ವಚನ ದಾಸೋಹ : ಕಲ್ಯಾಣವಿಲ್ಲ ಕೈಲಾಸವಿಲ್ಲ, ಬಸವಾ.
ವಚನ ದಾಸೋಹ:
#ಕಲ್ಯಾಣವಿಲ್ಲ ಕೈಲಾಸವಿಲ್ಲ, ಬಸವಾ.
ಕಲ್ಯಾಣವಿಲ್ಲದ ಕಾರಣ ಕೈಲಾಸವಿಲ್ಲವೆನಗೆ,
ಬಸವಾ. ಆ ಕಲ್ಯಾಣ ಕೈಲಾಸವಾಯಿತ್ತು ಬಸವಾ.
ಆ ಕಲ್ಯಾಣವಳಿದು ಕೈಲಾಸವಾದ ಬಳಿಕ,
ಬಸವನ ಮೂರ್ತಿಯಿಲ್ಲ. ಬಸವನ ಮೂರ್ತಿಯನರಿಯದ ಕಾರಣ ಕೈಲಾಸವಿಲ್ಲ ಕಲ್ಯಾಣವಿಲ್ಲವಯ್ಯಾ, ಸಂಗಯ್ಯಾ.
- ಶರಣೆ ನೀಲಾಂಬಿಕೆ
ಭಾವಾರ್ಥ:
ಕಲ್ಯಾಣ ಕ್ರಾಂತಿಯ ಸಮಯ. ಶರಣರ ಪ್ರಗತಿಪರ ವಿಚಾರಧಾರೆಗಳನ್ನು ಅರಿಯದೆ ವಿಶ್ವಗುರು ಬಸವಣ್ಣರನ್ನು ಗಡೀಪಾರು ಮಾಡಿದ್ದರಿಂದ ಮತ್ತು ನಂತರದಲ್ಲಿ ಸಂಭವಿಸಿದ ಗಲಭೆಗಳಿಂದ ಅವರ ಧರ್ಮಪತ್ನಿ ಶರಣೆ ನೀಲಾಂಬಿಕೆ, ಬಹಳವಾಗಿ ನೊಂದು ಬರೆದ ವಚನವಿದು.
ಗುರುಬಸವಣ್ಣನವರು ಕಲ್ಯಾಣದಲ್ಲಿ ಇರುವವರೆಗೆ ಕಲ್ಯಾಣ ಶರಣರ ಕಾಯಕ ಭೂಮಿಯಾಗಿತ್ತು. ಕಲ್ಯಾಣ ಎಂದರೆ ಅದೊಂದು ಸುಂದರವಾದ ಆದರ್ಶ ಸಮಾಜ ವಾಗಿತ್ತು. ಎಲ್ಲರ ಸುಖ ಶಾಂತಿ ಅಭ್ಯುದಯ ಮತ್ತು ಕಲ್ಯಾಣ ಬಯಸುವ ಸಮತ್ವದ ನೆಲೆಯಾಗಿತ್ತು. ಶರಣರಿಗೆ ಕೈಲಾಸ ಎಂಬುದು ಸತ್ತಮೇಲೆ ಹೋಗುವ ಬೇರೆ ಲೋಕವಲ್ಲ. ಸತ್ಯ ಶುದ್ಧ ಕಾಯಕ, ಸದ್ವಿಚಾರಗಳನ್ನು ಹೊಂದುವುದು ನುಡಿದಂತೆ ನಡೆಯುವದು ಇರುವ ತಾಣವೇ ಕೈಲಾಸವಾಗುವುದು, ಅಂತಹ ಸಮೃದ್ಧಿಯ ಅಭ್ಯುದಯದ ಸಮಾಜವೇ 'ಕಲ್ಯಾಣವೆಂಬ ಕೈಲಾಸ'. ಇವನಾರವ ಇವನಾರವ ಎನ್ನದೆ, ಮೇಲು ಕೀಳು ಎನ್ನದೆ, ಪುರುಷ ಸ್ತ್ರೀ ಎನ್ನದೆ, ಸಮಾಜದ ಎಲ್ಲರ ಒಳಿತು, ಅಭ್ಯುದಯ ಒಳಗೊಂಡ ಎಲ್ಲರ ಕಲ್ಯಾಣವನ್ನೇ ಗುರಿಯಾಗಿ ಮಾಡಿಕೊಂಡ ಬಸವಾದಿ ಶರಣರ 'ಕಲ್ಯಾಣ' ಆಗ ಕೈಲಾಸವಾಗಿತ್ತು. 'ಕಲ್ಯಾಣ'ವೆಂಬ ಪ್ರಣತೆಯಲ್ಲಿ ಭಕ್ತಿರಸವೆಂಬ ಜ್ಞಾನದ ತೈಲವ ತುಂಬಿ ಶರಣರು ನುಡಿದ ವಚನಗಳ ಬೆಳಕು ಮಾನವೀಯ ಮೌಲ್ಯಗಳನ್ನು ಬೆಳಗಿಸಿತ್ತು "ಶರಣರ ಕಲ್ಯಾಣ" ಗುರು ಬಸವಣ್ಣನವರು ಅಲ್ಲಿ ನೆಲೆಸಿ ಸರ್ವರ ಅಭ್ಯುದಯ ಬಯಸಿ ಸಮಾನತೆ ತಂದಿದ್ದರಿಂದ.
ಗುರು ಬಸವಣ್ಣನವರ ವಿಚಾರಪತ್ನಿ ನೀಲಾಂಬಿಕೆತಾಯಿಯ ಅಭಿಪ್ರಾಯದಂತೆ,
ಬಸವನಿಲ್ಲದ ಕಾರಣ ಇದು ಕೈಲಾಸವಲ್ಲ. ಇಲ್ಲಿ ಎಲ್ಲರ ಕಲ್ಯಾಣವಿಲ್ಲದ ಕಾರಣ ನನಗೆ ಇಲ್ಲಿ ಕೈಲಾಸವಿಲ್ಲ. ಬಸವನಿಂದಲೇ ಕಲ್ಯಾಣ ಪಟ್ಟಣ ಕೈಲಾಸವಾಗಿತ್ತು. ಈಗ ಇಲ್ಲಿ
ಬಸವಮೂರ್ತಿಯಿಲ್ಲ. ಬಸವಮೂರ್ತಿಯನ್ನು ಅರಿಯದ ಕಾರಣ ಇದು ಕೈಲಾಸವೂ ಅಲ್ಲ; ಇಲ್ಲಿ ಕಲ್ಯಾಣವೂ ಇಲ್ಲ ಅಯ್ಯಾ, ಸಂಗಯ್ಯಾ ಎನ್ನುತ್ತಾರೆ. ಗುರುಬಸವಣ್ಣನವರ ವಿಚಾರ ಆದರ್ಶಗಳನ್ನು ಅರ್ಥಮಾಡಿಕೊಳ್ಳದ, ಮೇಲು ಕೀಳೆಂಬ ಭಾವನೆಗಳಿಂದ ತುಂಬಿದ ಸಮಾಜದಲ್ಲಿ ಎಲ್ಲರ ಕಲ್ಯಾಣವಾಗಲು ಸಾಧ್ಯವಿಲ್ಲ. ಹೀಗೆ ಇಲ್ಲಿ ಕಲ್ಯಾಣವಿಲ್ಲದ ಕಾರಣ ಇದು ಕೈಲಾಸ ಅಲ್ಲ ನನಗೆ ಎಂದು ಮರಗುತ್ತಾರೆ ಶರಣೆ ನೀಲಾಂಬಿಕೆ ತಾಯಿ. ಎಲ್ಲಾ ಜನರ ಕಲ್ಯಾಣವೇ ನಿಜವಾದ ಕಲ್ಯಾಣ ವೆಂದು ಒಪ್ಪದಿದ್ದರೆ ಅದು ಕೈಲಾಸ ಹೇಗಾಗುತ್ತದೆ ? ಎಂದು ಪ್ರಶ್ನಿಸುತ್ತಾರೆ. ಸರ್ವರು ಸುಖ, ಶಾಂತಿ, ಸಂತೃಪ್ತರಾಗಿ ನೆಮ್ಮದಿಯ ಜೀವನ ನಡೆಸಿದಾಗ ಮಾತ್ರ ಕಲ್ಯಾಣವು ನಿಜ ಅರ್ಥದಲ್ಲಿ ಕಲ್ಯಾಣ ವಾಗುತ್ತದೆ ಎನ್ನುತ್ತಾರೆ ನೀಲಾಂಬಿಕೆ ತಾಯಿ.
ಕಲ್ಪಿತ ಪುರಾಣ ಕೈಲಾಸಕ್ಕೆ ಪರ್ಯಾಯವಾಗಿ ಬಸವ ಕಲ್ಯಾಣವೇ ನೈಜ ಕೈಲಾಸವಾಗಿತ್ತು. ಅಂತಹ ಕಲ್ಯಾಣ ತಮ್ಮ ಕಣ್ಣೆದುರಿಗೇ ಹಾಳಾಗಿದ್ದನ್ನು ಕಂಡು ಬಸವಣ್ಣನವರ ವಿಚಾರ ಪತ್ನಿಯಂದೇ ಹೆಸರಾದ ಶರಣೆ ನೀಲಾಂಬಿಕೆ ಮರುಗುತ್ತಾರೆ. ಕಲ್ಯಾಣವೆಂಬ ಭೂಪ್ರದೇಶವನ್ನು ಕೈಲಾಸಮಾಡಿದ ಬಸವಣ್ಣರನ್ನು ಸರ್ವರೂ ಅರಿಯದೇ ಅವರನ್ನು ಗಡಿಪಾರು ಮಾಡಿದ ಕಾರಣದಿಂದ ಬಸವಣ್ಣನಿಲ್ಲದೆ ಕಲ್ಯಾಣವೂ ಇಲ್ಲ ಕೈಲಾಸವೂ ಇಲ್ಲ ಎಂದು ತಡೆಯಲಾರದ ದುಃಖದಿಂದ ನುಡಿಯುತ್ತಾರೆ ಶರಣೆ ನೀಲಾಂಬಿಕೆ ತಾಯಿ.
- ✍️Dr Prema Pangi
#ಕಲ್ಯಾಣವಿಲ್ಲ_ಕೈಲಾಸವಿಲ್ಲ_ಬಸವಾ.
Comments
Post a Comment