ವಚನ ದಾಸೋಹ

ವಚನ :
#ಕಾಯಕದಲ್ಲಿ ನಿರತನಾದರೆ ಗುರು ದರುಶನವಾದರೂ ಮರೆಯಬೇಕು; ಲಿಂಗಪೂಜೆಯಾದರೂ ಮರೆಯಬೇಕು; 
ಜಂಗಮ ಮುಂದಿದ್ದಡೂ ಹಂಗು ಹರಿಯಬೇಕು ; 
ಕಾಯಕವೇ ಕೈಲಾಸವಾದ ಕಾರಣ, ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು./7
- ಶರಣ ಆಯ್ದಕ್ಕಿ ಮಾರಯ್ಯ 
ಅರ್ಥ:
ಇದು "ಕಾಯಕವೇ ಕೈಲಾಸ" ಎಂಬ ಯುಗಘೋಷಣೆಯನ್ನು ನೀಡಿದ ವಚನ. 

*ಕಾಯಕದಲ್ಲಿ ನಿರತನಾದರೆ ಗುರು ದರುಶನವಾದರೂ ಮರೆಯಬೇಕು. ಲಿಂಗಪೂಜೆಯಾದರೂ ಮರೆಯಬೇಕು.
ಜಂಗಮ ಮುಂದಿದ್ದಡೂ ಹಂಗು ಹರಿಯಬೇಕು.* 

ಕಾಯಕವ ಕೈಗೊಂಡು, ಅದನ್ನು ಒಲವು ನಲಿವುಗಳಿಂದ ಮಾಡಬೇಕೆಂಬ ಆಸೆಯಿಂದ ಕೂಡಿ, ಅದರಲ್ಲಿಯೇ ತನ್ನ ಮೈಮನಗಳನ್ನು ತೊಡಗಿಸಿಕೊಂಡು ದುಡಿಯುತ್ತಿರುವಾಗ; ದುಡಿಮೆಯ ಸಮಯದಲ್ಲಿ ಗುರು ತನ್ನ ಬಳಿ ಬಂದರೂ, ದುಡಿಮೆಯನ್ನು ಕೈ ಬಿಟ್ಟು, ಗುರುವನ್ನು ಉಪಚರಿಸಲು ಹೋಗಬಾರದು. ಏಕೆಂದರೆ ಗುರುಸೇವೆಗಿಂತಲೂ ಕೈಯ್ಗೊಂಡಿರುವ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುವುದು ಮೊದಲ ಗುರಿಯಾಗಿರಬೇಕು.
ಲಿಂಗವನ್ನು ಪೂಜಿಸುವುದಕ್ಕಿಂತಲೂ ಈಗ ಮಾಡುತ್ತಿರುವ ದುಡಿಮೆಯು ದೊಡ್ಡದು ಎಂಬುದನ್ನು ಅರಿತಿರಬೇಕು.
ಜಂಗಮನು ತನ್ನ ಬಳಿಸಾರಿ ಬಂದು ನಿಂತಿದ್ದರೂ, ಅವನತ್ತ ಗಮನ ಹರಿಸದೆ, ವ್ಯಕ್ತಿಯು ತಾನು ಮಾಡುತ್ತಿರುವ ಕೆಲಸದಲ್ಲಿ ತೊಡಗಿರಬೇಕು.
ವ್ಯಕ್ತಿಯು ತಾನು ಕೈ ಗೊಂಡಿರುವ ಕಾಯಕದಲ್ಲಿ ತಲ್ಲೀನತೆಯಿಂದ ಏಕಾಗ್ರತೆ ಯಿಂದ ತೊಡಗಿಸಿಕೊಳ್ಳಬೇಕೆಂಬುದನ್ನು  ಶರಣ ಆಯ್ದಕ್ಕಿ ಮಾರಯ್ಯ ಹೇಳಿದ್ದಾರೆ.

*ಕಾಯಕವೇ ಕೈಲಾಸವಾದ ಕಾರಣ, ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು.*

"ಕಾಯಕವೇ ಕೈಲಾಸವಾದ ಕಾರಣ"  ಅಂದರೆ
ವ್ಯಕ್ತಿಯು ತನ್ನ ಪಾಲಿನ ಕಾಯಕವನ್ನು ಒಲವು ನಲಿವು ಮತ್ತು ಪ್ರಾಮಾಣಿಕತನದಿಂದ ಮಾಡಿದರೆ, ಅದು ಅವನ ಬದುಕಿನ ಏಳಿಗೆಗೆ ಕಾರಣವಾಗುವುದರ ಜತೆಜತೆಗೆ  ಸಮಾಜಕ್ಕೂ ಒಳಿತನ್ನುಂಟುಮಾಡಿ, ಜನರು ವಾಸಮಾಡುತ್ತಿರುವ ನೆಲೆಯನ್ನೇ 
ನೆಮ್ಮದಿಯ ಬೀಡು ಅಂದರೆ ಕೈಲಾಸ ವನ್ನಾಗಿ ಮಾಡುತ್ತದೆ ಎಂಬ ತಿರುಳನ್ನು ಒಳಗೊಂಡಿದೆ. 
ಲಿಂಗದ ಪೂಜೆಯಾಗಿದ್ದರೂ ಅದು ಕೂಡ ಮಾಡುವ ಕಾಯಕದಲ್ಲೇ ಸೇರಿಕೊಂಡಿದೆ. ಕಾಯಕಕ್ಕಿಂತ ಮಿಗಿಲಾದ ಪೂಜೆಯಿಲ್ಲ. ಅದಕ್ಕಿಂತ ಮಹತ್ವದ ನೇಮವಿಲ್ಲ.
 "ಅಮರೇಶ್ವರ ಲಿಂಗವಾಯಿತ್ತಾದಡೂ ಕಾಯಕದೊಳಗು" ಅಂದರೆ ಅಮರೇಶ್ವರ ಲಿಂಗವಾಗಿದ್ದು ಸಹ ಕಾಯಕದ ಒಳಗೆ. ಹೀಗೆ ಲಿಂಗಸ್ವರೂಪಿ ಪರಶಿವನು ಸಹ ಮಹಾಲಿಂಗವಾಗಿ ಜಗತ್ತನ್ನು ರಚಿಸಿದ್ದು ಮತ್ತು ಪಾಲಿಸುತ್ತಿರುವದು ಕಾಯಕ ವಾಗಿಯೆ ಎಂಬ ಭಾವ ಒಳಗೊಂಡಿದೆ.
ಭಾವ:
ಹನ್ನೆರಡನೆಯ ಶತಮಾನದಲ್ಲಿದ್ದ ಶಿವಶರಣಶರಣೆಯರ ನಿಲುವಿನಲ್ಲಿ
"ಕಾಯಕ" ಎಂದರೆ ವ್ಯಕ್ತಿಯು ಮಾಡುವ ಕಸುಬು. ಅದು ಅವನಿಗೆ ಮತ್ತು ಅವನ ಕುಟುಂಬಕ್ಕೆ  ನೆಮ್ಮದಿಯನ್ನು ತಂದುಕೊಡುವಂತೆಯೇ,ಸಮಾಜಕ್ಕೆ ಒಳಿತನ್ನು ಉಂಟುಮಾಡುವಂತಿದ್ದು , ಒಟ್ಟು ಜನಸಮುದಾಯದ ಹಿತಕ್ಕೆ ನೆರವಾಗುವಂತಿರುವ ದುಡಿಮೆ
ಎಂದು ಹೇಳಬಹುದು.
ಕಾಯಕ ಮನುಷ್ಯನ ಘನತೆ. ಕಾಯಕ ಮನುಷ್ಯನ ಧರ್ಮ. ಆದ್ದರಿಂದಲೇ ಎಂಥಾ ಸನ್ನಿವೇಶದಲ್ಲೂ ಬಿಡದೆ ಕಾಯಕ ಮಾಡಬೇಕು. ಮೊದಲ ಆದ್ಯತೆ ಅದಕ್ಕೇ ಮೀಸಲಿರಬೇಕು. ನಾವು ದಿನದ ಪ್ರತಿ ತುತ್ತನ್ನೂ ನಮ್ಮ ದುಡಿಮೆಯ ಫಲವಾಗಿ ಉಣ್ಣಬೇಕು ಎಂದು ಬಸವಾದಿ ಶರಣರು ಕಾಯಕವೇ ಕೈಲಾಸ ಎಂದು ಘೋಷಿಸಿ, ಕಾಯಕಕ್ಕೆ ಮರ್ಯಾದೆ, ಘನತೆ ಮತ್ತು ದೈವಿಕತೆ (Honour, Dignity and Divinity) ಕೊಟ್ಟು, ಎಲ್ಲ ಕಾಯಕಗಳಿಗೂ ಸಮಾನ ಗೌರವ ಕಲ್ಪಿಸಿ ಕಾಯಕಜೀವಿಗಳಿಗೆ ಸನ್ಮಾನ ಕೊಟ್ಟರು.
-✍️ Dr Prema Pangi
#ಪ್ರೇಮಾ_ಪಾಂಗಿ,#ಕಾಯಕವೇ_ಕೈಲಾಸ
#ಆಯ್ದಕ್ಕಿ_ಮಾರಯ್ಯ,
#ಕಾಯಕದಲ್ಲಿ_ನಿರತನಾದರೆ_ಗುರು
Picture post created by me.A small service to popularise Vachana sahitya

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma