷ್ಟಲಿಂಗ ಪೂಜೆ ಮನಮುಟ್ಟಿ, ತನುಮುಟ್ಟಿ ಮಾಡಬೇಕು ಎಂದು ತಿಳಿಸುತ್ತಾರೆ.
#ಹಸಿವಾದಡುಂಬುದನು, ಸತಿಯ ಸಂಭೋಗವನು
ಆನಾಗಿ ನೀ ಮಾಡೆಂಬವರುಂಟೆ
ಮಾಡುವುದು, ಮಾಡುವುದು ಮನಮುಟ್ಟಿ,
ಮಾಡುವುದು, ಮಾಡುವುದು ತನುಮುಟ್ಟಿ,
ತನುಮುಟ್ಟಿ ಮನಮುಟ್ಟದಿರ್ದಡೆ
ಕೂಡಲಸಂಗಮದೇವನೇತರಲ್ಲಿಯೂ ಮೆಚ್ಚ. / 1337
ಭಗವಂತನಲ್ಲಿ ತಾನು ಮಾಡುವ ಭಕ್ತಿಯನ್ನು ತಾನೇ ಮಾಡಬೇಕು. ಹಸಿವಾದರೆ ಊಟ ಮಾಡುವುದನ್ನೂ ಸತಿಯೊಡನೆ ದಾಂಪತ್ಯದ ಸಂಬಂಧವನ್ನೂ ಬೇರೆ ಇನ್ನೊಬ್ಬರಿಂದ ಮಾಡಿಸಬಹುದೆ ? ಒಬ್ಬರ ಪರವಾಗಿ ಇನ್ನೊಬ್ಬರು ಇದನ್ನು ತೃಪ್ತಿ ಪಡಿಸುವುದಕ್ಕೆ ಆಗುವುದಿಲ್ಲ. ತನ್ನ ಪರವಾಗಿ ಇನ್ನಾರೋ ಪೂಜೆ ಮಾಡುವ ಧಾರ್ಮಿಕ ವ್ಯವಸ್ಥೆಯನ್ನು ಬಸವಣ್ಣನವರು ನಿರಾಕರಿಸಿದರು.
ಜೇಡರ ದಾಸಿಮಯ್ಯನವರು ಸತಿಯರ ಸಂಗ, ದೇವರ ಪೂಜೆ ಅರಿವಿದ್ದವರು ಪರರಿಂದ ಮಾಡಿಸುವದಿಲ್ಲ ಎನ್ನುವರು.
#ಸತಿಯರ ಸಂಗವನು ಅತಿಶಯ ಗ್ರಾಸವನು
ಪೃಥ್ವಿಗೀಶ್ವರನ ಪೂಜೆಯನು
ಅರಿವುಳ್ಳಡೆ ಹೆರರ ಕೈಯಿಂದ ಮಾಡಿಸುವರೆ! ರಾಮನಾಥ.
ಇಷ್ಟಲಿಂಗವನ್ನು ಪೂಜಿಸುವ ಹಂಬಲವಿರುವ ಭಕ್ತನು ನೆಟ್ಟನೇ ಪೂಜಿಸುವನು. ಇಲ್ಲಿ ಅನ್ಯರ ಮೂಲಕ ಪೂಜೆಯಿಲ್ಲ. ಪೂಜಾರಿಯ ಮಧ್ಯಸ್ಥಿಕೆ ಇಲ್ಲ. ಸ್ಥಾವರಲಿಂಗವಿರುವ ದೇವಾಲಯಗಳಲ್ಲಿ ಪೂಜಾರಿಯ ಮೂಲಕವೇ ಭಕ್ತ ಪೂಜಿಸಬೇಕು. ಶರಣರು ಭಕ್ತ- ದೇವರ ಮಧ್ಯೆ ಪೂಜಾರಿಯ ಪ್ರವೇಶವನ್ನು ಖಂಡಿಸಿದರು. ಇಷ್ಟಲಿಂಗವು ವೈಯಕ್ತಿಕವಾಗಿ ಉಪಾಸನೆ ಮಾಡುವ ಮಹಾಲಿಂಗದ ಕುರುಹು. ಏಕಾಂತದಲ್ಲಿ ಪೂಜಿಸುವ ಸಾಕಾರವು. ಆದರೆ ಸ್ಥಾವರ ಲಿಂಗವು ಹಲವರ ಪೂಜೆಗಾಗಿ ಸಾರ್ವತ್ರಿಕವಾಗಿ ಮಂದಿರದಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಕಾರಣ ವೈಯಕ್ತಿಕ ಉಪಾಸನೆ ಏಕಾಂತ ಪೂಜೆ ಸಾಧ್ಯವಿಲ್ಲ. ಸ್ಥಾವರಲಿಂಗ ಪೂಜೆಯಲ್ಲಿ ಕೇವಲ ಭಕ್ತಿಯೋಗವಿದೆ. ಅಂಗಲಿಂಗಸಮರಸಕ್ಕೆ, ಶಿವಯೋಗಕ್ಕೆ ಸಾಧನ ವಾಗುವದಿಲ್ಲ.
ದೇವನನ್ನೊಲಿಸಿಕೊಳ್ಳಲು ಮನಬಂದ ಪರಿಯಲ್ಲಿ ಆನಂದದಿಂದ ಭಕ್ತ ಪೂಜಿಸಬೇಕಲ್ಲದೇ, ಯಾಂತ್ರಿಕವಾಗಿ ಪೂಜಿಸುವ ಪೂಜಾರಿ ಬೇಡ. ಸಾಮಾನ್ಯವಾಗಿ ಪೂಜಾರಿ ಸಂಬಳ, ಕಾಣಿಕೆ, ನೈವೇದ್ಯದ ಸಲುವಾಗಿ ಪೂಜಿಸುವನು. ಪೂಜಾರಿಯ ಪರಂಪರೆಯು ಪರಾವಲಂಬನವನ್ನೂ ಕಲಿಸಿ, ಜಾತೀಯತೆಯನ್ನು ಪ್ರಚೋದಿಸುತ್ತದೆ.
ಶರಣ ಧರ್ಮದ ವೈಶಿಷ್ಟ್ಯವೇ ನೆಟ್ಟನೇ ಪೂಜಿಸಿ ಭವಗೆಡುವುದು. ಇಷ್ಟಲಿಂಗದ ಪೂಜೆ ವೈಯಕ್ತಿಕ, ಆತ್ಮೀಯ ಪೂಜೆ. ವ್ಯಕ್ತಿನಿಷ್ಠ ಅನುಸಂಧಾನದಿಂದ ಮಾಡಿದ ಪೂಜೆ ಮಾತ್ರ ಶಿವನನ್ನು ಮುಟ್ಟುತ್ತದೆ. ಈ ಏಕಾಂತ ಪೂಜೆಯಲ್ಲಿ ಭಕ್ತ ಇಷ್ಟಲಿಂಗದಲ್ಲಿ ಆತ್ಮೀಯ ಸಂಭಾಷಣೆಯನ್ನು ನಡೆಸುತ್ತಿದ್ದರು ಎನ್ನಲಿಕ್ಕೆ ಕೆಳಗಿನ ವಚನ ಸಂಭಾಷಣೆಗಳೇ ಸಾಕ್ಷಿ.
*ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮನಗಲದ ಪೂಜೆ ಅನುವಾಯಿತ್ತೆನಗೆ*
*ಎನ್ನ ತಂದೆ ಕೇಳಾ, ಚೆನ್ನಮಲ್ಲಿಕಾರ್ಜುನಾ
ನಿಮ್ಮ ಎಂಜಲನುಂಬ ಹಳೆಯವಳಾನಯ್ಯಾ.*
*ಎನ್ನ ನೊಂದ ನೋವು, ಬೆಂದ ಬೇಗೆ,
ನಿಮ್ಮ ತಾಗದೆ ಹೋಹುದೆ ಅಯ್ಯಾ*
*ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚೆನ್ನಮಲ್ಲಿಕಾರ್ಜುನಯ್ಯಾ ?*
*ಎನ್ನೊಡೆಯ ಕೂಡಲಸಂಗಮದೇವಾ
ನಿಮ್ಮ ಚರಣವ ನೆನೆವಂತೆ ಕರುಣಿಸು-
ಸೆರಗೊಡ್ಡಿ ಬೇಡುವೆ, ನಿಮ್ಮ ಧರ್ಮ.*
*ಕೂಡಲಸಂಗಯ್ಯಾ
ನಿಮ್ಮೊಳು ಕಂಡು ಸುಖಿಯಾಗಿರ್ದೆನು.*
*ತಂದೆ ನೀನು ತಾಯಿ ನೀನು, ಬಂಧು ನೀನು ಬಳಗ ನೀನು, ನೀನಿಲ್ಲದೆ ಮತ್ತಾರೂ ಇಲ್ಲವಯ್ಯ*
- ✍️Dr Prema Pangi
#ಪ್ರೇಮಾ_ಪಾಂಗಿ, ಗುರು_ಬಸವಣ್ಣನವರು
#ತನ್ನಾಶ್ರಯದ_ರತಿಸುಖವನು,
#ಹಸಿವಾದಡುಂಬುದನು_ಸತಿಯ
#ಸತಿಯರ_ಸಂಗವನು_ಅತಿಶಯಗ್ರಾಸವನು
Comments
Post a Comment