ವಚನ ದಾಸೋಹ
ವಚನ:
ಅಂಗದ ಕಳೆ ಲಿಂಗದಲ್ಲಿ ಅರತ ಬಳಿಕ,
ಅಂಗವೆಂಬ ಶಂಕೆಯಿಲ್ಲ ನೋಡಾ ಶರಣಂಗೆ.
ಪ್ರಾಣದ ಕಳೆ ಅರಿವಿನಲ್ಲಿ ಅರತ ಬಳಿಕ,
ಶಬ್ದಸಂದಣಿಗೆ ಹಂಗಿಲ್ಲ ನೋಡಾ.
ಶರಣ ನಡೆದಡೆ ನಿರ್ಗಮನಿ ನುಡಿದಡೆ ನಿಶ್ಶಬ್ದಿ !
ಗುಹೇಶ್ವರನ ಶರಣಂಗೆ ಕುರುಹಿಲ್ಲ ಕೇಳಾ ಎಲೆ ಅವ್ವಾ. / 10
- ಅಲ್ಲಮ ಪ್ರಭುಗಳು
ಈ ವಚನ ಅಲ್ಲಮ ಪ್ರಭುಗಳು ಶರಣೆ ಮುಕ್ತಾಯಕ್ಕರ ಅಧ್ಯಾತ್ಮಿಕ ವಾಗ್ವಾದದಲ್ಲಿ ಅವರ ಪ್ರಥಮ ಭೇಟಿಯಲ್ಲಿ ಬರುವ ವಚನ.
ಪ್ರಭುದೇವ ಮತ್ತು ಮುಕ್ತಾಯಕ್ಕನ ನಡುವೆ ನಡೆಯುವ ಶೂನ್ಯಸಂಪಾದನೆಯ ವಾಗ್ವಾದಗಳು ಕನ್ನಡ ಸಾಹಿತ್ಯ ಮಾತ್ರವಲ್ಲದೆ ಜಾಗತಿಕ ಮಟ್ಟದ ಅತ್ಯುನ್ನತ ಬೌದ್ಧಿಕ ಚರ್ಚೆಗಳಲ್ಲೊಂದು ಎಂದು ಪರಿಗಣಿಸಲ್ಪಟ್ಟಿವೆ.
ಮುಕ್ತಾಯಕ್ಕ ೧೨ನೇ ಶತಮಾನದ (ಕ್ರಿ.ಶ. ೧೧೬೦) ಶಿವಶರಣೆ.
ವಿಶಾಲ ಮನೋಭಾವದ, ದಿಟ್ಟ ವ್ಯಕ್ತಿತ್ವದ, ಸ್ವತಂತ್ರ ಪ್ರವೃತ್ತಿಯ ಹೆಣ್ಣು. ಈಕೆ ಅನುಭಾವಿಕ ನೆಲೆಯಲ್ಲಿ ತುಂಬ ಎತ್ತರ ಏರಿದ ಶರಣೆ. ಬೆಡಗಿನ ವಚನ ರಚನಕಾರ್ತಿ. ಅಜಗಣ್ಣ– ಮುಕ್ತಾಯಕ್ಕ ಅವಳಿ ಜವಳಿಗಳಾಗಿ ಜನಿಸಿದ್ದು ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿ. ಅಜಗಣ್ಣ ಕೇವಲ ಅಣ್ಣನಾಗಿರದೆ ಅಂತರಂಗವನ್ನರಳಿಸುವ ಗುರುವಾಗಿದ್ದರು. ಅಜಗಣ್ಣ ಬಹಿರಂಗದ ಕೃಷಿಕಾಯದ ಜತೆಗೆ ಅಂತರಂಗದ ಕೃಷಿಗೆ ಲಿಂಗಪೂಜೆಯಲ್ಲಿ ತೊಡಗಿ ಆತ್ಮಜ್ಞಾನಿಯಾಗಿ ರೂಪುಗೊಳ್ಳುತ್ತಾನೆ. ಅಣ್ಣನನ್ನ ಗುರುವಾಗಿ ಸ್ವೀಕರಿಸಿದ ಮುಕ್ತಾಯಕ್ಕ ಆ ಹೆಸರನ್ನೇ ತನ್ನ ಮುದ್ರಿಕೆಯಾಗಿ ಇಟ್ಟುಕೊಳ್ಳುತ್ತಾಳೆ. ಗುಪ್ತಭಕ್ತನಾಗಿದ್ದ ಅಜಗಣ್ಣ ಅಮಳೋಕ್ಕ (ಬಾಯಿ)ದಲ್ಲಿ ಲಿಂಗ ಧರಿಸುತ್ತಲಿದ್ದ ಶರಣ. ಶಿವನಮಾನಸ ಪೂಜೆಯಲ್ಲಿ ನಿರತನಾಗಿರುವಾಗ ಒಂದು ದಿನ ಶಿರಕ್ಕೆ ತಲೆಬಾಗಿಲು ತಾಕಿ ಲಿಂಗೈಕ್ಯನಾಗುತ್ತಾನೆ.
ಅಣ್ಣ ಅಜಗಣ್ಣ ಲಿಂಗೈಕ್ಯನಾದ ಸುದ್ದಿ ತಿಳಿದು ಆತನ ಅಗಲಿಕೆಯ ದುಃಖವನ್ನು ಪರಿಹರಿಸುವವರಾರು ಎಂದು ಮುಕ್ತಾಯಕ್ಕ ಹಲುಬುತ್ತಾಳೆ. ನಿತ್ಯಜಂಗಮ ಅಲ್ಲಮಪ್ರಭುದೇವರು ಜೀವನದ ನಿತ್ಯಾನಿತ್ಯತ, ಅನುಭಾವಿಯ ನಿಲವು ಮೊದಲಾದವುಗಳಿಗೆ ಸಂಬಂಧಿಸಿದಂತೆ ಅನೇಕ ಪ್ರಶ್ನೆಗಳನ್ನು ಹಾಕುತ್ತಾರೆ. ಅದಕ್ಕೆ ಅಷ್ಟೇ ಎತ್ತರದ ಪ್ರಜ್ಞೆಯ ಉತ್ತರವನ್ನು ಕೊಡುತ್ತಾಳೆ ಮುಕ್ತಾಯಕ್ಕ. ಬಹುಶಃ ವಚನಕಾರ್ತಿಯರಲ್ಲಿಯೇ ಇಷ್ಟು ಎತ್ತರದ ಆನುಭಾವಿಕ ನಿಲವಿನಲ್ಲಿ ನಿಂತು ಮಹಾಜ್ಞಾನಿಯಾದ ಅಲ್ಲಮನನ್ನು ಎದುರಿಸಿದವರು ಮತ್ತೊಬ್ಬರಿಲ್ಲ. ಮುಕ್ತಾಯಕ್ಕನಿಗೆ ಮುಸುಕಿದ ಮಾಯೆಯನ್ನು ದೂರಮಾಡುತ್ತಾರೆ.
ದು:ಖಿಯಾದ ಈಕೆಯನ್ನು ಅಲ್ಲಮಪ್ರಭು ಅರಿವಿನ ಕಣ್ಣು ತೆರೆಸುವ ಮೂಲಕ ಈ ರೀತಿ ಸಾಂತ್ವನಪಡಿಸುತ್ತಾನೆ.
ಅಂಗತ್ರಯಗಳನ್ನು ಲಿಂಗತ್ರಯ ಮಾಡಿದ ಬಳಿಕ, ಶರಣನಿಗೆ ಅಂಗದ ಹಂಗು ಅಥವಾ
ಅಂಗವೆಂಬ ಶಂಕೆಯಿಲ್ಲ.
ಪ್ರಾಣದ ಕಳೆ (ಪ್ರಾಣಲಿಂಗದ ಸ್ವರೂಪ) ಅರಿವಿನಲ್ಲಿ ಲಿಂಗಾನುಭಾವದಲ್ಲಿ ಅರಿತ ಬಳಿಕ,
ಶರಣನಿಗೆ ಶಬ್ದಸಂದಣಿಯ ಜಗತ್ತಿನ ಹಂಗಿಲ್ಲ .
ಶರಣ ನಡೆದಡೆ ನಿರ್ಗಮನಿ ನುಡಿದಡೆ ನಿಶ್ಶಬ್ದಿ !
ಗುಹೇಶ್ವರನ ಶರಣಂಗೆ ದೇಹ ವೆಂಬ ಕುರುಹಿಲ್ಲ ,ದೇಹದ ಅವಶ್ಯಕತೆಯೂ ಇಲ್ಲ ಕೇಳಾ ಎಲೆ ಅವ್ವಾ (ಮುಕ್ತಾಯಕ್ಕ).
ಆಧ್ಯಾತ್ಮಿಕವಾಗಿ ಶರಣ, ಸಿದ್ಧಿಯ ಶಿಖರದಲ್ಲಿ ನಿಂತವನು. ದೇಹವನ್ನು ಧರಿಸಿದ್ದರೂ ಆತ ನಿರ್ದೇಹಿ, ನಡೆಯುತ್ತಿದ್ದರೂ ಆತ ನಿರ್ಗಮನಿ, ನುಡಿಯುತ್ತಿದ್ದರೂ ಆತ ನಿಶ್ಶಬ್ದಿ, ವ್ಯಕ್ತಿಯಾಗಿದ್ದರೂ ಜಗತ್ತನ್ನೆಲ್ಲಾ ವ್ಯಾಪಿಸಿದ್ದಾನೆ, ಆದರೂ ಜಗತ್ತಿಗೆ ಅತೀತನಾಗಿದ್ದಾನೆ. ತನ್ನ ಅನುಭಾವದ ಬೆಳಕನ್ನು ಸುತ್ತಲಿನ ಸಮಾಜದ ಮೇಲೂ ಬೀರುವ ಕಾರ್ಯದಲ್ಲಿ ನಿರತನಾಗಿರುತ್ತಾನೆ. ಸಮಾಜಿಕ ಜೀವನವನ್ನು ಹಸನುಗೊಳಿಸುವ ಭವರೋಗ ವೈದ್ಯನಾಗುತ್ತಾನೆ. ಜೀವನ್ಮುಕ್ತ ಸ್ಥಿತಿಯಲ್ಲಿ ನಿಂತು ಲೋಕ ಕಲ್ಯಾಣಕ್ಕಾಗಿ ಕೈಯನ್ನು ಕೆಳಗೆ ಚಾಚಿ ಜನತೆಯನ್ನು ಮೇಲೆತ್ತಿಕೊಳ್ಳುವವ ಮಹಾನುಭಾವಿ.”
Sharana is embodied in his body but not consumed by it. So he is Nirdehi (ನಿರ್ದೇಹಿ). He walks, but his thoughts are stationary on the Almighty. So he is Nirgamani (ನಿರ್ಗಮನಿ). He is on the Earth, but is beyond the influences surrounding him. He is beyond speech and he refrains from speech; a silent inward looking man. So he is Nishabdi (ನಿಶ್ಶಬ್ದಿ).
ಈ ಸಂದರ್ಭದಲ್ಲಿ ಅಲ್ಲಮಪ್ರಭು ಮತ್ತು ಮುಕ್ಯಾಯಕ್ಕರ ಸಂವಾದ, ಅಧ್ಯಾತ್ಮಿಕ ಜಿಜ್ಞಾಸೆ, ಬದುಕಿನ ಸತ್ಯಗಳನ್ನು ಶೂನ್ಯ ಸಂಪಾದನೆ ಗ್ರಂಥದಲ್ಲಿ ಸಮಗ್ರವಾಗಿ ನಿರೂಪಿಸಲಾಗಿದೆ.
- ✍️ Dr Prema Pangi
#ಪ್ರೇಮಾ_ಪಾಂಗಿ,#ಅಲ್ಲಮಪ್ರಭು,
#ಮುಕ್ತಾಯಕ್ಕ.
Comments
Post a Comment