ವಚನ ದಾಸೋಹ
*ವಚನ:*
#ಆಸೆಯೆಂಬುದು ಅರಸಿಂಗಲ್ಲದೆ,
ಶಿವಭಕ್ತರಿಗುಂಟೆ ಅಯ್ಯಾ ?
ರೋಷವೆಂಬುದು ಯಮದೂತರಿಗಲ್ಲದೆ,
ಅಜಾತರಿಗುಂಟೆ ಅಯ್ಯಾ ?
ಈಸಕ್ಕಿಯಾಸೆ ನಿಮಗೇಕೆ ? ಈಶ್ವರನೊಪ್ಪ.
ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ದೂರ ಮಾರಯ್ಯ. / 6
- ಶಿವಶರಣೆ ಆಯ್ದಕ್ಕಿ ಲಕ್ಕಮ್ಮ
ಭಾವಾರ್ಥ:
ಭತ್ತ, ಜೋಳ ಇತರ ಧಾನ್ಯಗಳನ್ನು ರಾಶಿಮಾಡುವಾಗ ತೆನೆ ಕಡಿದು ಹರಡಿ ಒಣಗಿಸಿವಾಗ, ಕೂಲಿಮಾಡಿ ಎಲ್ಲ ಕೆಲಸಗಳಲ್ಲಿ ಸಹಾಯ ಮಾಡುವವರಿಗೆ, ಅಳತೆ ಮಾಡಿ ಚೀಲು ತುಂಬುವವರಿಗೆ, ರೈತರು, ತೆನೆಗಳನ್ನು, ಧಾನ್ಯದ ಕಾಳುಗಳನ್ನು ಕೊಡುವುದು ಮತ್ತು ಚದುರಿಬಿದ್ದ ಕಾಳುಗಳನ್ನು ಆಯ್ದುಕೊಂಡು ಹೋಗಲು ಹೇಳುವುದು ಸಾಮಾನ್ಯವಾಗಿಯೆ ನಡೆಯುತ್ತದೆ. ಆಯ ಅಂದರೆ ಅಳತೆಮಾಡುವದು ಹಾಗೆ ಅಕ್ಕಿಯನ್ನು ಅಳತೆ ಮಾಡುವ ಕಾಯಕ, ಅಂದರೆ ಅಳೆಯುವ ಮಾರಯ್ಯ, ಆಯ್ದಕ್ಕಿಮಾರಯ್ಯ ಆಗಿರಬಹುದು. ಹೀಗೆ ತಂದ ಧಾನ್ಯದ ಕಾಳು ಕಡಿಯಿಂದ ಪ್ರತಿದಿನ ತಮ್ಮ ಮನೆಗೆ ಬರುವ ಶಿವಶರಣರಿಗೆ ಚರಜಂಗಮರಿಗೆ ದಾಸೋಹ ಮಾಡುವುದನ್ನೇ ಆಯ್ದಕ್ಕಿ ಲಕ್ಕಮ್ಮ ಮತ್ತು ಆಯ್ದಕ್ಕಿ ಮಾರಯ್ಯ ದಂಪತಿಗಳು ತಮ್ಮ ಕಾಯಕವನ್ನಾಗಿ ಮಾಡಿಕೊಂಡಿದ್ದರು. “ದಾಸೋಹ” ಎಂದರೆ ಜಂಗಮರ ಸೇವೆಯನ್ನು ಮಾಡುವುದು ಮತ್ತು ಹಸಿದು ಬಂದವರಿಗೆ ಅನ್ನವನ್ನು ನೀಡುವುದು.
ಕಲ್ಯಾಣ ಪಟ್ಟಣದಲ್ಲಿದ್ದ ಬಸವಣ್ಣನವರ ಮಹಾಮನೆಗೆ ನಾಡಿನ ಎಲ್ಲಾ ಕಡೆಗಳಿಂದಲೂ ಬರುತ್ತಿದ್ದ ಸಾವಿರಾರು ಮಂದಿ ಶರಣಶರಣೆಯರಿಗೆ ಚರಜಂಗಮರಿಗೆ ಮಹಾಮನೆಯಲ್ಲಿ ಪ್ರತಿನಿತ್ಯವೂ ದಾಸೋಹ ನಡೆಯುತ್ತಿತ್ತು. ಅದಕ್ಕೆ ಹೀಗೆ ಅಕ್ಕಿಯನ್ನು ಆಯ್ದು ತರುತ್ತಿದ್ದ ಮಾರಯ್ಯನಿಗೆ ಆಯ್ದಕ್ಕಿ ಮಾರಯ್ಯನೆಂಬ ಹೆಸರು ಬಂದಿತ್ತು. ಅಮರೇಶ್ವರ ಗ್ರಾಮದವರಾದ ಈ ದಂಪತಿಗಳು ಬಸವಾದಿ ಶರಣರ ಕ್ರಾಂತಿ ಕೇಳಿ ತಮ್ಮ ಊರನ್ನು ಬಿಟ್ಟು ಕಲ್ಯಾಣಕ್ಕೆ ಬಂದು ನೆಲಸಿದ್ದರು.
ಒಂದು ದಿನ ದಾಸೋಹಕ್ಕೆ ಬೇಕಾಗಿರುವುದಕ್ಕಿಂತಲೂ ಹೆಚ್ಚಾಗಿ ಅಕ್ಕಿಯನ್ನು ಆಯ್ದುಕೊಂಡು, ಅಕ್ಕಿಯ ದೊಡ್ಡ ಗಂಟನ್ನು ಹೊತ್ತು ಮನೆಗೆ ಬಂದ ಮಾರಯ್ಯನನ್ನು ಕಂಡು ಅಚ್ಚರಿ ಹಾಗೂ ಆತಂಕದಿಂದ ಲಕ್ಕಮ್ಮನು ಶಿವಶರಣರಾದವರು ಈ ಬಗೆಯಲ್ಲಿ ಆಸೆಯ ಸೆಳೆತಕ್ಕೆ ಒಳಗಾಗಬಾರದೆಂಬ ಎಚ್ಚರಿಕೆಯನ್ನು ನೀಡುತ್ತಾಳೆ.
*ಆಸೆಯೆಂಬುದು ಅರಸಂಗಲ್ಲದೆ
ಶಿವಭಕ್ತರಿಗುಂಟೆ ಅಯ್ಯಾ*
ಆಸೆ ಎಂಬುದು ನಮ್ಮನ್ನು ಆಳುವ ರಾಜನಿಗೆ ಇರವಂತಹದ್ದು. ನಾಡಿಗೆ ಅರಸನಾದವನು ಸದಾಕಾಲ ನಾಡಿನ ಎಲ್ಲೆಗಳನ್ನು ವಿಸ್ತರಿಸುವ ತನ್ನ ಬೊಕ್ಕಸದ ಸಂಪತ್ತನ್ನು ತುಂಬಿಸುವ ಬಯಕೆ ಹೊಂದಿರುತ್ತಾನೆ. ಬರಗಾಲದಲ್ಲಿ ಈ ಹೆಚ್ಚಿನ ಧಾನ್ಯ ಸಂಪತ್ತನ್ನು ಪ್ರಜೆಗಳಿಗೆ ಹಂಚುವುದು ಅರಸನ ಧರ್ಮ. ಆದುದರಿಂದ ಆಸೆಯೆಂಬುದು ಅರಸನಿಗೆ ಸಹಜವಾದ ಗುಣ. ಅಂತಹ ಆಶೆ ನಮ್ಮಂಥ ಶಿವಭಕ್ತರಿಗೆ ಇರಬಾರದು. ಶಿವಶರಣರಿಗೆ ತಾನೊಬ್ಬನೇ ಹೆಚ್ಚು ಪಡೆದುಕೊಳ್ಳಬೇಕೆಂಬ ಆಸೆಯು ಇರಬಾರದು. ಶಿವಭಕ್ತರೆಂದರೆ ತನ್ನಂತೆ ಪರರ ರು ಎಂದು ಬಗೆದು ತನ್ನ ಬದುಕನ್ನು ರೂಪಿಸಿಕೊಂಡು, ಸಹಮಾನವರಿಗೆ ಮತ್ತು ಸಮಾಜಕ್ಕೆ ಒಳಿತನ್ನು ಮಾಡುವವರು.
*ರೋಷವೆಂಬುದು ಯಮದೂತರಿಗಲ್ಲದೆ
ಅಜಾತರಿಗುಂಟೆ ಅಯ್ಯಾ*
ಸಿಟ್ಟು ಕೋಪ ಯಮದೂತರಿಗೆ ಅಂದರೆ ಯಮನ ಆದೇಶಕ್ಕೆ ತಕ್ಕಂತೆ ಜಗದ ಜೀವಿಗಳ ಪ್ರಾಣವನ್ನು ಸೆಳೆದು, ಯಮನ ಬಳಿಗೆ ಕೊಂಡಯ್ಯದು ಪಾಪಪುಣ್ಯಗಳಕ್ಕೆ ತಕ್ಕಂತೆ ಶಿಕ್ಷೆಕೊಡುವವರು. ಅವರಿಗೆ ಸಿಟ್ಟು ಕೋಪ ಬರಬಹುದು. ಅಜಾತ ಅಂದರೆ ಹುಟ್ಟುಸಾವ ಗೆದ್ದ ಶರಣರಿಗೆ ಸಿಟ್ಟು ಕೋಪ ಇರುವುದಿಲ್ಲ.
*ಈಸಕ್ಕಿಯಾಸೆ ನಿಮಗೇಕೆ ಈಶ್ವರನೊಪ್ಪ.
ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ದೂರ ಮಾರಯ್ಯ.*
ಇಷ್ಟೊಂದು ದೊಡ್ಡ ಪ್ರಮಾಣದ ಅಕ್ಕಿ ಆಶೆ ನಿಮಗೆ ಏಕೆ ಮಾರಯ್ಯ? ಈಶ್ವರನು ಒಪ್ಪುವುದಿಲ್ಲ. ಮಾರಯ್ಯಪ್ರಿಯ ಅಮರೇಶ್ವರಲಿಂಗಕ್ಕೆ ಅತಿಯಾಸೆ ದೂರ. ದೇವರು ಅತಿ ಆಶೆ ಒಪ್ಪುವುದಿಲ್ಲ.
ನೀವು ಪ್ರತಿನಿತ್ಯ ಬಸವಣ್ಣನವರ ಮನೆಯ ಅಂಗಳದಿಂದ ಅವಶ್ಯಕತೆಗೆ, ದಾಸೋಹಕ್ಕೆ ಬೇಕಾಗುವಷ್ಟೇ ಅಕ್ಕಿಯನ್ನು ಆಯ್ದು ತರುತ್ತಿದ್ದುದು ನಮಗೆ ಸಾಕಾಗುತ್ತಿತ್ತು. ಹೆಚ್ಚಿನ ಆಸೆಗೆ ಒಳಗಾಗಿ ಹೆಚ್ಚು ತರಬಾರದು ಎಂದು ಮಾರಯ್ಯನಿಗೆ ಲಕ್ಕಮ್ಮನು ಸೂಚಿಸುತ್ತಾಳೆ.
ಭಾವ:
ದಾಸೋಹಕ್ಕೆ ಬೇಕಾಗಿರುವುದಕ್ಕಿಂತಲೂ ಹೆಚ್ಚಾಗಿ ಅಕ್ಕಿಯನ್ನು ಆಯ್ದುಕೊಂಡು, ಅಕ್ಕಿಯ ದೊಡ್ಡ ಗಂಟನ್ನು ಹೊತ್ತು ಮನೆಗೆ ಬಂದ ಪತಿ ಆಯ್ದಕ್ಕಿ ಮಾರಯ್ಯನನ್ನು ಕಂಡು ಆತಂಕದಿಂದ ಆಯ್ದಕ್ಕಿ ಲಕ್ಕಮ್ಮನು ಶಿವಶರಣರಾದವರು ಈ ಬಗೆಯ ಆಸೆಯ ಸೆಳೆತಕ್ಕೆ ಒಳಗಾಗಬಾರದೆಂಬ ಎಚ್ಚರಿಕೆ ಉಪದೇಶ ನೀಡುತ್ತಾಳೆ.
*ಶರಣೆ ಪರಿಚಯ:*
ಶರಣೆ ಆಯ್ದಕ್ಕಿ ಲಕ್ಕಮ್ಮ
ಹನ್ನೆರಡನೆಯ ಶತಮಾನದಲ್ಲಿದ್ದ ಕನ್ನಡನಾಡಿನಲ್ಲಿದ್ದ ಶಿವಶರಣೆ.
ಜನನ ೧೧೬೦
ಅಂಕಿತನಾಮ: 'ಮಾರಯ್ಯ ಪ್ರಿಯ ಅಮರೇಶ್ವರ ಲಿಂಗ'.
ಪತಿ: 'ಆಯ್ದಕ್ಕಿ ಮಾರಯ್ಯ'.
ಲಕ್ಕಮ್ಮನ ೨೫ ವಚನಗಳು ಲಭ್ಯವಾಗಿವೆ.
ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲೂಕಿನ ಅಮರೇಶ್ವರ' ಗ್ರಾಮದ ಸ್ವಾಭಿಮಾನಿ ಹೆಣ್ಣು. ಅವಳ ಬಡತನವೆಂಬ ದಿವ್ಯ ಅನುಭವವೇ ಲಕ್ಕಮ್ಮನಲ್ಲಿ ಸೂಕ್ಷ್ಮ ಚಿಂತನೆ ಮತ್ತು ಗಾಂಭೀರ್ಯದ ಬದುಕನ್ನು ಕಲಿಸಿತು. ದಂಪತಿಗಳು ಬಸವಣ್ಣನವರ ತತ್ವಕ್ಕೆ, ವ್ಯಕ್ತಿತ್ವಕ್ಕೆ ಮಾರು ಹೋಗಿ,ಅಮರೀಶ್ವರ ಗ್ರಾಮದಿಂದ ಕಲ್ಯಾಣಕ್ಕೆ ಬಂದು ನೆಲೆಸಿದರು. ಕಾಯಕ ಮಾಡಿ, ಜನರಿಗೆ ನೀಡಿ ಬದುಕಬೇಕೆ ಹೊರತು, ಹೆಚ್ಚೆಚ್ಚು ಶೇಖರಿಸಿಡಬಾರದು ಎಂಬ ನಿಲುವಿನವಳು. ಆಕೆಯ
ಶರಣರ ಕಾಯಕ, ದಾಸೋಹಗಳ ನಿಜಸ್ವರೂಪವನ್ನು, ಜೀವನಮೌಲ್ಯವನ್ನು, ಮನಗಾಣಿಸುವ ರೀತಿಯಿಂದಾಗಿ ಅವಳ ನಿಸ್ವಾರ್ಥ ಮನಸ್ಸು, ತತ್ವ್ತಸಿದ್ಧಾಂತಗಳ ತಿಳಿವು, ಧೈರ್ಯ ಧೀಃಶಕ್ತಿಗಳಿಂದಾಗಿ ಎಲ್ಲಾ ಕಾಲದ, ಎಲ್ಲಾ ವರ್ಗದ ಸ್ತ್ರೀಯರಿಗೆ ಮಾರ್ಗದರ್ಶಿಯಾಗಿದ್ದಾಳೆ. ಒಂದೊಂದು ಅಕ್ಕಿಯಕಾಳು ಪೋಲಾಗದಂತೆ ರಕ್ಷಿಸುವ ಕಾಯಕ.
- ✍️Dr Prema Pangi
#ಪ್ರೇಮಾ_ಪಾಂಗಿ,#ಆಯ್ದಕ್ಕಿಲಕ್ಕಮ್ಮ,
#ಆಸೆಯೆಂಬುದು_ಅರಸಿಂಗಲ್ಲದೆ,
Comments
Post a Comment