ವಚನ ದಾಸೋಹ - ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ

ವಚನ ದಾಸೋಹ - ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ
*ವಚನ* :
ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ 
ಇವ ನಮ್ಮವ ಇವ ನಮ್ಮವ 
ಇವ ನಮ್ಮವನೆಂದೆನಿಸಯ್ಯಾ ಕೂಡಲಸಂಗಮದೇವಾ,
ನಿಮ್ಮ ಮನೆಯ ಮಗನೆಂದೆನಿಸಯ್ಯಾ./268
- ಗುರು ಬಸವಣ್ಣನವರು
ಅರ್ಥ:
ಮನುಷ್ಯಕುಲವು ನೆಮ್ಮದಿಯಿಂದ ಬದುಕಲು ಯಾವುದೇ ಭೇದವೆಣಿಸದ, ಸಮತ್ವದ, ಏಕತ್ವದ ಭಾವವು ಅವಶ್ಯವೆನ್ನುವುದು ಗುರು ಬಸವಣ್ಣನವರ ಅಚಲ ನಂಬಿಕೆಯಾಗಿತ್ತು.  ತಾನು-ತನ್ನವರು ಉಳಿದವರಿಗಿಂತ ಬೇರೆ, ತನ್ನ ಧರ್ಮ, ಜಾತಿ, ದೇಶ ಬೇರೆ. ನಮ್ಮಿಂದ ಹೊರತಾದ ಉಳಿದವರೆಲ್ಲರು ನಮ್ಮವರಲ್ಲ ಎಂಬ ತಾರತಮ್ಯದ ಭಾವವನ್ನು ತೊಡೆದು ಎಲ್ಲರನ್ನೂ ಒಳಗೊಳ್ಳುವ ಸರ್ವಜನ ಬಾಂಧವ್ಯದ ಏಕತ್ವದ ಸಮಾಜವನ್ನು ನಿರ್ಮಿಸುವ ಕನಸು ಕಂಡು, ಅದಕ್ಕೆ ತಮ್ಮ ಜನ್ಮವನ್ನು ಧಾರೆ ಎರೆದವರು ಗುರು ಬಸವಣ್ಣನವರು. ಆ ಏಕತ್ವದ ರೀತಿಯಲ್ಲಿ ತಮ್ಮ ವ್ಯಕ್ತಿತ್ವ ವಿಕಸಿತವಾಗಲಿ ಎಂದು ತಮ್ಮ ಇಷ್ಟದೇವ ಕೂಡಲಸಂಗಮ ದೇವರಲ್ಲಿ ಈ ವಚನದಲ್ಲಿ ಪ್ರಾಥಿಸುತ್ತಾರೆ.

*ಇವನಾರವ ಇವನಾರವ ಇವನಾರವನೆಂದೆನಿಸದಿರಯ್ಯಾ 
ಇವ ನಮ್ಮವ ಇವ ನಮ್ಮವ 
ಇವ ನಮ್ಮವನೆಂದೆನಿಸಯ್ಯಾ*

ಎಲ್ಲ ಶರಣರಿಗೆ ಆತ್ಮೀಯನಾಗಿ ಹತ್ತಿರದವನಾಗಿ ಬದುಕಬೇಕು ಮತ್ತು ಶರಣರೆಲ್ಲರೂ ಬಸವಣ್ಣರನ್ನು ಕಂಡು ಇವನು ಯಾರವನು ? ಇವನು ಯಾರವನು? ಎನ್ನದೆ ಇವನು ನಮ್ಮವನು, ಇವನು ನಮ್ಮವನು ಎನ್ನುವಂತಾಗಬೇಕು. 

*ಕೂಡಲಸಂಗಮದೇವಾ,
ನಿಮ್ಮ ಮನೆಯ ಮಗನೆಂದೆನಿಸಯ್ಯಾ*.

ಕೂಡಲಸಂಗಮದೇವನ (ಶಿವನ) ಮನೆಯ ಮಗ ಎಂದು ಎನಿಸುವಂತಾಗಬೇಕು. ಯಾವ ಬೇಧಭಾವವಿಲ್ಲದ ಶರಣರ ಮಹಾಮನೆಯ ಮಗ ಎನಿಸುವಂತಾಗಬೇಕು ಎಂದು ತಮ್ಮ ಆಶಯ ವ್ಯಕ್ತಪಡಿಸಿದ್ದಾರೆ.

ಎಲ್ಲ ಶರಣರಿಗೆ ಆತ್ಮೀಯನಾಗಿ ಅತಿ ಹತ್ತಿರದವನಾಗಿ ಬದುಕಬೇಕು. ಅದರ ಜೊತೆಯೇ ಶಿವನಿಗೆ ಪ್ರಿಯನಾಗಿ ಅವನ ಮನೆಯ ಮಗ ಎಂದು ಎನಿಸಬೇಕೆಂಬ ಗುರು ಬಸವಣ್ಣನವರ ಆಶಯ ಈ ವಚನದಲ್ಲಿ ವ್ಯಕ್ತವಾಗಿದೆ. 
ಇವನು ನಮ್ಮವನು ಅಂದರೆ ನಮ್ಮೆಲ್ಲರ ಆತ್ಮೀಯ ಶರಣ ಅಂತ ಹೇಳಬಹುದು. ಒಟ್ಟಿನಲ್ಲಿ ಶರಣರಿಗೂ ಆತ್ಮೀಯನಾಗಬೇಕು ಶರಣ ಮಾರ್ಗದಲ್ಲಿ ನಡೆದು ಶಿವನಿಗೂ ಆತ್ಮೀಯನಾಗಬೇಕು. ಶರಣರು ಮತ್ತು ಶಿವನು ಸಹ ಇವನು ನನ್ನವನು ನನ್ನವನು ಎನ್ನುವಂತಾಗಬೇಕು ಎಂಬ ಬಸವಣ್ಣನವರ ಆಶಯ ಇಲ್ಲಿ ವ್ಯಕ್ತವಾಗಿದೆ. ತಮ್ಮನ್ನು ಪೂರ್ವಾಶ್ರಮದ ಜಾತಿಯಿಂದ ಗುರುತಿಸದೇ ಶರಣನಾಗಿ, ಕೂಡಲಸಂಗಮದೇವರ ಮನೆಯ ಮಗನಾಗಿ ಗುರುತಿಸುವಂತೆ ಕರುಣಿಸು ಎಂದು ಪ್ರಾಥಿಸಿದ್ದಾರೆ.
ವಚನ ಚಿಂತನ :
ಯಾರವನು? ಯಾರವನು? ಎಂಬ  ಭೇದವೆಣಿಸದ, ಸಮತ್ವದ - ಏಕತ್ವದ  ಭಾವವನ್ನು ತಮ್ಮ ಆರಾಧ್ಯದೈವವಾದ ಶಿವನೇ ತನಗೆ ಮತ್ತು ಎಲ್ಲ ಜನರಿಗೆ ಕೊಡಮಾಡಬೇಕೆಂದು ಪ್ರಾರ್ಥಿಸುತ್ತಾರೆ.  ಮೇಲು-ಕೀಳು, ಆ ಜಾತಿ-ಈ ಜಾತಿ, ಆ ಪಂಥ- ಈ ಪಂಥವೆಂಬ ಭೇದ-ಭಾವ ಇದು ಒಂದು ಭವರೋಗ, ಈ ರೋಗವನ್ನು ನಿವಾರಿಸಯ್ಯಾ ತಂದೆಯೇ ಎಂದು ಬೇಡಿದ್ದಾರೆ. ಮನುಷ್ಯರೆಲ್ಲರೂ ಒಬ್ಬನೇ ದೇವನ ಮಕ್ಕಳು. ನಾವೆಲ್ಲ ಬಂಧುಬಾಂಧವರೆನ್ನುವ ವಿಶ್ವ ಕುಟುಂಬದ ಭಾವವನ್ನು ನಮ್ಮಲ್ಲಿ ಮೊಳೆಯಿಸಯ್ಯಾ ಎಂದು ಇಷ್ಟದೈವ ಕೂಡಲಸಂಗಯ್ಯನಲ್ಲಿ ಬೇಡಿಕೊಳ್ಳುತ್ತಾರೆ ಗುರು ಬಸವಣ್ಣನವರು.
-✍️ Dr Prema Pangi
#ಪ್ರೇಮಾ_ಪಾಂಗಿ,#ಗುರು_ಬಸವಣ್ಣನವರು
#ಇವನಾರವ_ಇವನಾರವ,
 Picture post created and designed by me. Hope you all will like it.A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma