ವಚನ ದಾಸೋಹ

#ವಚನ :
#ಬಯಲು ಬಯಲನೆ ಬಿತ್ತಿ ಬಯಲು ಬಯಲನೆ ಬೆಳೆದು 
ಬಯಲು ಬಯಲಾಗಿ ಬಯಲಾಯಿತ್ತಯ್ಯಾ. 
ಬಯಲ ಜೀವನ ಬಯಲ ಭಾವನೆ
ಬಯಲು ಬಯಲಾಗಿ ಬಯಲಾಯಿತ್ತಯ್ಯಾ. 
ನಿಮ್ಮ ಪೂಜಿಸಿದವರು ಮುನ್ನವೆ ಬಯಲಾದರು 
ನಾ ನಿಮ್ಮ ನಂಬಿ ಬಯಲಾದೆ ಗುಹೇಶ್ವರಾ./1164
- ಅಲ್ಲಮ ಪ್ರಭುದೇವರು
ಅರ್ಥ:
ಶರಣರ ಆಧ್ಯಾತ್ಮಿಕ ಚಿಂತನೆ, ಅನುಭಾವದಲ್ಲಿ   ಪರಶಿವನು ಭೇದಜ್ಞಾನವಿಲ್ಲದ ಶುದ್ಧ ಚೇತನ. ಜಾತಿ ಲಿಂಗ ವರ್ಗ ಭೇದವಿಲ್ಲದ ಚೈತನ್ಯ, ಆ ಚೈತನ್ಯದ ಸ್ವರೂಪವೇ ಪರಶಿವನು.(Cosmic Consciousness) ಅವನು ನಿರವಯವ ಶೂನ್ಯಲಿಂಗ. ಅವನು ನಿರಾಮಯ ನಿರಾಕಾರ ನಿರ್ಗುಣ ನಿರಾಲಂಬ ಬಯಲು.
 
ಅಲ್ಲಮ ಪ್ರಭುಗಳು ಲಿಂಗಯೋಗದ ಅನುಭಾವವನ್ನು ತಮ್ಮದೇ ಬೆಡಗಿನ ಶೈಲಿಯಲ್ಲಿ ಚಿತ್ರಿಸಿದ್ದಾರೆ.
ಅಲ್ಲಮಪ್ರಭುವಿನ ವಚನ, 'ಬಯಲು' ಮಾತಿನ ತಾತ್ವಿಕ ಕಲ್ಪನೆ ವಿಶಾಲ ವ್ಯಾಪಕತೆಯನ್ನು ವ್ಯಕ್ತಪಡಿಸುತ್ತದೆ. ಬಯಲನ್ನು ಬಿತ್ತಿ ಬಯಲನ್ನು ಬೆಳೆದದ್ದು ಈ ಸೃಷ್ಟಿ, ಇದು ಒಂದರ್ಥದಲ್ಲಿ ಬಯಲೇ. ಕೊನೆಯಲ್ಲಿ ಇದು ಬಯಲಿನಲ್ಲಿ ಬಯಲಾಗುತ್ತದೆ. ಅಷ್ಟೇ ಅಲ್ಲ ಬಯಲೂ ಅತಿ ಬಯಲಾಗುತ್ತದೆ ಎಂಬ ಮಾತು ದ್ವಂದ್ವಾತೀತವಾದ ಸರ್ವಶೂನ್ಯ ನಿರಾಲಂಬ ಸ್ಥಿತಿಯನ್ನು ಸೂಚಿಸುತ್ತದೆ. ಶರಣರು ಎಲ್ಲ ತತ್ವಗಳನ್ನು ಒಳಗೊಂಡ ಪರಿಪೂರ್ಣತೆಯನ್ನು "ಶೂನ್ಯ"ವೆಂದು ನಿರ್ದೇಶಿಸಿದ್ದಾರೆ. ಈ ತೋರಿಕೆಯ ಸೃಷ್ಟಿಯ ಎಲ್ಲವೂ ಪೂರ್ಣ ಸ್ವರೂಪದ ಆ ಶೂನ್ಯಲಿಂಗದಿಂದಲೆ ಹೊರಹೊಮ್ಮಿದುದು.  ಮತ್ತು ಅಲ್ಲಿಯೇ ಅಡಗಿ ಬಯಲಾಗುವಂತಹುದು. ವಚನದಲ್ಲಿ  ಶೃಷ್ಟಿಯ ರಚನೆ ಸ್ಥಿತಿ ಲಯ ಗಳ ವಿವೇಚನೆ ಮಾಡಿದ್ದಾರೆ. ಬಯಲು ಸ್ಥಿತಿಯಲ್ಲಿಯ ನಿರಾಕಾರಸ್ವರೂಪನಾದ ಪರವಸ್ತು ಸೃಷ್ಟಿಮುಖವಾಗಿ, ಈ ಜಗತ್ತಿನ ನಿರ್ಮಾಣದಲ್ಲಿ ತೊಡಗುತ್ತದೆ. ಆಗ ಬಹುಮುಖವಾದ ಈ ಸೃಷ್ಟಿ ಹಲವಾರು ಹಂತಗಳಲ್ಲಿ ರೂಪುಗೊಳ್ಳುತ್ತದೆ. ಅದಕ್ಕೆ  ಮೊಟ್ಟಮೊದಲನೆಯದೇ ಹಂತವೇ ಶೂನ್ಯಲಿಂಗ ಸ್ಥಿತಿ.
ಶೂನ್ಯಲಿಂಗ
"ಶೂನ್ಯ"ದ ಕಲ್ಪನೆ, ದಶಮಾನ ಪದ್ಧತಿ,ಇವು ಗಣಿತ ಶಾಸ್ತ್ರಕ್ಕೆ ಭಾರತ ದೇಶದ ಕೊಡುಗೆ. ಇದು ಗಣಿತಶಾಸ್ತ್ರದಲ್ಲಿ ಕ್ರಾಂತಿಯನ್ನೇ ಉಂಟುಮಾಡಿತು. ಅದೇ ರೀತಿ
 ಅಧ್ಯಾತ್ಮ ಪ್ರಪಂಚದಲ್ಲೂ  ಶೂನ್ಯ, ಶೂನ್ಯ ಸಂಪಾದನೆ  ಭಾರತದ ಕೊಡುಗೆ. ಶೂನ್ಯ, ವಿಶ್ವ ಹುಟ್ಟುವ ಮೊದಲಿನ ಸ್ಥಿತಿ. ಆದ್ದರಿಂದ ಯಾವುದೂ ಅಸ್ತಿತ್ವದಲ್ಲಿ ಇಲ್ಲದ ಸ್ಥಿತಿ. ಈ ತೋರಿಕೆಯ ಸೃಷ್ಟಿಯ ಎಲ್ಲವೂ ಪೂರ್ಣ ಸ್ವರೂಪದ ಆ ಶೂನ್ಯಲಿಂಗದಿಂದ ಹೊರಹೊಮ್ಮಿದುದು. ಮತ್ತು ಅಲ್ಲಿಯೇ ಅಡಗಿ ಬಯಲಾಗುವಂತಹುದು.
ದೇವರು ಒಂದು ಅನಂತ ಸ್ಥಿತಿ. ಶೂನ್ಯ ಅದರ ಸಹಜ ಸ್ಥಿತಿ. ಶೂನ್ಯದಿಂದ ಅದೆಷ್ಟು ಶೂನ್ಯವನ್ನು ಹೊರತೆಗೆದರೂ ಕಳೆದರೂ, ಶೂನ್ಯವೇ ಉಳಿಯುತ್ತದೆ. ಮೂಲದಲ್ಲಿ ಏನೇನೂ ಬದಲಾವಣೆಯಾಗುವುದಿಲ್ಲ. ಶೂನ್ಯದಿಂದ ಶೂನ್ಯವನ್ನು ಗುಣಿಸಿದರೂ, ಭಾಗಿಸಿದರೂ, ಶೂನ್ಯವೇ ಉಳಿಯುತ್ತದೆ. ಅದೇ ರೀತಿ ಬಯಲಿನಲ್ಲಿ ವಿಶ್ವರಚಿತ ವಾದರೂ, ಮುಂದೆ ಅಂತ್ಯ ಹೊಂದಿ ಲಯವಾಗಿ ಬಯಲನ್ನು ಕೂಡಿದರೂ ಬಯಲಿನಲ್ಲಿ ಯಾವ ಬದಲಾವಣೆ ಆಗುವದಿಲ್ಲ. ಅದಕ್ಕೇ ಅದು ಶೂನ್ಯ. ಲಿಂಗಸ್ವರೂಪವಾದಾಗ ಶೂನ್ಯಲಿಂಗ ವೆಂದು ಕರೆದರು.
ಈ ರೀತಿಯ ನಿರವಯ ಶೂನ್ಯಲಿಂಗವು ನಿಃಕಲ ಲಿಂಗವಾಗಿ, ಅದರಲ್ಲಿ ಶಕ್ತಿ ಸಂಚಯವಾಗಿ, ಓಂಕಾರಕ್ಕೆ , ವಿಶ್ವದ ಹುಟ್ಟಿಗೆ ಕಾರಣವಾಗುತ್ತದೆ. ಜಗತ್ತು, ಪ್ರಪಂಚ, ಸಂಸಾರ ಇತ್ಯಾದಿಗಳೆಲ್ಲ ಹುಟ್ಟಿ, ನಾವು ಕೊನೆಗೆ ಶಿವಯೋಗ ಸಾಧನೆಯಿಂದ  'ಅರಿವಿ'ನಿಂದ ಸೇರಿಕೊಳ್ಳಬೇಕಾದದ್ದು ಮತ್ತೇ ಶೂನ್ಯಲಿಂಗ ನಂತರ ಬಯಲಿನ ಸ್ಥಿತಿಗೆ. ಆ 'ಶೂನ್ಯ'ದ ವಿರಾಟ್ ಸ್ವರೂಪವನ್ನು ಅರ್ಥೈಸಿಕೊಂಡು ನಾವೂ 'ಶೂನ್ಯ'ವೇ ಆಗುವುದೇ "ಶೂನ್ಯಸಂಪಾದನೆ".

ಭೌತಿಕ ವಿಶ್ವವನ್ನೇ ತನ್ನಲ್ಲಿ ಅಡಗಿಸಿಕೊಂಡಿರುವ ಮಹಾಘನವೇದ್ಯ ಬಯಲನ್ನು ಶರಣರು ತಮ್ಮ ಮನೆಯನ್ನಾಗಿಸಿಕೊಂಡರು. 
ಹಾಗೆಯೇ ಶರಣ ಹಡಪದ ಅಪ್ಪಣ್ಣನವರು

#ಬಯಲಿಂದಲೆ ಹುಟ್ಟಿ, ಬಯಲಿಂದಲೆ ಬೆಳೆದು,
ಬಯಲಾಮೃತವನೆ ಉಂಡು, ಬಯಲನೆ ಉಟ್ಟು,
ಬಯಲನೆ ತೊಟ್ಟು, ಬಯಲು ಬಯಲೊಳಗೆ ಬೆರೆದ ಭೇದವ,
ಈ ಭುವನದೊಳಗೆ ಇಪ್ಪ ಭವಭಾರಿಗಳು ಎತ್ತಬಲ್ಲರು, ಭವವಿರಹಿತ ಶರಣರ ನಿಲವ,ಬಸವಪ್ರಿಯ ಕೂಡಲಚನ್ನಬಸವಣ್ಣಾ ?

 ಎಂದು ತಮ್ಮ ಲಿಂಗಾಂಗ ಸಾಮರಸ್ಯದ ಅನುಭಾವವನ್ನು ಅತ್ಯಂತ ಮಾರ್ಮಿಕ ವಾಗಿ ತಿಳಿಸಿದ್ದಾರೆ. ಈ ಸತ್ಯವು, ಭವಭಾರಿಗಳಿಗೆ ವೇದ್ಯವಾಗಿಲ್ಲ ಹೇಳುತ್ತಾರೆ. ಶರಣ ಧರ್ಮ ದರ್ಶನ ಒಂದು ಭಿನ್ನವಾದ 
ಅನುಭಾವ ದರ್ಶನ. ಇದು ದ್ವೈತವೂ ಅಲ್ಲ; ಅದ್ವೈತ ವೂ ಅಲ್ಲ. ಇದು ವಿಶ್ವದ ರಚನೆಯ ನಂತರದ ಆತ್ಮ ಪರಮಾತ್ಮನ ಸಂಬಂಧಕ್ಕೆ ಸೀಮಿತವಾಗದೆ, "ಬಯಲು" ವಿಶ್ವದ ರಚನೆಗಿಂತ ಮೊದಲು ಏನಿತ್ತು?  ವಿಶ್ವ ಅಡಗಿದ ನಂತರ ಏನಾಗುವುದು? ವಿಶ್ವದ ಹುಟ್ಟು ರಚನೆ  ಮತ್ತು ವಿಶ್ವದ ಸಾವು ಅಡಗುವದು ಇದು ನಿರಂತರ ಕ್ರಿಯೆಯೇ? ಎಂದು 21ನೆಯ ಶತಮಾನದ ಭೌತ ಖಗೋಲ ಶಾಸ್ತ್ರ ಆಸ್ಟ್ರೋಫಿಸಿಕ್ಸ್ (astrophysics ) ದಂತೆ ವಿವೇಚಿಸುತ್ತದೆ. ವಿಶಾಲವಾದ  ಈ ಬ್ರಹ್ಮಾಂಡದ ಜನಕ ಯಾರು ? ಈ ಬ್ರಹ್ಮಾಂಡದ ರಚನೆಯ ಉದ್ದೇಶವೇನು ? ಇದಕ್ಕೆ ಬ್ರಹ್ಮ ಅಂಡ ಎಂದು ಏಕೆ ಕರೆದರು? ಇದು ಅಂಡಾಕಾರವೇ? ಹಾಗಾದರೆ ಈ ಅಂಡಾಕಾರವನ್ನು ಪೂಜಿಸಬಹುದೇ? ಇದನ್ನು ಭಕ್ತರಿಗೆ ಪೂಜೆಯ ವಸ್ತು ಮತ್ತು ಸಾಧಕನಿಗೆ  ಸಾಧನೆಯ ವಸ್ತು , ಕುರುಹು ಹೇಗೆ ಮಾಡಬಹುದು? ಯೋಗಕ್ಕೆ ಅನುಸಂಧಾನಕ್ಕೆ ಹೇಗೆ ಉಪಯೋಗಿಸಬೇಕು? ಇವೇ ಹೊಸ ಚಿಂತನೆಗಳ ಆವಿಷ್ಕಾರ ವಾಯಿತು.
- ✍️ Dr Prema Pangi
#ಪ್ರೇಮಾ_ಪಾಂಗಿ, #ಬಯಲು_2,
#ಬಯಲು_ಬಯಲನೆ_ಬಿತ್ತಿ_ಬಯಲು
Picture post designed and created by me. Hope you all will like it. A small service to popularise Vachana Sahitya.

Comments

Popular posts from this blog

Shika chakra or Bindu chakra:Bindu visarga

Hrit Chakra or Eight Petals Chakra

A-Ka-Ta triangle or Akshara Brahma