ಷಟ್ಸ್ಥಲ - ಭಕ್ತ ಸ್ಥಲ

ಷಟ್ಸ್ಥಲ  -  ಭಕ್ತ ಸ್ಥಲ
ಷಟ್ಸ್ಥಲ - ಭಕ್ತ ಸ್ಥಲ
ಭಕ್ತ ಸ್ಥಲ :
ಷಟ್ಸ್ಥಲದಲ್ಲಿ ಮೊದಲನೆಯದು ಭಕ್ತಸ್ಥಲ, ಎಲ್ಲಾ ಸಾಧನೆಯ ಮೂಲ ಭಕ್ತಿ ಎಂಬುದನ್ನು ಜಗತ್ತಿನ ಎಲ್ಲ ಧರ್ಮಗಳೂ ಸಾರಿ ಹೇಳುತ್ತವೆ. ಆದರೆ ಇಲ್ಲಿ ಬರುವ ಭಕ್ತಿ ಸ್ವರೂಪವೇ ಬೇರೆ, ಭಕ್ತನ ನಿಲವೇ ಬೇರೆ. ಷಟ್ಸ್ಥಲಗಳು ಬೆಳೆದಂತೆ ಭಕ್ತಿ ಇಲ್ಲಿ ಬೆಳೆಯುತ್ತದೆ. ಭಕ್ತಿ ಇಲ್ಲಿ ಚಲನಶೀಲ ಆಂತರಿಕ ವಿಕಾಸಶಕ್ತಿಯಾಗುತ್ತದೆ. ಭಕ್ತಸ್ಥಲದಲ್ಲಿ ಅದನ್ನು ' ಶ್ರದ್ಧಾ ಭಕ್ತಿ' ಎಂದು ಕರೆಯಲಾಗಿದೆ. 
*ಶ್ರದ್ಧಾಭಕ್ತಿ* :
ಇಲ್ಲಿ ಶ್ರದ್ದೆ ಎಂದರೆ ವಿಚಾರವಿಲ್ಲದೆ ಎಲ್ಲವನ್ನೂ ನಂಬುವ ಕುರುಡು ನಂಬಿಕೆಯಲ್ಲ. ನಾನು ಏನು ಆಗಬೇಕೆಂದು ಉದ್ದೇಶಿಸಿದ್ದೇನೆಯೋ ಮೂಲತಃ ಅದರ ಸ್ವರೂಪವೇ ನಾನು. ಆ ಸ್ವರೂಪವೇ ಇಷ್ಟಲಿಂಗ ರೂಪದಿಂದ ಕರಸ್ಥಲಕ್ಕೆ ಬಂದಿದೆ, ಅದರ ಅನುಸಂಧಾನದಿಂದ ಆಂತರಿಕ ಪರಿವರ್ತನೆಯಾಗಿ ಆ ಸಹಜ ಸ್ಥಿತಿಯನ್ನು ಪಡೆಯಬೇಕು ಎಂಬ ಸುಜ್ಞಾನವೆಂಬ ಅರಿವಿನ ಎಚ್ಚರವೇ  ಇಲ್ಲಿ ಶ್ರದ್ಧೆ ಯಾಗುತ್ತದೆ. ಅದರಲ್ಲಿ ನಂಬಿಕೆಯನ್ನು ಗಟ್ಟಿಗೊಳಿಸಿಕೊಳ್ಳುತ್ತಾ ಸಾಧನೆಯಲ್ಲಿ ತೊಡಗುವುದೇ ಭಕ್ತಸ್ಥಲದ ಸಹಜ ಸ್ವರೂಪ. ಸಾಧಕನ ನೆರವಿಗೆ ಅಷ್ಟಾವರಣಗಳು ಪಂಚಾಚಾರಗಳು ಊರುಗೋಲಾಗಿ ನಿಲ್ಲುತ್ತವೆ. 
ಇದರಲ್ಲಿ ಹೆಸರಿಸಿರುವ ಪಿಂಡ ಸ್ಥಲ, ಪಿಂಡಜ್ಞಾನ ಸ್ಥಲ, ಸಂಸಾರಹೇಯ ಸ್ಥಲ, ತಾಮಸ ನಿರಸನ ಸ್ಥಲ ಈ ಮೊದಲಾದ ಸ್ಥಲಗಳು ಅರ್ಥವತ್ತಾಗಿ ಆತನ ಆಂತರಿಕ ಜಾಗೃತಿ ಯನ್ನು ಸೂಚಿಸುತ್ತವೆ. ಅಹಂಕಾರವನ್ನು ತ್ಯಜಿಸಿ ಸಂಪೂರ್ಣ ಶರಣಾಗುವುದು, ಶ್ರದ್ಧಾ ಭಕ್ತಿಯನ್ನು ಅವಲಂಬಿಸಿ ಆಚಾರಲಿಂಗ ಉಪಾಸನೆ, ಇದಕ್ಕೆ ಸಹಾಯಕವಾಗುವಂತೆ ಬಹಿರಂಗದ ಕ್ರಿಯಾಶೀಲ ಜೀವನವನ್ನು ಅಳವಡಿಸಿಕೊಳ್ಳುವುದು ಇವು ಈ ಸ್ಥಲದ  ಮೊದಲ ಹಂತ. ಗುರು, ಲಿಂಗ, ಜಂಗಮ, ತ್ರಿವಿಧ ದಾಸೋಹಗಳು, ಬಹಿರಂಗದ ಕ್ರಿಯಾಶೀಲ ಜೀವನ ಇವು ಭಕ್ತನ ಲಕ್ಷಣಗಳು.

ಸಹಜವಾಗಿ ಭಕ್ತಿ ಭಂಡಾರಿ ಎನಿಸಿಕೊಂಡವರು ಗುರು ಬಸವಣ್ಣನವರು. ಶಿವಭಕ್ತನ "ಕಾಯವೇ ಕೈಲಾಸ ; ಬೇರೆ ಕೈಲಾಸದ ಕಲ್ಪನೆ ಬೇಡ ಎಂದು ಹೇಳಿದವರು.

#ದೇವಲೋಕ ಮರ್ತ್ಯಲೋಕವೆಂಬುದು ಬೇರೆ ಮತ್ತುಂಟೆ ? 
ಇಹಲೋಕದೊಳಗೇ ಮತ್ತನಂತಲೋಕ! 
ಶಿವಲೋಕ ಶಿವಾಚಾರವಯ್ಯ,
ಶಿವಭಕ್ತನಿದ್ದ ಠಾವೇ ದೇವಲೋಕ, 
ಭಕ್ತನಂಗಳವೇ ವಾರಣಾಸಿ,
ಶಿವಭಕ್ತನ ಕಾಯವೇ ಕೈಲಾಸ, 
ಇದು ಸತ್ಯ ಕೂಡಲಸಂಗಮದೇವ 
ಎಂದರು ಗುರು ಬಸವಣ್ಣನವರು.

 ಭಕ್ತರ ಸನ್ನಿಧಿಯಿಂದ ಇಡೀ ಪರಿಸರವೇ ಬದಲಾಗಿ ಪವಿತ್ರ ವಾತಾವರಣ ಏರ್ಪಡು  ವಾಗುತ್ತದೆ.  ದೇವಲೋಕ ಮತ್ರ್ಯಲೋಕ ಇವು ನಮ್ಮ ಕಲ್ಪನೆಗಳು ಮಾತ್ರ. ಈ ಲೋಕದಲ್ಲಿಯೆ ಇರುವ ಅನಂತ ಲೋಕಗಳು ಅಂದರೆ ಇಲ್ಲಿಯ ಲೋಕಜೀವನದ ಹಲವಾರು ಸ್ತರಗಳು ; ಈ ಎಲ್ಲಾ ಸ್ತರಗಳು ಶಿವಾಚಾರದ ಪ್ರಭಾವದಿಂದ ಶಿವಲೋಕವಾಗುತ್ತವೆ. ಶಿವಾಚಾರಸಂಪನ್ನನಾದ ಭಕ್ತನಿರುವ ಸ್ಥಳವೇ ದೇವಲೋಕ. ಕಾಶಿ ಮೊದಲಾದ ಪವಿತ್ರ ಕ್ಷೇತ್ರಗಳನ್ನೆಲ್ಲಾ ಅಂತಹ ಶಿವಭಕ್ತರ ಮನೆಯ ಅಂಗಳದಲ್ಲಿಯೇ ಕಾಣಬಹುದು. ತೀರ್ಥ ಕ್ಷೇತ್ರಗಳಿಗೆ ಹೋಗುವ ಅವಶ್ಯಕತೆ ಇಲ್ಲ. ಶಿವಭಕ್ತನ "ಕಾಯವೇ ಕೈಲಾಸ" ವಾಗುತ್ತದೆ. ಬೇರೆ ಕೈಲಾಸದ ಕಲ್ಪನೆ ಬೇಡ.  ಭಕ್ತನ ಮೂಲಭೂತ ತಳಹದಿ ಅಂದರೆ ಶ್ರದ್ಧೆ. ಶ್ರದ್ಧಾ ಭಕ್ತಿ. ಆ ಶ್ರದ್ಧೆಯ ಮಹತ್ವ ತಿಳಿದಿರುವನೇ *ಭಕ್ತ ಜ್ಞಾನಿ*.

#ಕೋಟಾನುಕೋಟಿ ಜಪವ ಮಾಡಿ ಕೋಟಲೆಗೊಳಲದೇಕೆ ಮನವೇ? ಕಿಂಚಿತ್ತು ಗೀತ, ಒಂದನಂತಕೋಟಿ ಜಪ. ಜಪವೆಂಬುದೇಕೆ ಮನವೇ? ಕೂಡಲಸಂಗನ ಶರಣರ ಕಂಡು ಆಡಿ ಹಾಡಿ ಬದುಕು ಮನವೇ? 

 ಕೋಟ್ಯಾನುಕೋಟಿ ಜಪಗಳನ್ನು ಮಾಡುತ್ತ ಶ್ರಮಪಡಬೇಡ. ಭಕ್ತಿಪೂರ್ವಕವಾಗಿ ನುಡಿದ ಒಂದೇ ಒಂದು ಹಾಡು ಅನಂತಕೋಟಿ ಜಪಗಳಿಗೆ ಸಮಾನವು.  ಶರಣರನ್ನು ಕಂಡು, ಆಡಿ ಹಾಡಿ ಬದುಕು. ಶರಣರ ಒಡನಾಟ ಕೋಟಿ ಜಪಗಳಿಗೆ ಸಮಾನ ಎಂದು ಗುರು ಬಸವಣ್ಣನವರು ತಮ್ಮ ಮನಸ್ಸಿಗೆ ಹೇಳಿಕೊಳ್ಳುತ್ತಾರೆ. ಭಕ್ತನಿಗೆ ಭಕ್ತಿಮಾರ್ಗದಲ್ಲಿ ಶರಣರ ಸಂಗ ಲೇಸು ಎಂದು ಭೃತ್ಯಾಚಾರದ ಅವಶ್ಯಕತೆ ತಿಳಿಸುತ್ತಾರೆ.

#ಆಡಿದಡೇನು, ಹಾಡಿದಡೇನು, ಓದಿದಡೇನು, ತ್ರಿವಿಧ ದಾಸೋಹವಿಲ್ಲದನ್ನಕ್ಕ?
ಆಡದೆ ನವಿಲು ? ಹಾಡದೆ ತಂತಿ ? ಓದದೆ ಗಿಳಿ ?
ಭಕ್ತಿಯಿಲ್ಲದವರನೊಲ್ಲ ಕೂಡಲಸಂಗಮದೇವ.
ಎನ್ನುತ್ತಾರೆ ಗುರು ಬಸವಣ್ಣನವರು.

ತ್ರಿವಿಧ ದಾಸೋಹವಿಲ್ಲದೆ ಭಕ್ತಿಯ ಹೆಸರಿನಲ್ಲಿ ಏನು ಮಾಡಿದರೇನು? ನಾಟ್ಯವಾಡಿದರೇನು ? ಸಂಗೀತ ಹಾಡಿದರೇನು ? ಶಾಸ್ತ್ರ ಗ್ರಂಥಗಳನ್ನು ಓದಿದರೇನು ? ನವಿಲೂ ಕುಣಿಯುತ್ತದೆ; ವೀಣೆಯ ತಂತಿಯೂ ನಾದವನ್ನು ನುಡಿಯುತ್ತದೆ ; ಗಿಳಿಯೂ ಯಾಂತ್ರಿಕವಾಗಿ ಓದು ಕಲಿತು ಪುನರುಚ್ಚರಿಸುತ್ತದೆ. ಹಾಗೆ ಭಕ್ತಿಯಿಲ್ಲದವ ಸಾಧನೆ ವ್ಯರ್ಥ. 
ತನುವಿನಲ್ಲಿ ಸೇವೆ, ಮನದಲ್ಲಿ ನೆನಹು, ಧನ ದಲ್ಲಿ ತ್ಯಾಗ-ಅವು ಭಕ್ತಿಯ ಅಂಗಗಳು. ಇವುಗಳನ್ನು ಅಳವಡಿಸಿಕೊಳ್ಳುವುದೇ ತ್ರಿವಿಧ ದಾಸೋಹದ ರಹಸ್ಯ ಎಂಬುದು ಗುರು ಬಸವಣ್ಣನವರ ಉಪದೇಶ.

#ನಾದಪ್ರಿಯ ಶಿವನೆಂಬರು, ನಾದಪ್ರಿಯ ಶಿವನಲ್ಲಯ್ಯಾ.
ವೇದಪ್ರಿಯ ಶಿವನೆಂಬರು, ವೇದಪ್ರಿಯ ಶಿವನಲ್ಲಯ್ಯಾ.
ನಾದವ ನುಡಿಸಿದ ರಾವಳಂಗೆ ಅರೆ ಆಯುಷ್ಯವಾುತ್ತು.
ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು.
ನಾದಪ್ರಿಯನೂ ಅಲ್ಲ, ವೇದಪ್ರಿಯನೂ ಅಲ್ಲ,
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ. 

ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವನು ಎನ್ನುತ್ತಾರೆ ಗುರು ಬಸವಣ್ಣನವರು. ಭಕ್ತಿಯೆ ಸಾಧನೆಯ ಮೊದಲ ಮೆಟ್ಟಿಲು. ಭಕ್ತಿಯೇ ಮೊದಲ ಸ್ಥಲ. ಮುಂದಿನ ಎಲ್ಲ ಸ್ಥಲಗಳಿಗೂ ಭಕ್ತಿ ಬೇಕೇ ಬೇಕು.

#ಅಂಕವೋಡಿದಡೆ ತೆಗಂಗೆ ಭಂಗವಯ್ಯ, ಕಾದಿ ಗೆಲಿಸಯ್ಯ ಎನ್ನನು. ಕಾದಿ ಗೆಲಿಸಯ್ಯ ಕೂಡಲಸಂಗಮದೇವ ಎನ್ನ ತನು ಮನ ಧನದಲ್ಲಿ ವಂಚನೆಯಿಲ್ಲದೆ.

ಯುದ್ಧರಂಗದಲ್ಲಿ ಯೋಧ ಹೇಡಿಯಾಗಿ ಓಡಿ ಹೋದರೆ ಅದು ಆ ಯೋಧರ ಒಡೆಯನಿಗೆ ಭಂಗ, ಹಾಗೆ ನಾನು ಈ ಜೀವನ ರಂಗದಲ್ಲಿ ಸೋತು ಹಿಮ್ಮೆಟ್ಟಿದರೆ ಇದು ನನ್ನ ಒಡೆಯನಾದ ನಿಮಗೆ ಆಗುವ ಅವಮಾನ. ಆದುದರಿಂದ ನಾನು ಅಂಜಿ ಓಡಿ ಹೋಗದೇ ಕಾದಿ ಗೆಲ್ಲುವ ಹಾಗೆ ಮಾಡುವುದು ನಿನ್ನ ಹೊಣೆ, ತನು ಮನ ಧನದಲ್ಲಿ ವಂಚನೆಯಿಲ್ಲದೆ ಸಾಧನೆಯನ್ನು ಮಾಡಿ ನಾನು ಗೆಲ್ಲುವ ಹಾಗೆ ಮಾಡು. ನನ್ನ ಗೆಲುವು ನಿನ್ನ ಗೆಲುವೂ ಆಗುತ್ತದೆ ಎಂದು ಇಷ್ಟದೈವ ಕೂಡಲಸಂಗಮದೇವ ನಲ್ಲಿ ಮಾಡುವ ಭಕ್ತಿ ಕೋರಿಕೆಯ ಹಿಂದೆ ಸರ್ವಾರ್ಪಣೆ ಭಾವವೂ ಸಂಗತವಾಗಿರುವುದನ್ನು ಕಾಣಬಹುದು.

ಸತ್ಯ ಶೋಧಕನಾದ ಸಾಧಕನು ತನ್ನ ಹೃದಯದಲ್ಲಿ 'ಪ್ರೇಮದ ಜ್ಯೋತಿ'ಯಿಂದ
 ಕ್ರೋಧ ದ್ವೇಷ ಮೋಹ ಲೋಭ ಮದ ಮತ್ಸರ ಮನದಿಂದ ದೂರ ತಳ್ಳಿದರೆ ಸಾಧಕನ ಹೃದಯದಲ್ಲಿ ರಾಗ-ದ್ವೇಷರಹಿತವಾದ ನಿರ್ಮಲ ಭಕ್ತಿ ಉದಯಿಸುತ್ತದೆ.  ಯಾವ ಸಾಧಕನ ಹೃದಯದಲ್ಲಿ ಪ್ರೇಮಜ್ಯೋತಿ ಬೆಳಗುತ್ತಿದೆಯೋ ಆತನ ಜೀವನ ಪರಮಪಾವನ. ಅವನ ಕಾರ್ಯ ಸತ್ಯ-ಶುದ್ಧ. ಅವನು ಫಲದಾತಾರಹಿತನು. ನಿಷ್ಕಾಮ ಕರ್ಮಿ. ದೊರೆತಿದ್ದನ್ನು ಪ್ರಸಾದವೆಂದು ತಿಳಿದ ತೃಪ್ತನು. ತನ್ನ ದುಡಿಮಯ ಫಲವನ್ನು ತಾನೊಬ್ಬನೇ ಸೇವಿಸುವುದಿಲ್ಲ. ಅದನ್ನು ಶರಣರೊಂದಿಗೆ ಹಂಚಿಕೊಂಡು ಸಂತಸದಿಂದಿರುವನು. ಹೀಗೆ ಯಾವ ಹೃದಯದಲ್ಲಿ ಪರಮ ಪ್ರೇಮವಿದೆಯೋ, ಕೈಯಲ್ಲಿ ಸತ್ಯ ಶುದ್ಧ ಕಾಯಕವಿದೆಯೋ, ಯಾರಿಂದ  ದಾಸೋಹ ನಡೆಯುತ್ತದೆಯೋ ಆತನೇ ಭಕ್ತನು!.  ನಾವು ದೇವರಿಗೆ ಸಮರ್ಪಿಸಬೇಕಾದದ್ದು ಭಾವಪೂರ್ಣ ಭಕ್ತಿಯನ್ನೇ ಹೊರತು ಹೊರಗಣ ಲೌಕಿಕ ವಸ್ತುಗಳನ್ನಲ್ಲ. ಶರಣ ಜೇಡರ ದಾಸಿಮಯ್ಯ ರ ಪ್ರಕಾರ “ಅನುಭಾವವಿಲ್ಲದ ಭಕ್ತಿ ತಲೆಕೆಳಗಾದುದಯ್ಯಾ. ಅನುಭಾವ ಭಕ್ತಿಗಾಧಾರ; ಅನುಭಾವ ಭಕ್ತಿಗೆ ನೆಲೆವನೆ".  ಯಾಂತ್ರಿಕವಾದ ಭಕ್ತಿ ಪೂಜೆ ನಿರುಪಯುಕ್ತ. ಅನುಭಾವ ಭಕ್ತಿ ಶ್ರೇಷ್ಟ ವಾದುದು.
ಅದೇ ರೀತಿ ಸತ್ಯ ಶುದ್ದ ಕಾಯಕ ಭಕ್ತನ ಲಕ್ಷಣ. ಬೇಡುವುದು ಭಕ್ತನ ರೀತಿಯಲ್ಲ, ಭಕ್ತನು ಬೇಡಬಾರದು, ನೀಡುವಿಕೆಯೇ ಪ್ರತಿಯೊಬ್ಬ ಭಕ್ತನ ಗುಣವಾಗಬೇಕು. ಆಗ ಮಾತ್ರ ಸಮಾಜ ಸಮೃದ್ಧವಾಗುವುದು. ನೀಡಬೇಕಾದರೆ ಮೊದಲು ದುಡಿಯಬೇಕು. ಹೀಗೆ ಸಂಪಾದನೆ ಮತ್ತು ವಿತರಣೆ ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು. ಶರಣ ನಗೆಯ ಮಾರಿತಂದೆ ಹೇಳುತ್ತಾರೆ, “ಭಕ್ತನಾಗಿ ಹುಟ್ಟಿ ಮತ್ತೊಬ್ಬರಲ್ಲಿ ಬೇಡುವುದೆ ಕಷ್ಟ. 
ಗುರು ಬಸವಣ್ಣ ನವರು ಭಕ್ತಸ್ಥಲದಲ್ಲಿಯೇ ಬಯಲಾದವರು. ಈ ಸಾಧನೆ ಅವರ ಭಕ್ತಿಯ ಪರಾಕಾಷ್ಟತೆ ತೋರಿಸುತ್ತದೆ. ಸಾಧಕನ ಆಂತರಿಕ ನಿಷ್ಠೆ, ಸರ್ವಾರ್ಪಣೆ, ಪ್ರಸಾದಿಕತೆ ಮೊದಲಾದವು ಬೆಳೆಯುತ್ತಾ ಮಹೇಶ ಸ್ಥಲದ ಏಕದೇವ ನಿಷ್ಠೆ, ಪ್ರಸಾದಿ ಸ್ಥಲದ ಸಮರ್ಪಣೆಯತ್ತ ಭಕ್ತಸಾಧಕ ಸಾಗುತ್ತಾನೆ.
- ✍️ Dr Prema Pangi
#ಪ್ರೇಮಾ_ಪಾಂಗಿ, #ಷಟ್ಸ್ಥಲ,#ಭಕ್ತ_ಸ್ಥಲ

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma