ವಚನ ದಾಸೋಹ

#ವಚನ
ಒಳಗೆ ನೋಡಿದರೆ ಒಳಗೆ ಬಯಲು
ಹೊರಗೆ ನೋಡಿದರೆ ಹೊರಗೂ ಬಯಲು
ನೆನೆವೆನೆಂದರೆ ನೋಡಾ ಮನ ಬಯಲು
ನೆನೆಸಿಕೊಂಬೆನೆಂದರೆ ನೀನಿಲ್ಲವಾದೆ ನಾ
ಬಯಲು ನೀ ಬಯಲು ನೋಡಾ
ಭಾವಿಸಿಕೊಂಬ ವಸ್ತು ಇನ್ನಿಲ್ಲವಾಗಿ
ಭಾವ ಬಯಲೆಂಬೆನು ನೋಡಾ
ಮಹಾಲಿಂಗ ಗುರು ಸಿದ್ಧೇಶ್ವರ ಪ್ರಭುವೇ.
 - ಶ್ರೀ ತೋಂಟದ ಸಿದ್ಧಲಿಂಗೇಶ್ವರರು

#ಅರ್ಥ: 
ಬಯಲು ಶೃಷ್ಟಿ ರಚನೆಯಲ್ಲಿ ಕಾರ್ಯರೂಪವಾದ ವಿಶ್ವ ಹಾಗು ಕಾರಣರೂಪವಾದ ಮಹಾಲಿಂಗ ಇವೆರಡಕ್ಕೂ ಮೊದಲಿನ ಸ್ಥಿತಿ. ಬಯಲು  ಅಂದರೆ ಅದು ಕಾರ್ಯವೂ ಅಲ್ಲ, ಕಾರಣವೂ ಅಲ್ಲ. ಅದು ಏನೂ ಅಲ್ಲ ಮತ್ತು ಅದರಲ್ಲಿ  ಏನೂ ಇಲ್ಲದ್ದರಿಂದ ಅದು ಬರೀಬಯಲು, ನಿಶೂನ್ಯ ಬಯಲು.

ಶರಣ ಧರ್ಮದ ಶಿವಯೋಗದಲ್ಲಿ "ಬಯಲು"  ಆನಂದಮಯವಾದ ಮುಕ್ತಾ ಮುಕ್ತ ಸ್ಥಿತಿ.  ವ್ಯಕ್ತಿ ತನ್ನನ್ನು ಪರಿಮಿತಗೊಳಿಸುವ ಆಸೆ ದ್ವೇಷ ಮೋಹಗಳನ್ನೆಲ್ಲಾ ನಾಶಗೊಳಿಸಿ ತನ್ನ ವ್ಯಕ್ತಿತ್ವವನ್ನು ಪರಿಪೂರ್ಣವಾದ ಶೂನ್ಯದಲ್ಲಿ ಲೀನಗೊಳಿಸಿ ಅದರೊಡನೆ ಸಮರಸವಾಗುವುದು ಎಂಬ ಅರ್ಥವನ್ನು ಬಯಲು ಎಂಬ ಪದದಲ್ಲಿ ಕಾಣುತ್ತೇವೆ.
 ಶರಣ ಧರ್ಮದಲ್ಲಿ " ಬಯಲು "ಅಂದರೆ
ಅಷ್ಟಮದಗಳನ್ನೆಲ್ಲಾ ನಿರಸನಗೊಳಿಸಿದ ನಂತರದ ವಿಕಾಸಗೊಂಡ ಆತ್ಮವು ವಿಶ್ವಾತ್ಮನೊಡನೆ ಸಮರಸಗೊಳ್ಳುವ ಪರಿಪೂರ್ಣ ಸ್ಥಿತಿ. ಇಂತಹ ಬಯಲಿನಲ್ಲಿ  ತನ್ನನ್ನು ಸಂಪೂರ್ಣವಾಗಿ ಲೀನಗೊಳಿಸಿ ಅದರಲ್ಲಿ ಸಮರಸವಾಗುವುದಕ್ಕೆ ಬಯಲಿನಲ್ಲಿ ಬಯಲಾಗುವುದು ಎನ್ನುವರು. ಸಾಧನಾ ಮಾರ್ಗದಲ್ಲಿ ಸಾಕಾರ ಹಿಡಿದು ನಿರಾಕಾರ ಅರಿಯಬೇಕು. ನಿರಾಕಾರ ಹಿಡಿದು ನಿರಾವಲಂಬ ಬಯಲು ಅರಿಯಬೇಕು. ಸಹಸ್ರಾರ ಚಕ್ರದ ಆಚೆಯ ಶಿಖಾಚಕ್ರದ ನಂತರ ಬರುವ ಪಶ್ಚಿಮ ಚಕ್ರದ ಸಾಧನೆ ಮಾಡಬೇಕು. ಶೂನ್ಯ, ಬಯಲು  ಎರಡೂ ಅಲ್ಲಮ ಪ್ರಭುಗಳ ಕೊಡುಗೆ.
ಈ ಸ್ಥಿತಿಯನ್ನು ಕುರಿತು ಷಣ್ಮುಖ ಸ್ವಾಮಿಗಳು - ಆದಿ ಇಲ್ಲದ ಬಯಲು, ಅನಾದಿ ಇಲ್ಲದ ಬಯಲು, ಶೂನ್ಯವಿಲ್ಲದ ಬಯಲು, ನಿಶ್ಶೂನ್ಯವಿಲ್ಲದ ಬಯಲು ಎಂದಿದ್ದಾರೆ. 
ಅಲ್ಲಮ ಪ್ರಭುಗಳು ಲಿಂಗಾಗಯೋಗದ ಸಾಧನೆಯನ್ನು ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು ಬಯಲು ಬಯಲಾಗಿ ಬಯಲಾಯಿತ್ತಯ್ಯಾ. ಬಯಲ ಜೀವನ ಬಯಲ ಭಾವನೆ ಬಯಲು ಬಯಲಾಗಿ  ಬಯಲಾಯಿತ್ತಯ್ಯ ಎಂದಿದ್ದಾರೆ. 
ಪರವಸ್ತುವನ್ನು ಮೊದಲು ಇಷ್ಟಲಿಂಗ ರೂಪದಲ್ಲಿ ನಂತರ ಪ್ರಾಣಲಿಂಗವಾಗಿಸಿ  ಭಾವದೃಷ್ಟಿಯಿಂದ ಕಂಡು ಭಾವಲಿಂಗ ವಾಗಿಸಿ  ಅಭಿನ್ನಭಾವದಿಂದ ಬೆರೆಸಿ ಲಿಂಗಾಂಗ ಸಮರಸ ಅನುಭವಿಸಿದಾಗ ಬೆರೆತೆನೆಂಬ ಭಾವವೂ ಇಲ್ಲ, ಪರವಸ್ತುವೂ ಇಲ್ಲ. ಭಾವ ಬಯಲಾಗಿ ಅರುಹು ಶೂನ್ಯವಾಗಿ ಅಖಂಡ ನಿರಾಳವೆನಿಸುವ ಸ್ಥಿತಿ. ಏನೂ ಇಲ್ಲದ ಬಚ್ಚಬರಿಯ ಬಯಲು.

ಶಿವಯೋಗದಲ್ಲಿ ಅಂಗತತ್ವಗಳು ಲಿಂಗತತ್ವ ಗಳಾದ ನಂತರ ಲಿಂಗಾಂಗ ಸಾಮರಸ್ಯದಿಂದ 'ಬಯಲು ಎಂಬ ನಿರಾಕಾರ ನಿರ್ಗುಣ ಅನುಭಾವ ' ಸಾಕ್ಷಾತ್ಕಾರವಾಗುತ್ತದೆ. ಭಕ್ತನಾದವನು ದೇವರ ಸಂಬಂಧದಿಂದ ಬದಲಾವಣೆಯಾಗುತ್ತಾ. ಸಾಧನೆಯಿಂದ ಪರಿಪೂರ್ಣದೆಡೆಗೆ ಸಾಗುತ್ತಾನೆ. 

"ಲಿಂಗ ಗುಣಗಳ ತಿಳಿದು, ಅಂಗಗುಣಗಳನತಿಗಳೆದು ಲಿಂಗವಾದುದೇ ಸ್ವರ್ಗ' ಎನ್ನುತ್ತಾರೆ  ಶಿವಯೋಗಿ ಸಿದ್ಧರಾಮರು. ಕೈಲಾಸವನ್ನು ಕುರಿತು ಅವರು ಹೇಳುವುದು :
#ಕೈಲಾಸ ಕೈಲಾಸವೆಂದು ಬಡಿದಾಡುವ ಅಣ್ಣಗಳಿಲಾ ಕೇಳಿರಯ್ಯ, .....
 ಅಂಗಾಂಗ ಸಮರಸವ ತಿಳಿದು ನಿಮ್ಮ ಪಾದ ಪದ್ಮದೊಳು
ಬಯಲಾದ ಪದವಿ ಕೈಲಾಸವಯ್ಯ 
ಕಪಿಲಸಿದ್ಧ ಮಲ್ಲಿಕಾರ್ಜುನಯ್ಯ,

"ಇಲ್ಲಿ ಬಯಲಾಗು ” ಎಂಬ ಮಾತು ಬರುತ್ತದೆ. ಶರಣರ ಮೋಕ್ಷದ ಕಲ್ಪನೆಯಲ್ಲಿ ಈ ಮಾತು ಬಹಳ ಪ್ರಮುಖ ಪಾತ್ರ ವಹಿಸುತ್ತದೆ. “ಬಯಲು, 'ನಿರವಯ', ನಿರ್ವಯಲು, 'ಶೂನ್ಯ', 'ನಿಶೂನ್ಯ' ಈ ಮಾತುಗಳಲ್ಲಿ ಲಿಂಗಾಂಗ ಸಾಮರಸ್ಯ ನಿಲುವನ್ನು ಹೇಳಲು ಅನುಭವ ಪೂರ್ವಕವಾಗಿ ಶರಣರು ಪ್ರಯತ್ನಿಸಿದ್ದಾರೆ.    ಅವರೆಲ್ಲರೂ ಕಂಡ ತಾತ್ವಿಕ ದರ್ಶನ ಒಂದೇ ಎರಿದ ನಿಲುವು ಒಂದೇ, ಭಾವ ಬಯಲಾಗಿ ಅರುಹು ಶೂನ್ಯವಾಗಿ ಅಖಂಡ ನಿರಾಳವಾಯಿತೆಂದರು.

ಅನುಭವ ಮಂಟಪದ ಪರಿಕಲ್ಪನೆ ಹದಿನೈದನೆ ಶತಮಾನದವರೆಗೂ ಪುನಃ ಆಕಾರ ಪಡೆದಿರಲಿಲ್ಲ. ಇಂತಹ ಸಂದರ್ಭದಲ್ಲಿ ಹದಿನೈದನೆಯ ಶತಮಾನದ ಮಧ್ಯದಲ್ಲಿ ತೋಂಟದ ಸಿದ್ಧಲಿಂಗಶ್ವರರು ಅದನ್ನು ಮತ್ತೆ ಅಸ್ತಿತ್ವಕ್ಕೆ ತಂದು ಪುನರುಜ್ಜೀವನಗೊಳಿಸಿದರು. ಇವರ ಶಿಷ್ಯರಾದ ಘನಲಿಂಗಿದೇವರು ಇವರನ್ನು “ತೋಂಟದ ಅಲ್ಲಮ” ಎಂದು ಕರೆದಿದ್ದಾರೆ. 
ಶ್ರೀ ತೋಂಟದ ಸಿದ್ಧಲಿಂಗೇಶ್ವರರು ಶಿವಯೋಗದ  ತನ್ಮತೆಯ ಸ್ಥಿತಿಯನ್ನು ಈ ವರ್ಣಿಸಲಾರದ  ಸ್ಥಿತಿಯನ್ನು ' ಒಳಗೂ ಬಯಲು ಹೊರಗೂ ಬಯಲು. ಭಾವ ಬಯಲು' ಎಂದು ಮಾರ್ಮಿಕವಾಗಿ ಚಿತ್ರಿಸಿದ್ದಾರೆ.
- ✍️ Dr Prema Pangi
#ಪ್ರೇಮಾ_ಪಾಂಗಿ,
 #ತೋಂಟದ ಸಿದ್ಧಲಿಂಗೇಶ್ವರರು #ಒಳಗೆ_ನೋಡಿದರೆ_ಒಳಗೆ_ಬಯಲು
Picture post designed and created by me. A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma