ಷಟ್ಸ್ಥಲ - ಮಹೇಶ್ವರಸ್ಥಲ


ಷಟ್ಸ್ಥಲ  -  ಮಹೇಶ್ವರಸ್ಥಲ
ಷಟ್ಸ್ಥಲ - ಮಹೇಶ್ವರಸ್ಥಲ
*ಮಹೇಶ್ವರಸ್ಥಲ*:
ಷಟ್ಸ್ಥಲ ಎಂಬುದು ಸಾಧಕ ಶಿವನೇ ಆಗಿ ವಿಕಾಸಗೊಳ್ಳುವ ಪ್ರಕ್ರಿಯೆ. ಸಾಧಕ, ಅಜ್ಞಾನ ಸ್ಥಿತಿಯಿಂದ ಪರಮ ಸುಜ್ಞಾನ ಸ್ಥಿತಿಯೆಡೆಗೆ ತಲುಪಲು ಅನುಸರಿಸಬೇಕಾದ ದಿವ್ಯ ಪಥ. ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯಗಳೇ ಆ ಆರು ಹಂತಗಳು.
ಮಹೇಶ್ವರಸ್ಥಲ ಇದು ಷಟ್ಸ್ಥಲದ ಎರಡನೆಯ ಸ್ಥಲ.
ಸಾಧಕ ಕೈಕೊಂಡ ಮಾರ್ಗದಲ್ಲಿ ಅಪಾರವಾದ ಶ್ರದ್ಧೆಯಿಂದ ಮುನ್ನಡೆಯುತ್ತಾ, ಸ್ವಸ್ವರೂಪ ದರ್ಶನದ ಪ್ರಯತ್ನದಲ್ಲಿರುವ ಭಕ್ತರಿಗೆ ಅಗತ್ಯವಾಗಿದ್ದು ಅದನ್ನು ಹಾಗೆಯೇ ಬೆಳೆಸಿಕೊಂಡು ಹೋಗುವ ಏಕೈಕ ನಿಷ್ಠೆ.
 ಶ್ರದ್ದೆ ಮತ್ತು ನಿಷ್ಠೆ ಎರಡು ಸಾಧಕ ಜೀವನದ ಎರಡು ಆಧಾರಸ್ತಂಭಗಳು, ಮಹೇಶ್ವರಸ್ಥಲದಲ್ಲಿ ಉದ್ದಕ್ಕೂ ಕಾಣುವ ನಿಲುವು ಈ ನಿಷ್ಠೆ. ಭಕ್ತಸ್ಥಲದಲ್ಲಿ ಶ್ರದ್ಧಾ ಭಕ್ತಿ ಇದ್ದರೆ ,ಇಲ್ಲಿನ ಭಕ್ತಿಯನ್ನು 'ನಿಷ್ಟಾಭಕ್ತಿ' ಎಂದು ಕರೆಯಲಾಗಿದೆ. ಸಾಧನೆಯ ಎಲ್ಲ ಹಂತಗಳಲ್ಲಿ ಈ ನಿಷ್ಟಾಭಕ್ತಿ ಅಚಲವಾಗಿ ಅಳವಡಬೇಕು. ವಿಚಾರ ಆಚಾರಗಳಿಂದ ಗಟ್ಟಿಗೊಂಡ ಅಚಲವಾದ ನಿಷ್ಠೆ ಇಲ್ಲಿ ಬೆಳೆಯುತ್ತದೆ. ಸಾಹಸ, ಧೈರ್ಯ, ಛಲ, ಹಠ ಗುಣಗಳು ಇಲ್ಲಿ ಕಂಡರೂ 'ಇವು ತಾಮಸ ನಿರಸನದಿಂದ ಉಂಟಾದ ಸಾತ್ವಿಕ ಗುಣಗಳು ; ಸತ್ಪರವಾದುವು'.
#ಛಲಬೇಕು ಶರಣಂಗೆ ಪರಧನವನೊಲ್ಲೆನೆಂಬ,
ಛಲಬೇಕು ಶರಣಂಗೆ ಪರಸತಿಯನೊಲ್ಲೆನೆಂಬ,
ಛಲಬೇಕು ಶರಣಂಗೆ ಪರದೈವವನೊಲ್ಲೆನೆಂಬ......ಛಲವಿಲ್ಲದವರ ಮೆಚ್ಚ, ಕೂಡಲಸಂಗಮದೇವ. 
ಅಂದರೆ ನೈತಿಕ ನಿಷ್ಠೆ ಅಚಲವಾಗಿರಬೇಕು ಎಂದು ಗುರು ಬಸವಣ್ಣನವರ ಪ್ರತಿಪಾದನೆ.
ಭಕ್ತಿಯ ಮಾಡುವಲ್ಲಿ ಹಿಡಿದು, ಬಿಡೆನೆಂಬ ಛಲಬೇಕು. ನಿಷ್ಠೆಯುಳ್ಳ ಭಕ್ತ ಆದದ್ದಾಗಲಿ ಎಂದು ಉದಾಸೀನ ಮಾಡುವಾತನಲ್ಲ. ಬಂದದ್ದನ್ನು ಧೈರ್ಯದಿಂದ ಎದರಿಸುವಾತ. ಒಮ್ಮೆ ಆ ಮಾರ್ಗವನ್ನು ಅವಲಂಬಿಸಿದ ಮೇಲೆ ಏನೇ ಕಷ್ಟ ನಿಷ್ಟುರಗಳು ಬಂದರೆ ಅಂಜದೆ ಅಳುಕದೆ ಆ ಮಾರ್ಗದಲ್ಲಿ ನಡೆಯಬೇಕು.

#ಜೋಳವಾಳಿಯಾನಲ್ಲ, ವೇಳೆವಾಳಿಯವ ನಾನಯ್ಯಾ.
ಹಾಳುಗೆಟ್ಟೋಡುವ ಆಳು ನಾನಲ್ಲವಯ್ಯಾ.
ಕೇಳು, ಕೂಡಲಸಂಗಮದೇವಾ,
ಮರಣವೆ ಮಹಾನವಮಿ. / 669
ಎಂಬಂತಹ ನಿಷ್ಠೆ ಬೇಕು ಸಾಧಕನಿಗೆ, ಆತ 'ಕಾಯದ ಕಳವಳಕಂಜಿ ಕಾಯಯ್ಯ”
ಎನ್ನುವುದಿಲ್ಲ. ಜೀವನೋಪಾಯಕ್ಕಂಜಿ ಕಾ ಯಯ್ಯ ಎನ್ನುವುದಿಲ್ಲ. ಆತನ ಅಂಗಕ್ಕೆ ಬಡತನವಲ್ಲದೆ ಮನಕ್ಕೆ ಬಡತನವಿಲ್ಲ, ಮರಣವನ್ನು ಮಹಾನವಮಿ ಎಂದು ಎದುರು
ಗೊಳ್ಳುವ ಶ್ರೀಮಂತಿಕೆ ಆತನದು. 

#ನಾಳೆ ಬಪ್ಪುದು ನಮಗಿಂದೆ ಬರಲಿ,
ಇಂದು ಬಪ್ಪುದು ನಮಗೀಗಲೆ ಬರಲಿ,
ಇದಕಾರಂಜುವರು, ಇದಕಾರಳುಕುವರು
`ಜಾತಸ್ಯ ಮರಣಂ ಧ್ರುವಂ' ಎಂದುದಾಗಿ
ನಮ್ಮ ಕೂಡಲಸಂಗಮದೇವರು ಬರೆದ ಬರೆಹವ ತಪ್ಪಿಸುವಡೆ
ಹರಿಬ್ರಹ್ಮಾದಿಗಳಿಗಳವಲ್ಲ. / 809

ಎಂದು ತಾವು ನಂಬಿದ ಹಾದಿಯಲ್ಲಿ ನಡೆದು ಬಿಜ್ಜಳನನ್ನೂ, ಅಂಧಶ್ರದ್ಧೆ, ಮೂಡನಂಬಿಕೆ, ಜಾತಿಬೇಧಗಳಿಂದ ತುಂಬಿದ ಸಮಾಜವನ್ನು ಎದುರಿಸದವರು ನಮ್ಮ ಶರಣರು.
ಸಾಮಾಜಿಕ ಹಿತಕ್ಕಾಗಿ ವೈಯಕ್ತಿಕ ವಿಕಾಸಕ್ಕಾಗಿ ಇಂತಹ ಅಚಲ ನಿಷ್ಠೆ ಅತ್ಯಗತ್ಯ. ಆಳವಾದ ಅಲೋಚನೆಯಿಂದ ಒಂದು ಮಾರ್ಗದ ಸತ್ಯಾಸತ್ಯಗಳನ್ನು, ಒಳಿತು ಕೆಡುಕುಗಳನ್ನು ಆಗುಹೋಗುಗಳನ್ನು ಪರಿಶೀಲಿಸಬೇಕು. ತನ್ನ ಅರಿವಿಗೆ ಸತ್ಯವೆನಿಸಿದ್ದನ್ನು ಅವಲಂಬಿಸಬೇಕು. ಒಮ್ಮೆ ಅದನ್ನು ಅವಲಂಬಿಸಿದ ಮೇಲೆ ಏನೇ ಕಷ್ಟ ನಿಷ್ಟುರಗಳು ಬಂದರೂ ಹಿಂಜರಿಯದೆ ಪ್ರಾಮಾಣಿಕವಾಗಿ ಆ ಮಾರ್ಗದಲ್ಲಿ ನಡೆಯಬೇಕು. 

ಇದು ಲಿಂಗನಿಷ್ಠೆಯ ಸ್ಥಲ, ಭಕ್ತಸ್ಥಲದಲ್ಲಿ ಒಪ್ಪಿದ  ನೈತಿಕ ಆಚರಣೆಗಳನ್ನು  ಮುಂದುವರಿಸಬೇಕು.

#ಕೊಟ್ಟ ಕುದುರೆಯನೇರಲರಿಯದೆ
ಮತ್ತೊಂದು ಕುದುರೆಯನೇರ ಬಯಸುವರು,
ವೀರರೂ ಅಲ್ಲ,ಧೀರರೂ ಅಲ್ಲ,ಇದು ಕಾರಣ-
ನೆರೆ ಮೂರು ಲೋಕವೆಲ್ಲವೂ ಹಲ್ಲಣವ ಹೊತ್ತುಕೊಂಡು,ತೊಳಲುತ್ತ ಇದ್ದಾರೆ.
ಗುಹೇಶ್ವರನೆಂಬ ಲಿಂಗವನವರೆತ್ತ ಬಲ್ಲರು?/732
- ದೇವನೊಬ್ಬ ನಾಮ ಹಲವು, ನಿಜ. ಆದರೆ ಒಂದು ಬಗೆಯ ಉಪಾಸನೆಯನ್ನು ಒಪ್ಪಿಕೊಂಡು ಅದರಲ್ಲಿ ತೊಡಗಿದ ಮೇಲೆ  ಮನಸ್ಸು ಅತ್ತಿತ್ತ ಹರಿಯಬಾರದು, ನಂಬಿಯೂ ನಂಬದ ಡಂಭಕರಾಗಬಾರದು.

#ಇಬ್ಬರು ಮೂವರು ದೇವರೆಂದು ಉಬ್ಬಿ ಮಾತನಾಡಬೇಡ,
ಒಬ್ಬನೆ ಕಾಣಿರೊ, ಇಬ್ಬರೆಂಬುದು ಹುಸಿ ನೋಡಾ !
ಕೂಡಲಸಂಗಮದೇವನಲ್ಲದಿಲ್ಲೆಂದಿತ್ತು ವೇದ. / 264
ನಂಬಿದ ಹೆಂಡತಿಗೆ ಗಂಡನೊಬ್ಬನೇ ಇರುವಂತೆ, ನಂಬಬಲ್ಲ ಭಕ್ತನಿಗೆ ದೇವನೊಬ್ಬನೆ. ಇಷ್ಟಲಿಂಗವನ್ನು ಪೂಜಿಸಿ ಅನ್ಯದೈವಂಗಳಿಗೆ ಏರಗುವುದು 'ಕಯ್ಯಲ್ಲಿ ಹಣ್ಣಿದ್ದು ಮರವನೇರಿ ಕಾಯನ್ನು ಕೊಳ್ಳುವ ಅರೆ ಮರುಳನಂತೆ' ಆಗುತ್ತದೆ. ಸ್ಥಾವರಲಿಂಗ ಗಳಿಗೆರುವುದನ್ನು ವಿರೋಧಿಸುವ ಶರಣರು, ಅರಗು ತಿಂದು ಕರಗುವ ದೈವ, ಉರಿಯ ಕಂಡು ಮುರುಟುವ ದೈವ, ಕಾಳಯ್ಯ ಕೇತಯ್ಯ ಮೊದಲಾದ ಹಾದಿ ಬೀದಿ ದೈವಗಳ ಕ್ಷುದ್ರ ಉಪಾಸನೆಯನ್ನು ಸಹಿಸಲಿಲ್ಲ.

#ಅರಗು ತಿಂದು ಕರಗುವ ದೈವವನೆಂತು ಸರಿಯೆಂಬೆನಯ್ಯಾ
ಉರಿಯ ಕಂಡಡೆ ಮುರುಟುವ ದೈವವನೆಂತು ಸರಿಯೆಂಬೆನಯ್ಯಾ
ಅವಸರ ಬಂದಡೆ ಮಾರುವ ದೈವವನೆಂತು ಸರಿಯೆಂಬೆನಯ್ಯಾ
ಅಂಜಿಕೆಯಾದಡೆ ಹೂಳುವ ದೈವವನೆಂತು ಸರಿಯೆಂಬೆನಯ್ಯಾ
ಸಹಜಭಾವ ನಿಜೈಕ್ಯ ಕೂಡಲಸಂಗಮದೇವನೊಬ್ಬನೆ ದೇವ./100

“ಕರ್ತನ ಪೂಜಿಸಿ ಕುತ್ಸಿತಕ್ಕೆರಗುವುದು, ಕತ್ತೆಗೆ ಕುದುರೆಗೆ ಹುಟ್ಟಿದ ಹೇಸರಿನಂತೆ, ಗಂಗಾನದಿಯಲ್ಲಿ ಮಿಂದು ಗಂಜಲದಲ್ಲಿ ಹೊರಳಿದಂತೆ”-ಎನ್ನುತ್ತಾರೆ. 

#ಮಡಕೆ ದೈವ, ಮೊರ ದೈವ, ಬೀದಿಯ ಕಲ್ಲು ದೈವ,
ಹಣಿಗೆ ದೈವ, ಬಿಲ್ಲನಾರಿ ದೈವ, ಕಾಣಿರೊ !
ಕೊಳಗ ದೈವ, ಗಿಣ್ಣಿಲು ದೈವ, ಕಾಣಿರೊ !
ದೈವ ದೈವವೆಂದು ಕಾಲಿಡಲಿಂಬಿಲ್ಲ,
ದೈವನೊಬ್ಬನೆ ಕೂಡಲಸಂಗಮದೇವ. / 993

ಹಾಗೆಯೇ ಹಿಂಸಾಮೂಲವಾದ ಯಜ್ಞಯಾಗಾದಿಗಳನ್ನು ಅವರು ಪ್ರತಿಭಟಿಸಿದರು. ವೈಯಕ್ತಿಕ ಸಾಧನೆಯಲ್ಲಿ, ಸಾಮಾಜಿಕ ವ್ಯವಸ್ಥೆಯಲ್ಲಿ, ’ಅಹಿಂಸೆಯೇ ಪರಮ ಧರ್ಮ’ವೆಂದು ಜೈನರಂತೆ ಶರಣರೂ ಸಾರಿದರು.
#ದಯವಿಲ್ಲದ ಧರ್ಮವದೇವುದಯ್ಯಾ
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ.
ದಯವೇ ಧರ್ಮದ ಮೂಲವಯ್ಯಾ,
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯಾ./ 726 
“ದಯೆಯೇ ಧರ್ಮದ ಮೂಲವಯ್ಯ” ಎಂಬುದನ್ನು ಆಹಾರದಿಂದ ಹಿಡಿದು ಧಾರ್ಮಿಕ ಆಚಾರದವರಿಗೂ ಕಟ್ಟುನಿಟ್ಟಾಗಿ ಪಾಲಿಸಿದರು.

 ಮೇಲಾಗಿ ಯಜ್ಞಯಾಗಾದಿಗಳಿಂದ ದೇವಾಲಯಗಳಲ್ಲಿ ನಡೆಯುವ ಪೂಜಾದಿಗಳಿಂದ, ಧಾರ್ಮಿಕ ಅನುಸಂಧಾನಕ್ಕೆ ಬೇಕಾದ 'ಏಕಾಗ್ರತೆ ' ಸಿದ್ಧಿಸುವುದಿಲ್ಲ ಎಂಬ ಅವರ ಅಭಿಪ್ರಾಯ ಮುಖ್ಯವಾದುದು.
 “ಹಲವು ಕಡೆಗೆ ಹೋಹ ಮನವ ಧ್ಯಾನವೆಂಬ ಹಸ್ತದಲ್ಲಿ ಹಿಡಿದು ಲಿಂಗದ ಗೊತ್ತಿನಲ್ಲಿ ಕಟ್ಟಿ ನೆರೆಯಬಲ್ಲಡೇ ಶಂಭು ಪರಮೇಶ್ವರನು.” ಆದ್ದರಿಂದ ನೀರ ಕಂಡಲ್ಲಿ ಮುಳುಗುವುದು, ಮರನ ಕಂಡಲ್ಲಿ ಸುತ್ತುವುದು ವ್ಯರ್ಥ, ತೀರ್ಥಕ್ಷೇತ್ರಗಳಿಗೆ ತಿರುಗುವುದರಲ್ಲಿ ಅರ್ಥವಿಲ್ಲ. ನಿಶ್ಚಲ ಶರಣನ ಅಂಗಣದಲ್ಲಿ ಅಷ್ಟಾಷಷ್ಟಿ ತೀರ್ಥಂಗಳ ನೆಲಸಿರರ್ಪವಯ್ಯ" ಎನ್ನುತ್ತಾರೆ ಶರಣರು .

#ನೀರ ಕಂಡಲ್ಲಿ ಮುಳುಗುವರಯ್ಯಾ,
ಮರನ ಕಂಡಲ್ಲಿ ಸುತ್ತುವರಯ್ಯಾ.
ಬತ್ತುವ ಜಲವ, ಒಣಗುವ ಮರನ
ಮಚ್ಚಿದವರು ನಿಮ್ಮನೆತ್ತ ಬಲ್ಲರು
ಕೂಡಲಸಂಗಮದೇವಾ. / 839
ಇಂತಹ ಸಾತ್ವಿಕ ನಿಶ್ಚಲ ಶರಣನ ಕಾಯವೇ ಕಾಶಿ . ಒಡಲೇ ಅವಿಮುಕ್ತ ಕ್ಷೇತ್ರ.

ಸಾತ್ವಿಕಗುಣಪೂರ್ಣವಾದ ಕಠೋರ ನಿಷ್ಠೆ, ಜೀವನದ ಎಲ್ಲ ರಂಗಗಳಲ್ಲಿಯೂ ಆತನಿಗೆ ಮಾರ್ಗದರ್ಶಕವಾಗುತ್ತದೆ. ಆಧ್ಯಾತ್ಮಿಕ ಮೌಲ್ಯದ ಹಿನ್ನೆಲೆಯಲ್ಲಿ ಜೀವನದ ಎಲ್ಲ ಕಾರ್ಯಗಳು ಸಮಾಜದ ಮತ್ತು ವ್ಯಕ್ತಿಯ ಹಿತಕ್ಕೆ ಕಾರಣವಾಗುವಂತಿರಬೇಕು ಎಂಬ ಅವರ ದೃಷ್ಟಿಯಿಂದ, ಧರ್ಮದ ಹೆಸರಿನಲ್ಲಿ ನಡೆಯುತ್ತಿದ್ದ ಅನೇಕ ಅಂಧಶ್ರದ್ದೆಗಳು ನಾಶವಾದವು. ಧಾರ್ಮಿಕ ಶ್ರದ್ಧೆಗಳು ಮನುಷ್ಯನನ್ನು ಪರಾವಲಂಬಿಯನ್ನಾಗಿ ಮಾಡಿದ್ದವು. ಅಷ್ಟಮಿ, ನವಮಿ, ವಾರ, ತಿಥಿ ನಕ್ಷತ್ರ, ಶುಭ ಅಶುಭ ಶಕುನಾದಿಗಳು ಹೆಜ್ಜೆ ಹೆಜ್ಜೆಗೂ ಜನರನ್ನು ಬಂಧಿಸಿದ್ದವು. ಇದೆಲ್ಲವನ್ನು ಶರಣರು ಕಿತ್ತೆಸೆದರು.

#ಅಂದು ಇಂದು ಮತ್ತೊಂದೆನಬೇಡ,
ದಿನವಿಂದೇ `ಶಿವ ಶರಣೆಂ'ಬವಂಗೆ,
ದಿನವಿಂದೇ 'ಹರ ಶರಣೆಂ'ಬವಂಗೆ,
ದಿನವಿಂದೇ ನಮ್ಮ ಕೂಡಲಸಂಗನ ಮಾಣದೆ ನೆನೆವಂಗೆ. / 23
ಎಂದು ಎಲ್ಲ ವಾರಗಳು ಸಮಾನವಾಗಿ ಪವಿತ್ರವಾದವುಗಳೆಂದರು,
ಅಪಾರ ಮಹಿಮಾನ್ವಿತವಾದ ಉದಾತ್ತ ಶಕ್ತಿಯೊಂದನ್ನು ನಾವು ನಂಬಿದ ಮೇಲೆ, ಅದನ್ನು ಇಷ್ಟಲಿಂಗ ರೂಪದಲ್ಲಿ ಅಂಗದ ಮೇಲೆ ಧರಿಸಿ ಅದರ ಮೂಲ ಸ್ವರೂಪವೆ ನಾನೆಂದು ಭಾವಿಸಿದ ಮೇಲೆ, ವಾರಗಳ ತಿಥಿಗಳ ಭಕ್ತರಾಗುವುದು ಯುಕ್ತವಲ್ಲವೆಂದರು. 
ಅಸ್ಪೃಶ್ಯತೆ ಮಾನವರಲ್ಲಿದ್ದಂತೆ ಕಾಲ ವಾರ
ತಿಥಿಗಳಲ್ಲಿ ಇತ್ತು. ಅಲ್ಲಿ ಇದನ್ನು ಪ್ರತಿಭಟಿಸಿ ವರ್ಣಾಶ್ರಮ ಧರ್ಮಗಳನ್ನು ನಿರ್ಮೂಲನೆ ಮಾಡಿದಂತೆ, ಇದನ್ನು ಸಹ ವಿರೋಧಿಸಿದರು.

 #ಎಮ್ಮವರು ಬೆಸಗೊಂಡರೆ ಶುಭ ಲಗ್ನ ಎಂದೆನ್ನಿರಯ್ಯ. ರಾಶಿ ಕೂಟ, ಗಣ ಸಂಬಂಧ ಉಂಟೆಂದು ಹೇಳಿರಯ್ಯ, ಚಂದ್ರಬಲ ತಾರಾ ಬಲ, ಉಂಟೆಂದು ಹೇಳಿರಯ್ಯ,
ನಾಳಿನ ದಿನಕ್ಕೆ ಇಂದಿನ ದಿನವೇ ಲೇಸೆಂದು ಹೇಳಿರಯ್ಯ, ಕೂಡಲಸಂಗಮದೇವರ ಪೂಜಿಸಿದ ಫಲ ನಿಮ್ಮದಯ್ಯ. 
ಎಂದು ಸತ್ಪುರುಷರರು ಒಲಿದುದೇ ಎಲ್ಲಾ ಶುಭಮುಹೂರ್ತಗಳಿಗೂ ಕಾರಣವಾಗುತ್ತದೆ
ಎಂಬುದನ್ನು ಒತ್ತಿ ಹೇಳಿದರು.
ಇಂತಹ ನಿಷ್ಠೆ ಸುಲಭವಲ್ಲ, ಅದು ಅಳವಡಬೇಕಾದರೆ ಮನಸ್ಸಿನ ಸಂಶಯ ಅಳಿಯಬೇಕು. ಲೌಕಿಕ ಸುಖಗಳ ಆಸೆ ಇರುವವರೆಗೂ ಇದು ಅಳಿಯುವುದಿಲ್ಲ. ಈ ದೇವರು, ಆ ದೇವರು, ಈ ಗುರುಗಳು, ಆ ಗುರುಗಳು ಎಂದು ಅರಿಸಿಕೊಂಡು ತಿರುಗುವವರ ಮಾನಸಿಕ ಹಿನ್ನೆಲೆಯನ್ನು ನೋಡಿದರೆ ಅಲ್ಲಿ ಕಂಡುಬರುವುದು ಆಧ್ಯಾತ್ಮಿಕ ಅಭೀಪ್ಸೆಯಲ್ಲ ; ಯಾವುದೊ ಲೌಕಿಕ ಸುಖದ ಬಯಕೆ. ಆಧುನಿಕ ವೈಜ್ಞಾನಿಕ ಯುಗದಲ್ಲಿಯೂ ಅನೇಕ ವಿಚಾರವಂತರು ಸಹ ಇದಕ್ಕೆ ಬಲಿಯಾಗುತಿರುವುದನ್ನು ಈಗಲೂ ಕಾಣಬಹುದೆಂದರೆ 12ನೇ ಶತಮಾನದ ಶರಣರು ಇದನ್ನ ಪ್ರತಿಭಟಿಸಲು ಎಷ್ಟು  ಹೆಣಗಿರಬೇಕೆಂಬುದನ್ನು ಊಹಿಸಬಹುದು. ಅಣಿಮಾದಿ ಅಷ್ಟ ಸಿದ್ದಿಗಳಿಗೋ, ನಾರು ಬೇರು ಅಂಜನ ಘಟಕೆ ಮೂಲಿಕೆ ರಸ ಸಿದ್ಧಿಗಳಿಗೆ, ಲೌಕಿಕ ಆಶೆಗಳಿಗೆ ಮಾರು ಹೋಗುವ ಸಕಾಮ ಭಕ್ತಿ ಯನ್ನು ಖಂಡಿಸಿ, ಪರಮ ಪ್ರೇಮರೂಪವಾದ ನಿಷ್ಕಾಮ ಭಕ್ತಿಯನ್ನು ಎತ್ತಿ ಹಿಡಿದರು. ವ್ಯಷ್ಟಿ ಸಮಷ್ಟಿಗಳೆರಡರ ಹಿತವನ್ನು ಸಮನ್ವಯಗೊಳಿಸಿದರು. ಸರ್ವಸಮಾನತೆ, ಅಸ್ಪೃಶ್ಯತೆ ನಿವಾರಣೆ, ವರ್ಣ ವಿಭೇದಗಳ ಪ್ರತಿಭಟನೆ. ಅವೆಲ್ಲಾ ಮಹೇಶ್ವರ ಸ್ಥಲದಲ್ಲಿ ಶರಣರು ಅಳವಡಿಸಿಕೊಂಡ , ಭಕ್ತಿ ನಿಷ್ಠೆ ಸಾಧನೆಯ ಸಾಮಾಜಿಕ ಪ್ರತಿಕ್ರಿಯೆಗಳು.

#ಕೊಲುವನೇ ಮಾದಿಗ, ಹೊಲಸು ತಿಂಬವನೇ ಹೊಲೆಯ
ಕುಲವೇನೊ ಅವದಿರ ಕುಲವೇನೊ !
ಸಕಲಜೀವಾತ್ಮರಿಗೆ ಲೇಸನೆ ಬಯಸುವ
ನಮ್ಮ ಕೂಡಲಸಂಗನ ಶರಣರೆ ಕುಲಜರು./ 571

ಷಟ್ಸ್ಥಲದ ಮೊದಲನೆಯ ಈ ಎರಡು ಹೆಜ್ಜೆಗಳಲ್ಲಿ ಅಂದರೆ ಭಕ್ತಿಸ್ಥಲ, ಮಾಹೇಶ್ವರ ಸ್ಥಲಗಳಲ್ಲಿ ಸಾಧಕನ ಆಧ್ಯಾತ್ಮಿಕ ಯಾತ್ರೆಯ ಗುರಿ ನಿಶ್ಚಿತವಾಗಿ, ಅದರಲ್ಲಿ ನಿರಾತಂಕವಾಗಿ ಮುನ್ನಡೆಯುವ ಶಕ್ತಿಯು ಲಭಿಸುತ್ತದೆ. ಪೂರ್ಣ ದೃಷ್ಟಿಯಿಂದ ಸೃಷ್ಟಿಯ ರಹಸ್ಯವನ್ನು ಪರಾಮರ್ಶಿಸುವ ಮತ್ತು ಅದರಿಂದ ಅಂಗೀಕರಿಸಿದ ಆದರ್ಶಗಳನ್ನು ಅನುಷ್ಠಾನಕ್ಕೆ ತರುವ ನಿರಂತರ ಆತ್ಮ ಜಾಗೃತಿಯ ಪ್ರಯತ್ನ ಈ ಸ್ಥಲಗಳಲ್ಲಿ ಕಂಡುಬರುತ್ತದೆ. ನಿಮ್ಮ 'ಅರಿವಿನಿಂದ ಪರಾಮರ್ಶಿಸುವ' ಮತ್ತು ನಿಮಗೆ ಸರಿ ಎನಿಸಿದರೆ ಆ ಆದರ್ಶಗಳನ್ನು ಅಂಗೀಕರಿಸಿ ಆಚರಿಸುವ ಸ್ವತಂತ್ರ ವಿರುವದರ ಕಾರಣ ಶರಣ ಧರ್ಮ, ಪ್ರವಾದಿ ಧರ್ಮ ಅಲ್ಲ. ಆಳವಾದ ಆಲೋಚನೆಯಿಂದ ಸತ್ಯಾಸತ್ಯತೆಗಳನ್ನು ಕಂಡುಕೊಳ್ಳಬೇಕು. ಒಳಿತು ಕೆಡುಕುಗಳನ್ನು ವೈಚಾರಿಕವಾಗಿ ಪರಿಶೀಲಿಸಬೇಕು. ಕೆಳಸ್ತರದಿಂದ ಬಂದ ಶರಣ, ಶರಣೆಯರೂ ಸಹ ವೈಚಾರಿಕತೆ ಯಿಂದ ತಮ್ಮಅನುಭವಗಳಿಂದ ತಮ್ಮದೇ ಅರಿವಿನಿಂದ ಶ್ರೇಷ್ಟ ವಚನಗಳನ್ನು ರಚಿಸಿದ್ದಾರೆ. ಅರಿವು ಬೇರೊಬ್ಬರಲ್ಲಿ ಅರಿಸುವದಲ್ಲ. ಅದು ನಮ್ಮೊಳಗಿನ ಅಗಮ್ಯ ಚೇತನ.
 "ಅರಿವು ಸ್ವಯಂವಾದ ಬಳಿಕ ಅನ್ಯರ ಕೇಳಲುಂಟೆ ?" ಎಂದರು ವೈರಾಗ್ಯನಿಧಿ ಅಕ್ಕಮಹಾದೇವಿಯವರು.
ನೈಷ್ಠಿಕ ಭಕ್ತಿಗಳ ಹಿನ್ನೆಲೆಯಲ್ಲಿ ಆಚಾರ ಮತ್ತು ವಿಚಾರಗಳೆರಡಕ್ಕೂ ಸಮಾನ ಸ್ಥಾನ ಈ ಎರಡು ಸ್ಥಲಗಳಲ್ಲಿ ಲಭಿಸಿರುವುದನ್ನು ಗಮನಿಸಬೇಕು. ಆಧ್ಯಾತ್ಮಿಕ ಸಾಧನೆಯ ವಿಕಾಸಕ್ಕೆ ಇವೆರಡೂ ಭದ್ರವಾದ ಬುನಾದಿಯನ್ನು ಹಾಕಿಕೊಡುತ್ತದೆ.
- ✍️ Dr Prema Pangi
#ಪ್ರೇಮಾ_ಪಾಂಗಿ,#ಷಟ್ಸ್ಥಲ,
#ಮಹೇಶ್ವರಸ್ಥಲ


Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma