ವಚನ ದಾಸೋಹ

#ವಚನ:
ಅಂಗವೆ ಭೂಮಿಯಾಗಿ, ಲಿಂಗವೆ ಬೆಳೆಯಾಗಿ,
ವಿಶ್ವಾಸವೆಂಬ ಬತ್ತ ಬಲಿದು ಉಂಡು
ಸುಖಿಯಾಗಿರಬೇಕೆಂದ ಕಾಮ ಭೀಮ ಜೀವಧನದೊಡೆಯ.
- ಶರಣ ಒಕ್ಕಲಿಗ ಮುದ್ದಣ್ಣ

Translation:
Convert the Body into the earth,
Linga into the crops,
Ripen the faith like grains of rice 
Eat it and be happy said Kaamabhima Jivadhanadodeya.

ಸಾಮಾಜಿಕ ಸಮತೆ ಶಿವನಲ್ಲಿ, ಶೈವ ಸಂಸ್ಕೃತಿಯಲ್ಲಿ ಕಂಡು ಬರುವ ಒಂದು ಪ್ರಮುಖ ಅಂಶ. ಇದನ್ನು ಗಮನಿಸಿಯೇ ಶರಣರು ಸಮಸಮಾಜಕ್ಕೆ ಭದ್ರ ಬುನಾದಿ ಹಾಕಿದರು. ಶಿವಯೋಗದ ಲಿಂಗಾಂಗ ಸಾಮರಸ್ಯವನ್ನು ಕರುಣಿಸುವದು, ಪ್ರಸಾದಿಸುವದು 'ಅಂಗ ಲಿಂಗ ಸಂಗ'. ಅಂಗಲಿಂಗಸಂಗ ವನ್ನೇ ಲಿಂಗಪೂಜೆ ಮತ್ತು ಶಿವಯೋಗದಲ್ಲಿ ಅಷ್ಟೇ ಅಲ್ಲದೇ ತಮ್ಮ ದಿನ ನಿತ್ಯದ ಕಾಯಕದಲ್ಲಿ ಬೆಸೆದರು ಕಾಯಕ ಯೋಗಿ ಶರಣರು. ಶರಣ ಒಕ್ಕಲಿಗ ಮುದ್ದಣ್ಣ ಈ ವಚನದಲ್ಲಿ ತಮ್ಮ ವ್ಯವಸಾಯ ಒಕ್ಕಲುತನವನ್ನು ಶರಣ ಧರ್ಮದ ಅನುಭಾವ ಪಡೆಯುವ 'ಅಂಗ ಲಿಂಗ ಸಮರಸ ' ಅರಿಯುವ ಮತ್ತು ಅನುಭವಿಸುವ ಮಾರ್ಗವಾಗಿ ಮಾಡಿದ್ದಾರೆ. ಅಂಗ ವೆಂದರೆ ಬೆಳೆ ಬೆಳೆಯುವ ಭೂಮಿ.  ಲಿಂಗ ವೆಂದರೆ ಆ ಭೂಮಿಯಲ್ಲಿ ಬೆಳೆಯುವ ಬೆಳೆ.  ಪೂಜೆ ಎಂದರೆ ಕೃಷಿ ವ್ಯವಸಾಯ. ನಿಷ್ಟೆ ಮತ್ತು ವಿಶ್ವಾಸದಿಂದ ಬೆಳೆದ ಬೆಳೆಯನ್ನೇ, ದೇವನಿಗೆ ಸಮರ್ಪಿಸಿ ಪ್ರಸಾದವಾಗಿ ಸೇವಿಸಿದರೆ ಅದೇ ಲಿಂಗಪೂಜೆ ಮತ್ತು ಲಿಂಗಾಚಾರ .

ಲಿಂಗಾಚಾರ  ಪಂಚಾಚಾರದ ಪ್ರಮುಖ ಆಚರಣೆ. ಲಿಂಗಾಚಾರದ ಎರಡು ಮುಖಗಳು. ಒಂದು ಲಿಂಗದ ಸಿದ್ದಿಗಾಗಿ ಇರುವ ಆಚಾರ, ಎರಡನೇಯದ್ದು ಲಿಂಗವೇ ಆಚಾರ ಎಂಬ  ಸಿದ್ಧಾಂತ. ಇವೆರಡು ಅಂದರೆ ಲಿಂಗಪೂಜೆ ಮತ್ತು ಲಿಂಗವೇ ಆಚಾರ, ಎಂಬ ಸಾಮಾಜಿಕ ಬದುಕಿನಲ್ಲಿ ಕಾಣುವ ಈ ಸಿದ್ಧಾಂತದ ಆಚರಣೆಯ ನಡುವೆ ಇರುವ ಅಂತರವನ್ನು  ವಿಮರ್ಶೆ ಮಾಡದೆ ತಮ್ಮ ಸನ್ನಡತೆಯಿಂದ ಶ್ರಮಿಕ ವರ್ಗದ ಶರಣರು ಬೆಸೆದರು. ಇವರಿಗೆ ತಾವು ನಿತ್ಯ ಮಾಡುವ ಸತ್ಯ ಶುದ್ಧ ಕಾಯಕವೇ ಪೂಜೆ; ಕಾಯಕವೇ ಶಿವಯೋಗವಾಯಿತು. ಅದನ್ನೇ ಶಿವನಿಗೆ ಅರ್ಪಿತ ಮಾಡಿ ಧನ್ಯವೆಂಬ ಪ್ರಸಾದ ಸ್ವೀಕರಿಸಿದರು.
ಕಾಯಕದ ಶ್ರಮ ಮತ್ತು ಜ್ಞಾನವನ್ನು ಸಮನ್ವಯಗೊಳಿಸಿ ಅದನ್ನು ಸಾಮಾಜಿಕ ವ್ಯವಸ್ತೆಯ ಮೂಲಕ ಶರೀರವನ್ನು ದಂಡಿಸಿ ಕಾಯಕ ಮಾಡುವುದೇ ಪೂಜೆ, ಅದೇ ಶಿವನಿಗೆ ಮಾಡುವ ನೈವಿದ್ಯೇ ಎಂದು ಶರಣ ಧರ್ಮ ಸಮರ್ಥಿಸುತ್ತದೆ. ಅದರಿಂದ ಬರುವ ಧನ್ಯತೆ ಯೇ ಅಷ್ಟಾವರ್ಣದ ಪ್ರಸಾದ.

ಶರಣ ಪರಿಚಯ:
ಶರಣ ಒಕ್ಕಲಿಗ ಮುದ್ದಣ್ಣ
ಜೋಳದಹಾಳೆಂಬ ಗ್ರಾಮಕ್ಕೆ ಸೇರಿದವನಾದ ಈ ಶರಣ ಬೇಸಾಯ ವೃತ್ತಿಯನ್ನು ಕೈಕೊಂಡು ಬದುಕು ಸಾಗಿಸಿದವನು.
ಕಾಲ ೧೨ ನೆಯ ಶತಮಾನ,( ೧೧೬೦). ಜಂಗಮ ದಾಸೋಹ ನಡೆಸುವುದು ಈತನ ನಿತ್ಯವ್ರತ. ಒಕ್ಕಲುತನದಿಂದ ಗಳಿಸಿದ ಹಣವನ್ನು ದಾಸೋಹ ಕ್ಕೆ ಅರ್ಪಿಸುವನು.
‘ಕಾಮಭೀಮ ಜೀವಧನದೊಡೆಯ’ ಅಂಕಿತದಲ್ಲಿ ರಚಿಸಿದ ಈತನ ೧೨ ವಚನಗಳು ದೊರೆತಿವೆ.
 ಒಕ್ಕಲುತನ ವೃತ್ತಿಯ ಪರಿಭಾಷೆ, ಮುಗ್ಧ ಭಕ್ತಿ, ಸರಳ-ಪ್ರಾಸಾದಿಕ ಶೈಲಿಯಿಂದ ಅವು ನಳನಳಿಸುತ್ತವೆ.
ಬೇಸಾಯದ ಪರಿಭಾಷೆಯಲ್ಲಿ ಆಧ್ಯಾತ್ಮಿಕ ವಿಷಯಗಳನ್ನು ತನ್ನ ವಚನಗಳಲ್ಲಿ ಪ್ರಸ್ತಾಪಿಸುವನು. ಉಳುವ ಒಕ್ಕಲ ಮಗನ ತಪ್ಪ ನೋಡದೆ ಒಪ್ಪುಗೊಳ್ಳಯ್ಯಾ ಎಂದು ತನ್ನ ಇಷ್ಟದೈವದಲ್ಲಿ ಪ್ರಾರ್ಥಿಸುವನು.
- ✍️Dr Prema Pangi
#ಪ್ರೇಮಾ_ಪಾಂಗಿ,#ಒಕ್ಕಲಿಗ_ಮುದ್ದಣ್ಣ, #ಅಂಗವೆ ಭೂಮಿಯಾಗಿ
Picture post created by me.Hope you all will like it. A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma