ವಚನ ದಾಸೋಹ
#ವಚನ:
#ಅಂತರಂಗದಲ್ಲಿ ಅರಿವಾದಡೇನಯ್ಯಾ
ಬಹಿರಂಗದಲ್ಲಿ ಕ್ರೀ ಇಲ್ಲದನ್ನಕ್ಕ ?
ದೇಹವಿಲ್ಲದಿರ್ದಡೆ ಪ್ರಾಣಕ್ಕಾಶ್ರಯವುಂಟೆ ?
ಕನ್ನಡಿಯಿಲ್ಲದಿರ್ದಡೆ ತನ್ನ ಮುಖವ ಕಾಣಬಹುದೆ ?
ಸಾಕಾರ ನಿರಾಕಾರ ಏಕೋದೇವ,
ನಮ್ಮ ಕೂಡಲಚೆನ್ನಸಂಗಯ್ಯನು.
- ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು
ಅರ್ಥ:
*ಅಂತರಂಗದಲ್ಲಿ ಅರಿವಾದಡೇನಯ್ಯಾ
ಬಹಿರಂಗದಲ್ಲಿ ಕ್ರೀ ಇಲ್ಲದನ್ನಕ್ಕ ?*
ಅಂತರಂಗದಲ್ಲಿ ಶಿವನ ನಿರಾಕಾರ ನಿರ್ಗುಣ ಸ್ವರೂಪ ಅರಿವಾದರೂ ಸಹಿತ, ಬಹಿರಂಗದಲ್ಲಿ ಕ್ರಿಯೆ ಇಲ್ಲದಿದ್ದರೆ ಸಾಧನೆಯಾಗದು. ಜ್ಞಾನದೊಡನೆ ಕ್ರಿಯೆ ಅಂದರೆ ಶಿವಯೋಗ ಸಾಧನೆ ಬೇಕು.
*ದೇಹವಿಲ್ಲದಿರ್ದಡೆ ಪ್ರಾಣಕ್ಕಾಶ್ರಯವುಂಟೆ*
ದೇಹವೇ ಇಲ್ಲದಿದ್ದರೆ ಪ್ರಾಣಕ್ಕೆ ಆಶ್ರಯ ಎಲ್ಲಿಯದು? ಹಾಗಾಗಿ ದೇಹಕ್ಕೆ ಪ್ರಾಣ - ಪ್ರಾಣಕ್ಕೆ ದೇಹ ಜೊತೆಗಿದ್ದರೆಯೇ ನಮ್ಮ ಅಸ್ತಿತ್ವ. ದೇಹವೇ ಇಲ್ಲದೆ ಬರೀ ಪ್ರಾಣವಿದ್ದರೆ ನಾವು ಇರಲು ಸಾಧ್ಯವೇ? ಸಾಧನೆ ಮಾಡಲು ಸಾಧ್ಯವೇ?
*ಕನ್ನಡಿಯಿಲ್ಲದಿರ್ದಡೆ ತನ್ನ ಮುಖವ ಕಾಣಬಹುದೆ ?*
ಕನ್ನಡಿಯಿಲ್ಲದೇ ತನ್ನ ಮುಖ ಕಾಣಬಹುದೇ?ಅಸಾಧ್ಯ.
*ಸಾಕಾರ ನಿರಾಕಾರ ಏಕೋದೇವ,
ನಮ್ಮ ಕೂಡಲಚೆನ್ನಸಂಗಯ್ಯನು.*
ಅದೇ ರೀತಿ ಇಷ್ಟಲಿಂಗ ಸಾಕಾರ, ಶೂನ್ಯಲಿಂಗ (ನಿರಾಕಾರ ನಿರ್ಗುಣ ನಿರ್ಮಾಯ ನಿರವಯ ಶಿವ) ನಿರಾಕಾರವಾದುದು. ಶೂನ್ಯಲಿಂಗ ಬಿಂಬವಾದರೆ, ಇಷ್ಟಲಿಂಗ ಅದರ ಪ್ರತಿಬಿಂಬ. ನಿರಾಕಾರವಾದ ಶೂನ್ಯಲಿಂಗವನ್ನು ಅರಿಯಲು, ಸಾಕಾರ ಇಷ್ಟಲಿಂಗ ಸಹಕಾರಿ ಮತ್ತು ಲಿಂಗವಂತರಿಗೆ ಅಗತ್ಯ. ಇಲ್ಲಿ ಸಾಕಾರ, ನಿರಾಕಾರವೆಂಬ ಬೇರೆ ಬೇರೆ ದೇವರುಗಳಲ್ಲ. ಸಾಕಾರ ನಿರಾಕಾರ ಎರಡೂ ಒಬ್ಬರೇ ದೇವರು ನಮ್ಮ ಕೂಡಲಚೆನ್ನಸಂಗಯ್ಯನು 'ಏಕೋದೇವ ' ಎನ್ನುತ್ತಾರೆ ಅವಿರಳ ಜ್ಞಾನಿ ಚೆನ್ನಬಸವಣ್ಣ ನವರು.
- ✍️ Dr Prema Pangi
#ಪ್ರೇಮಾ_ಪಾಂಗಿ,#ಚೆನ್ನಬಸವಣ್ಣನವರು,
#ಅಂತರಂಗದಲ್ಲಿ_ಅರಿವಾದಡೇನಯ್ಯಾ,
Comments
Post a Comment