ವಚನ ದಾಸೋಹ
*ವಚನ* :
ಗುರುವೆಂಬ ತಂದೆಗೆ ಶಿಷ್ಯನೆಂಬ ಮಗಳು ಹುಟ್ಟಿ,
ಲಿಂಗವೆಂಬ ಗಂಡನ ತಂದು,
ಮದುವೆಯ ಮಾಡಿದ ಬಳಿಕ
ಇನ್ನಾರೊಡನೆ ಸರಸವನಾಡಲೇಕಯ್ಯಾ?
ನಾಚಬೇಕು ಲಿಂಗದೆಡೆಯಲ್ಲಿ,
ನಾಚಬೇಕು ಜಂಗಮದೆಡೆಯಲ್ಲಿ,
ನಾಚಬೇಕು ಪ್ರಸಾದದೆಡೆಯಲ್ಲಿ,
ನಾಚಿದಡೆ ಭಕ್ತನೆಂಬೆನು,
ಯುಕ್ತನೆಂಬೆನು, ಶರಣನೆಂಬೆನು,
ನಾಚದಿದ್ದಡೆ ಮಿಟ್ಟೆಯ ಭಂಡರೆಂಬೆನು
ಕೂಡಲ ಚೆನ್ನಸಂಗಮದೇವಾ.
-ಚಿನ್ಮಯಜ್ಞಾನಿ ಚೆನ್ನಬಸವಣ್ಣ
ಅರ್ಥ:
ಇದು ಶರಣಸತಿ, ಲಿಂಗಪತಿ ಮತ್ತು ಲಿಂಗದೀಕ್ಷೆಯ ನಿಯಮಗಳ ಮೇಲಿನ ವಚನ
*ಗುರುವೆಂಬ ತಂದೆಗೆ ಶಿಷ್ಯನೆಂಬ ಮಗಳು ಹುಟ್ಟಿ,
ಲಿಂಗವೆಂಬ ಗಂಡನ ತಂದು,
ಮದುವೆಯ ಮಾಡಿದ ಬಳಿಕ
ಇನ್ನಾರೊಡನೆ ಸರಸವನಾಡಲೇಕಯ್ಯಾ?*
ತಂದೆಯ ಸ್ಥಾನದಲ್ಲಿ ಗುರು, ಮಗಳ ಸ್ಥಾನದಲ್ಲಿ ಶಿಷ್ಯ, ಗಂಡನ ಸ್ಥಾನದಲ್ಲಿ ಲಿಂಗ ಎಂದು ಭಾವಿಸಿ ಲಿಂಗದೀಕ್ಷೆ ಮಾಡಬೇಕು ಮತ್ತು ಸಾಧಕ ಅದೇ ಭಾವನೆ ಯಲ್ಲಿ ಪಡೆಯಬೇಕು. ಹೀಗೆ ' ಮದುವೆ ಎಂಬ ' ಲಿಂಗದೀಕ್ಷೆ ' ಯಾದ ನಂತರ ಬೇರೆಯವರೊಡನೆ ಸರಸ ಅಂದರೆ ಪರದೈವಗಳ ಪೂಜೆ ಮಾಡಬಾರದು.
*ನಾಚಬೇಕು ಲಿಂಗದೆಡೆಯಲ್ಲಿ,
ನಾಚಬೇಕು ಜಂಗಮದೆಡೆಯಲ್ಲಿ,
ನಾಚಬೇಕು ಪ್ರಸಾದದೆಡೆಯಲ್ಲಿ,
ನಾಚಿದಡೆ ಭಕ್ತನೆಂಬೆನು,
ಯುಕ್ತನೆಂಬೆನು, ಶರಣನೆಂಬೆನು,
ನಾಚದಿದ್ದಡೆ ಮಿಟ್ಟೆಯ ಭಂಡರೆಂಬೆನು*
ಭಕ್ತನು ಲಿಂಗ, ಜಂಗಮ, ಪ್ರಸಾದಕ್ಕೆ ಮನ್ನಣೆ ಮಹತ್ವ ಕೊಡಬೇಕು. ಹಾಗಾದರೆ ಮಾತ್ರ ಶಿಷ್ಯ ಭಕ್ತ, ಯುಕ್ತ (ಯೋಗ್ಯನಾದವನು) ಮತ್ತು ಶರಣ ಎನ್ನಿಸಿಕೊಳ್ಳುತ್ತಾನೆ. ಲಿಂಗದೀಕ್ಷೆ ಪಡೆದ ಶಿಷ್ಯ ಲಿಂಗ, ಜಂಗಮ, ಪ್ರಸಾದಕ್ಕೆ ಮನ್ನಣೆ ಕೊಡ ದೇ ಪರದೈವಗಳ ಪೂಜೆ ಮಾಡಿದರೆ ಮಿಟ್ಟೆಯ ಭಂಡ ಎನಿಸಿಕೊಳ್ಳುತ್ತಾನೆ.
ಶರಣ ಚೆನ್ನಬಸವಣ್ಣನವರು ಅವಿರಳ ಜ್ಞಾನಿ, ಚಿನ್ಮಯ ಜ್ಞಾನಿ, ಶಟ್ಸ್ಥಲ ಬ್ರಹ್ಮಿ. ಚಿಕ್ಕವಯಸ್ಸಿನಲ್ಲೇ ಚೆನ್ನಬಸವಣ್ಣ ತೋರಿದ ಆಚಾರ, ವಿಚಾರ, ಪ್ರತಿಭೆ ಅಪಾರವಾದುದು.. ಧರ್ಮದ ಹೊಸ ರೂಪ, ಆಚರಣೆ, ನಿಯಮಗಳನ್ನು ರೂಪಿಸುವ, ಬರೆಯುವ ಮತ್ತು ರಕ್ಷಿಸುವ ಗುರುತರವಾದ ಹೊಣೆ ಹೊತ್ತವರು.
*ಶರಣ ಧರ್ಮದಲ್ಲಿ ಏಕೋಪಾಸನೆ*:
ಗುರು ಬಸವಣ್ಣನವರು ಲಿಂಗವಂತರಿಗೆ ಒಬ್ಬನೇ ದೇವ ಎಂದು ನಿಷ್ಠುರವಾಗಿ ತಿಳಿಹೇಳಿದ್ದಾರೆ.
*ದೇವನೊಬ್ಬ ನಾಮ ಹಲವು:
ಪರಮ ಪತಿವ್ರತೆಗೆ ಗಂಡನೊಬ್ಬ;
ಮತ್ತೊಂದಕ್ಕೆರಗಿದರೆ ಕಿವಿ ಮೂಗ ಕೊಯ್ಯನು!
ಹಲವು ದೈವದ ಎಂಜಲ ತಿಂಬುವವರನೇನೆಂಬೆ,
ಕೂಡಲ ಸಂಗಮದೇವಾ.*
*ನಂಬಿದ ಹೆಂಡತಿಗೆ ಗಂಡನೊಬ್ಬನೇ ಕಾಣಿರೊ
ನಂಬಬಲ್ಲ ಭಕ್ತಂಗೆ ದೇವನೊಬ್ಬನೇ ಕಾಣಿರೋ.
ಬೇಡ ಬೇಡ ಅನ್ಯ ದೈವದ ಸಂಗ ಹೊಲ್ಲ.
ಅನ್ಯದೈವವೆಂಬುದು ಹಾದರ ಕಾಣಿರೋ
ಕೂಡಲ ಸಂಗಮದೇವರು ಕಂಡರೆ, ಮೂಗಕೊಯ್ಯುವ ಕಾಣಿರೋ ! *
*ಇಬ್ಬರು ಮೂವರು ದೇವರೆಂದು ಉಬ್ಬುಬ್ಬಿ ಮಾತಾನಾಡಬೇಡ
ಒಬ್ಬನೇ ಕಾಣಿರೋ, ಇಬ್ಬರೆಂಬುದು ಹುಸಿ ನೋಡಾ !
ಕೂಡಲಸಂಗಮದೇವನಲ್ಲದೇ ಇಲ್ಲವೆಂದಿತ್ತು ವೇದ*.
*..........................................
ದೇವರದೇವ ಮಹಾದೇವ ಮಹಾಮಹಿಮ ಎನ್ನೊಡೆಯ
ಅಖಂಡೇಶ್ವರ ಒಬ್ಬನೇ ದೇವನಲ್ಲದೆ ಉಳಿದವರೆಲ್ಲ
ಹುಸಿ ಹುಸಿ ಎಂಬೆನು ನೋಡಾ*.
ಎಂದು ಲಿಂಗವಂತರ ದೇವ ಮಹಾದೇವ ಒಬ್ಬನೇ ಎಂದು ಅರುಹಿದ್ದಾರೆ ಷಣ್ಮುಖ ಸ್ವಾಮಿ ಶಿವಯೋಗಿಗಳು.
ಬಸವಾದಿ ಶರಣರು ದೃಢನಂಬಿಕೆಯಿಂದ ಅಚಲ ನಿಷ್ಠೆಯಿಂದ ನಿರಾಕಾರ ನಿರ್ಗುಣ ನಿರಾಳ ನಿರ್ಮಾಯ ಶಿವನನ್ನು ಇಷ್ಟಲಿಂಗ ವೆಂಬ ಸಾಕಾರ ರೂಪದಲ್ಲಿ ಆರಾಧಿಸಿದರು. ಅದುವೇ ಶರಣರ ಏಕದೇವೋಪಾಸನೆಯು. ಏಕದೇವೋಪಾಸನೆಯನ್ನು ಕಡ್ಡಾಯವಾಗಿ ಆಚರಿಸುವ ಲಿಂಗನಿಷ್ಠೆಯೇ ಪಂಚಾಚಾರದ ಲಿಂಗಾಚಾರವು.
ಶರಣೆ ಸತ್ಯಕ್ಕ' ಪರದೈವಗಳಿಗೆ ಎರಗ ದಿಪ್ಪುದೇ ನಿತ್ಯ ನೇಮ ' ಎಂದು ತಾನು ಪಾಲಿಸುವ ನಿಯಮಗಳನ್ನು ವಿವರಿಸಿದ್ದಾಳೆ.
*...............................
ಪರಸ್ತೀ-ಪರದೈವಗಳಿಗೆರಗದಿಪ್ಪುದೇ ನೇಮ
ಶಂಭುಜಕೇಶ್ವರನಲ್ಲಿ ಇವನ್ನು ಕಾಣಿರಣ್ಣಾ!
ಇವೇ ನಿತ್ಯನೇಮ*.
ಎಡೆಯೂರು ಸಿದ್ಧಲಿಂಗೇಶ್ವರರ ಶಿಷ್ಯರಾದ ಸ್ವತಂತ್ರಸಿದ್ಧಲಿಂಗೇಶ್ವರರು ಶಿವನೊಬ್ಬನೇ ದೇವ ಎಂದಿದ್ದಾರೆ.
*ಇಬ್ಬರು ಮೂವರು ದೇವರೆಂದು ತಬ್ಬಿಬ್ಬುಗೊಂಡು ನುಡಿಯಬೇಡ.
ಒಬ್ಬನೇ ದೇವ ಕಾಣಿರಣ್ಣ.
"ಸರ್ವಸ್ಮಾದಧಿಕೋರುದ್ರಃ ಪರಮಾತ್ಮಾ ಸದಾಶಿವಃ
ಇತಿ ಯತ್ಮ ನಿಶ್ಚಿತಾ ಧೀಃ ಸ ವೈ ಮಾಹೇಶ್ವರಃ ಸ್ಮೃತಃ"ಎಂದವಾಗಮಂಗಳು.
`ಶಿವನೇಕೋ ದೇವ'ನೆಂದು ಸಾರುತ್ತಿವೆ ಶ್ರುತಿ ಪುರಾಣಂಗಳು. ಇದು ಕಾರಣ,
ಶಿವನಲ್ಲದೆ ದೈವವಿಲ್ಲೆಂದರಿದ ಮಾಹೇಶ್ವರನ ಹೃದಯ ನಿವಾಸವಾಗಿಪ್ಪ, ನಮ್ಮ ನಿಜಗುರು ಸ್ವತಂತ್ರಸಿದ್ಧಲಿಂಗೇಶ್ವರನು*.
ಲಿಂಗವಂತರಿಗೆ "ಶಿವ" ನೊಬ್ಬನೇ ದೇವ. ಎರಡು ಮೂರು ಎಂದು ಮೂರ್ಖನಂತೆ ಮಾತಾಡಬೇಡ. `ಶಿವ ಏಕೋ ದೇವ' ನೆಂದು ಶ್ರುತಿ ಪುರಾಣಗಳು ಸಾರುತ್ತವೆ.ಈ ಕಾರಣ,
ಶಿವನಲ್ಲದೆ ಬೇರೆ ದೈವ ಇಲ್ಲ ಎಂದು ಅರಿತ ಮಾಹೇಶ್ವರನ ಹೃದಯದಲ್ಲಿ ಶಿವನು
ನಿವಾಸವಾಗಿದ್ದಾನೆ.
- ✍️ Dr Prema Pangi
#ಪ್ರೇಮಾ_ಪಾಂಗಿ,#ಚೆನ್ನಬಸವಣ್ಣ,
#ಗುರುವೆಂಬ_ತಂದೆಗೆ_ಶಿಷ್ಯನೆಂಬ_ಮಗಳು
Comments
Post a Comment