ಷಟ್ಸ್ಥಲ - ಪ್ರಾಣಲಿಂಗಿ ಸ್ಥಲ

ಷಟ್ಸ್ಥಲ  -  ಪ್ರಾಣಲಿಂಗಿ ಸ್ಥಲ
ಷಟ್ಸ್ಥಲ  -  ಪ್ರಾಣಲಿಂಗಿ ಸ್ಥಲ : 
ಇದು ಷಟ್ಸ್ಥಲದಲ್ಲಿ 4 ನೆಯ ಸ್ಥಲ. ನಿರ್ಮಲ ಭಕ್ತಿಯಿಂದ ಭಕ್ತ ಸ್ಥಲ, ಅಚಲನಿಷ್ಠೆ ಯಿಂದ ಮಹೇಶ್ವರ ಸ್ಥಲ, ತನ್ನನ್ನೇ ಈಶ್ವರನಿಗೆ ಸಮಾಜಕ್ಕೆ ಸಮರ್ಪಿಸಿಕೊಂಡ ಪ್ರಸಾದಿ ಸ್ಥಲ ಕ್ರಮಿಸಿ ನಂತರ ಬರುವ ಸ್ಥಲವೇ ಪ್ರಾಣಲಿಂಗಿ ಸ್ಥಲ. ಇದು  ಬಹಿರಂಗ ಪೂಜೆಯಿಂದ ಆಂತರಿಕ ಪೂಜೆಗೆ ಸಾಧಕ ಬರುವ ಸ್ಥಲ. ಬಹಿರಂಗ ಅಷ್ಟಾವರಣಗಳಿಂದ ಅಂತರಂಗದ ಅಷ್ಟಾವರಣಕ್ಕೆ ಅನುಸಂಧಾನವಾಗುವ ಸ್ಥಲ. ಗುರುವಿನಿಂದ ಅರಿವು ಕಲಿತು ಅರಿವನ್ನೇ ಗುರು ಮಾಡಿಕೊಳ್ಳುವ ಸ್ಥಲ.
ಇಷ್ಟಲಿಂಗದ ಬಹಿರಂಗ ಪೂಜೆ, ಅಂತರಂಗದ ಪ್ರಾಣಲಿಂಗದ ಉಪಾಸನೆಗೆ ಬದಲಾಗುವ ಸ್ಥಲ.
"ಲಿಂಗದಲ್ಲಿ ಪ್ರಾಣವನಿಲಿಸಿ, ಪ್ರಾಣದಲ್ಲಿ ಲಿಂಗವನಿರಿಸಿ ನೆನೆವುತ್ತಿದ್ದ ಕಾರಣ ಪ್ರಾಣಲಿಂಗವಾಯಿತು” ಎನ್ನುತ್ತಾರೆ  ಶರಣರು. ಅಂದರೆ ಪ್ರಾಣದಲ್ಲಿ ಲಿಂಗವನ್ನು ನಿಲ್ಲಿಸುವುದೇ ಪ್ರಾಣಲಿಂಗ ಸಾಧನೆ. ಸತ್ಯಾನುಭಾವವೇ ಈ ಸ್ಥಲದ ಸಾರ. ತಲುಪಲು ಬೇಕಾದ ಅರ್ಹತೆ ಸ್ವಸ್ಥ , ಧ್ಯಾನಶೀಲ, ಶಾಂತ ಮನಸ್ಸು ಮತ್ತು ಅಂಗ-ಲಿಂಗ ತತ್ವಗಳ (ಆತ್ಮ- ಪರಮಾತ್ಮ) ಜ್ಞಾನ ಮತ್ತು ಅವುಗಳ ಅನುಸಂಧಾನ. ಈ ಸ್ಥಲವನ್ನು ತಲುಪುತ್ತಲೇ ಸಾಧಕನು ಅಂತರ್ಮುಖಿಯಾಗುತ್ತಾನೆ .
ಸರ್ವವ್ಯಾಪಕನಾದ ಭಗವಂತನು ವಿಶ್ವದಲ್ಲಿ ಎಲ್ಲಾ ಕಡೆಗೆ ಇರುವಂತೆ ತನ್ನಲ್ಲಿಯೂ ಇರುವುದನ್ನು ಅರಿತು ಆನಂದಿಸುತ್ತಾನೆ.
 "ತಾನೂ ಪರಮಾತ್ಮನ ಒಂದಂಶ", ಅದೇ ರೀತಿಯಾಗಿ ಸಕಲ ಜೀವರಾಶಿಗಳಲ್ಲಿ ದೇವನಿರುವನು ಎಂದು ಪ್ರಾಣಲಿಂಗಿ ಅರಿಯುತ್ತಾನೆ. "ತನ್ನ ದೇಹದಲ್ಲಿದ್ದ ಜೀವ ಚೇತನ ವಿಶ್ವದ ಮಹಾಚೇತನ" ಎಂದು ಅರಿಯುತ್ತಾನೆ.

ಮಣ್ಣಿನ ಪಣತಿಯೆ ಇರಲಿ, ಹೊನ್ನಿನ ಪಣತಿಯೇ ಇರಲಿ, ಆದರೆ ಎರಡರಲ್ಲಿಯೂ ಬೆಳಗುವ ಜ್ಯೋತಿ ಮಾತ್ರ ಒಂದೇ!  ಹಾಗೆ ಎಲ್ಲರಲ್ಲಿಯೂ ಹೊಳೆಯುವ ಪ್ರಾಣಜ್ಯೋತಿ ಪರಮಾತ್ಮನು ಒಬ್ಬನೇ.- ಇದು ಪ್ರಾಣಲಿಂಗ ದರ್ಶನ. ಹೀಗೆ ತನ್ನೊಳಗೆ ದೇವರನ್ನು, ದೇವನಲ್ಲಿ ತನ್ನನ್ನು ಕಂಡು ಪ್ರಪಂಚವೆಲ್ಲವೂ ಪರಮಾತ್ಮನಿಂದ ತುಂಬಿಹೋಗಿದೆ ಎಂದರಿತು ಆನಂದಿಸುವವನೇ ಪ್ರಾಣಲಿಂಗಿ. 
ತದೇಕ ಚಿತ್ತದಿಂದ ಇಷ್ಟಲಿಂಗ ದೃಷ್ಟಿಸಲು ಅದು ಅಂತರಂಗದಲ್ಲಿ ತುಂಬಿ ಪ್ರಾಣಲಿಂಗ ವಾಗುತ್ತದೆ. ಈ ಎಂದೆಂದೂ ಅಗಲದ ಪ್ರಾಣಲಿಂಗವನ್ನು ಪರಿಭಾವಿಸಬೇಕು. ಅನನ್ಯ ಭಾವದಿಂದ ಅನುಸಂಧಾನ ಮಾಡಿದರೆ ಸತ್ಯದ ದರ್ಶನ ವಾಗುತ್ತದೆ. ಆ ಬೆಳಗಿನಲ್ಲಿ ಒಂದಾಗಬೇಕು. ಅದುವೇ "ಪ್ರಾಣ ಲಿಂಗಾನುಭವ" ಪಡೆದವನು ಪ್ರಾಣಲಿಂಗಿ.

#ಕಂಗಳು ತುಂಬಿದ ಬಳಿಕ ನೋಡಲಿಲ್ಲ,
ಕಿವಿಗಳು ತುಂಬಿದ ಬಳಿಕ ಕೇಳಲಿಲ್ಲ,
ಕೈಗಳು ತುಂಬಿದ ಬಳಿಕ ಪೂಜಿಸಲಿಲ್ಲ,
ಮನ ತುಂಬಿದ ಬಳಿಕ ನೆನೆಯಲಿಲ್ಲ,
ಮಹಂತ ಕೂಡಲಸಂಗಮದೇವನ. / 446
- ಗುರು ಬಸವಣ್ಣನವರು
 ಅರ್ಥ :
ಸಾಧನೆ ಮುಂದುವರೆದಂತೆ ಪ್ರಾಣಲಿಂಗ ಅನುಸಂಧಾನವಾಗಿ   ಕಣ್ಣು, ಕಿವಿ, ಕೈ, ಮನಸ್ಸು - ಹೀಗೆ ದೇಹದ ಸರ್ವಾಂಗಗಳನ್ನು ಲಿಂಗಭಾವ ಆವರಿಸುತ್ತದೆ. ಅನಂತವಾದ ಆ ಅನುಭಾವ ಕಣ್ಣುಗಳನ್ನು ತುಂಬಿದ ಮೇಲೆ ಅಲ್ಲಿ ಬೇರೆ ಏನನ್ನೂ ಕಾಣುವುದಿಲ್ಲ, ಕಿವಿಗಳನ್ನು ತುಂಬಿದ ಮೇಲೆ ಬೇರೆ ಏನನ್ನೂ  ಕೇಳುವುದಿಲ್ಲ, ಕರಸ್ಥಲವನ್ನು ತುಂಬಿದ ಮೇಲೆ ಬೇರೆ ಏನನ್ನೂ ಪೂಜಿಸುವುದಿಲ್ಲ, ಅದು ಮನಸ್ಸನ್ನು ತುಂಬಿದ ಮೇಲೆ ಬೇರೆ ಏನನ್ನೂ ನೆನೆಯುವುದಿಲ್ಲ. ಮಹಾಂತ ಕೂಡಲಸಂಗಮದೇವ (ನಿರಾಕಾರ ನಿರ್ಗುಣ  ಪರಶಿವ, ಪರಮಾತ್ಮ)ನೇ ಈ ಸರ್ವಸ್ವವನ್ನೂ, ಸರ್ವಾಂಗವನ್ನೂ  ವ್ಯಾಪಿಸಿದ ಮೇಲೆ ಕಾಣುವುದಕ್ಕೆ, ಕೇಳುವುದಕ್ಕೆ, ಪೂಜಿಸುವುದಕ್ಕೆ, ನೆನೆಯುವುದಕ್ಕೆ ಬೇರೇನೂ ಉಳಿಯುವುದಿಲ್ಲ. ಎಲ್ಲೆಲ್ಲಿಯೂ  ತಾನೇ ತಾನಾಗಿ ಅದು ವ್ಯಾಪಿಸಿ ಸಾಮರಸ್ಯದ ಸುಖದಲ್ಲಿ ಮುಳುಗಿಸಿಬಿಡುತ್ತದೆ.

ಪ್ರಾಣಲಿಂಗಿಸ್ಥಲವು ಯೋಗ ವಿಧಾನವಾಗಿದೆ. ಮೊದಲನೆಯ ಮೂರು ಸ್ಥಲ
ಗಳಲ್ಲಿ ಭಕ್ತಿ, ಕ್ರಿಯೆ, ಜ್ಞಾನದ ಪೂರ್ವಸಿದ್ಧತೆ ಪಡೆದು, ಈ ಸ್ಥಲದಲ್ಲಿ  ಭಕ್ತಿ, ಕ್ರಿಯೆ, ಜ್ಞಾನ ದೇಹದಲ್ಲಿರುವ ಅಂತಃಶಕ್ತಿಯನ್ನು ಜಾಗೃತಗೊಳಿಸುವ ಯೋಗಸಾಧನೆಯನ್ನು ಕೈಗೊಳ್ಳುತ್ತವೆ. ಪ್ರಾಣಲಿಂಗಸ್ಥಲದಲ್ಲಿ ಸಾಧನೆಯು ಧ್ಯಾನ ಮತ್ತು ಅನುಸಂಧಾನದ ಕಡೆಗೆ ತಿರುಗುತ್ತದೆ. ಇಲ್ಲಿ ಲಿಂಗ, ಉಪಾಸ್ಯವಾದ ಸ್ಥೂಲವಸ್ತು ಮಾತ್ರವಾಗಿ ಉಳಿಯುವುದಿಲ್ಲ. ಅದು ಅಂತರಂಗ ಬಹಿರಂಗವನ್ನೆಲ್ಲಾ ವ್ಯಾಪಿಸಿದ ಶಕ್ತಿಯಾಗುತ್ತದೆ. 
 ಪ್ರಾಣ ಲಿಂಗವೋ, ಲಿಂಗ ಪ್ರಾಣವೋ ವೆಂಬ ಸಂದು ಸಂಶಯವಿಲ್ಲದೆ ನಿಜವನ್ನು ತಿಳಿಯಬೇಕು. ದಶಪ್ರಾಣವಳಿದು ಲಿಂಗವೆ ತಾನೆಂದರಿಯ ಬಲ್ಲಡೆ, ಅದೇ ಪ್ರಾಣಲಿಂಗ ಎನ್ನುತ್ತಾರೆ ಅಲ್ಲಮ ಪ್ರಭುಗಳು.

#ಅಂಗದ ಮೇಲೆ ಆಯತವಾದುದೆ ಇಷ್ಟಲಿಂಗ,
ಆ ಇಷ್ಟಲಿಂಗವಿಡಿದಿಹುದೆ ಪ್ರಾಣಲಿಂಗ ಸ್ವಾಯತ,
ಇಷ್ಟಲಿಂಗ ಉದಯಿಸಿದಲ್ಲದೆ ಪ್ರಾಣಲಿಂಗವ ಕಾಣಬಾರದು
ಪ್ರಾಣಲಿಂಗ ಉದಯಿಸಿದಲ್ಲದೆ ಇಷ್ಟಲಿಂಗವ ಕಾಣಬಾರದು,
ಈ ಭೇದವ ಭೇದಿಸಬಲ್ಲರೆ ಕೂಡಲಚೆನ್ನಸಂಗನಲ್ಲಿ ಲಿಂಗೈಕ್ಯವು. / 22
ಎನ್ನುತ್ತಾರೆ ಚನ್ನಬಸವಣ್ಣನವರು.
ಅಂಗದಮೇಲೆ ಕುರುಹು ಆಗಿಟ್ಟ ಇಷ್ಟಲಿಂಗವನ್ನು ಅನುಸಂಧಾನ ಮಾಡುತ್ತಾ ಅಲ್ಲಿ ಆಯತವಾದುದನ್ನು ಸ್ವಾಯತ ಮಾಡಿಕೊಳ್ಳಬೇಕು. ಅದಕ್ಕೆ ಸಹಾಯಕವಾದ ಅಂತರಂಗದ ಯೋಗಸಾಧನೆಯನ್ನು ಪ್ರಾಣಲಿಂಗಿ ಸ್ಥಲದಲ್ಲಿ ಕಾಣುತ್ತೇವೆ.

#ಎನ್ನ ಕಾಯವೆಂಬ ಸಿಂಹಾಸನದಲ್ಲಿ,
ಪ್ರಾಣವೆಂಬ ಲಿಂಗವ ಮೂರ್ತಿಗೊಳಿಸಿ,
ಧ್ಯಾನವೆಂಬ ಹಸ್ತದಲ್ಲಿ ಮುಟ್ಟಿ ಪೂಜಿಸುತ್ತಿರಲು,
ಮೆಲ್ಲಮೆಲ್ಲನೆ ಸುತ್ತಿ ಮುತ್ತಿದ ಸಂಸಾರ ಬಯಲ ಬೆರಸಿ,
ನಾ ನೀನೆಂಬ ಭೇದವಳಿದು,
ಮಹಾದಾನಿ ಸೊಡ್ಡಳನಲ್ಲಿ ಲಿಂಗೈಕ್ಯವಾಯಿತ್ತು. / 14
ಎಂಬ ಸೊಡ್ಡಳ ಬಾಚರಸನ ವಚನವು ಪ್ರಾಣಲಿಂಗಿಯ ಸಾಧನೆಯನ್ನು ಸುಂದರವಾಗಿ ಸೂಚಿಸುತ್ತಿದೆ. ಪ್ರಾಣವೆಂಬ ಲಿಂಗವನ್ನು ಧ್ಯಾನವೆಂಬ ಹಸ್ತದಲ್ಲಿ ಮುಟ್ಟಿ ಪೂಜಿಸಬೇಕು. ಯೋಗಾಭ್ಯಾಸದಲ್ಲಿ ಮುಖ್ಯವಾದ ಧ್ಯಾನ ಧಾರಣ ಸಮಾಧಿ ಈ ಮೂರು ಅಂಶಗಳೂ ಇಲ್ಲಿ ಅಡಕವಾಗುತ್ತವೆ. “ಹರಿವ ಮನ ವಾಯುವನೊಂದು ಹುರಿಯ ಮಾಡಿ, ಮನವ ಸ್ಥಿರಗೊಳಿಸಿ, ಸಗುಣ ಧ್ಯಾನದಲ್ಲಿ ಮನ ಸವೆದು, ನಿರ್ಗುಣದಲ್ಲಿ ನಿಂದು, ಆ ನಿರ್ಗುಣ ಧ್ಯಾನ ಬಲಿದು, ಸಗುಣ ನಿರ್ಗುಣದಲ್ಲಿ ಅಡಗಿ, ಆ ನಿರ್ಗುಣವಾದ ನಿಜದಲ್ಲಿ ಮನೋಲಯ" ವಾಗಬೇಕೆನ್ನುತ್ತಾರೆ ಶರಣರು.

#ಪ್ರಾಣಲಿಂಗಕ್ಕೆ ಕಾಯವೆ ಸೆಜ್ಜೆ, ಆಕಾಶಗಂಗೆಯಲ್ಲಿ ಮಜ್ಜನ.
ಹೂವಿಲ್ಲದ ಪರಿಮಳದ ಪೂಜೆ!
ಹೃದಯಕಮಳದಲ್ಲಿ `ಶಿವಶಿವಾ' ಎಂಬ ಶಬ್ದ-
ಇದು, ಅದ್ವೈತ ಕಾಣಾ ಗುಹೇಶ್ವರಾ. / 1142

 ಗಗನವೆ ಗುಂಡಿಗೆ, ಆಕಾಶವೆ ಅಗ್ಗವಣಿ, ಚಂದ್ರ ಸೂರ್ಯರಿಬ್ಬರು ಪುಷ್ಪ, ಬ್ರಹ್ಮ ಧೂಪ, ವಿಷ್ಣು ದೀಪ, ರುದ್ರ ನೋಗರ, ಸುಯಿಧಾನ ನೋಡಾ, ಗುಹೇಶ್ವರಲಿಂಗಕ್ಕೆ ಪೂಜೆ ನೋಡಾ.
ಈ ಬಗೆಯ ಪ್ರಾಣಲಿಂಗಾರ್ಚನೆಯಿಂದ ಶಿವಯೋಗ ಸಮಾಧಿಯ ಸುಖ ಲಭಿಸುತ್ತದೆ. “ಸ್ವಸ್ಥಾನ ಸುಸ್ಥಿರದ ಸುಮನ ಮಂಟಪದೊಳಗೆ ನಿತ್ಯನಿರಂಜನ ಪ್ರಭೆಯ ಬೆಳಗನ್ನು” ಸಾಧಕ ಪಡೆಯುತ್ತಾನೆ. ಅನುಭಾವ ಭಕ್ತಿಯಿಂದ ಶಿವಯೋಗದಲ್ಲಿ ಏಕಾರ್ಥವಾಗಿ ಅನುಪಮ ಸುಖಿಯಾಗುತ್ತಾನೆ.
- ✍️ Dr Prema Pangi
#ಪ್ರೇಮಾ_ಪಾಂಗಿ, #ಷಟ್ಸ್ಥಲ,
#ಪ್ರಾಣಲಿಂಗಿ_ ಸ್ಥಲ



Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma