ವಚನ ದಾಸೋಹ
*ವಚನ:*
#ಸುನಾದ ಬಿಂದು ಪ್ರಣವಮಂತ್ರದಗ್ರದ ಕೊನೆಯಲೈದುವುದೆ
ಸೋಹಂ ಸೋಹಂ ಎಂದೆನ್ನುತ್ತಿದ್ದಿತ್ತು.
ಕೋಹಂ ಎಂಬುದ ಕಳೆದು ಬ್ರಹ್ಮರಂಧ್ರದೊಳಗೆ,
ಯತೋ ವಾಚೋ ನಿವರ್ತಂತೇ ಅಪ್ರಾಪ್ಯ ಮನಸಾ ಸಹ
ಆನಂದಂ ಬ್ರಹ್ಮಣೋ ವಿದ್ವಾನ್ ನ ಬಿಭೇತಿ ಕುತಶ್ಚನ ಇಂತೆಂದುದಾಗಿ,
ಕೂಡಲಸಂಗಮದೇವನಲ್ಲದೆ ಮತ್ತಾರೂ ಇಲ್ಲ. / 1287
- ಗುರು ಬಸವಣ್ಣನವರು
*ಅರ್ಥ:*
ಗುರು ಬಸವಣ್ಣನವರು ಪ್ರಾಣಲಿಂಗಾನುಸಂಧಾನದ ಅಂತಿಮ ನಿಲವನ್ನು ಇಲ್ಲಿ ನಿರೂಪಿಸಿದ್ದಾರೆ. ಸುನಾದ, ಬಿಂದು, ಪ್ರಣವ ಈ ಮೂರನ್ನೂ ಇದು ಒಳಗೊಂಡಿರುತ್ತದೆ. ನಾದಾನುಸಂಧಾನ, ಬಿಂದಾನುಸಂಧಾನ, ಮಂತ್ರಾನುಸಂಧಾನ -ಈ ಮೂರರ ಅನುಸಂಧಾನಗಳ ಕಡೆಯಲ್ಲಿ ಶಿವಯೋಗ ಅಳವಡುತ್ತದೆ. ಈ ಶಿವಯೋಗ ಸಾಧನೆಯ ಮೊದಲ ಹಂತವೆಂದರೆ
ಕೋಹಂ ಅಂದರೆ ನಾನಾರು ?
-ಎಂದು ತನ್ನನ್ನು ತಾನು ತಿಳಿಯುವ ಬಯಕೆ, ಇದು ಆತ್ಮ ಶೋಧನೆಯ ಆರಂಭ. ಇದೇ ಈ ಸಾಧನೆಗೆ ಪ್ರೇರಣೆ. ಇದು ಮೊದಲು ನಾದರೂಪದ ಅನುಸಂಧಾನದಲ್ಲಿ, ಅನಂತರ ಬಿಂದಾನುಸಂಧಾನದ ಜ್ಯೋತಿರೂಪದಲ್ಲಿ, ನಂತರ ಪ್ರಣವಮಂತ್ರರೂಪದಲ್ಲಿ ಬೆಳೆಯುತ್ತದೆ. ಅದರಿಂದ ಮನಸ್ಸು ಸೂಕ್ಷ್ಮವಾಗಿ ಬ್ರಹ್ಮರಂಧ್ರವನ್ನು ಪ್ರವೇಶಿಸುತ್ತದೆ. ಕೋsಹಂ ಭಾವ ಅಳಿದು "ಸೋsಹಂ ನಾನೇ ಅದು" ಎಂಬ ಭಾವ ಅಳವಡುತ್ತದೆ. ಕೊನೆಯಲ್ಲಿ ಅಗಮ್ಯ ನಿರ್ಮಾಯ ನಿರಾಳ ನಿರಂಜನ ನಿಶೂನ್ಯ ಸ್ವರೂಪನಾದ ಶಿವನೇ ತಾನೆಂಬ ತನ್ಮಯತೆಯಲ್ಲಿ ತನ್ನನ್ನು ತಾನೇ ಮರೆಯುತ್ತಾನೆ. ಮಾತು ಮನಗಳಿಗೆ ಅಪ್ರಾಪ್ತವಾದ ಆನಂದರೂಪವಾದ ಆ ಬ್ರಹ್ಮತತ್ತ್ವವನ್ನು ತಿಳಿದ ಶಿವಯೋಗಿಯು ಅಂಗಲಿಂಗಸಮರಸವೆಂಬ ಶಿವಾದ್ವೈತದಲ್ಲಿ ಅಮೃತನಾಗುತ್ತಾನೆ.
ಭಾವ:
ಇದು ಪ್ರಾಣಲಿಂಗಿ ಸ್ಥಲದ ವಚನ. ಇದು
ಶಟ್ಸ್ತಳದಲ್ಲಿ 4 ನೆಯ ಸ್ಥಲ. ನಿರ್ಮಲ ಭಕ್ತಿಯಿಂದ ಭಕ್ತ ಸ್ಥಲ, ಅಚಲ ನಿಷ್ಠೆ ಯಿಂದ ಮಹೇಶ್ವರ ಸ್ಥಲ, ತನ್ನನ್ನೇ ಈಶ್ವರನಿಗೆ ಮತ್ತು ಸಮಾಜಕ್ಕೆ ಸಮರ್ಪಿಸಿಕೊಂಡ ಪ್ರಸಾದಿ ಸ್ಥಲ ಕ್ರಮಿಸಿ ನಂತರ ಬರುವ ಸ್ಥಲವೇ ಪ್ರಾಣಲಿಂಗಿ ಸ್ಥಲ. ಇದು ಬಹಿರಂಗ ಪೂಜೆಯಿಂದ ಆಂತರಿಕ ಪೂಜೆಗೆ ಸಾಧಕ ಬರುವ ಸ್ಥಲ. ಬಹಿರಂಗ ಅಷ್ಟಾವರಣಗಳಿಂದ ಅಂತರಂಗದ ಅಷ್ಟವಾರಣಕ್ಕೆ ಅನುಸಂಧಾನವಾಗುವ ಸ್ಥಲ. ಗುರುವಿನಿಂದ ಅರಿವು ಕಲಿತು ಅರಿವನ್ನೇ ಗುರು ಮಾಡಿಕೊಳ್ಳುವ ಸ್ಥಲ. ಇಷ್ಟಲಿಂಗದ ಬಹಿರಂಗ ಪೂಜೆ , ಅಂತರಂಗದ ಪ್ರಾಣಲಿಂಗ ದ ಉಪಾಸನೆಗೆ ಬದಲಾಗುವ ಸ್ಥಲ . ಸತ್ಯಾನುಭಾವವೇ ಈ ಸ್ಥಲದ ಸಾರ. ತಲುಪಲು ಬೇಕಾದ ಅರ್ಹತೆ ಸ್ವಸ್ಥ , ಧ್ಯಾನಶೀಲ, ಶಾಂತ ಮನಸ್ಸು ಮತ್ತು ಅಂಗ- ಲಿಂಗ (ಆತ್ಮ ಪರಮಾತ್ಮ) ತತ್ವಗಳ ಜ್ಞಾನ ಮತ್ತು ಅವುಗಳ ಅನುಸಂಧಾನ.
ಈ ಸ್ಥಲವನ್ನು ತಲುಪುತ್ತಲೇ ಸಾಧಕನು ಅಂತರ್ಮುಖಿಯಾಗುತ್ತಾನೆ .
ಸರ್ವವ್ಯಾಪಕನಾದ ಭಗವಂತನು ವಿಶ್ವದಲ್ಲಿ ಎಲ್ಲಾ ಕಡೆಗೆ ಇರುವಂತೆ ತನ್ನಲ್ಲಿಯೂ ಇರುವುದನ್ನು ಅರಿತು ಆನಂದಿಸುತ್ತಾನೆ.
' ತಾನೂ ಪರಮಾತ್ಮನ ಒಂದಂಶ ' ; ಅದೇ ರೀತಿಯಾಗಿ ಸಕಲ ಜೀವರಾಶಿಗಳಲ್ಲಿ ದೇವನಿರುವನು ಎಂದು ಪ್ರಾಣಲಿಂಗಿ ಅರಿಯುತ್ತಾನೆ. 'ದೇಹದಲ್ಲಿದ್ದ ಜೀವ ಚೇತನ ವಿಶ್ವದ ಮಹಾಚೇತನ' ಎಂದು ಅರಿಯುತ್ತಾನೆ.
ಮಣ್ಣಿನ ಪಣತಿಯೆ ಇರಲಿ ಹೊನ್ನಿನ ಪಣತಿಯೇ ಇರಲಿ ಆದರೆ ಎರಡರಲ್ಲಿಯೂ ಬೆಳಗುವ ಜ್ಯೋತಿ ಮಾತ್ರ ಒಂದೇ! ಹಾಗೆ ಎಲ್ಲರಲ್ಲಿಯೂ ಹೊಳೆಯುವ ಪ್ರಾಣಜ್ಯೋತಿ ಪರಮಾತ್ಮನು ಒಬ್ಬನೇ. ಇದು ಪ್ರಾಣಲಿಂಗ ದರ್ಶನ. ಹೀಗೆ ತನ್ನೊಳಗೆ ದೇವರನ್ನು, ದೇವನಲ್ಲಿ ತನ್ನನ್ನು ಕಂಡು ಪ್ರಪಂಚವೆಲ್ಲವೂ ಪರಮಾತ್ಮನಿಂದ ತುಂಬಿಹೋಗಿದೆ ಎಂದರಿತು ಆನಂದಿಸುವವನೇ ಪ್ರಾಣಲಿಂಗಿ. ತದೇಕ ಚಿತ್ತದಿಂದ ಇಷ್ಟಲಿಂಗ ದೃಷ್ಟಿಸಲು ಅದು ಅಂತರಂಗದಲ್ಲಿ ತುಂಬಿ ಪ್ರಾಣಲಿಂಗ ವಾಗುತ್ತದೆ. ಈ ಎಂದೆಂದೂ ಅಗಲದ ಪ್ರಾಣಲಿಂಗವನ್ನು ಪರಿಭಾವಿಸಬೇಕು. ಅನನ್ಯ ಭಾವದಿಂದ ಅನುಸಂಧಾನ ಮಾಡಿದರೆ ಸತ್ಯದ ದರ್ಶನವಾಗುತ್ತದೆ. ಆ ಬೆಳಗಿನಲ್ಲಿ ಒಂದಾಗಬೇಕು.ಅದುವೇ 'ಪ್ರಾಣ ಲಿಂಗಾನುಭವ '.
- ✍️ Dr Prema Pangi
#ಪ್ರೇಮಾ_ಪಾಂಗಿ,#ಗುರುಬಸವಣ್ಣನವರು,
Comments
Post a Comment