ವಚನ ದಾಸೋಹ
ವಚನ:
ಎನ್ನ ಪೃಥ್ವಿತತ್ತ್ವದಲ್ಲಿ ಆಧಾರಚಕ್ರವಿರ್ಪುದು.
ಆ ಚಕ್ರವೇ ಭಕ್ತಸ್ಥಲ.
ಆ ಸ್ಥಲವ ಬಸವಣ್ಣನಿಂಬುಗೊಂಡನಾಗಿ
ಎನಗಾಸ್ಥಲ ಬಯಲಾಯಿತ್ತು.
ಎನ್ನ ಅಪ್ಪುತತ್ತ್ವದಲ್ಲಿ ಸ್ವಾಧಿಷ್ಠಾನಚಕ್ರವಿರ್ಪುದು.
ಆ ಚಕ್ರವೇ ಮಹೇಶ್ವರಸ್ಥಲ.
ಆ ಸ್ಥಲವ ಮಡಿವಾಳಮಾಚಯ್ಯಗಳಿಂಬುಗೊಂಡರಾಗಿ
ಎನಗಾಸ್ಥಲ ಬಯಲಾಯಿತ್ತು.
ಎನ್ನ ಅಗ್ನಿತತ್ತ್ವದಲ್ಲಿ ಮಣಿಪೂರಕಚಕ್ರವಿರ್ಪುದು.
ಆ ಚಕ್ರವೆ ಪ್ರಸಾದಿಸ್ಥಲ.
ಆ ಸ್ಥಲವ ಚೆನ್ನಬಸವಣ್ಣನಿಂಬುಗೊಂಡನಾಗಿ
ಎನಗಾಸ್ಥಲ ಬಯಲಾಯಿತ್ತು .
ಎನ್ನ ವಾಯುತತ್ತ್ವದಲ್ಲಿ ಅನಾಹತಚಕ್ರವಿರ್ಪುದು.
ಆ ಚಕ್ರವೆ ಪ್ರಾಣಲಿಂಗಿಸ್ಥಲ.
ಆ ಸ್ಥಲವ ಸಿದ್ಧರಾಮಯ್ಯದೇವರಿಂಬುಗೊಂಡರಾಗಿ
ಎನಗಾಸ್ಥಲ ಬಯಲಾಯಿತ್ತು.
ಎನ್ನ ಗಗನತತ್ತ್ವದಲ್ಲಿ ವಿಶುದ್ಧಿಚಕ್ರವಿರ್ಪುದು.
ಆ ಚಕ್ರವೆ ಶರಣಸ್ಥಲ.
ಆ ಸ್ಥಲವ ಉರಿಲಿಂಗಪೆದ್ದಿದೇವರಿಂಬುಗೊಂಡರಾಗಿ
ಎನಗಾಸ್ಥಲ ಬಯಲಾಯಿತ್ತು.
ಎನ್ನ ಜೀವತತ್ತ್ವದಲ್ಲಿ ಅಜ್ಞಾಚಕ್ರವಿರ್ಪುದು.
ಆ ಚಕ್ರವೆ ಐಕ್ಯಸ್ಥಲ.
ಆ ಸ್ಥಲವ ಅಜಗಣ್ಣತಂದೆಗಳಿಂಬುಗೊಂಡರಾಗಿ
ಎನಗಾಸ್ಥಲ ಬಯಲಾಯಿತ್ತು.
ಎನ್ನ ಬ್ರಹ್ಮಚಕ್ರವೆ ಪರಮ ಆರೂಢಸ್ಥಲ.
ಆ ಸ್ಥಲವ ನಿಜಗುಣಯೋಗಿಗಳಿಂಬುಗೊಂಡರಾಗಿ
ಎನಗಾಸ್ಥಲ ಬಯಲಾಯಿತ್ತು.
ಎನ್ನ ಶಿಖಾಚಕ್ರವೆ ನಿತ್ಯನಿರುಪಮಸ್ಥಲ.
ಆ ಸ್ಥಲವ ಅಕ್ಕಮಹದೇವಿಯರಿಂಬುಗೊಂಡರಾಗಿ
ಎನಗಾಸ್ಥಲ ಬಯಲಾಯಿತ್ತು.
ಎನ್ನ ಪಶ್ಚಿಮಚಕ್ರವೆ ಪರಮನಿರಂಜನಸ್ಥಲ.
ಆ ಸ್ಥಲವ ಪ್ರಭುಸ್ವಾಮಿಗಳಿಂಬುಗೊಂಡರಾಗಿ
ಎನಗಾಸ್ಥಲ ಬಯಲಾಯಿತ್ತು.
ಎನ್ನ ಒಳಹೊರಗೆ ತೋರುವ ಎಲ್ಲ ಸ್ಥಳಕುಳಂಗಳನು
ಉಳಿದ ಸಕಲಗಣಂಗಳು ಇಂಬುಗೊಂಡರಾಗಿ
ಎನಗೆ ಎಲ್ಲ ಸ್ಥಲಂಗಳು ಬಯಲಾದುವು.
ಇದು ಕಾರಣ, ಆದಿ ಅನಾದಿಯಿಂದತ್ತತ್ತಲಾದ
ಘನಕೆ ಘನವಾದ ಮಹಕೆ ಮಹವಾದ
ಮಹಾಸ್ಥಲವನಿಂಬುಗೊಂಡಿರಯ್ಯಾ ಎನಗೆ ಅಖಂಡೇಶ್ವರಾ. / 155*
ಷಣ್ಮುಖ ಸ್ವಾಮಿಗಳು
#ಅರ್ಥ :
ಯೋಗಿಗಳು ದೇವಾಲಯದ ಈ ದೇಹದಲ್ಲಿ ಏಳು ಶಕ್ತಿ ಕೇಂದ್ರಗಳನ್ನು ಗುರುತಿಸಿದ್ದಾರೆ. ಮೊದಲನೆಯದು ಮೂಲಾಧಾರ, ನಂತರ ಕ್ರಮವಾಗಿ ಸ್ವಾಧಿಷ್ಟಾನ, ಮಣಿಪೂರಕ, ಅನಾಹತ ಮತ್ತು ವಿಶುದ್ಧಿ ,ಆಜ್ಞಾ ಚಕ್ರ, ಸಹಸ್ರಾರ ಚಕ್ರ. ಕೆಳಗಿನ ಆರುಚಕ್ರಗಳ ಮಧ್ಯೆ ಪ್ರಾಣ ಮತ್ತು ಮನಸ್ಸುಗಳು ಸಂಚರಿಸುತ್ತವೆ. ಮೇಲಿನಿಂದ ಕೆಳಗೆ ಹರಿವುದು ಅಧೋಮುಖ ಚಲನೆ; ಕೆಳಗಿನಿಂದ ಮೇಲೆ ಹೋಗುವುದು ಊರ್ಧ್ವ ಚಲನೆ. ಸಾಮಾನ್ಯವಾಗಿ ಅಧೋಮುಖ ಚಲನೆ ಹೆಚ್ಚು. ಅದು ಪ್ರವೃತ್ತಿ ಜೀವನ, ಅಧೋಮುಖಿಯಾದ ಮನಸ್ಸು ವಿಷಯಗಳತ್ತ ಹರಿಯುತ್ತದೆ. ವಿಷಯ ಸುಖದಲ್ಲಿ ಕ್ರಮಿಸುತ್ತದೆ. ಅದು ಊರ್ಧ್ವಮುಖ ಗೊಂಡಾಗ ವಿಷಯಗಳಿಂದ ನಿವೃತ್ತವಾಗುತ್ತದೆ. ಮೊದಲನೆಯದು ಪ್ರವೃತ್ತಿ ಮಾರ್ಗ, ಎರಡನೆಯದು ನಿವೃತ್ತಿ ಮಾರ್ಗದ, ಪ್ರವೃತ್ತಿ ಮಾರ್ಗದಲ್ಲಿ ನಡೆಯುವವನೇ ಭುವಿ. ನಿವೃತ್ತಿ ಮಾರ್ಗದಲ್ಲಿ ನಡೆಯುವವನೇ ಭಕ್ತ, ಯೋಗಿ, ಸಾಧಕ. ಆ ಭಕ್ತರು ಆಯಾ ಸ್ಥಾನಗಳಲ್ಲಿ ನಿಂತು, ಮನಸ್ಸನ್ನು ಸ್ಥಿರಗೊಳಿಸಿ ಅದಲ್ಲಿರುವ ದೈವೀ ಕಲೆಯೊಂದಿಗೆ ಸುಖಿಸಬೇಕು.
ಆಜ್ಞಾಚಕ್ರವನ್ನು ಮೀರಿ ಮೇಲಿರುವ ಪ್ರದೇಶವೇ ಉನ್ಮಜ್ಯೋತಿ.
#ಶಿವಯೋಗಿಗಳು ಆಜ್ಞಾ ಚಕ್ರದ ಮೇಲೆ ಮತ್ತೆ ಮೂರು ಚಕ್ರ ಸಾಧಿಸಿಕೊಂಡರು. ಅವೇ ಕ್ರಮವಾಗಿ ಸಹಸ್ರಾರು ಚಕ್ರ, ಶಿಖಾ ಚಕ್ರ, ಪಶ್ಚಿಮ ಚಕ್ರ, (ಅಣ ಚಕ್ರ 10 ನೆಯದು. ಚಕ್ರ ಸಾಧನೆ ಅತ್ಯಂತ ವಿರಳ) ಆಜ್ಞಾಚಕ್ರವನ್ನು ಮೀರಿ ಮೇಲಿರುವ ಪ್ರದೇಶವೇ ಉನ್ಮಜ್ಯೋತಿ. ಮನಸ್ಸು ಆ ಪ್ರದೇಶವನ್ನು ಪ್ರವೇಶಿಸಿದಾಗ ಉನ್ಮನಿಯೆನಿಸುತ್ತದೆ. ವ್ಯಷ್ಟಿ, ಸಮಷ್ಟಿ, ಪ್ರಪಂಚದ ಆಕರ್ಷಣೆಗಳಿಂದ ಅದು ಪೂರ್ಣ ಮುಕ್ತವಾಗಿರುತ್ತದೆ. ನಿಶ್ಚಿಂತ ನಿರಾಮಯವಾದ ಉನ್ಮನಿಗೊಂಡ ಅ ಮನಸ್ಸು ಉನ್ಮನಿ ಕ್ಷೇತ್ರವನ್ನು ಮೀರಿ ಬ್ರಹ್ಮ ರಂಧ್ರವನ್ನು ಪ್ರವೇಶಿಸಿ ಸಹಸ್ರಾರು ದಲ್ಲಿ ನಿಲ್ಲುತ್ತದೆ. ಅದುವೆ ನಿಃಕಲ ಲಿಂಗ ಸ್ಥಲ. ನಿಶ್ಯಬ್ದ ಓಂಕಾರ ಪ್ರಣವ ಬ್ರಹ್ಮ. ಅಲ್ಲಿ ಮನಸ್ಸು, ಮನೋಗತ ಜೀವನ ಅಲ್ಲಿರುವ ಲಿಂಗಪ್ರಭೆಯಲ್ಲಿ ನಿಮಗ್ನ , ನಿರ್ವಿಷಯ ಸೌಖ್ಯವಾದ ಲಿಂಗಾನಂದದ ಅನುಭವ.
ಷಣ್ಮುಖ ಸ್ವಾಮಿಗಳು ಈ ವಚನದಲ್ಲಿ
ನವಚಕ್ರ ಗಳ ಸ್ಥಾನ, ತತ್ವ, ಸಾಧಕನ ಶಟ್ಸ್ಥಲ ಸಾಧನೆಯಲ್ಲಿ ಆ ಚಕ್ರದ ಸ್ಥಾನ, ಆ ಚಕ್ರಗಳಲ್ಲಿ ಗೌಪ್ಯವಾದ ಶಕ್ತಿಯ ಅಭಿವ್ಯಕ್ತಿ , ಸಂಪಾದನೆಯ ರಹಸ್ಯ ಮತ್ತು ಅದನ್ನು ಅಂಗವಿಸಿಕೊಂಡಿದ್ದ ಶರಣ ಶರಣೆಯರನ್ನ ಸ್ಮರಿಸಿದ್ದಾರೆ. ಆ ಮಹಾಮಹಿಮರಿಂದಾಗಿ ಅವರಿಗೆ ನಿಲುಕಿದ ಸ್ಥಲ ಮತ್ತು ಅವರ ನಿರ್ದೇಶನದಲ್ಲಿ ತನ್ಮೂಲಕವಾಗಿ ತನ್ನ ಮೇಲಾದ ಅವರ ವ್ಯಕ್ತಿತ್ವ ಅನುಭವಗಳ ಪ್ರಭಾವವನ್ನೂ ಷಣ್ಮುಖಸ್ವಾಮಿಯು ಇಲ್ಲಿ ವಿವರಿಸಿದ್ದಾರೆ. ತತ್ವಗಳ ತಿಳಿವಳಿಕೆಯೊಡನೆ ಅವುಗಳ ಅಳವಡಿಕೆಯೂ ಮಹತ್ವವನ್ನು ಪಡೆಯುತ್ತದೆ. ಆ ತತ್ವಗಳನ್ನು ಅಳವಡಿಸಿಕೊಂಡಿದ್ದ ಶರಣರನ್ನು ಅವರ ವಚನಗಳನ್ನು ಅರಿತು ಅನುಸರಿಸಿಕೊಂಡು ಅವರ ಆದರ್ಶ, ಜ್ಞಾನ, ಆಚರಣೆ ಅರಿವು ನಿಚ್ಚ ಎಚ್ಚರಿಕೆಯೊಡನೆ ಪಾಲಿಸಿಕೊಂಡು ಬಂದು ತಮ್ಮ ಸಾಧನೆಯನ್ನು ಸುಲಭಗೊಳಿಸಿಕೊಂಡರು ಷಣ್ಮುಖ ಶಿವಯೋಗಿಗಳು.
ಷಣ್ಮುಖಸ್ವಾಮಿಗಳಿಗೆ ಎಲ್ಲ ಸ್ಥಲಗಳು ಗುರು ಬಸವಣ್ಣ, ಮಡಿವಾಳ ಮಾಚಿದೇವ, ಚೆನ್ನ ಬಸವಣ್ಣ, ಸಿದ್ಧರಾಮ ದೇವರು, ಉರಿಲಿಂಗ ಪೆದ್ದಿದೇವ, ಅಜಗಣ್ಣ ತಂದೆ, ನಿಜಗುಣಯೋಗಿಗಳು, ಅಕ್ಕಮಹಾದೇವಿ, ಅಲ್ಲಮ ಪ್ರಭುಗಳು ಈ ಘನಕೆ ಘನವಾದ, ಮಹಕೆ ಮಹವಾದ ಮಹಾಮಹಿಮ ಶರಣರ ಇಂಬುಗೊಂಡಿದ್ದರಿಂದ ಬಯಲಾದವು ಎಂದು ಎಲ್ಲರನ್ನು ಸ್ಮರಿಸಿದ್ದಾರೆ. ತಮ್ಮ ಶಿವಯೋಗದ ಸಾಧನೆಯಲ್ಲಿ ಚಕ್ರ ಗಳೊಡನೆ, ಷಟ್ಸ್ಥಲದ ಸ್ಥಲ, ತತ್ವ, ಆ ಸ್ಥಲದ ಸಾಧನೆಯಲ್ಲಿ ಮಾರ್ಗದರ್ಶನ ಮಾಡಿದ ಶರಣರನ್ನು ಅಧಿಪತಿಗಳಾಗಿ ಸ್ಮರಿಸಿದ್ದಾರೆ. ಷಣ್ಮುಖ ಶಿವಯೋಗಿಗಳು.
ಅವರಿಗೆ ಹೀಗೆಯೇ ಎಲ್ಲ ಸ್ಥಲಗಳು ಬಯಲಾದುವು.
ಆಧಾರಚಕ್ರ
ಪೃಥ್ವಿತತ್ತ್ವ
ಭಕ್ತಸ್ಥಲ.
ಬಸವಣ್ಣ- ಮಾರ್ಗದರ್ಶಕ, ಅಧಿಪತಿ
ಸ್ವಾಧಿಷ್ಠಾನಚಕ್ರ
ಅಪ್ಪುತತ್ತ್ವ
ಮಹೇಶ್ವರಸ್ಥಲ.
ಮಡಿವಾಳಮಾಚಯ್ಯ - ಮಾರ್ಗದರ್ಶಕ, ಅಧಿಪತಿ
ಮಣಿಪೂರಕಚಕ್ರ
ಅಗ್ನಿತತ್ತ್ವ
ಪ್ರಸಾದಿಸ್ಥಲ.
ಚೆನ್ನಬಸವಣ್ಣ - ಮಾರ್ಗದರ್ಶಕ, ಅಧಿಪತಿ
ಅನಾಹತಚಕ್ರ
ವಾಯುತತ್ತ್ವ
ಪ್ರಾಣಲಿಂಗಿಸ್ಥಲ.
ಸಿದ್ಧರಾಮಯ್ಯದೇವ - ಮಾರ್ಗದರ್ಶಕ, ಅಧಿಪತಿ
ವಿಶುದ್ಧಿಚಕ್ರ
ಗಗನತತ್ತ್ವ
ಶರಣಸ್ಥಲ.
ಉರಿಲಿಂಗಪೆದ್ದಿದೇವ - ಮಾರ್ಗದರ್ಶಕ, ಅಧಿಪತಿ
ಅಜ್ಞಾನಚಕ್ರ
ಜೀವತತ್ತ್ವ
ಐಕ್ಯಸ್ಥಲ.
ಅಜಗಣ್ಣತಂದೆ - ಮಾರ್ಗದರ್ಶಕ, ಅಧಿಪತಿ
ಬ್ರಹ್ಮಚಕ್ರ
ಪರಮ ಆರೂಢಸ್ಥಲ.
ನಿಜಗುಣಯೋಗಿಗಳು - ಮಾರ್ಗದರ್ಶಕ, ಅಧಿಪತಿ
ಶಿಖಾಚಕ್ರವೆ
ನಿತ್ಯನಿರುಪಮಸ್ಥಲ.
ಅಕ್ಕಮಹದೇವಿ - ಮಾರ್ಗದರ್ಶಕ, ಅಧಿಪತಿ
ಪಶ್ಚಿಮಚಕ್ರ
ಪರಮನಿರಂಜನಸ್ಥಲ.
ಪ್ರಭುಸ್ವಾಮಿಗಳು -ಮಾರ್ಗದರ್ಶಕ, ಅಧಿಪತಿ
ಷಣ್ಮುಖ ಸ್ವಾಮಿಗಳ ಒಳಹೊರಗೆ ತೋರುವ ಎಲ್ಲ ಸ್ಥಳಗಳು ಉಳಿದ ಸಕಲಗಣಂಗಳು ಇಂಬುಗೊಂಡರಾಗಿ ಅವರಿಗೆ ಎಲ್ಲ ಸ್ಥಲಗಳು ಬಯಲಾದುವು.
- ✍️ Dr Prema Pangi
#ಪ್ರೇಮಾ_ಪಾಂಗಿ
#ಎನ್ನ_ಪೃಥ್ವಿತತ್ತ್ವದಲ್ಲಿ_ಆಧಾರಚಕ್ರವಿರ್ಪುದು,#ಷಣ್ಮುಖಸ್ವಾಮಿಗಳು,
Comments
Post a Comment