ವಚನ ದಾಸೋಹ
ವಚನ:
ಜಗದಗಲ ಮುಗಿಲಗಲ ಮಿಗೆಯಗಲ ನಿಮ್ಮಗಲ,
ಪಾತಾಳದಿಂದವೆ ಅತ್ತತ್ತ ನಿಮ್ಮ ಶ್ರೀಚರಣ,
ಬ್ರಹ್ಮಾಂಡದಿಂದವೆ ಅತ್ತತ್ತ ನಿಮ್ಮ ಶ್ರೀಮಕುಟ,
ಅಗಮ್ಯ ಅಗೋಚರ ಅಪ್ರತಿಮ ಲಿಂಗವೆ, ಕೂಡಲಸಂಗಮದೇವಯ್ಯಾ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ. / 652
- ವಿಶ್ವಗುರು ಬಸವಣ್ಣನವರು
ಅರ್ಥ:
#ಇದು ಇಷ್ಟಲಿಂಗ ಪೂಜೆಯಲ್ಲಿ ಇಷ್ಟಲಿಂಗ
ನಿರಿಕ್ಷಣೆ ಮಾಡುವಾಗ ಮನನಮಾಡುವ ವಚನ.
ವಿಶ್ವವ್ಯಾಪಿಯಾದ ವಿರಾಟ್‌ಶಕ್ತಿ ಚುಳುಕಾಗಿ ಕರಸ್ಥಲಕ್ಕೆ ಬಂದು ಇಷ್ಟಲಿಂಗದ ಸಾಕಾರ ಸ್ವರೂಪವನ್ನು ತಾಳಿದೆ. ಈ ವಚನ ಇಡೀ ಸೃಷ್ಟಿಯ ಸಮಗ್ರ ವಿರಾಟ ಸ್ವರೂಪವನ್ನು, ಮಾತಿಗೆ ಮೀರಿದ ಅನುಭಾವದಿಂದ ಅಪೂರ್ವ ದೈವಿಕ ಕಲಾಕೃತಿಯನ್ನಾಗಿಸಿದ್ದಾರೆ. ಮಾತು ಮನಗಳನ್ನು ಮೀರಿನಿಂತ ಆ ಶಿವಶಕ್ತಿಯ ಅಗಾಧತೆಯನ್ನು ಹೀಗೆ ಹೇಳಿದ್ದಾರೆ. ಅದು ಜಗದಗಲ ಅಂದರೆ ಈ ವಸ್ತು ಸಂಚಯದಿಂದ ಕೂಡಿದ ಈ ಜಗತ್ತಿನ ಉದ್ದಗಲಕ್ಕೂ ವ್ಯಾಪಿಸಿದೆ. ಅದು ಮುಗಿಲಗಲ ಅಂದರೆ ಜಗತ್ತಿನ ಆಚೆಗೂ ಇರುವ ವಿಶಾಲವಾದ ಆಕಾಶವನ್ನೂ ವ್ಯಾಪಿಸಿದೆ. ಇವೆರಡನ್ನೂ ಮೀರಿ ಮಿಗೆಯಗಲವಾಗಿ ಬೆಳೆದಿದೆ, ಅದಕ್ಕೆಅದೇ ಸಮ ಎನ್ನುವಂತಿದೆ ವ್ಯಾಪ್ತಿಯಲ್ಲಿ. ಆತನ ಶ್ರೀಚರಣಗಳು ಪಾತಾಳದಿಂದಲೂ ಕೆಳಗೆ, ಆತನ ಶ್ರೀಮುಕುಟ ಬ್ರಹ್ಮಾಂಡದಿಂದಲೂ ಆಚೆ, ಇಲ್ಲಿ ಪಾದಗಳು ಮತ್ತು ತಲೆ ಎನ್ನುವ ಸಾಕಾರ ಕಲ್ಪನೆಯ ಮಾತುಗಳು ಬಂದರೂ ಅದನ್ನು ಮೀರಿದ ಭೂಮ ಭವ್ಯತೆಯ ಅನುಭವ ಉಂಟಾಗುತ್ತದೆ. 'ಅತ್ತತ್ತ' ಎನ್ನುವ ಮಾತೇ ಅರ್ಥವತ್ತಾಗಿ ಉಪಯೋಗಿಸಿದ್ದಾರೆ. ಮುಂದೆ “ಅಪ್ರಮಾಣ, ಅಗಮ್ಯ, ಅಗೋಚರ, ಅಪ್ರತಿಮ ಲಿಂಗವೇ”-ಎನ್ನುವಲ್ಲಿ ಬರುವ ಅಪ್ರಮಾಣ ಅಂದರೆ ಪ್ರಮಾಣಕ್ಕೆ ಅಳತೆಗೆ ಸಿಕ್ಕದ, ಅಗಮ್ಯ ಅಂದರೆ ಬುದ್ದಿಗೆ ನಿಲುಕದ, ಅಗೋಚರ ಅಂದರೆ ಇಂದ್ರಿಯಗಳಿಗೆ ಕಾಣದ ಎಂದು ಅರ್ಥ. ಹೀಗೆ ಇಂದ್ರಿಯಕ್ಕೆ ಅಗೋಚರವಾದ, ಅಪ್ರತಿಮ, ಏಕಮೇವ, ಅದ್ವಿತೀಯವಾದ ಎನ್ನುವ ಈ ವಿಶೇಷಣಗಳು ಲಿಂಗದ ನಿಜರೂಪದ ಭೂಮತ್ವವನ್ನು ದರ್ಶನ ಮಾಡಿಸುತ್ತವೆ. ಇದು ಲಿಂಗಾನುಭೂತಿ. ಇಷ್ಟೆಲ್ಲಾ ಆದಮೇಲೆ ಬರುವ ಕೊನೆಯ ಮಾತು “ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯಾ' ಎಂಬುದು ಆ ಭೂಮ ಬ್ರಹ್ಮಾಂಡವನ್ನು ಕರಸ್ಥಲ ದಲ್ಲಿಯ ಇಷ್ಟಲಿಂಗ ದಲ್ಲಿ ಅಡಗಿಸಿಬಿಡುತ್ತದೆ. ಈ ವಚನದ ಮೊದಲ ಮೂರು ಸಾಲುಗಳು ಭಗವಂತನ ವಿರಾಟರೂಪವನ್ನೂ ನಾಲ್ಕನೆಯ ಸಾಲು ಅನುಭೂತಿಗಾಗಿ ಭಗವಂತನ ಸ್ವರೂಪವನ್ನೂ ಕೊನೆಯ ಸಾಲು ಉಪಾಸನೆಗಾಗಿ ಅಥವಾ ಸಾಧನೆಗಾಗಿ ಭಗವಂತನ ಸಾಧನಾಸ್ವರೂಪ ವಾದ ಇಷ್ಟಲಿಂಗವನ್ನು ನಿರ್ದೇಶಿಸುತ್ತವೆ. ಒಟ್ಟಿನಲ್ಲಿ ಈ ವಚನ ಪರಿಭಾವಿಸಿದಷ್ಟೂ ಆಧ್ಯಾತ್ಮದ ಪರಿಮಳವನ್ನು ಪಸರಿಸುವ ಅನುಭವವನ್ನು ಅನುರಣನಗೊಳಿಸುವ ಅಪೂರ್ವ ಕಲಾಕೃತಿಯಾಗಿದೆ. ಹೀಗೆ ಈ ವಚನ ಕರಸ್ಥಲ ದಲ್ಲಿರುವ ಇಷ್ಟಲಿಂಗ ಅಗಮ್ಯ ಅಗೋಚರ ಅಪ್ರತಿಮ ಮಹಾಲಿಂಗದ ಕುರುಹು ಎಂದು ಭಾವಿಸಿ ಪೂಜೆ ಶಿವಯೋಗ ಮಾಡಬೇಕು ಎಂದು ಸೂಚಿಸುತ್ತದೆ ಮತ್ತು ಮಾತಿಗೆ ಮೀರಿದ ಅನುಭಾವದ ಅಸದೃಶ ಅಭಿವ್ಯಕ್ತಿಯಾಗಿದೆ.
ಲಿಂಗವೆಂದರೆ ಸರ್ವಕಾರಣ ನಿರ್ಮಲ ಸಚ್ಚಿದಾನಂದ ನಿತ್ಯ ಪರಿಪೂರ್ಣ, ಸರ್ವಲೋಕೋತ್ಪತಿಗೆ ಕಾರಣ, ಸರ್ವತತ್ವಪೂರಣ ನಿಜಚೈತನ್ಯ. ಜನ್ಮ ವಾರಿಧಿಯ ದಾಂಟಿಸುವ ಭೈತ್ರ. ಶರಣರ ಹೃದಯದಲ್ಲಿ ಬೆಳಗುವ ಜ್ಯೋತಿರ್ಮಯ ಲಿಂಗ. ಅದು ವಿಭುವಾಗಿ ಜಗತ್ತನ್ನು ವ್ಯಾಪಿಸಿದೆ. ಅಂತೆಯೇ ಶರಣರ ಹೃದಯದಲ್ಲಿ ಜ್ಯೋತಿರ್ಮಯವಾಗಿ ಬೆಳಗುತ್ತಿದೆ. ಪರಮಜ್ಯೋತಿಯೇ ಇಷ್ಟಲಿಂಗದ ರೂಪನ್ನು ಧರಿಸಿ ಕರಸ್ಥಲಕ್ಕೆ ಬಂದಿದೆ. ಅಖಂಡ ಬ್ರಹ್ಮಾಂಡದ ಶಕ್ತಿ ಸರ್ವಸ್ವವೂ ತಮ್ಮ ಕರಸ್ಥಲದಲ್ಲಿ ಅಡಗಿರುವುದನ್ನು ಪರಿಭಾವಿಸಿ ಪರವಶರಾದ ಬಸವಣ್ಣನವರು ಹಾಡಿದ್ದಾರೆ.
ಈ ತೋರುವ ಸಚರಾಚರ ಸೃಷ್ಟಿಯಲ್ಲವೂ ಯಾವುದರಿಂದ ಹೊರಹೊಮ್ಮಿ, ಎಲ್ಲಿ ಲೀಲೆಯಾಡಿ ಕೊನೆಗೆ ಯಾವುದರಲ್ಲಿ ಲಯವಾಗುವುದೋ ಅದು ಲಿಂಗ ವೆಂದು ಮಗ್ಗೆಯ ಮಾಯಿದೇವರು ಲಿಂಗಕ್ಕೆ ನಿರ್ವಚನ ನೀಡಿದ್ದಾರೆ. ತೋರುವ ತೋರಿಕೆಯಲ್ಲದಕ್ಕೂ ಆಧಾರಭೂತವಾಗಿ, ಅದರ ಸೃಷ್ಟಿ ಸ್ಥಿತಿ ಲಯಗಳಿಗೆ ಕಾರಣ ಕರ್ತೃವಾಗಿ ಇರುವ ಅವ್ಯಕ್ತವಾದ ಚೈತನ್ಯವೇ "ಲಿಂಗ"ವೆಂದು ಹೇಳಬಹುದು.
ಬಸವಣ್ಣ ನವರು "ಲಿಂಗ" ಎಂಬ ಪದದ ತಾತ್ವಿಕ ಅರ್ಥವನ್ನು ಸ್ಪಷ್ಟವಾಗಿ ಹೇಳಿದ್ದಾರೆ.
#ಅಮೂಲ್ಯನು ಅಪ್ರಮಾಣನು ಅಗೋಚರ ಲಿಂಗ; ಆದಿ ಮಧ್ಯಾವಸಾನಗಳಿಲ್ಲದ ಸ್ವತಂತ್ರ ಲಿಂಗ; ನಿತ್ಯ ನಿರ್ಮಳ ಲಿಂಗ; ಅಯೋನಿ ಸಂಭವನಯ್ಯಾ, ನಮ್ಮ ಕೂಡಲ ಸಂಗಮದೇವರು...
ಪರಮಾತ್ಮನು ಅಮೂಲ್ಯನು; ಬೆಲೆ ಕೆಟ್ಟ ಲಾರದವನು; ಯಾವುದೇ ಲೌಕಿಕ ಪ್ರಮಾಣಗಳಿಂದ ಸಾಧಿಸಿ ತೋರಿಸದ ಅಪ್ರಮಾಣನು; ಪಂಚೇಂದ್ರಿಯಗಳ ಅನುಭವಕ್ಕೆ ನಿಲುಕದ ಆಗೋಚರನು, ಹುಟ್ಟು ಅವಸಾನ ಇಲ್ಲದ, ಪರವಲಂಬಿಯಲ್ಲದ ಸ್ವತಂತ್ರನು, ನಾಶವಿಲ್ಲದ ನಿತ್ಯನು; ಕಾಮ ಕ್ರೋಧಾದಿಗಳೇನು ಇಲ್ಲದ ನಿರ್ಮಲನು, ಅವನು ತಾಯಿತಂದೆಗಳಲ್ಲಿ ಹುಟ್ಟಿದವನಲ್ಲ, ಅಸಂಭವ ಅಜಾತ ಹೀಗೆ "ಲಿಂಗ" ಪದವು ಪರಶಿವನೆಂಬ ಪರಾತ್ಪರ ಪರಬ್ರಹ್ಮವನ್ನು ನಿರ್ದೇಶಿಸುವುದು.
- ✍️Dr Prema Pangi
#ಪ್ರೇಮಾ_ಪಾಂಗಿ, #ಗುರು_ಬಸವಣ್ಣನವರು
#ಜಗದಗಲ_ಮುಗಿಲಗಲ_ಮಿಗೆಯಗಲ
Comments
Post a Comment