ವಚನ ದಾಸೋಹ

ವಚನ :
#ಅಯ್ಯ ದೂರದಲಿರ್ದಿಹೆ ಎಂದು ಬಾಯಾರಿ ಬಳಲುತಿರ್ದೆ
ಅಯ್ಯ ಸಾರಿಬಂದು ನೀನೆನ್ನ ಕರಸ್ಥಲದಲ್ಲಿ ಮೂರ್ತಿಗೊಂಡೆ.
ಇನ್ನಾರಂತೆ ಎಲ್ಲವೂ ಲಿಂಗ,
ಆಗ ನಿಮ್ಮಲ್ಲಿ ನೆಟ್ಟವು ನೋಡಯ್ಯ.
ಚೆನ್ನಮಲ್ಲಿಕಾರ್ಜುನ ನಿಮ್ಮ ನೆನ್ನ ಕರಸ್ಥಲದಲಿ
ನೋಡಿ, ನೋಡಿ, ಕಂಗಳೇ ಪ್ರಾಣವಾಗಿರ್ದೆನಯ್ಯ.
- ವೀರ ವಿರಾಗಿಣಿ ಅಕ್ಕ ಮಹಾದೇವಿ
ಅರ್ಥ: 
ಅಕ್ಕ ಮಹಾದೇವಿ ಕರಸ್ಥಲದ ಇಷ್ಟಲಿಂಗದ ಮೇಲಿನ ದೃಷ್ಠಿಯಿಂದ ಆಚರಿಸುವ ಲಿಂಗಾಂಗ ಯೋಗ ವಿವರಿಸಿದ್ದಾಳೆ.

*ಅಯ್ಯ ದೂರದಲಿರ್ದಿಹೆ ಎಂದು ಬಾಯಾರಿ ಬಳಲುತಿರ್ದೆ
ಅಯ್ಯ ಸಾರಿಬಂದು ನೀನೆನ್ನ ಕರಸ್ಥಲದಲ್ಲಿ ಮೂರ್ತಿಗೊಂಡೆ*

ಅಯ್ಯಾ ನನ್ನ ಇಷ್ಟದೇವ ಮಲ್ಲಿಕಾರ್ಜುನಾ,  ನೀನು ಬಹು ದೂರದಲ್ಲಿರುವೆ ಎಂದು ತಿಳಿದು, ಅಗಲಿಕೆ ಎಂಬ ದಾಹ ತಡೆಯದೆ ಬಾಯಾರಿ ಬಳಲುತಿದ್ದೆ. ಆದರೆ ಅಯ್ಯಾ, ನೀವು ಸಾರಿ ಬಳಿಗೆ ಬಂದು  ನನ್ನ ಕರಸ್ಥಳದಲ್ಲಿ ಇಷ್ಟಲಿಂಗರೂಪದಲ್ಲಿ ಸಾಕಾರಮೂರ್ತಿಯಾಗಿ ಪ್ರತಿಷ್ಟಾಪಿಸಿಕೊಂಡೆ.

*ಇನ್ನಾರಂತೆ ಎಲ್ಲವೂ ಲಿಂಗ,
ಆಗ ನಿಮ್ಮಲ್ಲಿ ನೆಟ್ಟವು ನೋಡಯ್ಯ.
ಚೆನ್ನಮಲ್ಲಿಕಾರ್ಜುನ ನಿಮ್ಮ ನೆನ್ನ ಕರಸ್ಥಲದಲಿ
ನೋಡಿ, ನೋಡಿ, ಕಂಗಳೇ ಪ್ರಾಣವಾಗಿರ್ದೆನಯ್ಯ.*

ನೀವು ಇಷ್ಟಲಿಂಗ ರೂಪದಲ್ಲಿ  ನನ್ನ ಕರಸ್ಥಲಕ್ಕೆ ಬಂದನಂತರ ಎಲ್ಲವೂ ಲಿಂಗ ಮಯವಾಯಿತು. ಸರ್ವಾಂಗಲಿಂಗಿಯಾಗಿ   ಲಿಂಗಲೀನಳಾದೇನು. ನನ್ನ ಕಣ್ಣುಗಳು ನಿಮ್ಮಲ್ಲಿ ನೆಟ್ಟವು. 
ಚೆನ್ನಮಲ್ಲಿಕಾರ್ಜುನ ನಿಮ್ಮನ್ನು ನನ್ನ ಕರಸ್ಥಲದಲ್ಲಿ ಪ್ರೇಮಭರಿತ ಅನಿಮಿಷ ದೃಷ್ಠಿಯಿಂದ  ನೋಡಿ, ನೋಡಿ, ಈ ಕಂಗಳಲ್ಲಿ ಪ್ರಾಣ ನೆಲೆಸಿ ಪ್ರಾಣಲಿಂಗ ಅನುಸಂಧಾನ ವಾಯಿತು......
ಭಾವ:
*ಲಿಂಗಾಂಗಯೋಗ*:
ಅಗಮ್ಯ, ಅಪ್ರತಿಮ, ಅಪ್ರಮಾಣವಾದ ಪರಮಾತ್ಮನ ರೂಪವು ಗೋಲಾಕಾರವಾಗಿ ಭಕ್ತರಲ್ಲಿ ಭೇದವನರಿಯದೇ,ಆತನ ಕರಸ್ಥಲವನ್ನೇ ಆಲಯವಾಗಿಸಿಕೊಂಡು, ಭಕ್ತನಿಗೆ ಅರಿವಿನ ಸಾಕ್ಷಾತ್ಕಾರದ ಸಾಧನವಾಗಿ 'ಇಷ್ಟಲಿಂಗ' ರೂಪುಗೊಂಡಿತು.
ಶಿವಯೋಗ ಸಾಧಿಸಲು ಗುರುಕಾರುಣ್ಯ ಪಡೆದು, ವಿಭೂತಿ - ರುದ್ರಾಕ್ಷಿ - ಮಂತ್ರ - ಲಿಂಗಧಾರಣ ಮಾಡಿಕೊಂಡಾಗ ಅಷ್ಟಾವರಣ ದಿಂದ ನಾವು ಇಷ್ಟಲಿಂಗ ಪೂಜೆ ಮಾಡುತ್ತೇವೆ. ಆದರೆ ಕರಸ್ಥಲದ ಲಿಂಗದ ಮೇಲೆ ತದೇಕಚಿತ್ತವಾದ ಲಿಂಗನಿರೀಕ್ಷಣೆ ದೃಷ್ಟಿಯಿಂದ ನೋಡುವುದು (ತ್ರಾಟಕ ಯೋಗ), ನಿಯಂತ್ರಿತ ಶ್ವಾಸೋಚ್ಚಾಸ (ಪ್ರಾಣಾಯಾಮ), ಬಿಟ್ಟುಬಿಡದ ನೋಟ (ಅನಿಮಿಷ ದೃಷ್ಟಿ) ಮತ್ತು ಮಂತ್ರಾನುಸಂಧಾನದಿಂದ (ಓಂ ನಮಃ ಶಿವಾಯ) ವ್ಯಕ್ತಿಯು ಅಂತರ್ಮುಖಿಯಾಗುತ್ತಾನೆ. ಇಷ್ಟಲಿಂಗದ ರಹಸ್ಯವನ್ನು ಅರಿಯಲು ಈ ಕ್ರಮ ಅನುಸರಿಸುವುದರಿಂದ ಮೂಲಾಧಾರದ ಚಕ್ರದ ಕುಂಡಲಿನೀ ಶಕ್ತಿ  (ಆಚಾರಲಿಂಗ) ಜಾಗ್ರತವಾಗಿ ಅಜ್ಞಾಚಕ್ರದಲ್ಲಿ ೩ನೇ ಕಣ್ಣು  ತೆರೆಯಲು (Opening of the third eye) ಸಹಕಾರಿಯಾಗುತ್ತದೆ. ಅನಿಮಿಷ ದೃಷ್ಟಿ ಮಹತ್ವದ್ದಾಗಿರುವುದರಿಂದಲೇ ಇದನ್ನು ದೃಷ್ಟಿಯೋಗ, ಅನಿಮಿಷಯೋಗವೆಂತಲೂ ಕರೆಯುತ್ತಾರೆ.  ಇಲ್ಲಿ ಅನುಭವ ಭಕ್ತಿಯೇ ಮುಖ್ಯ ಲಕ್ಷಣ. ತನ್ನ ಶರೀರದಲ್ಲೇ ಹುದುಗಿರುವ ಚಕ್ರಗಳು ಜಾಗೃತಗೊಂಡು ವಿವಿಧ ಅನುಭವಗಳನ್ನು ಸಾಧಕ ಪಡೆಯುವನು. ನಾದ-ಬಿಂದು-ಕಳೆಗಳ ದಿವ್ಯಾನುಭವ ಪ್ರಾಪ್ತಿಯೋಗುವುದು. ಇಷ್ಟೆಲ್ಲ ಅನುಭವಗಳ ದರ್ಶಕವಾದ ಇಷ್ಟಲಿಂಗ ತನ್ನ ಪ್ರಾಣವೇ ಆಗುವುದು. ಸರ್ವಸ್ವವೆನಿಸುವುದು. ತನ್ನ ಶರೀರ ಮತ್ತು ಇಷ್ಟಲಿಂಗ ಅದ್ಭುತ ಶಕ್ತಿಯ ಕೇಂದ್ರಗಳೆಂಬುದನ್ನು ಸಾಧಕ ಮನಗಾಣುವನು.  ಪಿಂಡ ಸ್ಥಲದಲ್ಲಿ 'ನಾನೆಂದರೆ ಶುದ್ಧ ಆತ್ಮ' ಎಂದು ಪಡೆದ ಅರಿವನ್ನು (Intellectual Awareness) ಸಾಕ್ಷಾತ್ಕಾರ ಗೊಳಿಸಿಕೊಳ್ಳುತ್ತಾನೆ. ಅಕ್ಕ ಮಹಾದೇವಿ ಇನ್ನೊಂದು ವಚನದಲ್ಲಿ ಇಷ್ಟಲಿಂಗದ ಮೇಲಿನ ನೋಟ ಮತ್ತು ಮುಗ್ದನಂಬಿಕೆಯ ಭಾವ ತೆರೆಹಿಲ್ಲದಿರಬೇಕು ಎನ್ನುವುರು.

#ಅಂಗೈಯೊಳಗಣ ಲಿಂಗವ ಪೂಜಿಸುತ್ತ,
ಮಂಗಳಾರತಿಗಳನು ತೊಳಗಿ ಬೆಳಗುತ್ತಲಿರ್ದೆ ನೋಡಯ್ಯಾ.
ಕಂಗಳ ನೋಟ, ಕರುವಿಟ್ಟ ಭಾವ, ಹಿಂಗದ ಮೋಹ
ತೆರಹಿಲ್ಲದಿರ್ದೆ ನೋಡಯ್ಯಾ,
ಚೆನ್ನಮಲ್ಲಿಕಾರ್ಜುನಯ್ಯಾ,
ನಿಮ್ಮನಗಲದ ಪೂಜೆ ಅನುವಾಯಿತ್ತೆನಗೆ./9

ಚಿನ್ಮಯ ಜ್ಞಾನಿ ಚೆನ್ನಬಸವಣ್ಣನವರು ಇಷ್ಟಲಿಂಗ ಯೋಗವನ್ನು ಮಾಡುವ ವಿಧಾನವನ್ನು ವಿವರಿಸಿದ್ದಾರೆ.

#ಕರಸ್ಥಲದಲ್ಲಿ ಲಿಂಗಸ್ಥಾಪನವಾದ ಬಳಿಕ,
ಲಿಂಗದಲ್ಲಿ ಅನಿಮಿಷ ದೃಷ್ಟಿಯಾಗಬೇಕು.
ತನ್ನ ತಾನೆ ಅನಿಮಿಷವಾಗಬೇಕು.
ಲಿಂಗದಲ್ಲಿ ಅನಿಮಿಷವಾಗಬೇಕು.
ಜಂಗಮದ ನಿಲುಕಡೆಯನರಿಯಬೇಕು.
ಪ್ರಸಾದದಲ್ಲಿ ಪರಿಪೂರ್ಣನಾಗಬೇಕು.
ಹಿರಣ್ಯಕ್ಕೆ ಕೈಯಾನದಿರಬೇಕು
ತನ್ನ ನಿಲುಕಡೆಯ ತಾನರಿಯಬೇಕು.
ಇದು ಕಾರಣ, ಕೂಡಲಚೆನ್ನಸಂಗನಲ್ಲಿ
ಕರಸ್ಥಲದ ನಿಜವನರಿವರೆ ಇದು ಕ್ರಮ.
- ಚಿನ್ಮಯ ಜ್ಞಾನಿ ಚನ್ನಬಸವಣ್ಣ

ಇಷ್ಠಲಿಂಗ ಕರಸ್ಥಲದಲ್ಲಿ ಪೂಜೆಗೈದು
ಪ್ರಾಣಲಿಂಗ ಮನದಲ್ಲಿ ಪೂಜೆಗೈದು
ಭಾವಲಿಂಗ ಭಾವದಲ್ಲಿ ಪೂಜೆಗೈದು ಇಂತೀ ಲೈವಿಧವಾಗಿ ಪೂಜೆಗೈದು,
ತನು ಮನ ಪ್ರಾಣದಲ್ಲಿ ಲಿಂಗ  ಪೂಜೆಮಾಡುತ್ತ  ಐಕ್ಯಸ್ಥಾನದಲ್ಲಿ ಲೀನವಾಗುವದೇ ಲಿಂಗಾಂಗಯೋಗ.
-✍️ Dr Prema Pangi
#ಪ್ರೇಮಾ_ಪಾಂಗಿ,#ಅಕ್ಕ_ಮಹಾದೇವಿ
#ಅಯ್ಯ_ದೂರದಲಿರ್ದಿಹೆ_ಎಂದು_ಬಾಯಾರಿ,#ಅಂಗೈಯೊಳಗಣ_ಲಿಂಗವ_ ಪೂಜಿಸುತ್ತ #ಕರಸ್ಥಲದಲ್ಲಿ_ಲಿಂಗಸ್ಥಾಪನವಾದ_ಬಳಿಕ
Picture post designed and created by me. Hope you all will like it. A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma