ವಚನ ದಾಸೋಹ
#ವಚನ :
ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತುಂಟೆ ?
ಇಹಲೋಕದೊಳಗೇ ಮತ್ತನಂತಲೋಕ!
ಶಿವಲೋಕ ಶಿವಾಚಾರವಯ್ಯ,
ಶಿವಭಕ್ತನಿದ್ದ ಠಾವೇ ದೇವಲೋಕ,
ಭಕ್ತನಂಗಳವೇ ವಾರಣಾಸಿ,
ಶಿವಭಕ್ತನ ಕಾಯವೇ ಕೈಲಾಸ,
ಇದು ಸತ್ಯ ಕೂಡಲಸಂಗಮದೇವ.
- ಗುರು ಬಸವಣ್ಣನವರು
ಅರ್ಥ:
ಎಲ್ಲೆಲ್ಲಿಯೂ ಶಿವಸ್ವರೂಪವನ್ನು ಕಾಣುವುದೇ ಶಿವಾಚಾರ. ತಾನು ಶಿವನಸ್ವರೂಪ. ತನ್ನಂತೆಯೇ, ಸಕಲಚರಾಚರ ಜಗತ್ತೆಲ್ಲಾ ಶಿವನ ಸ್ವರೂಪ ಎಂದು ಅರಿತ ಶಿವಭಕ್ತರ ಸನ್ನಿಧಿಯಿಂದ ಇಡೀ ಪರಿಸರವೇ ಬದಲಾಗಿ ಪವಿತ್ರ ವಾತಾವರಣ ಏರ್ಪಡಾಗುತ್ತದೆ ಎಂಬುದನ್ನು ಇಲ್ಲಿ ಗುರು ಬಸವಣ್ಣನವರು ತಮ್ಮ ಸರಳ ಸುಂದರ ಭಾಷೆಯಲ್ಲಿ ತಿಳಿಸುತ್ತಾರೆ.
*ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತುಂಟೆ ?
ಇಹಲೋಕದೊಳಗೇ ಮತ್ತನಂತಲೋಕ!
"ಶಿವಲೋಕ ಶಿವಾಚಾರವಯ್ಯ,*
ದೇವಲೋಕವೆಂದರೆ ಜನಮನದ ಕಲ್ಪನೆಯಲ್ಲಿ, ಪುರಾಣಗಳಲ್ಲಿ, ಕಟ್ಟು ಕಥೆ ಗಳಲ್ಲಿ ರೂಪುಗೊಂಡಿರುವ ದೇವತೆಗಳು ನೆಲೆಸಿರುವ ಲೋಕ. ಜನಸಮುದಾಯದ ಮನದಲ್ಲಿ ತಾವು ವಾಸಮಾಡುತ್ತಿರುವ ಇಹಲೋಕದ ಮೇಲುಗಡೆಯಲ್ಲಿ ದೇವತೆಗಳು ನೆಲೆಸಿದ ಲೋಕ ಇದೆ. ಅಲ್ಲಿ ದೇವತೆಗಳು ಸಾವು ನೋವುಗಳಿಲ್ಲದೆ ನೆಮ್ಮದಿಯಿಂದಿದ್ದಾರೆ ಎಂಬ ಕಲ್ಪನೆಯಿದೆ. ಮರ್ತ್ಯಲೋಕವೆಂದರೆ ಸಾವು ಇರುವ ನಾವು ವಾಸಿಸುತ್ತಿರುವ ಇಹಲೋಕ. ದೇವಲೋಕ ಮತ್ತು ಮರ್ತ್ಯಲೋಕವೆಂಬ ಎರಡು ಬೇರೆ ಬೇರೆಯಾಗಿರುವ ಲೋಕಗಳು ವಾಸ್ತವದಲ್ಲಿ ಇಲ್ಲ. ಇಲ್ಲಿ ಇರುವುದು ಒಂದೇ ಇದೇ
ಮತ್ರ್ಯಲೋಕ. ದೇವಲೋಕ ಮತ್ರ್ಯಲೋಕ ಇವೆಲ್ಲ ನಮ್ಮ ಕಲ್ಪನೆಗಳು ಮಾತ್ರ. ಈ ಲೋಕದಲ್ಲಿಯೆ ಇರುವ ಅನಂತ ಲೋಕಗಳು ಅಂದರೆ ಇಲ್ಲಿಯ ಲೋಕಜೀವನದ ಹಲವಾರು ಸ್ತರಗಳು. ಈ ಎಲ್ಲಾ ಸ್ತರಗಳು ಶಿವಾಚಾರದ ಪ್ರಭಾವದಿಂದ ಶಿವಲೋಕವಾಗುತ್ತವೆ.
*ಶಿವಭಕ್ತನಿದ್ದ ಠಾವೇ ದೇವಲೋಕ,
ಭಕ್ತನಂಗಳವೇ ವಾರಣಾಸಿ,
ಶಿವಭಕ್ತನ ಕಾಯವೇ ಕೈಲಾಸ,
ಇದು ಸತ್ಯ ಕೂಡಲಸಂಗಮದೇವ.*
ಶಿವಾಚಾರಸಂಪನ್ನನಾದ ಭಕ್ತನಿರುವ ಸ್ಥಳವೇ ದೇವಲೋಕ. ಕಾಶಿ ಮೊದಲಾದ ಪವಿತ್ರ ಕ್ಷೇತ್ರಗಳನ್ನೆಲ್ಲಾ ಅಂತಹ ಶಿವಾಚಾರ ಆಚರಿಸುವ ಶಿವಭಕ್ತರ ಮನೆಯ ಅಂಗಳದಲ್ಲಿಯೇ ಕಾಣಬಹುದು. ತೀರ್ಥ ಕ್ಷೇತ್ರಗಳಿಗೆ ಹೋಗುವ ಅವಶ್ಯಕತೆ ಇಲ್ಲ. ಶಿವಭಕ್ತನ "ಕಾಯವೇ ಕೈಲಾಸ" ವಾಗುತ್ತದೆ. ಅದು ಬಿಟ್ಟು ಬೇರೆ ಕೈಲಾಸದ ಕಲ್ಪನೆ ಬೇಡ. ಇಂತಹ ಮಾತುಗಳಲ್ಲಿ ಶಿವಭಕ್ತಿ ಪರಿವರ್ತಿತ ವ್ಯಕ್ತಿತ್ವದ ಪ್ರಭಾವದಿಂದ ಮೂಡಿ ನಿಲ್ಲುವ ಆಧ್ಯಾತ್ಮಿಕ ಪರಿಸರವನ್ನು ಗುರುತಿಸಬಹುದು. ಇದು ಭಕ್ತ ಸ್ಥಲದ (ಭಕ್ತನ ಜ್ಞಾನಿಸ್ಥಲ) ವಚನ. ಭಕ್ತನ ಮೂಲಭೂತ ತಳಹದಿ ಅಂದರೆ ಶ್ರದ್ಧೆ.
#ಶ್ರದ್ಧಾಭಕ್ತಿ :
ಇಲ್ಲಿ ಶ್ರದ್ದೆ ಎಂದರೆ ವಿಚಾರವಿಲ್ಲದೆ ಎಲ್ಲವನ್ನೂ ನಂಬುವ ಕುರುಡು ನಂಬಿಕೆಯಲ್ಲ. ನಾನು ಏನು ಆಗಬೇಕೆಂದು ಉದ್ದೇಶಿಸಿದ್ದೇನೆಯೋ ಮೂಲತಃ ಅದರ ಸ್ವರೂಪವೇ ನಾನು. ಆ ಸ್ವರೂಪವೇ ಇಷ್ಟಲಿಂಗ ರೂಪದಿಂದ ಕರಸ್ಥಲಕ್ಕೆ ಬಂದಿದೆ, ಅದರ ಅನುಸಂಧಾನದಿಂದ ಆಂತರಿಕ ಪರಿವರ್ತನೆಯಾಗಿ ಆ ಸಹಜ ಸ್ಥಿತಿಯನ್ನು ಪಡೆಯಬೇಕು ಎಂಬ ಅರಿವಿನ ಎಚ್ಚರವೇ ಇಲ್ಲಿ ಶ್ರದ್ಧೆ ಯಾಗುತ್ತದೆ. ಆ ಶ್ರದ್ಧೆಯ ಮಹತ್ವ ತಿಳಿದಿರುವನೆ ಭಕ್ತ ಜ್ಞಾನಿ.
ಸಹಜವಾಗಿ ಭಕ್ತಿ ಭಂಡಾರಿ ಎನಿಸಿಕೊಂಡವರು ಗುರು ಬಸವಣ್ಣನವರು. ಭಕ್ತಸ್ಥಲದಲ್ಲಿಯೇ ಬಯಲಾದವರು. ಈ ಅತಿವಿರಳ ಸಾಧನೆ ಇದು ಅವರ ಭಕ್ತಿಯ ಶ್ರೇಷ್ಟತೆ, ಪರಾಕಾಷ್ಟತೆ ತೋರಿಸುತ್ತದೆ.
#ಶಿವಾಚಾರ:
ಎಲ್ಲೆಲ್ಲಿಯೂ ಶಿವಸ್ವರೂಪವನ್ನು ಕಾಣುವುದೇ ಶಿವಾಚಾರ. ತಾನು ಶಿವನ ಸ್ವರೂಪ. ಅದರಂತೆಯೇ ಸಕಲಚರಾಚರ ಜಗತ್ತೆಲ್ಲಾ ಶಿವನ ಸ್ವರೂಪ, ಶಿವನ ಪ್ರಸಾದ ಎಂದು ಅರಿತು ಸಾಮಾಜಿಕವಾದ
ಮೇಲು- ಕೀಳು ತಾರತಮ್ಯಗಳನ್ನು ಇಲ್ಲವಾಗಿಸುವದೇ ಶಿವಾಚಾರ. ಎಲ್ಲರನ್ನೂ ಸಮಭಾವನೆಯಿಂದ ಕಾಣಬೇಕು. ಸಾಮಾಜಿಕ ಸಮಾನತೆ ಶಿವಾಚಾರದಲ್ಲಿ ಕಂಡುಬರುವ ಒಂದು ಪ್ರಮುಖವಾದ ಅಂಶ. ಅದು ಕೇವಲ ಬೌದ್ಧಿಕ ನಿರೂಪಣೆಗಳಿಂದ ಪ್ರತಿಪಾದನೆಗಳಿಂದ ಆಗಲಾರದು. ವೈಯಕ್ತಿಕವಾದ ವಿಕಾಸದಿಂದ ಅದು ನಡೆನುಡಿಗಳಲ್ಲಿ ಅಳವಡಬೇಕು. ಆಧ್ಯಾತ್ಮಿಕವಾದ ಅನುಭವದ ಆಧಾರದ ಮೇಲೆ ಬೆಳೆಯಬೇಕು. ಶರಣರು ಜಾತಿಯ ಕಟ್ಟುಗಳನ್ನು ಕತ್ತರಿಸಿ ಎಲ್ಲರಿಗೂ ಸಮಾನ ಅವಕಾಶವನ್ನು ಕಲ್ಪಿಸಿಕೊಟ್ಟು, ಎಲ್ಲರಲ್ಲೂ ಶಿವನ ಅಂಶವನ್ನೇ ಕಂಡರು.
- ✍️ Dr Prema Pangi
#ಪ್ರೇಮಾ_ಪಾಂಗಿ,
#ದೇವಲೋಕ_ಮರ್ತ್ಯಲೋಕವೆಂಬುದು_ಬೇರೆ_ಮತ್ತುಂಟೆ ?
Comments
Post a Comment