ವಚನ ದಾಸೋಹ

ವಚನ:
#ಎಲ್ಲರ ಪರಿಯಲ್ಲ ಎನ್ನ ಊಳಿಗ.
ಬಸವಣ್ಣ ಚೆನ್ನಬಸವಣ್ಣ ಕೊಟ್ಟ ಕಾಯಕ
ಸತ್ಕ್ರೀಯೆಂಬ ಅರಸಿಯ ಅಪಮಾನಕ್ಕೆ,
ಲೌಕಿಕಕ್ಕೆ, ಬೊಕ್ಕಸದ ಭಂಡಾರಕ್ಕೆ.
ಈ ವರ್ತಕ ಶುದ್ಧವಾದ ಮತ್ತೆ
ಒಳಗಣ ಮುತ್ತು, ಬೆಳಗುವ ರತ್ನ, ಥಳಥಳಿಸುವ ವಜ್ರ.
ಈ ಕಾಯಕದ ಹೊಲಬ ಕೊಟ್ಟ ಮತ್ತೆ
ಕಳವಿನಿಸಿಲ್ಲದಿರಬೇಕು,
ಬಸವಣ್ಣಪ್ರಿಯ ನಾಗರೇಶ್ವರಲಿಂಗವನರಿಯಬಲ್ಲಡೆ.
 - ಶರಣ ಬೊಕ್ಕಸದ ಚಿಕ್ಕಣ್ಣ
ಆರ್ಥ:
ಶರಣ ಬೊಕ್ಕಸದ ಚಿಕ್ಕಣ್ಣ ಬೊಕ್ಕಸ ಕಾಯುವ ತನ್ನ ವೃತ್ತಿ ವಿವೇಚನೆ ಮಾಡುತ್ತಾನೆ. ವಚನಗಳಲ್ಲಿ ಬೊಕ್ಕಸವನ್ನೇ ಪ್ರತಿಮೆ ರೂಪಕಗಳಾಗಿ ಬಳಸಿ ವಿವೇಚಿಸುತ್ತಾನೆ. ಕಾಯಕದಿಂದ ಶಿವಜ್ಞಾನವನ್ನೂ, ಶಿವನನ್ನೂ ತಿಳಿಯಲು ಸಾಧ್ಯವೆನ್ನುವನು. ತನ್ನ ಕಾಯಕ  ದಂಡನಾಯಕರಾದ ಬಸವಣ್ಣ , ಚನ್ನಬಸವಣ್ಣ ಕೊಟ್ಟದ್ದು ಎಂದಿರುವನು. ಕಾಯಕ ಕೊಟ್ಟವರಿಗೆ ಕಳವಳ ಏನಿಸಬಾರದು. ಬಸವಣ್ಣವರು ಮತ್ತು ಚೆನ್ನಬಸವಣ್ಣವರು ತಮಗೆ ವಹಿಸಿಕೊಟ್ಟ ಕಾಯಕದ ಮಾರ್ಗವು ಸತ್ಕ್ರೀಯೆ. ಬೊಕ್ಕಸದಲ್ಲಿರುವ ಅಮೂಲ್ಯ ಮುತ್ತು ರತ್ನ ವಜ್ರ ಅಪಾರ ಧನ ಸಂಪತ್ತುಗಳ ನ್ನು ಕಾಯುವ ಕಾರ್ಯ ಮಾಡುವಾಗ ಶುಧ್ಧಮನ, ನಿಷ್ಠೆ ಅವಶ್ಯ.
ನಿಷ್ಠೆಯಿಂದ ಮಾಡುವ  ತನ್ನ ಕಾಯಕವು ಅನ್ಯರ ಕಾಯಕದಂತೆ ಅಲ್ಲ. ಅದು ಶ್ರೇಷ್ಠವಾದ ಸತ್ಕ್ರಿಯೆ. ಇಂತಹ ಕಾಯಕ ಮಾರ್ಗದ ಅರಿವನ್ನು ತಮ್ಮಲ್ಲಿ ತುಂಬಿದ ಬಸವಣ್ಣನವರನ್ನು ನೆನೆಯುತ್ತಾನೆ. ಬೊಕ್ಕಸದಲ್ಲಿರುವ ಮುತ್ತು ‌ರತ್ನ ವಜ್ರಗಳನ್ನು ಕಾಯುವಂತೆ ಮನದಲ್ಲಿಯ ಸದ್ಗುಣಗಳನ್ನು ಭದ್ರ ಪಡಿಸಬೇಕು. ಬೊಕ್ಕಸ ಭಂಡಾರದ ಕಾಯಕ ಲೌಕಿಕಕ್ಕೆ, ಅದನ್ನೇ ಸತ್ಕ್ರಿಯೆಯಾಗಿ ಮಾಡಿ ಪ್ರಸಾದಿ ಭಾವದಿಂದ ಒಳ ಹೊರಗೆ ಶುದ್ಧನಾಗಿ ಶರಣನಾಗಿ ಹೊಳೆಯುತ್ತಾನೆ. ಶ್ರೇಷ್ಠ ಶುದ್ಧವಾದ ಸತ್ಕ್ರಿಯೇ ಮಾಡುವ ಈ ವರ್ತಕನ ಒಳಗೆ ಬೆಳಗುವ ಮುತ್ತು, ರತ್ನ, ಥಳಥಳಿಸುವ ವಜ್ರ ದರ್ಶನ, ಅನುಭಾವದ ಬೆಳಗು. ' ಪರಶಿವ' ನ (ಬಸವಣ್ಣಪ್ರಿಯ ನಾಗರೇಶ್ವರಲಿಂಗ) ಅರಿಯಬಲ್ಲವನಾದೆ. ಕಾಯಕವನ್ನು ಶುದ್ಧಮನ ನಿಷ್ಠೆಯಿಂದ ಪ್ರಸಾದಿ ಭಾವದಿಂದ ಮಾಡಲಾಗಿ ತನಗೆ ಆತ್ಮ ಸಾಕ್ಷಾತ್ಕಾರದ ಬೆಳಕು ಸಾಧ್ಯವಾಯಿತು ಎಂದು ತಿಳಿಸುತ್ತಾನೆ. ಶರಣ ಧರ್ಮದ ಪ್ರಕಾರ ಭಾವಶುದ್ಧಿ, ಶುದ್ಧಕಾಯಕವಿಲ್ಲದೆ ಅನುಭಾವದ ಆತ್ಮ ಸಾಕ್ಷಾತ್ಕಾರ ಸಿಗದು.
ಭಾವ: 
ಬೊಕ್ಕಸದ ಚಿಕ್ಕಣ್ಣನ ಕಾಯಕ chief treasury officer ಹಾಗೆ. ಪ್ರತಿಸಲ ಬೊಕ್ಕಸದಲ್ಲಿರುವ ಅಮೂಲ್ಯ ಮುತ್ತು ರತ್ನ ವಜ್ರ ಅಪಾರ ಧನ ಸಂಪತ್ತುಗಳ ಲೆಕ್ಕ ಪರಿಶೀಲನೆಯಲ್ಲಿ (auditing) ಸರಿಯಾದ ಲೆಕ್ಕವೇ ಬರುತ್ತದೆ. ಅದೇ ರೀತಿ ಈಗ ಸಮಾಜದ ಆಸ್ತಿಗಳನ್ನು ರಕ್ಷಿಸುವ ಕಾರ್ಯ ವಹಿಸಿಕೊಂಡಿರುವ ಪೀಠಾಧಿಪತಿಗಳು, ಮಠಾಧಿಪತಿಗಳು, ಸಂಘ ಸಂಸ್ಥೆ ನಡೆಸುವವರು, ಹಣಕಾಸು ಸಂಸ್ಥೆ ನಡೆಸುವವರು ಮತ್ತು ರಾಜಕಾರಣಿಗಳು ಶುದ್ಧಮನ, ನಿಷ್ಟೆಯಿಂದ ಸದ್ಗುಣಗಳನ್ನು ಅಳವಡಿಸಿಕೊಂಡು ತಮ್ಮಲ್ಲಿ ವಿಶ್ವಾಸ ಇಟ್ಟಿರುವ ಸಮಾಜಕ್ಕೆ ದ್ರೋಹ ಬಗೆಯದಿದ್ದರೆ  ಮಾತ್ರ ಇವರ ಕಾಯಕ  ಸತ್ಕ್ರಿಯೆ ಯಾಗುವುದು .ಇಲ್ಲದಿದ್ದರೆ ಸಮಾಜಘಾತಕ ವಾಗುವುದು. ನಮ್ಮ ಶರಣರ ವಚನಗಳು  ಸದಾಕಾಲ ಅನ್ವಯ ಆಗುವ ಸತ್ಯಾಸತ್ಯತೆಗಳು.
*ಶರಣರ ಪರಿಚಯ* :
ಶರಣ ಬೊಕ್ಕಸದ ಚಿಕ್ಕಣ್ಣ (ಕಾಲ-1160)
ಅಂಕಿತ: ಬಸವಣ್ಣಪ್ರಿಯ ನಾಗರೇಶ್ವರಲಿಂಗ
ಕಾಯಕ: ಬೊಕ್ಕಸದ ಅಧಿಕಾರಿ.
ಈತ ಕಲ್ಯಾಣದಲ್ಲಿ ಬಿಜ್ಜಳನ ಬೊಕ್ಕಸದ ಅಧಿಕಾರಿಯಾಗಿದ್ದ. 'ಬಸವಣ್ಣಪ್ರಿಯ ನಾಗರೇಶ್ವರಲಿಂಗ' ಅಂಕಿತದಲ್ಲಿ ಬರೆದ ೧೦ ವಚನಗಳು ದೊರೆತಿವೆ. ಇಷ್ಟಲಿಂಗ, ಪ್ರಾಣಲಿಂಗಗಳ ಅಭೇದತ್ವ, ಕಾಯಕದ ಸತ್ಯ ಶುದ್ಧ ನಿಷ್ಠೆಯ  ಮಹತ್ವವನ್ನು ಕೆಲವು ವಚನಗಳಲ್ಲಿ ತಿಳಿಸುತ್ತ ಕಾಯಕದಲ್ಲಿಯೇ ಶಿವನನ್ನು, ಶಿವಜ್ಞಾನವನ್ನು ಕಾಣಬೇಕು ಎಂದು ಹೇಳುತ್ತಾನೆ. ಬೊಕ್ಕಸದ ಚಿಕ್ಕಣ್ಣ ತನ್ನ ವೃತ್ತಿಯನ್ನು  ವಚನಗಳಲ್ಲಿ ಬೊಕ್ಕಸವನ್ನೇ ಪ್ರತಿಮೆ ರೂಪಕಗಳಾಗಿ ಬಳಸಿ ವಿವೇಚಿಸುತ್ತಾರೆ. ತನ್ನ ಕಾಯಕ ಬಸವಣ್ಣ ,ಚನ್ನಬಸವಣ್ಣ ಕೊಟ್ಟದ್ದು ಎಂದಿರುವನು. ಬೊಕ್ಕಸ ಭಂಡಾರದ ಕಾಯಕ ಲೌಕಿಕಕ್ಕೆ, ಅದನ್ನು ಸತ್ ಕ್ರಿಯೆ ಮಾಡಲು  ಕೊಟ್ಟವರಿಗೆ ಕಳವಳ ಏನಿಸಬಾರದು. ಬಸವಣ್ಣ , ಚನ್ನಬಸವಣ್ಣನವರು ಇವರ ಮೇಲೆ ನಂಬಿಕೆ ಇಟ್ಟು ಬೊಕ್ಕಸದ ಉಸ್ತುವಾರಿ ಒಪ್ಪಿಸಿದ ಮೇಲೆ ಯಾವುದೇ ಕಾರಣಕ್ಕೆ ಅವರು ಕಳವಳಿಸಬಾರದು ಎನ್ನುತ್ತಾನೆ. ಮಹಾಮನೆಯ ಅಪಾರವಾದ ದಾಸೋಹ ನೋಡಿ ದಿಗ್ಭ್ರಮೆಯಾಗಿ ಅಸೂಯೆಯಿಂದ ಪಟ್ಟಭದ್ರರು ಹಲವು ಬಾರಿ ಬಿಜ್ಜಳನ ಎದುರು ಆಪಾದನೆ ಮಾಡಿದರೂ ಸರಿಯಾದ ಲೆಕ್ಕ ಪತ್ರ ತೋರಿಸಿ ಬಸವಣ್ಣ, ಚೆನ್ನಬಸವಣ್ಣನವರು ತನ್ನ ಮೇಲೆ ಇಟ್ಟ ನಂಬಿಕೆ ಸ್ವಾರ್ಥಕ ಮಾಡುತ್ತಾನೆ.
 -✍️Dr Prema Pangi
#ಪ್ರೇಮಾ_ಪಾಂಗಿ
.#ಬೊಕ್ಕಸದ_ಚಿಕ್ಕಣ್ಣ,
#ಎಲ್ಲರ_ಪರಿಯಲ್ಲ_ಎನ್ನ_ಊಳಿಗ.
Picture post created by me. Hope you all will like it. A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma