ವಚನ ದಾಸೋಹ

*ವಚನ* :
#ನಂಬರು ನೆಚ್ಚರು ಬರಿದೆ ಕರೆವರು, 
ನಂಬಲರಿಯರೀ ಲೋಕದ ಮನುಜರು.
ನಂಬಿ ಕರೆದಡೆ ಓ ಎನ್ನನೆ ಶಿವನು?
ನಂಬದೆ ನೆಚ್ಚದೆ ಬರಿದೆ ಕರೆವರ
ಕೊಂಬ ಮೆಟ್ಟಿ ಕೂಗೆಂದ ಕೂಡಲಸಂಗಮದೇವ
- ವಿಶ್ವಗುರು ಬಸವಣ್ಣನವರು
ಅರ್ಥ:
ಶಟ್ಸ್ಥಲದ ಸಾಧನಾಪಥದ ಭಕ್ತಿಸ್ಥಲದಲ್ಲಿ ನಡೆಯುವವರಿಗೆ ಆ ದೇವನಲ್ಲಿ ಅಪಾರವಾದ ನಂಬಿಕೆ ನೆಲೆಗೊಳ್ಳಬೇಕೆಂಬುದನ್ನು ಗುರು ಬಸವಣ್ಣನವರು ಈ ವಚನದಲ್ಲಿ ಹೇಳಿದ್ದಾರೆ.

*ನಂಬರು ನೆಚ್ಚರು ಬರಿದೆ ಕರೆವರು, 
ನಂಬಲರಿಯರೀ ಲೋಕದ ಮನುಜರು.*

ಈ ಲೋಕದ ವ್ಯವಹಾರದಲ್ಲಿ ಮಗ್ನರಾದ ಭವಿ ಗಳು ಒಂದಲ್ಲ ಒಂದು ಸಾರಿ ಪರಿಸ್ಥಿತಿಯ ಒತ್ತಡದಿಂದ ಭಗವಂತನ ಕಡೆ ತಿರುಗುತ್ತಾರೆ; ಭಕ್ತಿಯತ್ತ ಒಲವು ಬೆಳೆಯುತ್ತದೆ. ಆತನನ್ನು ಕರೆಯುತ್ತಾರೆ. ಆದರೆ ಈ ಲೋಕದ ಮನುಜರು ನಂಬದೆ ನೆಚ್ಚದೆ ಬರಿದೇ ತಮ್ಮ ಸಮಸ್ಯೆ ತಿಳಿಸಿ ಪರಿಹಾರಕ್ಕೆ ಕರೆಯುತ್ತಾರೆ. ಅಚಲವಾದ ಶ್ರದ್ಧೆ, ಭಕ್ತಿ, ಪ್ರೀತಿಗಳಿಲ್ಲದೆ ಸುಮ್ಮನೆ ಕರೆಯುವುದು ವ್ಯರ್ಥ. ತನು ಮನ ಧನಗಳನ್ನು ಅರ್ಪಿಸಿ ಏಕೈಕ ನಿಷ್ಠೆಯಿಂದ ಶರಣಾಗಿ ಕರೆಯುವುದನ್ನು ಭವಿಗಳು ಸಾಧಿಸಲಾರರು.

*ನಂಬಿ ಕರೆದಡೆ ಓ ಎನ್ನನೆ ಶಿವನು?*

 “ನಂಬಿ' ಕರೆದರೆ ಆತ ಓಗೊಡುತ್ತಾನೆ. ಇಲ್ಲಿ ಪೂರ್ಣ ನಂಬಿಕೆಯಿಂದ ಕರೆದರೆ ಓಗೊಡುತ್ತಾನೆ  ಎಂದುಅರ್ಥ. "ನಂಬಿ" ಕರೆದ 63 ಪುರಾತನರಲ್ಲಿ ಒಬ್ಬನಾದ ಶಿವಭಕ್ತ ನಂಬಿಯಣ್ಣನಿಗೆ ಆತ  ಓಗೊಟ್ಟನು ಎಂದು ಕೆಲವರ ಅಭಿಪ್ರಾಯ. ನಂಬಿ ಎಂದರೆ ನಂಬಿಕೆಯಿಂದ ಎನ್ನುವುದು ಹೆಚ್ಚು ಸೂಕ್ತವೆನಿಸುತ್ತದೆ. 

*ನಂಬದೆ ನೆಚ್ಚದೆ ಬರಿದೆ ಕರೆವರ
ಕೊಂಬ ಮೆಟ್ಟಿ ಕೂಗೆಂದ ಕೂಡಲಸಂಗಮದೇವ*

 ನಂಬದೆ ನಚ್ಚದೆ ಬರಿದೆ ಕರೆದರೆ ಆ ಕೂಗು, ಮರದ ಮೇಲಿನ ಕೊಂಬೆಯನ್ನು ಮೆಟ್ಟೆ ಕೂಗಿದಂತೆ ಅರ್ಥಹೀನವಾದದ್ದು.
“ಕೊಂಬು' ಎಂದರೆ ಕಹಳೆಯ ವಾದ್ಯ, ಅದನ್ನು ಎತ್ತರದ ಧ್ವನಿಯಲ್ಲಿ ಕೂಗಿಸುವಾಗ ಕಾಲನ್ನು ಮೆಟ್ಟೆ ಬಾರಿಸುವುದುಂಟು. “ಕೊಂಬ ಮೆಟ್ಟಿ ಕೂಗು' ಎಂದರೆ ಕಹಳೆಯ ವಾದ್ಯ ಊದಿ  ಸಾರಿ ಹೇಳು ಎಂಬ ಅರ್ಥವಾಗುತ್ತದೆ. ಅಂತಹ ಭಕ್ತರ ಕರೆ ವ್ಯರ್ಥವೆಂಬುದನ್ನು ಸಾರಿ ಹೇಳುತ್ತಾನೆ ಕೂಡಲ ಸಂಗಮದೇವ ಎನ್ನುತ್ತಾರೆ ಗುರು ಬಸವಣ್ಣನವರು.
ಭಾವ:
ಇದು ಭಕ್ತಿಜ್ಞಾನ ಸ್ಥಲದ ವಚನ. ಭಕ್ತಿಯ ಮೂಲ ತಳಹದಿ ಶೃದ್ಧೆ. ಶ್ರದ್ಧೆ, ನಿಷ್ಠೆಯೇ ಭಕ್ತಿಯ ಸಾರ. ಸಾಧಕ ಕೈಕೊಂಡ ಮಾರ್ಗದಲ್ಲಿ ಅಪಾರವಾದ ಶ್ರದ್ಧೆಯಿಂದ ಮುನ್ನಡೆಯುತ್ತಾ, ಸ್ವಸ್ವರೂಪ ದರ್ಶನದ ಪ್ರಯತ್ನದಲ್ಲಿರುವ ಭಕ್ತರಿಗೆ ಅಗತ್ಯವಾಗಿ ಬೇಕಾಗಿದ್ದುದು ಅದನ್ನು ಹಾಗೆಯೇ ಬೆಳೆಸಿಕೊಂಡು ಹೋಗುವ ಏಕೈಕ ನಿಷ್ಠೆ.
 ಶ್ರದ್ದೆ ಮತ್ತು ನಿಷ್ಠೆ ಎರಡು ಸಾಧಕ ಜೀವನದ ಎರಡು ಆಧಾರಸ್ತಂಭಗಳು. ಶ್ರದ್ಧೆಯ ಮಹತ್ವ ತಿಳಿದವನು ಭಕ್ತ ಜ್ಞಾನಿ. ಭಕ್ತಿ, ನಿಷ್ಟೆ, ಅಂತರಂಗ ಶುದ್ಧಿ, ಪರಿಶುದ್ಧವಾದ ಪ್ರೇಮ ಮತ್ತು ಅರಿವಿನಿಂದ ಕೂಡಿದ ಆಚರಣೆಗಳು ಇದ್ದರೆ ಮಾತ್ರ ದೇವರ ಕೃಪೆ ಲಭಿಸುತ್ತದೆ. ನೈತಿಕ ನಿಷ್ಠೆ ಅಚಲವಾಗಿರಬೇಕು ಎಂದು ಗುರು ಬಸವಣ್ಣನವರ ಪ್ರತಿಪಾದನೆ.
ಭಕ್ತಿಯ ಮಾಡುವಲ್ಲಿ "ಹಿಡಿದು  ಬಿಡೆ"ನೆಂಬ ಛಲಬೇಕು. ನಿಷ್ಠೆಯುಳ್ಳ ಭಕ್ತ ಆದದ್ದಾಗಲಿ ಎಂದು ಉದಾಸೀನ ಮಾಡುವಾತನಲ್ಲ. ಬಂದದ್ದನ್ನು ಧೈರ್ಯದಿಂದ ಎದರಿಸುವಾತ. ಒಮ್ಮೆ ಆ ಮಾರ್ಗವನ್ನು ಅವಲಂಬಿಸಿದ ಮೇಲೆ ಏನೇ ಕಷ್ಟ ನಿಷ್ಟುರಗಳು ಬಂದರೆ ಅಂಜದೆ ಅಳುಕದೆ ಆ ಮಾರ್ಗದಲ್ಲಿ ನಡೆಯಬೇಕು.
ಭಕ್ತಿ, ನಿಷ್ಟೆ, ಶೃದ್ಧೆ ಇಲ್ಲದ ಆಡಂಬರದ ತೋರಿಕೆಯ ಆಚರಣೆಯಗಳಿಂದ ದೇವರ ಅನುಗ್ರಹ ಕೃಪೆ ಅನುಭಾವ ಲಭಿಸುವದಿಲ್ಲ ಎನ್ನುತ್ತಾರೆ ಗುರು ಬಸವಣ್ಣನವರು.
-✍️ Dr Prema Pangi
#ಪ್ರೇಮಾ_ಪಾಂಗಿ,#ಗುರು ಬಸವಣ್ಣನವರು
#ನಂಬರು_ನೆಚ್ಚರು_ಬರಿದೆ_ಕರೆವರು,
Picture post designed and created by me. Hope you all will like it. A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma