ಷಟ್ಸ್ಥಲ - ಪ್ರಸಾದಿ ಸ್ಥಲ
*ಪ್ರಸಾದಿ ಸ್ಥಲ* :
ಷಟ್ಸ್ಥಲ ಎಂಬುದು ಸಾಧಕ ಶಿವನೇ ಆಗಿ ವಿಕಾಸಗೊಳ್ಳುವ ಪ್ರಕ್ರಿಯೆ. ಸಾಧಕ, ಅಜ್ಞಾನ ಸ್ಥಿತಿಯಿಂದ ಪರಮ ಸುಜ್ಞಾನ ಸ್ಥಿತಿಯೆಡೆಗೆ ತಲುಪಲು ಅನುಸರಿಸಬೇಕಾದ ದಿವ್ಯ ಪಥ. ಭಕ್ತ, ಮಾಹೇಶ್ವರ, ಪ್ರಸಾದಿ, ಪ್ರಾಣಲಿಂಗಿ, ಶರಣ ಮತ್ತು ಐಕ್ಯಗಳೇ ಆ ಆರು ಹಂತಗಳು.
ಪ್ರಸಾದಿ ಸ್ಥಲ ಇದು ಷಟ್ಸ್ಥಲದ ಮೂರನೇಯ ಸ್ಥಲ.
ಭಕ್ತಸ್ಥಲದ ಶ್ರದ್ಧಾ ಭಕ್ತಿ, ಮಹೇಶ್ವರಸ್ಥಲದ ಸಮಗ್ರ ನಿಷ್ಠೆಯಿಂದ ಬೆಳೆದ ಸಾಧಕ ಜಗತ್ತನ್ನು ಕಾಣುವ ದೃಷ್ಟಿಯೇ ಈ ಸ್ಥಲದಲ್ಲಿ ಬದಲಾಗುತ್ತದೆ. ಆತನ ಒಳಹೊರಗುಗಳು ಒಂದಾಗಿ ಎಲ್ಲೆಲ್ಲಿಯೂ ಸೃಷ್ಟಿಶಕ್ತಿಯ ಅಗಾಧತೆಯನ್ನೇ ಕಾಣುತ್ತಾನೆ.
ಕಾಯಕದಿಂದ ಬಂದಿದ್ದೆಲ್ಲವನ್ನೂ ಲಿಂಗಕ್ಕೆ ಅರ್ಪಿಸಿ ಕೈಕೊಳ್ಳುವುದು ಪ್ರಸಾದಿಯ ಒಂದು ಮುಖವಾದರೆ, ತನ್ನನ್ನೇ ಸಂಪೂರ್ಣವಾಗಿ ಲಿಂಗಕ್ಕೆ ಅರ್ಪಿಸಿಕೊಳ್ಳುವುದು ಇನ್ನೊಂದು ಮುಖ. ತನ್ನನ್ನು, ತನ್ನ ಕಾಯಕವನ್ನು ಲಿಂಗಕ್ಕೆ ಅರ್ಪಿಸಿ ಅದರಿಂದ ಬಂದಿದ್ದನ್ನು 'ಪ್ರಸಾದ' ವೆಂದು ಸ್ವೀಕರಿಸುವೆ ಎನ್ನುವ ಕಲ್ಪನೆಯನ್ನೂ ಮೀರಿ "ತರ್ಕಸಿ ನಿಮ್ಮುವವನಪ್ಪಿಕೊಂಡೊಡೆ ನಿಶ್ಚಯ ಪ್ರಸಾದ”ವೆಂದು "ಅಂಗ, ಪ್ರಾಣ, ಮನ, ಭಾವ, ಅರಿವುಗಳ ಅರ್ಪಣೆ" ಎನ್ನುವ ತುಂಬಾ ವ್ಯಾಪಕ ಹಂತಕ್ಕೆ ಅದು ಬೆಳೆಯುತ್ತ ಹೋಗುತ್ತದೆ.
ಲಿಂಗದಲ್ಲಿ ಅನನ್ಯಾನುಭವಿಯವಾಗಿ ಭಿನ್ನವಳಿದು ಲಿಂಗಭೋಗೋಪಭೋಗಿ ಯಾಗುತ್ತಾನೆ. “ಬಿಸಿಲಲ್ಲಿ ನಿಂತರೆ ಬಿಸಿಲ ಲಿಂಗಾರ್ಪಿತವ ಮಾಡಬೇಕು ; ನೆರಳಲ್ಲಿ ನಿಂತರೆ ನೆರಳ ಲಿಂಗಾರ್ಪಿತವ ಮಾಡಬೇಕು" ಈ ನಿಲುವಿನಲ್ಲಿ ನಿಂತು ಜಗತ್ತಿನಲ್ಲಿ ಕರ್ಮನಿರತರಾಗಬೇಕೆನ್ನುವುದು ಪ್ರಸಾದಿಸ್ಥಲದ ಅಂಶ. ಪ್ರಸಾದಿ ತತ್ವದ ನಿರ್ಲಿಪ್ತತೆ ಈ ಜಗತ್ತಿನಿಂದ ಆತನನ್ನು ಜೀವನ ವಿಮುಖನನ್ನಾಗಿ ಮಾಡುವುದಿಲ್ಲ. ಸತತ ಕ್ರಿಯೆಯಲ್ಲಿ ನಿರತನಾಗಿ ದೈಹಿಕ ಶ್ರಮದಿಂದ ದುಡಿಯುತ್ತಾ ಕರ್ಮವನ್ನು ಮಾಡಬೇಕು. ಹೀಗೆ ಕರ್ಮಯೋಗದ ವ್ಯಾಪ್ತಿಯನ್ನು ಸಮಾಜದ ಹಿತಕ್ಕಾಗಿ ತಿರುಗಿಸುವ ಉದಾತ್ತ ದೃಷ್ಟಿ ಭಾವನೆ ಇಲ್ಲಿ ಕಂಡುಬರುತ್ತದೆ.
ಪ್ರಸಾದಿ, ಅಂಗಗುಣಗಳನ್ನು ಲಿಂಗಗುಣಗಳನ್ನಾಗಿ ಪರಿವರ್ತಿಸುತ್ತಾನೆ. ಸರ್ವಾಂಗ ಶುದ್ಧ ಸರ್ವಾಂಗ ಪ್ರಸಾದಿ ಲಿಂಗ ಪ್ರಸಾದಿ ಯಾಗುತ್ತಾನೆ. ಕ್ರಿಯೆಯಲ್ಲಿ ನಿರತನಾದರೂ ಆ ಕ್ರಿಯೆಯಿಂದಲೇ ಕ್ರಿಯಾತೀತ ನಾಗುತ್ತಾನೆ. ಅರ್ಪಿತ-ಅನರ್ಪಿತಗಳು ಅಳಿದು ಅರ್ಪಿಸಿಯೂ ಅರ್ಪಿಸದೆ, ಅರ್ಪಿಸದೆಯೂ ಅರ್ಪಿಸುವ ದ್ವಂದ್ವಾತೀತವಾದ ನಿತ್ಯಪ್ರಸಾದಿಯ ನಿಲವಿಗೆ ಏರುತ್ತಾನೆ. ಪರಿಭಾವಿಸಿದಷ್ಟೂ ವ್ಯಾಪಕ ದರ್ಶನವನ್ನೀಯುವ ಈ ವ್ಯಕ್ತಿತ್ವದ ಸಾಧನೆ ಸುಲಭ ಸಾಧ್ಯವಲ್ಲ. ಇದನ್ನು ಕಾರ್ಯಗತಗೊಳಿಸಿ ಜೀವಂತ ಶಕ್ತಿಯನ್ನಾಗಿ ಸಾಧಿಸಿ ತೋರಿಸಿದ ಉಜ್ವಲ ಜೀವನ ಗುರು ಬಸವಣ್ಣನವರದು.
"ಲಿಂಗಪ್ರಸಾದಿಗಳಲ್ಲದವರ ಸಂಗ
ಭಂಗವೆಂದುದು ಗುರುವಚನ.
ಲಿಂಗಪ್ರಸಾದಿಗಳಲ್ಲದವರ ಸಂಗ
ಪಂಚಮಹಾಪಾತಕವೆಂದುದು ಲಿಂಗವಚನ "
ಎಂದು ಸದಾ ಲಿಂಗಪ್ರಸಾದಿಗಳ ಸಂಗವನ್ನೇ ಬಯಸಿದರು ಗುರು ಬಸವಣ್ಣನವರು.
ಭಕ್ತ ಸ್ಥಲದ ಶ್ರದ್ಧಾಭಕ್ತಿ, ಮಹೇಶ್ವರ ಸ್ಥಲದ ಅಚಲನಿಷ್ಠೆ ಇಲ್ಲಿ ನಿರಂತರ ಜಾಗೃತಿಯಿಂದ ಉದಾತ್ತ ಮತ್ತು ದೈವಿಕರಣವಾಗುತ್ತವೆ. ಆದ್ದರಿಂದ ಇಲ್ಲಿ ಭಕ್ತಿಯನ್ನು "ಅವಧಾನ ಭಕ್ತಿ" ಎಂದು ಕರೆದಿರುವುದು ಅರ್ಥವತ್ತಾಗಿದೆ. "ಅವಧಾನ" ಎಂದರೆ ಸದಾ ಎಚ್ಚರಿಕೆಯಿಂದ ಮುನ್ನಡೆದು ಪಡೆಯುವ ನಿಲುವು. ಇದು ಸಾಧಕರು ಪಡೆಯಬಹುದಾದ ಅತ್ಯುನ್ನತ ಸಾಕಾರ ರೂಪದ ಅನುಭವ. ಇಲ್ಲಿ ಸಾಧಕ ಅವಧಾನ ಭಕ್ತಿ, ಅನುಭಾವ ಭಕ್ತಿಗಳನ್ನು ಅವಲಂಬಿಸಿ ಮುನ್ನಡೆಯುತ್ತಾನೆ. ಶ್ರದ್ಧೆ ನಿಷ್ಟೆಗಳೆರಡೂ ಸಹಜ ಸ್ಥಿತಿಯಾಗಿ ಪರಿಣಮಿಸುತ್ತವೆ. ಸಾವಧಾನ, ಸಮಾಧಾನ ನಿಲವನ್ನು ಪಡೆದು ಹಠ ಮತ್ತು ನಿಷ್ಠೆಗಳು ಮೃದುತ್ವವನ್ನು ಪಡೆದು ಮನಸ್ಸಿನ ಪ್ರಸನ್ನತೆಗೆ ಕಾರಣವಾಗುತ್ತವೆ. ಪರಮಾತ್ಮನ ಸಾನ್ನಿಧ್ಯದ ಹೆಚ್ಚು ಹತ್ತಿರ ಹೋದಂತೆಲ್ಲಾ ಆತನ ವ್ಯಕ್ತಿತ್ವದಲ್ಲಿ ಉಂಟಾಗುವ ಸಂವರ್ತನೆಯನ್ನು, ದೈವಿಕತ್ವೆ ಯನ್ನು ಈ ಸ್ಥಲದಲ್ಲಿ ಕಾಣುತ್ತೇವೆ.
ಮನಮುಟ್ಟದ ಮುನ್ನ ಲಿಂಗಾರ್ಪಿತವ ಮಾಡಬೇಕು,
ಶ್ರೋತ್ರ ನೇತ್ರ ಪ್ರಾಣ ಜಿಹ್ವೆ ಪರುಶನ ಮುಟ್ಟದ ಮುನ್ನ
ಲಿಂಗಾರ್ಪಿತವ ಮಾಡಬೇಕು,
ಕೂಡಲಚೆನ್ನಸಂಗಮನಲ್ಲಿ ಪ್ರಸಾದಿಯಾದಡೆ. / 678
ಎಂದರು ಚಿನ್ಮಯ ಜ್ಞಾನಿ ಚೆನ್ನಬಸವಣ್ಣನವರು.
"ಕರ್ಮನಿರತರಾಗದೆ ಈ ಲೋಕದಲ್ಲಿ ಬದುಕುವ ಹಕ್ಕು ಯಾರಿಗೂ ಇಲ್ಲ, ಕೃಷಿಯ ಮಾಡದೆ ಹಸಿವು ಹರಿವ ಪರಿ ಇನ್ನೆಂತೋ ”, "ಅಂತರಂಗದಲ್ಲಿ ಅರಿವುದೇನಯ್ಯ ಬಹಿರಂಗದಲ್ಲಿ ಕ್ರಿಯೆ ಇಲ್ಲದನ್ನಕ್ಕರ ?"ಎಂದು ಶರಣರು ಕರ್ಮದ ಆವಶ್ಯಕತೆಯನ್ನು ಎತ್ತಿ ಹಿಡಿದಿದ್ದಾರೆ. ಅಲ್ಲಮಪ್ರಭುಗಳು ಒಂದು ಕಡೆ ಹೀಗೆ ಹೇಳುತ್ತಾರೆ .
#ಕ್ರಿಯಾಮಥನವಿಲ್ಲದೆ ಕಾಣಬಂದುದೆ ಇಕ್ಷುವಿನೊಳಗಣ ಮಧುರ ?
ಕ್ರಿಯಾಮಥನವಿಲ್ಲದೆ ಕಾಣಬಂದುದೆ ತಿಲದೊಳಗಣ ತೈಲ ?
ಕ್ರಿಯಾಮಥನವಿಲ್ಲದೆ ಕಾಣಬಂದುದೆ ಕ್ಷೀರದೊಳಗಣ ಘೃತ ?
ಕ್ರಿಯಾಮಥನವಿಲ್ಲದೆ ಕಾಣಬಂದುದೆ ಕಾಷ್ಠದೊಳಗಣ ಅಗ್ನಿ ?
ಇದು ಕಾರಣ, ನಮ್ಮ ಗುಹೇಶ್ವರಲಿಂಗವ ತನ್ನೊಳರಿದೆನೆಂಬ ಮಹಂತಂಗೆ
ಸತ್ಕ್ರಿಯಾಚರಣೆಯೆ ಸಾಧನ ಕಾಣಿಭೋ. / 738
ಕರ್ಮವನ್ನು ಮಾಡಬೇಕು. ಆದರೆ ಮಾಡಿದೆನೆಂಬುದು ಮನದಲ್ಲಿ ಹೊಳೆಯಬಾರದು. ಅದು ಅಹಂಕಾರಕ್ಕೆ ಕಾರಣವಾಗಬಾರದು. ಬಯಕೆಯ ಮೂಲವಾಗಬಾರದು.
ಏಡಿಸಿ ಕಾಡಿತ್ತು ಶಿವನ ಡಂಗುರ,
ಮಾಡಿದೆನೆನ್ನದಿರಾ ಲಿಂಗಕ್ಕೆ,
ಮಾಡಿದೆನೆನ್ನದಿರಾ ಜಂಗಮಕ್ಕೆ,
ಮಾಡಿದೆನೆಂಬುದು ಮನದಲಿಲದಿದ್ದಡೆ,
ಬೇಡಿತ್ತ ನೀವನು ಕೂಡಲಸಂಗಮದೇವ. / 1039
ಸಾಧಕನು ಪ್ರಸಾದಿ ಸ್ಥಲದಲ್ಲಿ ನಿಷ್ಕಾಮಕರ್ಮಿ. ಅದರಿಂದ ಬರುವ ಫಲ ನನ್ನೊಬ್ಬನಿಗೆ ಮಾತ್ರವೇ ಅಲ್ಲ ; ಗುರು ಲಿಂಗ ಜಂಗಮಕ್ಕೆ ಅದು ಸಲ್ಲಬೇಕಾದ್ದು ಎಂಬ ಮಾತು ಕರ್ಮಯೋಗವನ್ನು ಸಮಾಜದ ಹಿತಕ್ಕಾಗಿ ತಿರುಗಿಸುವ ಉದಾತ್ತ ದೃಷ್ಟಿಯಿಂದ ಕೂಡಿದೆ. ಅಂಗಗುಣಗಳನ್ನು ಅಳಿದು “ಲಿಂಗಕ್ಕೆಂದೇ ಕಾಮಿಸುವೆನು, ನಿಃಕಾಮಿಯಾಗಿ” ಎಂಬ ಅವರ ಮಾತು ಸಹ ಇದನ್ನೇ ಅರ್ಥವತ್ತಾಗಿ ಸೂಚಿಸುತ್ತದೆ. ಹೀಗೆ ನಿಃಕಾಮಿಯಾಗಿ ಕಾಮಿಸುವ ಕಲೆಯನ್ನು ಕಾಯಕ ತತ್ವದಿಂದ ಅವರಿಗೆ ಕರಗತ ಮಾಡಿಕೊಂಡರು.
"ಸತ್ಯ ಶುದ್ಧ ಕಾಯಕದಲ್ಲಿ ಚಿತ್ತ ಸ್ವಚ್ಛಂದವಾಗದಿರಬೇಕು. ನೇಮದ ಕೂಲಿ ದಿನ ನಿತ್ಯ ಕಾಯಕದಲ್ಲಿ ಸಂದಿರಬೇಕು.
ದೇಹ ಶ್ರಮವಿಲ್ಲದೆ ದುಡಿಯದೇ ಬಂದುದು ದೇವನಿಗೆ ಅರ್ಪಿತವಾಗದು. ಹೇಮದಾಸೆಯಿಂದಲ್ಲ, ನೇಮದ ಕೂಲಿಯ ನಿಷ್ಠೆಯಿಂದ ಕೆಲಸ ಮಾಡಬೇಕು. ಬಂದುದನ್ನು ತನಗಾಗಿ ಅಲ್ಲ, ದಾಸೋಹಕ್ಕಾಗಿ ವಿನಿಯೋಗಬೇಕು. ಕಾರೆಯ ಸೊಪ್ಪಾದರೂ ಕಾಯಕದಿಂದ ಬಂದಿದ್ದು ಮಾತ್ರ ಲಿಂಗಕ್ಕೆ ಒಪ್ಪಿತ. ಅದು ದಾಸೋಹಕ್ಕೆ ಯೋಗ್ಯ" ಎಂದರು ಶರಣ ನುಲಿಯ ಚಂದಯ್ಯ. ವ್ಯಕ್ತಿ ಮತ್ತು ಸಮಾಜಗಳೆರಡರ ಹಿತಸಾಧನೆಯ ಪೂರ್ಣದೃಷ್ಟಿ ಇಲ್ಲಿ ಕಾಣತ್ತದೆ. ವ್ಯಕ್ತಿ ದೇಹ ಶ್ರಮದಿಂದ ದುಡಿಯಬೇಕು, "ತನು ಮನ ಬಳಲಿಸಿ ತಂದು ದಾಸೋಹ ಮಾಡುವ ಸದ್ಭಕ್ತನ ತೋರಯ್ಯ” ಎನ್ನುತ್ತಾರೆ
ಗುರು ಬಸವಣ್ಣನವರು.
#ಮನದ ಮತ್ಸರವ ಕಳೆದು, ಮನದ ಮೇಲೆ ಲಿಂಗವ ಕುಳ್ಳಿರಿಸಬೇಕಯ್ಯಾ.
ಧನದ ಲೋಭವ ಕಳೆದು, ಧನದ ಮೇಲೆ ಜಂಗಮವ ಕುಳ್ಳಿರಿಸಬೇಕಯ್ಯಾ.
ಕಾಯಗುಣಂಗಳ ಕಳೆದು ಕಾಯವ ಪ್ರಸಾದವ ಮಾಡಬೇಕಯ್ಯಾ.
ಈ ಎಲ್ಲಾ ಗುಣಂಗಳನತಿಗಳೆದು ತ್ರಿವಿಧದಲ್ಲಿ ದಾಸೋಹಿಯಾಗಿರಬೇಕು,
ಕೂಡಲಚೆನ್ನಸಂಗಯ್ಯಾ.
ಎಂಬ ಮಾತಿನಲ್ಲಿ ಚನ್ನಬಸವಣ್ಣನವರು ತ್ರಿವಿಧ ದಾಸೋಹದಿಂದ ನಿರಹಂಕಾರವನ್ನು ಸಂಧಿಸುವ ಬಗೆಯನ್ನು ಹೇಳಿದ್ದಾರೆ. ಶಿವಯೋಗಿ ಸಿದ್ದರಾಮರು ಹೇಳುವಂತೆ
#ಸೋಹಂ' ಎಂಬುದದು ಅಂತರಂಗದ ಮದ ನೋಡಯ್ಯಾ.
`ಶಿವೋಹಂ' ಎಂಬುದದು ಬಹಿರಂಗದ ಮದ ನೋಡಯ್ಯಾ.
ಈ ದ್ವಂದ್ವವನಳಿದು `ದಾಸೋಹಂ' ಎಂದೆನಿಸಯ್ಯಾ
ಕಪಿಲಸಿದ್ಧಮಲ್ಲಿಕಾರ್ಜುನಾ. / 1901
ಸೋಹಂ , ಶಿವೋಹಂ ಎಂಬ ದ್ವಂದ್ವವನ್ನಳಿದ ನಿರಹಂಭಾವದ ನಿಸ್ವಾರ್ಥ ನಿಲವೇ “ದಾಸೋಹಂ" ಎಂಬುದು.
ಈ ತ್ರಿವಿಧ ದಾಸೋಹದ ರಹಸ್ಯವನ್ನರಿತ ಸಾಧಕರಿಗೆ ಯಾವುದೂ ಬಂಧಕವಾಗಲಾರದು. ಈ ಲೋಕದಲ್ಲಿ ಇದ್ದೂ ಇಲ್ಲದಂತೆ ಬಾಳುವ ನಿಲುವು ಆತನಿಗೆ ಸಹಜವಾಗಿ ಲಭಿಸುತ್ತದೆ. ಆತ ಪ್ರಪಂಚವನ್ನು ತ್ಯಜಿಸಿ ಕಾಡಿಗೆ ಹೋಗಬೇಕಾಗಿಲ್ಲ,
#ಆರುವನೊಲ್ಲೆನೆಂದು ಅರಣ್ಯವ ಹೊಗುವದು, ಕಾರ್ಯವಲ್ಲ, ದುರುಳತನ.
ಊರೊಳಗಿದ್ದಡೆ ನರರ ಹಂಗು. ಅರಣ್ಯದಲ್ಲಿದ್ದಡೆ ತರುಗಳ ಹಂಗು.
ಬಂದ ಪದಾರ್ಥವ ಲಿಂಗಾರ್ಪಿತವ ಮಾಡಿಕೊಂಬ
ಶರಣನೆ ಜಾಣ, ಸಕಳೇಶ್ವರದೇವಾ. / 15
ಎಂಬ ಮಾತಿನಲ್ಲಿ ಸಕಲೇಶ ಮಾದರಸ ಇದನ್ನು ಸೂಚಿಸಿದ್ದಾರೆ.
ಬಂದ ಪದಾರ್ಥವ ಲಿಂಗಾರ್ಪಿತವ ಮಾಡಿ ಕೊಳ್ಳುವುದು"..... ಇದರಿಂದ ತನ್ನದೆನ್ನುವುದೇನೂ ಉಳಿಯದೆ ಈ ಜಗತ್ತೆಲ್ಲ ಈಶನ ಆವಾಸಸ್ಥಾನವಾಗಿ ಪರಿಣಮಿಸುತ್ತದೆ. * ಈಶಾವಾಸ್ಯಮಿದಂ ಸರ್ವಂ” ಎಂಬ ಮಂತ್ರ ಈ ಪ್ರಸಾದಿಯ ಮನೋಧರ್ಮಕ್ಕೆ ಅನ್ವಯಿಸುವಂತಹುದು,
"ಕಾಯವೇ ಲಿಂಗಾರ್ಪಿತ ; ಅರ್ಪಿತವೇ ಪ್ರಸಾದ' ಎನ್ನುತ್ತಾರೆ ಚನ್ನಬಸವಣ್ಣನವರು.
ಅಂತೆಯೇ ಗುರು ಬಸವಣ್ಣನವರು
#ಪರಿಯಾಣವೇ ಭಾಜನವೆಂಬರು; ಪರಿಯಾಣ ಭಾಜನವಲ್ಲ.
ಲಿಂಗಕ್ಕೆ ತನ್ನ ಮನವೇ ಭಾಜನ.
ಪ್ರಾಣವನು ಬೀಸರವೋಗದೆ ಮೀಸಲಾಗಿ ಅರ್ಪಿಸಬಲ್ಲಡೆ ಕೂಡಿಕೊಂಡಿಪ್ಪ ನಮ್ಮ ಕೂಡಲಸಂಗಮದೇವ ಎಂದು ಪ್ರಸಾದಿ ಆಗುವ ಬಗೆ ತಿಳಿಸಿದ್ದಾರೆ. ಪರಿಯಾಣ ಅಂದರೆ ಪ್ರಸಾದವನ್ನು ಇರಿಸಿದ ಎಡೆ ಬಟ್ಟಲು. ಅದು ಭಾಜನವಲ್ಲ.
ದೇಹ, ಮನ, ಪ್ರಾಣ, ಭಾವ, ಕಾಯಕ ಅರ್ಪಿಸಿಕೊಳ್ಳುವುದು ನಿಜವಾದ ಪ್ರಸಾದ. ಕಾಯ ಕಳೆದು ಕಾಯ ಪ್ರಸಾದಿ, ಜೀವ ಕಳೆದು ಜೀವ ಪ್ರಸಾದಿ, ಪ್ರಾಣ ಕಳೆದು ಪ್ರಾಣಪ್ರಸಾದಿಯಾಗಿ ಪರಿಣಮಿಸಬೇಕು.
#ಒಕ್ಕುದು ಪ್ರಸಾದವಲ್ಲ, ಮಿಕ್ಕುದು ಪ್ರಸಾದವಲ್ಲ.
ಹತ್ತೆ ಕರೆದಿಕ್ಕಿದುದು ಪ್ರಸಾದವಲ್ಲ.
ತರ್ಕೈಸಿ ನಿಮ್ಮವನಪ್ಪಿಕೊಂಡಡೆ
ಅದು ನಿಶ್ಚಯಪ್ರಸಾದ ಕಾಣಾ!
ರಾಮನಾಥ. / 45
ಎಂಬ ಜೇಡರ ದಾಸಿಮಯ್ಯರ ಮಾತಿನಲ್ಲಿ ಪ್ರಸಾದದ ನಿಜಸ್ವರೂಪ ವ್ಯಕ್ತವಾಗಿದೆ. ಒಕ್ಕುದು ಎಂದರೆ ಗುರು-ಲಿಂಗ-ಜಂಗಮಕ್ಕೆ ಅರ್ಪಿಸಿದ ಪ್ರಸಾದ. ಮಿಕ್ಕುದು ಎಂದರೆ ಅರ್ಪಿತವಾಗಿ ಉಳಿದುದು. ದೇವರಿಗೆ ನೈವೇದ್ಯ ಮಾಡುವುದು; ಅರ್ಪಿತವಾಗಲಿ ಉಳಿದುದನ್ನು ಪ್ರಸಾದವೆಂದು ಭಾವಿಸುವುದು ಒಂದು ಹಂತದಲ್ಲಿ ಮಾತ್ರ. ನಿಜವಾದ ಪ್ರಸಾದವೆಂದರೆ ತರ್ಕೈಸಿ ಶಿವನನ್ನೇ ಅಪ್ಪಿಕೊಳ್ಳುವುದು. ಆತನಿಗೆ ತನ್ನನ್ನೇ ಅರ್ಪಿಸಿಕೊಳ್ಳುವುದು. ಅದು ನಿಶ್ಚಯಪ್ರಸಾದ.
#ಒಕ್ಕುದು ಪ್ರಸಾದವೆಂಬರು, ಮಿಕ್ಕುದು ಪ್ರಸಾದವೆಂಬರು
ಒಕ್ಕುದು ಮಿಕ್ಕುದನೆಲ್ಲ ಬೆಕ್ಕು ಕೊಳ್ಳದೆ ?
ಒಕ್ಕುಮಿಕ್ಕು ಹೋಗುವ ಪಂಚಸಕೀಲವ ಬಲ್ಲಡೆ
ಗುಹೇಶ್ವರಲಿಂಗದಲ್ಲಿ ಆತನೆ ಪ್ರಸಾದಿ / 524
ಎಂದು ಅಲ್ಲಮಪ್ರಭುಗಳು ಪ್ರಸಾದಿ ಲಕ್ಷಣ, ಅರ್ಪಣತತ್ವ ವನ್ನು ತಾತ್ವಿಕವಾಗಿ ಹೇಳಿದ್ದಾರೆ. "ತನ್ನ ಮುಟ್ಟಿ ನೀಡುವುದು ಪ್ರಸಾದ;
ತನ್ನ ಮುಟ್ಟದೆ ನಿಡಿದುದೇ ಓಗರ". ಸಂಕಲ್ಪ ವಿಕಲ್ಪ ವಿರಹಿತನಾಗಿ ತನ್ನ ಸರ್ವಸ್ವವನ್ನೂ ಅರ್ಪಿಸಿಕೊಳ್ಳುವುದು. ಕರಣಂಗಳೆಲ್ಲವೂ ಲಿಂಗಕಿರಣಂಗಳಾಗಬೇಕು. ಈ ಅರ್ಪಿತದ ರಹಸ್ಯವನ್ನು ಚನ್ನಬಸವಣ್ಣನವರು ಹೀಗೆ ಹೇಳಿದ್ದಾರೆ .
ಪ್ರಾಣಕ್ಕೆ ಪ್ರಸಾದ ಸಾಧ್ಯವಾದಲ್ಲಿ ಆ ಲಿಂಗಕ್ಕೆ ಆ ಪ್ರಾಣವೆ ಅರ್ಪಿತ.
ಮನವು ಮಹವನಿಂಬುಗೊಂಡಲ್ಲಿ ಆ ಲಿಂಗಕ್ಕೆ ಮನವೆ ಅರ್ಪಿತ.
ಭಾವಭ್ರಮೆಯಳಿದು ನಿಭ್ರಾಂತುವಾದಲ್ಲಿ ಆ ಲಿಂಗಕ್ಕೆ ಆ ಭಾವವೆ ಅರ್ಪಿತ.
ಜ್ಞಾತೃ ಜ್ಞಾನ ಜ್ಞೇಯ ಸಂಪುಟವಾಗಿ, ಅರಿವು ನಿರ್ಣಯಿಸಿ ನಿಷ್ಪತಿಯಾಗಿ
ಕುರುಹುಗೆಟ್ಟಲ್ಲಿ ಆ ಲಿಂಗಕ್ಕೆ ಆ ಅರಿವೆ ಅರ್ಪಿತ.
ಇಂತು, ಸರ್ವಾಂಗವರ್ಪಿತವಾದ ಲಿಂಗಕ್ಕೆ ಒಡೆತನವನಿತ್ತ ಕಾರಣ,
ಕೂಡಲಚೆನ್ನಸಂಗಯ್ಯನಲ್ಲಿ ನಾನೆಂದೆನಲರಿಯದೆ
ನಿಂದ ನಿಜದ ಮಹಾಪ್ರಸಾದಿ. / 10
ಹೀಗೆ "ಅಂಗ ಪ್ರಾಣ ಮನ ಭಾವ ಅರಿವು ಗಳ ಅರ್ಪಣೆ" ಯನ್ನು ಇಲ್ಲಿ ಸೂಚಿಸಲಾಗಿದೆ. ರೂಪ ರುಚಿ ತೃಪ್ತಿಗಳನ್ನು ಸ್ವಯಂ ಬಯಸಿ ಲಿಂಗಕ್ಕೆ ಅರ್ಪಿಸುವುದು ಪ್ರಸಾದ ವಾಗುವುದಿಲ್ಲ.
ಶರಣರ ಪ್ರಸಾದ ತತ್ವದಲ್ಲಿ ಕರ್ಮಯೋಗವನ್ನು ಇನ್ನೂ ವ್ಯಾಪಕವಾಗಿ ಅಳವಡಿಸಿಕೊಂಡು, ಕಾಯಾರ್ಪಣ, ಕರಣಾರ್ಪಣ, ಭಾವಾರ್ಪಣ ಮಾಡಿದ್ದಾರೆ.
ಪ್ರಾಣಲಿಂಗಮುಖದಲ್ಲಿ ಮನವರ್ಪಿತ,
ಭಾವಲಿಂಗಮುಖದಲ್ಲಿ ಪ್ರಾಣವರ್ಪಿತ.-
ಇಂತೀ ತ್ರಿವಿಧಾರ್ಪಣವಾದಡೆ,
ಮಹಾಘನಲಿಂಗದಲ್ಲಿ ಸಮರಸೈಕ್ಯ,
ಕೂಡಲಚೆನ್ನಸಂಗಮದೇವಾ / 336
ಇಷ್ಟಲಿಂಗಕ್ಕೆ ಅಂಗವನರ್ಪಿತವ ಮಾಡಬೇಕು, ಪ್ರಾಣಲಿಂಗಕ್ಕೆ ಮನವ ಸಮರ್ಪಿಸಬೇಕು, ಭಾವಲಿಂಗಕ್ಕೆ ತೃಪ್ತಿ ಪ್ರಾಣ ಅರ್ಪಿತ ಮಾಡಬೇಕು. ಈ ಮರ್ಮವನರಿತು ಮಾಡಬಲ್ಲಡೆ ಪ್ರಸಾದಿ”. ಮನಭಾವಗಳಲ್ಲಿ ಅರ್ಪಿತವಾಗಿದ್ದು ಕ್ರಿಯೆಯಲ್ಲಿಯೂ ಅರ್ಪಿತವಾಗಬೇಕು
ಇದು ತನ್ನ ಮತ್ತು ಸಮಾಜದ ವಿಕಾಸಕ್ಕೆ ಉದ್ದಾರಕ್ಕೆ ಸಹಾಯಕವಾಗುತ್ತವೆ.
ಒಡಲ ಗುಣಂಗಳಾರಿಗೂ ಕಾಣವು.
ನೋಡುವ ನಯನ, ಕೇಳುವ ಶ್ರೋತ್ರ,
ವಾಸಿಸುವ ಘ್ರಾಣ, ಮುಟ್ಟವ ತ್ವಕ್ಕು,
ರುಚಿಸುವ ಚಿಹ್ವೆ ತಾಗಿತ್ತೆನಬೇಡ.
ನೋಡುತ್ತ ಕೇಳುತ್ತ ವಾಸಿಸುತ್ತ ಮುಟ್ಟುತ್ತ, ರುಚಿಸುತ್ತ ಲಿಂಗಾರ್ಪಿತವಮಾಡಿ
ಲಿಂಗಭೋಗೋಪಭೋಗಿಯಾದ ಪ್ರಸಾದಿಗಳಿಗೆ
ಸರ್ವಾಂಗಶುದ್ಧವೆಂಬುದಿದೆಯಯ್ಯಾ.
ಕಾಯತ್ರಯಂಗಳ ಜೀವತ್ರಯಂಗಳ ಭಾವತ್ರಯಂಗಳನೊಂದು ಮಾಡಿ,
ಸುಖ-ದುಃಖ, ಗುಣ-ನಿರ್ಗುಣಂಗಳೆಂಬ ಉಭಯವ, ಲಿಂಗದಲ್ಲಿ ಏಕವ ಮಾಡಿ,
ಅಹುದು ಅಲ್ಲ, ಬೇಕುಬೇಡೆಂಬ ಸಂಶಯವ ಕಳೆದು, ಕೂಡಲಚೆನ್ನಸಂಗನ ಆದಿಯ ಪುರಾತನರು ಮಾಡಿದ ಪಥವಿದು. / 877
ಎಂಬ ಚನ್ನಬಸವಣ್ಣ ನವರ ಮಾತಿನಲ್ಲಿ ಪ್ರಸಾದಿಯ ಸ್ಪಷ್ಟ ಚಿತ್ರವಿದೆ. ಬೇಕು
ಬೇಡೆಂಬ ಸಂಶಯಗಳನ್ನು ಕಳೆದುಕೊಂಡು ಸರ್ವಾಂಗ ಪ್ರಸಾದಿಯಾಗುತ್ತಾನೆ.
#ಕಣ್ಣ ಕಪ್ಪರದ ಕಾಳಿಕೆಯ ಕಳೆದು,
ತನ್ನ ಲಿಂಗಕ್ಕೆ ಕೊಡಬಲ್ಲನಾಗಿ ಲಿಂಗಪ್ರಸಾದಿ.
ನಾಸಿಕ ಕಪ್ಪರದ ಅವಗಂಧವ ಕಳೆದು,
ಲಿಂಗಕ್ಕೆ ಕೊಡಬಲ್ಲನಾಗಿ ಲಿಂಗಪ್ರಸಾದಿ.
ಜಿಹ್ವೆ ಕಪ್ಪರದಲ್ಲಿ ಅವರುಚಿಯ ಕಳೆದು
ಲಿಂಗಕ್ಕೆ ಕೊಡಬಲ್ಲನಾಗಿ ಲಿಂಗ ಪ್ರಸಾದಿ.
ಸ್ಪರ್ಶ ಕಪ್ಪರದಲ್ಲಿ ಸೊಪ್ಪಡಗಿದಂತೆ
ಯೋಗದ ಪೂರ್ವಾಶ್ರಯವ ಕಳೆದು,
ತನ್ನ ಲಿಂಗಕ್ಕೆ ಕೊಡಬಲ್ಲನಾಗಿ ಲಿಂಗಪ್ರಸಾದಿ.
........ಇದು ಕಾರಣ ಕೂಡಲಚೆನ್ನಸಂಗಯ್ಯಾ,
ನಿಮ್ಮ ಪ್ರಸಾದಿಗೆ ನಮೋಯೆಂಬೆನು. / 469 ಎಂದು ಚನ್ನಬಸವಣ್ಣನವರು ಪಂಚೇಂದ್ರಿಯಗಳ ಶಬ್ದ ಸ್ಪರ್ಶ ರೂಪ ರಸ ಗಂಧ ಗಳನ್ನು ಅರ್ಪಣೆ ಯಿಂದ ಪರಿಶುದ್ಧಗೊಳಿಸುವ ಲಿಂಗಪ್ರಸಾದಿ ತತ್ವವನ್ನು ಹೇಳುತ್ತಾರೆ.
"ಲಿಂಗ ಪ್ರಸಾದ ತನಗಾಗಬೇಕೆಂಬ ಪ್ರಸಾದಿ
ಶಬ್ದ ಸ್ಪರ್ಶ ರೂಪ ರಸ ಗಂಧಂಗಳ
ತನ್ನ ತನುಕರಣಂಗಳ ಮುಟ್ಟಲೀಯದೆ
ಅಂಗ ಮುಂದಾಗಿ, ಮನ ಹಿಂದಾಗಿ
ಅಂಗಭಾವವಳಿದು ಅರ್ಪಿಸಿಕೊಳಬಲ್ಲಡೆ ಪ್ರಸಾದಿ" ಎಂದು ಶರಣರು ಹೇಳುತ್ತಾರೆ.
ಹೀಗೆ "ಪಂಚೇಂದ್ರಿಯ ಹಾಗೂ ಅಂಗಭಾವವನ್ನು ಅಳಿದು ತನ್ನ ಮೂಲ ನೆಲೆಯಾದ ಸಂತೃಪ್ತ ಭಾವಸ್ಥಿತಿ ಹೊಂದಿದವರು ಪ್ರಸಾದಿ". ಸೃಷ್ಟಿಯ ಭೋಗವೆಲ್ಲ ಶಿವಭೋಗವಾಗುತ್ತದೆ. ಸಾಧಕ ಶಿವ ಪ್ರಸಾದಿಯಾಗಿ, ಶಿವಪ್ರಸನ್ನತೆ ಆತನ ಮುಖದಲ್ಲಿ ಸದಾ ಕಾಲ ನೆಲಸಿ ನಿತ್ಯಪ್ರಸಾದಿಯ ನಿಲವಿಗೆ ಏರುತ್ತಾನೆ.
- ✍️ Dr Prema Pangi
#ಪ್ರಸಾದಿ_ಸ್ಥಲ
Comments
Post a Comment