ವಚನ ದಾಸೋಹ : ಕಂಗಳು ತುಂಬಿದ ಬಳಿಕ ನೋಡಲಿಲ್ಲ,
ಕಂಗಳು ತುಂಬಿದ ಬಳಿಕ ನೋಡಲಿಲ್ಲ,
ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ,
ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ,
ಮನ ತುಂಬಿದ ಬಳಿಕ ನೆನೆಯಲಿಲ್ಲ,
ಮಹಂತ ಕೂಡಲಸಂಗಮದೇವನ. / 446
- ಗುರು ಬಸವಣ್ಣನವರು
*ಅರ್ಥ* :
ಈ ವಚನದಲ್ಲಿ ತಾವು ಪ್ರಾಣಲಿಂಗ ಪೂಜೆಯಲ್ಲಿ ತನ್ಮಯನಾದ ಐಕ್ಯವಾದ ಸ್ಥಿತಿಯ ವರ್ಣನೆ ಮಾಡಿದ್ದಾರೆ ಗುರು ಬಸವಣ್ಣನವರು. ಸಾಧನೆ ಮುಂದುವರೆದಂತೆ ಪ್ರಾಣಲಿಂಗ ಅನುಸಂಧಾನವಾಗಿ ಕಣ್ಣು, ಕಿವಿ, ಕೈ, ಮನಸ್ಸು - ಹೀಗೆ ದೇಹದ ಸರ್ವಾಂಗಗಳನ್ನು ಲಿಂಗಭಾವ ಆವರಿಸುತ್ತದೆ. ಅನಂತವಾದ ಆ ಅನುಭಾವ ಕಣ್ಣುಗಳನ್ನು ತುಂಬಿದ ಮೇಲೆ ಅಲ್ಲಿ ಬೇರೆ ಏನನ್ನೂ ಕಾಣುವುದಿಲ್ಲ, ಕಿವಿಗಳನ್ನು ತುಂಬಿದ ಮೇಲೆ ಬೇರೆ ಏನನ್ನೂ ಕೇಳುವುದಿಲ್ಲ, ಕರಸ್ಥಲವನ್ನು ತುಂಬಿದ ಮೇಲೆ ಬೇರೆ ಏನನ್ನೂ ಪೂಜಿಸುವುದಿಲ್ಲ, ಅದು ಮನಸ್ಸನ್ನು ತುಂಬಿದ ಮೇಲೆ ಬೇರೆ ಏನನ್ನೂ ನೆನೆಯುವುದಿಲ್ಲ. ಮಹಾಂತ ಕೂಡಲಸಂಗಮದೇವ (ನಿರಾಕಾರ ನಿರ್ಗುಣ ನಿರ್ಮಾಯ ಪರಶಿವ, ಪರಮಾತ್ಮ)ನೇ ಈ ಸರ್ವಸ್ವವನ್ನೂ, ಸರ್ವಾಂಗವನ್ನೂ ವ್ಯಾಪಿಸಿದ ಮೇಲೆ ಕಾಣುವುದಕ್ಕೆ, ಕೇಳುವುದಕ್ಕೆ, ಪೂಜಿಸುವುದಕ್ಕೆ, ನೆನೆಯುವುದಕ್ಕೆ ಬೇರೇನೂ ಉಳಿಯುವುದಿಲ್ಲ. ಎಲ್ಲೆಲ್ಲಿಯೂ ತಾನೇ ತಾನಾಗಿ ಅದು ವ್ಯಾಪಿಸಿ ಸಾಮರಸ್ಯದ ಸುಖದಲ್ಲಿ ಮುಳುಗಿಸಿಬಿಡುತ್ತದೆ.
ವಚನ ಚಿಂತನ :
ಇದು ಪ್ರಾಣಲಿಂಗಿಸ್ಥಲ (ಪ್ರಾಣಲಿಂಗಿಯ ಐಕ್ಯ ಸ್ಥಲ) ದ ವಚನ. ಹೆಸರೇ ಸೂಚಿಸುವಂತೆ ಪ್ರಾಣಲಿಂಗ ಪೂಜೆಯಲ್ಲಿ ತನ್ಮಯನಾದ ಐಕ್ಯವಾದ ಸ್ಥಲ. ಶರಣರು ಪ್ರಾಣಲಿಂಗ ಪ್ರತಿಷ್ಠಾಪನೆ ವಿಗ್ರಹದಲ್ಲಿ, ಸ್ಥಾವರಲಿಂಗದಲ್ಲಿ ಮಾಡದೆ ತಮ್ಮದೇ ಕಾಯದಲ್ಲಿಯ ಸೃಷ್ಟಿಕರ್ತ ರಚಿಸಿದ ಪ್ರಾಣದ ಲಿಂಗಕ್ಕೆ ಪ್ರಾಣಪ್ರತಿಷ್ಠಾಪನೆ ಮಾಡಿದರು.
ಪ್ರಾಣಲಿಂಗಿ ಸ್ಥಲದಲ್ಲಿ, ಸಾಧನೆ ಧ್ಯಾನದ ಮೂಲಕ ಅನುಸಂಧಾನದ ಕಡೆ ತಿರುಗುತ್ತದೆ. ಹೀಗೆ ಲಿಂಗ ಅನುಸಂಧಾನ ಮಾಡುತ್ತಾ ಆಯಾತವಾದ ಲಿಂಗವನ್ನು ಸ್ವಾಯತ ಮಾಡಿ ಕೊಳ್ಳುವ ಅಂತರಂಗದ ಸಾಧನೆ ಪ್ರಾಣಲಿಂಗ ಸಾಧನೆಯ ಮುಖ್ಯ ಅಂಶ. ಸಾಧಕ ಲಿಂಗಾಂಗ ಸಾಮರಸ್ಯ ಪಡೆದು ಅನುಭಾವಿ ಯಾಗುತ್ತಾನೆ. ಇಲ್ಲಿಯ ಭಕ್ತಿಗೆ 'ಅನುಭಾವ ಭಕ್ತಿ' ಎಂದು ಕರೆಯುತ್ತಾರೆ.
"ಹರಿಯುವ ಮನ ವಾಯುವನೊಂದು ಹುರಿಯ ಮಾಡಿ ಮನವ ಸ್ಥಿರಗೊಳಿಸಿ, ಸಗುಣ ಸಕಲಲಿಂಗ ಧ್ಯಾನ ಸವೆದು, ನಿರಾಕಾರನಿರ್ಗುಣ ಪ್ರಾಣಲಿಂಗದಲ್ಲಿ ಅಡಗಿ ಆ ನಿರ್ಗುಣದಲ್ಲಿ ಮನೋಲಯ ಮಾಡುವುದೇ ಲಿಂಗ ಸ್ವಾಯತ".
ಇಲ್ಲಿ ಲಿಂಗವು ಉಪಾಸನೆ ಮಾಡುವ ಸ್ಥೂಲವಸ್ತು ಅಲ್ಲ. ಅದು ಅಂತರಂಗವನೆಲ್ಲ ಆವರಿಸುತ್ತದೆ. ಅದು ಅಂತರಂಗ ಬಹಿರಂಗವನೆಲ್ಲಾ ವ್ಯಾಪಿಸಿದ ಶಕ್ತಿ ಯಾಗುತ್ತದೆ. ಬಹಿರಂಗದ ಇಷ್ಟಲಿಂಗದ ಪೂಜೆ ಧ್ಯಾನದಿಂದ ಅಂತರಂಗದ ನಿರ್ಮಲ ಪರಂಜ್ಯೋತಿ ಕಾಣುತ್ತದೆ. ಕರಸ್ಥಲದ ಲಿಂಗ, ದೃಷ್ಟಿಯೋಗದಿಂದ ಕಣ್ಣುಗಳನ್ನು ತುಂಬುತ್ತದೆ. ಪಂಚೇಂದ್ರಿಯಗಳನ್ನು ತುಂಬುತ್ತದೆ. ಮನದ ಕೋಣೆಯನ್ನು ತುಂಬುತ್ತದೆ. ಮನದ ಕೋಣೆಯಿಂದ ಭಾವದಲ್ಲಿ ಇಂಬಿಡುತ್ತದೆ. ಸರ್ವಾಂಗ ವ್ಯಾಪಿಸಿ 'ಸರ್ವಾಂಗ ಲಿಂಗ' ವಾಗುತ್ತದೆ. ಸಾಧಕನಿಗೆ ಲಿಂಗ ಸ್ವಾಯತ್ತ ಆಗಿ ಅವನು "ಸರ್ವಾಂಗಲಿಂಗಿ" ಆಗುತ್ತಾನೆ.
-✍️ Dr Prema Pangi
#ಕಂಗಳು_ತುಂಬಿದ_ಬಳಿಕ_ನೋಡಲಿಲ್ಲ
#ಪ್ರಾಣಲಿಂಗಿ_ಸ್ಥಲ
Comments
Post a Comment