ವಚನ ದಾಸೋಹ

#ವಚನ:
#ಗಗನಮಂಡಲದ ಸೂಕ್ಷನಾಳದಲ್ಲಿ
ಸೋಹಂ ಸೋಹಂ ಎನ್ನುತ್ತಿದ್ದಿತ್ತು ಒಂದು ಬಿಂದು. 
ಅಮೃತದ ವಾರಿಯ ದಣಿಯಲುಂಡ ತೃಪ್ತಿಯಿಂದ ಗುಹೇಶ್ವರಾ, 
ನಿಮ್ಮಲ್ಲಿಯೆ ಎನಗೆ ನಿವಾಸವಾಯಿತ್ತು.
- ಅಲ್ಲಮಪ್ರಭುಗಳು
*ಅರ್ಥ:* 
ಅಲ್ಲಮ ಪ್ರಭುಗಳ ಬೋಧನೆ, ಸಾಧನೆಗಳನ್ನು ಗುರು ಬಸವಣ್ಣನವರು ಮೆಚ್ಚಿಕೊಂಡು ಅನುಭವ ಮಂಟಪದ ಶೂನ್ಯಪೀಠದ ಅಧ್ಯಕ್ಷರನ್ನಾಗಿ ಮಾಡುತ್ತಾರೆ. ಗುರು ಬಸವಣ್ಣನವರ ಲೋಕ ಕಲ್ಯಾಣದ ಕಾರ್ಯಗಳಿಗೆ ಇವರು ಪ್ರೇರಕರಾಗಿದ್ದು, ದಿವ್ಯಜ್ಞಾನಿ, ವೈರಾಗ್ಯಮೂರ್ತಿ, ಮಹಾಜಂಗಮ, ಲೋಕಗುರು, ಪರಿಪೂರ್ಣವ್ಯಕ್ತಿತ್ವ, ಅನುಭಾವಿ, ತತ್ತ್ವಜ್ಞಾನಿ, ದಾರ್ಶನಿಕರಾಗಿ ವ್ಯೋಮಕಾಯರಾಗಿ ಸಾಧನೆಗೈದು ವಿಶ್ವಕ್ಕೆ, ವಚನ ಸಾಹಿತ್ಯ, ಲಿಂಗಾಯತ ಧರ್ಮದ ಅಧ್ಯಾತ್ಮಿಕ ವಿಚಾರಗಳನ್ನು  ಶಿವಯೋಗ ಸಾಧನೆಯ ಮಾರ್ಗವನ್ನು, ಜಂಗಮ  ಸಂದೇಶವನ್ನು ನೀಡಿದ್ದಾರೆ. ಅವರ ಅದ್ಭುತ ವಚನಗಳಲ್ಲಿ ಅಲ್ಲಮಪ್ರಭುಗಳ ವ್ಯಕ್ತಿತ್ವ ಸಾಧನೆ ದರ್ಶನವಾಗುತ್ತದೆ. ಇಂತಹ ಮಹಾಮಹಿಮರ ಪಾದಸ್ಪರ್ಶದಿಂದ ಕನ್ನಡ ನಾಡು-ನುಡಿ-ಸಂಸ್ಕೃತಿ ಅಷ್ಟೆ ಅಲ್ಲ; ಭಾರತದ ಅಧ್ಯಾತ್ಮಿಕ ಪರಂಪರೆ  ಪಾವನವಾಗಿದೆ. ಗೂಢವಾದ ಅರ್ಥ, ಬೆಡಗಿನ ವಚನಗಳ ಮೂಲಕ ಇವರು ಶ್ರೇಷ್ಠ ವಿಚಾರಧಾರೆಗಳನ್ನು ಭಕ್ತರಿಗೆ, ಜನರಿಗೆ ಉಣಬಡಿಸಿದ್ದಾರೆ. ತಮ್ಮ ವಚನಗಳಲ್ಲಿ ಇವರು ಅನೇಕ ಬೆಡಗಿನ ಲೋಕೋಕ್ತಿಗಳನ್ನು ಹೇರಳವಾಗಿ ಉಪಯೋಗಿಸಿದ್ದಾರೆ.

*ಗಗನಮಂಡಲದ ಸೂಕ್ಷನಾಳದಲ್ಲಿ
ಸೋಹಂ ಸೋಹಂ ಎನ್ನುತ್ತಿದ್ದಿತ್ತು ಒಂದು ಬಿಂದು. *

ಗಗನಮಂಡಲದ ಅಂದರೆ ಚಿದಾಕಾಶದಲ್ಲಿ ಯ ಬ್ರಹ್ಮನಾಡಿಯೆಂಬ ಸೂಕ್ಷ್ಮನಾಳದಲ್ಲಿ 'ಸೋsಹಂ ಸೋsಹಂ' ಎನ್ನುತ್ತಿದ್ದಿತ್ತು ಒಂದು ಬಿಂದು. ಬೆನ್ನುಹುರಿಯ ಮಧ್ಯದಲ್ಲಿ ಸೂಕ್ಷ್ಮ ಶರೀರದಲ್ಲಿ ಇರುವ ಸುಷುಮ್ನ ನಾಡಿಯೊಳಗೆ ಬ್ರಹ್ಮನಾಡಿ ಎಂಬ ಅತೀ ಸೂಕ್ಷನಾಳ ಇರುತ್ತದೆ. ಆ ಬ್ರಹ್ಮನಾಡಿ ಮುಖಾಂತರವೇ ಕುಂಡಲಿನಿ ಶಕ್ತಿ ಊರ್ಧ್ವಮುಖವಾಗಿ ಚಲಿಸಿ ಸಹಸ್ರಾರ ಚಕ್ರದಲ್ಲಿಯ ಪರಶಿವನಲ್ಲಿ ಕೂಡುವುದು.  ಬ್ರಹ್ಮ ನಾಡಿಯ ಅಗ್ರಭಾಗವೇ ಬ್ರಹ್ಮರಂಧ್ರ.  ಇದಕ್ಕೆ ಜೀವಬಿಂದು, ಪ್ರಜ್ಞಾಬಿಂದು ಎಂದೂ ಕರೆವರು. ಅಲ್ಲಿ ಆ ಬ್ರಹ್ಮರಂಧ್ರದಿಂದ  ಅವ್ಯಾಹತವಾದ 'ಸೋsಹಂ ಸೋsಹಂ' ನಾದ ಕೇಳುತ್ತಿತ್ತು. ಸೋsಹಂ  ಅಂದರೆ ಅವನೇ ನಾನು. ಸರ್ವವ್ಯಾಪಕನೂ ಸರ್ವಾಂತರ್ಯಾಮಿಯೂ ಹಾಗೂ ಸರ್ವಸಾಕ್ಷಿಯೂ ಆದ ಶಿವನೇ ನಾನು. 
ಸಾಧಕ ಜೀವನು ಆ ಬ್ರಹ್ಮರಂಧ್ರವನ್ನು ಪ್ರವೇಶಿಸಿದಾಗ ಅವನ ದೇಹ ಜೀವ ಭಾವಗಳು ಅಡಗಿ ಹೋಗುತ್ತವೆ. 'ನಾನು ಸಾಕ್ಷಾತ್ ಶಿವ" - ಶಿವೋಹಂ ಎಂಬ ಉದ್ಗಾರ ಅವನಿಂದ ಹೊರಹೊಮ್ಮುತ್ತದೆ.  

*ಅಮೃತದ ವಾರಿಯ ದಣಿಯಲುಂಡ ತೃಪ್ತಿಯಿಂದ ಗುಹೇಶ್ವರಾ, 
ನಿಮ್ಮಲ್ಲಿಯೆ ಎನಗೆ ನಿವಾಸವಾಯಿತ್ತು.*

ಅಲ್ಲಿಯ ಸಹಸ್ರಾರ ಚಕ್ರದಲ್ಲಿ 
ಬ್ರಹ್ಮರಂದ್ರದಲ್ಲಿ ನಾದ ಬಿಂದು ಕಳೆ ಅನುಭವವಾಗಿ , ಆ ಬಿಂದುವಿನಲ್ಲಿ ಸೋಹಂ ಅಂದರೆ ಅವನೇ ನಾನು; ಆ ಶಿವನೇ ನಾನು ಎಂಬ ಪ್ರಜ್ಞೆಯುಂಟಾಗುತ್ತದೆ. ಶಿವನೇ ನಾನಾಗಿ ಬ್ರಹ್ಮರಂಧ್ರದಲ್ಲಿರುವ ಅಮೃತ ರಸವನ್ನು ಮನಸಾರೆ ಕುಡಿದು ತೃಪ್ತಿಯಾಯಿತು. ಆಗ ನಿಮ್ಮಲ್ಲಿಯೇ ನನಗೆ ನಿವಾಸವಾಯಿತು. ನಿಮ್ಮಲ್ಲಿಯೇ ನನ್ನ ಮನ ಚಿತ್ತು ನೆಲೆ ನಿಂತವು. ಆ ಬ್ರಹ್ಮರಂದ್ರವೆಂಬ ಅಮೃತಬಿಂದುವಿನಿಂದ  ಅಮೃತ ಧಾರೆಯನ್ನು ಮನಸೋ ಕುಡಿಯುವ ಶಿವಯೋಗಿಯ ತೃಪ್ತಿಗೆ ಎಣೆಯಿಲ್ಲ. ಪರಮಸುಖಿಯಾದ ಆ ಶಿವಯೋಗಿಯ ನೆಲೆ ಇಲ್ಲಿ ಇರುವ ಪ್ರಾಣಲಿಂಗವೇ. 
ಹೀಗೆ ನಮ್ಮಲ್ಲಿಯೇ ಪರಮಾತ್ಮ ನೆಲೆಸಿದ್ದಾನೆಂದು ಅಲ್ಲಮಪ್ರಭುಗಳು ಹೇಳುತ್ತಾರೆ.
*ಭಾವ:*
#ನಾದ ಬಿಂದು ಕಳೆ ಸಾಧಕನ ಅನುಭವಗಳು
ಶಿವಯೋಗಸಾಧನೆಯಲ್ಲಿ ಓಂಕಾರವೇ ನಾದ. ಜ್ಯೋತಿರ್ಬಿಂದುವೇ ಬಿಂದು, ಸಾಕಾರದರ್ಶನವೇ ಕಲೆ.
ಆತ್ಮನ ಸ್ವಭಾವವು ಸತ್ - ಚಿತ್ - ಆನಂದ ಸ್ವರೂಪ. ನಾದವು ಆತ್ಮನ ಸರೂಪವನ್ನು, ಬಿಂದುವು ಅವನ ಚಿದ್ರೂಪವನ್ನು, ಕಳೆಯು ಅದರ ಆನಂದ ರೂಪವನ್ನು ಪ್ರತಿನಿಧಿಸುತ್ತವೆ.
ಮೊರೆವ ನಾದ, ಉರಿವ ಜ್ಯೋತಿ, ಸುರಿವ ಅಮೃತ ಕಳೆ ಇವು ಮೂರು ಸಾಧನೆಯ ಅಮೃತ ಫಲಗಳು. 

#ಮೊರೆವ ನಾದವ ಕೇಳಿ ಉರಿವ ಜ್ಯೋತಿಯ ನೋಡಿ
ಸುರಿವ ಅಮೃತವ ಸವಿದುಂಡ ಕಾರಣ
ಹಲವು ತೊರೆದೆನು ಜನನ ಮರಣಗಳ || - - - -ಯೋಗಾಂಗ ತ್ರಿವಿಧಿ. ಇದು ಅಕ್ಕಮಹಾದೇವಿಯ ಯೋಗಮಾರ್ಗದ ಗ್ರಂಥ.
#ನಾದಾನುಭವ:
ಉಸಿರನ್ನು ಎಳೆದುಕೊಳ್ಳುವಾಗ 'ಹಂ' ಎಂಬ ಶಬ್ದವು, ಬಿಡುವಾಗ 'ಸಂ' ಎಂಬುದು ಸ್ವಾಭಾವಿಕವಾಗಿರುತ್ತವೆ. ಪ್ರಕೃತಿ ಸ್ವಭಾವದಿಂದ ಅದು ಸೊಂಯ್ ಸೊಂಯ್ ಎಂದರೂ ಅದನ್ನು ನಿಯಂತ್ರಿಸಿ ಕ್ರಮಬದ್ದ ಗೊಳಿಸಿದರೆ ಆಗ ಅದು 'ಸೋಹಂ' ಎಂದು ಭಾಸವಾಗುತ್ತದೆ. ಸ- ಅಹಂ ಅವನೇ ನಾನು ಎಂಬ ಲಕ್ಷ್ಯವಿಟ್ಟು ಹಾಗೆ ಉಚ್ಚರಿಸುತ್ತಾ ಹೋದಾಗ ಸಹ ಕಳೆದು ಅದು 'ಓಂ' ಆಗಿ ಗೋಚರವಾಗುತ್ತದೆ. ಇದುವೇ ಓಂಕಾರನಾದ. ಬ್ರಹ್ಮಾಂಡದ ಮತ್ತು ಆತ್ಮದ ನಾದ. ಓಂಕಾರನಾದವೆಂದರೆ  ಶಿವನ ಸ್ವರೂಪ.
ಹೊರ ಮುಖವಾಗಿ ಸಾಗುವ ಸ್ವಭಾವವುಳ್ಳ ಇಂದ್ರಿಯಗಳ ಚಟುವಟಿಕೆಯನ್ನು ಉಪೇಕ್ಷೆ ಮಾಡಿ, ಹೃದಯ ಕಮಲದಲ್ಲಿ ಅಧೋಮುಖವಾಗಿರುವ 8 ದಳಗಳಲ್ಲಿ ಸಂಚರಿಸುವ ಜೀವವನ್ನು , ಊರ್ಧ ಮುಖವಾದ 4 ದಳಗಳಲ್ಲಿ ಸಂಚರಿಸುವಂತೆ ಮಾಡಿದರೆ ಆಗ ಝೇಂಕರಿಸುತ್ತ ಮೊರೆಯುವ ದಶನಾದಗಳನ್ನು ಕೇಳಬಹುದು. ಭ್ರಮರ, ಶಂಖ, ಮೃದಂಗ, ತಾಳ, ಘಂಟಾ, ವೀಣಾ, ಭೇರಿ, ದುಂದುಭಿ, ಸಮುದ್ರ ಘರ್ಜನೆ, ಮೇಘ ಘರ್ಜನೆ ಇವುಗಳಿಂದ ಹೊರ ಹೊಮ್ಮುವ ನಾದಗಳಿಗೆ ಹೋಲುವ ನಾದವನ್ನು ಅಂತರಂಗದಲ್ಲಿಯೇ  ಶಿವಯೋಗಿ ಆಲಿಸುವನು.
#ಏಳು ಸುತ್ತಿನ ಕೋಟೆಯಾಳಗೆ ನೀಳದುಪ್ಪರಿಗೆಗಳ ನಡುವೆ
ತಾಳ ಮದ್ದಳೆ ಭೇರಿಗಂಟೆಗಳು | ಓಂ ಶ್ರೀಗುರುಸಿದ್ದ
ವೇಳೆ ವೇಳೆಗೆ ತಾವೇ ನುಡಿವವು ||
- ಸರ್ಪಭೂಷಣ ಶಿವಯೋಗಿಗಳು
ಸಾಧಕನು ಅಂತರ ಮುಖಿಯಾಗಿ ಹೊರಗಿನ ಸಪ್ಪಳಗಳೇನೂ ಕಿವಿಗೆ ಬೀಳದಂತೆ ಧ್ಯಾನಾಸಕ್ತನಾದಾಗ ಒಂದೊಂದಾಗಿ ದಶವಿಧ ನಾದಗಳು ಕೇಳತೊಡಗಿ, ಕಡೆಗೆ ಓಂಕಾರನಾದವು ಅವ್ಯಾಹತವಾಗಿ ಅಖಂಡವಾಗಿ ಕೇಳತೊಡಗುತ್ತದೆ. ಇದು ಹೊರಗಿನ ನಾದವಲ್ಲ. ಒಳಗೇ ನಮ್ಮ ದೇಹದಲ್ಲಿಯೇ ಮಿಡಿಯುವ ನಾದ. ಅತ್ಯಂತ ಸೂಕ್ಷ್ಮಾತಿ ಸೂಕ್ಷ್ಮವಾಗಿ ನಿರಂತರವಾಗಿ ಹೃದಯದಲ್ಲಿ ನಿನಾದಿಸುವ ಧ್ವನಿ. ಇದು ಆತ್ಮದ ಧ್ವನಿ  ಚಿನ್ನಾದ ವೆನ್ನುವರು.
#ಬಿಂದಾನುಭವ:
ಅರೆಮುಚ್ಚಿದ ಕಣ್ಣುಗಳ ಮಧ್ಯ ಭ್ರೂಮಧ್ಯದಲ್ಲಿ ಒಂದು ಅಲ್ಪ ರಂಧ್ರವಿದೆ. ಅದರ ಮೂಲಕ ಕಾಣುವುದೇನೋ ಎಂಬಂತೆ, ನೆಟ್ಟ ದೃಷ್ಟಿಯಿಟ್ಟು ನೋಡುತ್ತಿರುವ ಯೋಗಿಗೆ ದಿವ್ಯ ದೃಷ್ಟಿಯಿಂದ  ಒಂದು ಅಸಾದೃಶ್ಯ ಬೆಳಕು ಕಾಣುತ್ತದೆ.  ಆದಿಯೋಗಿ  ಶಿವನಿಗಿರುವ ಮೂರನೆಯ ಕಣ್ಣಿನ ಸಂಕೇತವೇ ದಿವ್ಯ ದೃಷ್ಟಿ. ಈ ಅನುಪಮವಾದ ಬೆಳಗಿಗೆ 'ಬಿಂದು' ಎನ್ನುತ್ತಾರೆ. ಇದು ಭೌತಿಕ ದೀಪದ ಬೆಳಕಲ್ಲ, ಆತ್ಮನ ಬೆಳಕು. ವಿವಿಧಾವಸ್ಥೆಯಲ್ಲಿ ಬೇರೆ ಬೇರೆ ವರ್ಣಗಳು ಕಾಣುತ್ತಾ ಬಂದು, ಕಡೆಯಲ್ಲಿ ಶುಭ್ರ ಧವಳ ಸ್ವರೂಪದ ಬಿಂದುವೊಂದೇ ಕಾಣಬರುತ್ತದೆ.
#ಚಿತ್ಕಳಾನುಭವ:
ಚಿದಾಕಾಶದ ಕುಂಭಿನಿ ಸರಸಿಯಿಂದ  ಒಂದು ಬಗೆಯ ಅಮೃತ ಕಳೆಯು ಸುರಿಯಲಾರಂಭಿಸುತ್ತದೆ. ಇದಕ್ಕೆ ಅಮೃತಪಾನವೆಂದು ಕರೆಯುವರು. ಇದನ್ನು ಅನುಭವಿಸಿದ ಸಾಧಕನಿಗೆ  ಅಮೃತ ಸಿದ್ದಿಯಾಯಿತೆಂದೂ ಅನ್ನುವರು. ಇದು ಲಭ್ಯವಾದ ಬಳಿಕ ಅಸಾಮಾನ್ಯ ಆತ್ಮತೃಪ್ತಿ, ತನ್ಮಯತೆ ದೊರಕುವುದು. ಬ್ರಹ್ಮರಂಧ್ರದಲ್ಲಿ ಈ ಅಮೃತರಸ ಜಿನುಗುತ್ತದೆ. ಶಿವೋಹಂ ನಾದದ ನಿಬ್ಬೆರಗಿನಲ್ಲಿ ಮುಳುಗಿದ ಶಿವಯೋಗಿಯು ಆ ಅಮೃತರಸವನ್ನು ಕಂಠ ಕುಡಿಯುತ್ತಾನೆ. ತೃಪ್ತಿಯಿಂದ ಸುಖಿಸುತ್ತಾನೆ. ಭಿನ್ನಭಾವಗಳನ್ನಲ್ಲ ಕಳಚಿಹಾಕಿ ಶಿವಭಾವದಲ್ಲಿ ಮೈಮರೆದ ಶಿವಯೋಗಿಯು ಈಗ ನೆಲೆಸಿವದು ತನ್ನಲ್ಲಿಯೇ ಕಂಡ, ತನ್ನಲ್ಲಿಯೇ ನೆಲೆಸಿದ ಶಿವನಲ್ಲಿ.
- ✍️ Dr Prema Pangi
#ಪ್ರೇಮಾ_ಪಾಂಗಿ,#ಅಲ್ಲಮಪ್ರಭುಗಳು
#ಗಗನಮಂಡಲದ_ಸೂಕ್ಷನಾಳದಲ್ಲಿ_ಸೋಹಂ_ಸೋಹಂ 
Picture post created by me. Hope you all will like it. A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma