ವಚನ ದಾಸೋಹ
ವಚನ:
ದೇಹ ನಾನಲ್ಲ, ಜೀವ ನಾನಲ್ಲವೆಂಬುದದು ಶಿವನೆನಿಸಿತ್ತು.
ಶಿವ-ಜೀವಂಗೆ ಭೇದವೆಂಬುದು ಇಲ್ಲ ಕಾಣಾ.
ಉದಕವಿದ್ದೆಡೆಯಲ್ಲಿ, ಗಗನಪರಿಪೂರ್ಣದಲ್ಲಿ,
ರವಿ ತಾರೆ ಮೇಘವಾದಂತೆ-
ಪರಿಪೂರ್ಣ ವಸ್ತುವೆ ಚಿದಾಕಾಶದಲ್ಲಿ ಶಿವ ಜೀವ ಮಾಯಾ
ಪ್ರಕೃತಿ ಎನಿಸಿತ್ತಯ್ಯಾ, ಕಪಿಲಸಿದ್ಧಮಲ್ಲಿಕಾರ್ಜುನಾ. / 1061
- ಶಿವಯೋಗಿ ಸಿದ್ಧರಾಮೇಶ್ವರ
ಇದು ಶಿವಯೋಗಿ ಸಿದ್ಧರಾಮೇಶ್ವರರ ಆತ್ಮಸಾಕ್ಷಾತ್ಕಾರದ ವಚನ. ಶಿವಯೋಗಿ ಸಿದ್ಧರಾಮೇಶ್ವರರು ನಾನು ಯಾರು ಎಂದು ಪ್ರಶ್ನೆಗೆ ಶಿವಯೋಗ ಮಾರ್ಗದಲ್ಲಿಯೇ ಉತ್ತರ ಕಂಡು ಪ್ರಸ್ತುತ ಪಡಿಸಿದ್ದಾರೆ.
ಈ ದೇಹ ನಾನಲ್ಲ, ಈ ಜೀವವೂ ನಾನಲ್ಲವೆಂಬುದು ತಿಳಿದಾಗ ಶಿವ ಸಾಕ್ಷಾತ್ಕಾರ ವಾಗುತ್ತದೆ. ಶಿವ ಮತ್ತು ಜೀವನಿಗೆ ಭೇದವಿಲ್ಲ. ನೀರು ಮತ್ತು ಪರಿಪೂರ್ಣವಾದ ಆಕಾಶ ವಿದ್ದಾಗ, ತಾರೆ ಮೋಡಗಳು ಸೃಷ್ಟಿಯಾದಂತೆಯೇ, ಪರಿಪೂರ್ಣವಾದ ಪರವಸ್ತುವೇ ಚಿದಾಕಾಶದಲ್ಲಿ ಶಿವ ಜೀವ ಮಾಯಾ ಪ್ರಕೃತಿ ಎನಿಸುತ್ತದೆ. ಎಲ್ಲದಕ್ಕೂ ಮೂಲ ಒಂದೇ ಪರವಸ್ತು. ಭಕ್ತಿ ನಿಷ್ಠೆ ಜ್ಞಾನ ಕ್ರಿಯೆ ಇದ್ದರೆ ನಮ್ಮ ಚಿದಾಕಾಶದಲ್ಲಿ ಸತ್ ಚಿತ್ ಆನಂದ ಶಿವ ಸ್ವರೂಪ ದರ್ಶನವಾಗುತ್ತದೆ.
ಸಿದ್ಧರಾಮೇಶ್ವರರು ಒಬ್ಬ ಮಹಾನ್ ಶಿವಯೋಗ ಸಾಧಕರು. ಇಲ್ಲಿ ಸಿದ್ಧರಾಮೇಶ್ವರರು ಉಪಯೋಗಿಸಿದ 'ಚಿದಾಕಾಶ ' ಒಂದು ಸುಂದರವಾದ ಯೋಗಿಕ ಪದ. ಚಿದಾಕಾಶವೆಂದರೆ ಆಜ್ಞಾ ಚಕ್ರದ ಯೋಗ ಸಾಧನೆಯಲ್ಲಿ ಕಾಣುವ ಒಳಗಿನ ಬಯಲು. ದೇಹಕ್ಕೆ ಭೂತಾಕಾಶ, ಮನಸ್ಸಿಗೆ ಚಿತ್ತಾಕಾಶ ವಾದರೆ, ಆತ್ಮಕ್ಕೆ ಚಿದಾಕಾಶ (sky of consciousness). ಇದು ಆತ್ಮ ಸಾಕ್ಷಾತ್ಕಾರವಾಗುವ ಸ್ಥಳ. ಸುಷುಪ್ತಿ ಸ್ಥಿತಿಯಲ್ಲಿ (super-conscious state) ಅನುಭವಿಸುವ ಬಚ್ಚ ಬರೀ ಬಯಲು. ದೇಹ ಮನಸ್ಸು ಜ್ಞಾನ ಅಹಂಕಾರ ಮಾಯವಾಗಿ ಪರಮಾತ್ಮನಲ್ಲಿ, ಆ ಲಿಂಗ ನೆಂಬ ಆ ಸತ್ ಚಿದ ಆನಂದ ದಲ್ಲಿ ಬೆರೆಯುವ ಸ್ಥಳ.
ನಾನು ಎನ್ನುವ ಅಹಂಕಾರ ಮತ್ತು ಅಭಿಮಾನ ಮಾನವನ ಸಾಧನೆಗೆ ಅಡ್ಡಯನ್ನುಂಟುಮಾಡುತ್ತವೆ. ಶರಣರು ಹೇಳುವಂತೆ “ನಾನಳಿದು ನೀನುಳಿವ ಪರಿಯ ತೋರಯ್ಯಾ ಎನಗೆ" ಅಂದರೆ ನಾನು ಎಂಬುದು ಇಲ್ಲವಾಗಿ ನೀನು ತೋರು ಎಂದು.
ಹಾಗಾದರೆ ನಾನು ಯಾರು? ಈ ಪ್ರಶ್ನೆ ಯಿಂದಲೇ ಆಧ್ಯಾತ್ಮಿಕ, ಅನುಭಾವದ ಪಯಣ ಶುರು. ನಾನು ಈ ದೇಹವೇ? ಪಂಚ ಜ್ಞಾನೇಂದ್ರಿಯಗಳೇ? ಪಂಚಪ್ರಾಣಗಳೇ? ಪಂಚ ಕರ್ಮೇoದ್ರಿಯಗಳೇ? ಮನಸ್ಸೇ? ಇವುಗಳನ್ನು ಆವರಿಸಿದ ಅಜ್ಞಾನವೇ? ಮಾಯೆಯೇ?
ಅಲ್ಲ ಅಲ್ಲ ಅಲ್ಲ.
- ದೇಹ ನಾನಲ್ಲ.
ಸಪ್ತ ಧಾತು ಅಂದರೆ ರಸ, ರಕ್ತ, ಮಾಂಸ, ಮೇದಸ್ಸು, ಅಸ್ಥಿ, ಮಜ್ಜೆ, ಶುಕ್ರ ಗಳಿಂದ ಆದ ದೇಹ ನಾನಲ್ಲ.
- ಪಂಚ ಜ್ಞಾನೇಂದ್ರಿಯಗಳು ನಾನಲ್ಲ.
ಶಬ್ದ, ಸ್ಪರ್ಶ, ರೂಪ, ರಸ ಮತ್ತು ಗಂಧಗಳೆನ್ನುವ ಪಂಚವಿಷಯಗಳನ್ನು ಅರಿಯುವ ಪಂಚ ಜ್ಞಾನೇಂದ್ರಿಯಗಳಾದ ಕಣ್ಣು ಕಿವಿ ಮೂಗು ನಾಲಿಗೆ ಚರ್ಮ ನಾನಲ್ಲ.
- ಪಂಚ ಪ್ರಾಣಗಳೂ ನಾನಲ್ಲ.
ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನವೆಂಬ ಪಂಚ ಪ್ರಾಣಗಳೂ ನಾನಲ್ಲ. -ಪಂಚ ಕರ್ಮೇoದ್ರಿಯಗಳೂ ನಾನಲ್ಲ
ವಾಕ್ಕು, ಪಾಣಿ ಪಾದ ಪಾಯು ಉಪಸ್ಥಗಳೆಂಬ ಪಂಚ ಕರ್ಮೇoದ್ರಿಯಗಳೂ ನಾನಲ್ಲ.
- ಮನಸ್ಸೂ ನಾನಲ್ಲ.
ಆಲೋಚನಾತ್ಮಕವಾದ ಮನಸ್ಸೂ ನಾನಲ್ಲ. - - ಅಜ್ಞಾನವೂ ನಾನಲ್ಲ.
ಸರ್ವ ವಿಷಯಗಳು ಸರ್ವವೃತ್ತಿಗಳು ಇಲ್ಲದೆ ಕೇವಲ ವಿಷಯ ವಾಸನೆಯಿಂದ ಕೂಡಿರುವ ಅಜ್ಞಾನವೂ ನಾನಲ್ಲ.
ಇವೆಲ್ಲವೂ ನಾನಲ್ಲ ಎಂದಾದರೆ ನಾನು ಯಾರು?
ಮನಸ್ಸು ಲಯವಾಗಿ, ಪ್ರಪಂಚವೂ ಇಲ್ಲವಾಗಿ, ಪ್ರಪಂಚವು ನನ್ನಿಂದ ಹೊರಗಿದೆ ; ನಾನು ವಿಶ್ವ ಬೇರೆ ಎಂಬ ಮಾಯೆ ನಾಶವಾಗಿ
ಮೂಡುವ "ಆ ಶುದ್ಧ_ಅರಿವೇ_ನಾನು'.
ನಾನು ಎಂಬುದು ಶುದ್ಧ ಅರಿವು. ಆ ಅರಿವಿನ ಸ್ವರೂಪ ಸತ್, ಚಿದ್, ಆನಂದ ಸಚ್ಚಿದಾನಂದ ಶಿವ ಸ್ವರೂಪ.
- ✍️Dr Prema Pangi
#ಪ್ರೇಮಾ_ಪಾಂಗಿ,
#ಶಿವಯೋಗಿ_ಸಿದ್ಧರಾಮೇಶ್ವರ,
#ದೇಹ_ನಾನಲ್ಲ_ಜೀವ_ ನಾನಲ್ಲವೆಂಬುದದು
Comments
Post a Comment